ನ್ಯಾಷನಲ್ ಹೆರಾಲ್ಡ್ ಹಗರಣದ ಕಥೆ-ವ್ಯಥೆ
ನ್ಯಾಷನಲ್ ಹೆರಾಲ್ಡ್ ಪ್ರಕರಣ ಮತ್ತೆ ಕಾಂಗ್ರೆಸ್ ಧುರೀಣರ ನಿದ್ದೆಗೆಡಿಸಿದೆ. ಸಂಸತ್‍ನಲ್ಲೂ ಭಾರಿ ಕೋಲಾಹಲ ಸೃಷ್ಟಿಯಾಗಿದೆ...

Published On :
ನ್ಯಾಷನಲ್ ಹೆರಾಲ್ಡ್ ಪ್ರಕರಣ ಮತ್ತೆ ಕಾಂಗ್ರೆಸ್ ಧುರೀಣರ ನಿದ್ದೆಗೆಡಿಸಿದೆ. ಸಂಸತ್‍ನಲ್ಲೂ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಬೆಳಕು ಚೆಲ್ಲುವ ಒಂದಿಷ್ಟು ಮಾಹಿತಿ ಇಲ್ಲಿದೆ.
1 ನ್ಯಾಷನಲ್ ಹೆರಾಲ್ಡ್ ಇತಿಹಾಸವೇನು?
1938ರಲ್ಲಿ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಜವಹರಲಾಲ್ ನೆಹರುರವರು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಎಂಬ ಕಂಪೆನಿಯೊಂದರ ಸ್ಥಾಪನೆಗೆ ಕಾರಣರಾದರು. ಕಾಂಗ್ರೆಸ್ ಪಕ್ಷದ ಹಣಕಾಸು ನೆರವಿನೊಂದಿಗೆ ಎಜೆಎಲ್ ಅಂದು ಮೂರು ದಿನಪತ್ರಿಕೆಗಳನ್ನು ಹೊರತಂದಿತು.
ನ್ಯಾಷನಲ್ ಹೆರಾಲ್ಡ್ (ಇಂಗ್ಲಿಷ್), ನವಜೀವನ್ (ಹಿಂದಿ) ಮತ್ತು ಖ್ವಾಮಿ ಆವಾಜ್ (ಉರ್ದು)-ಆ ಮೂರು ದಿನಪತ್ರಿಕೆಗಳಾಗಿವೆ. ಜವಹರಲಾಲ್ ನೆಹರು, ಕೆ.ರಾಮ ರಾವ್, ಪಿsರೋಜ್ ಗಾಂಧಿಯಂತಹ ಪ್ರತಿಭಾವಂತರು ಪತ್ರಿಕೆಯ ಸಂಪಾದಕರಾಗಿದ್ದರು.
ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದ ನ್ಯಾಷನಲ್ ಹೆರಾಲ್ಡ್ ಮತ್ತು ಉಳಿದೆರಡು ಪ್ರಾದೇಶಿಕ ಭಾಷಾ ಪತ್ರಿಕೆಗಳು 2008ರ ಏಪ್ರಿಲ್‍ನಲ್ಲಿ ಅಧಿಕೃತವಾಗಿ ಪ್ರಕಟಣೆಯನ್ನು ಸ್ಥಗಿತಗೊಳಿಸಿದವು. ಹೀಗೆ ನ್ಯಾಷನಲ್ ಹೆರಾಲ್ಡ್ ಪ್ರಕಟಣೆ ನಿಲ್ಲಿಸಿದಾಗ ಟಿ.ವಿ.ವೆಂಕಟಾಚಲಂ ಅವರು ಪ್ರಧಾನ ಸಂಪಾದಕರಾಗಿದ್ದರು.
2 ಹಗರಣ ಮತ್ತು ಆರೋಪವೇನು?
2011ರ ಮಾರ್ಚ್‍ನಲ್ಲಿ ಸೋನಿಯಾ, ರಾಹುಲ್, ಮೋತಿಲಾಲ್ ವೋರಾ, ಆಸ್ಕರ್, ಸ್ಯಾಮï ಪಿತ್ರೋಡಾ ಪಾಲುಗಾರಿಕೆಯಲ್ಲಿ ಯಂಗ್ ಇಂಡಿಯಾ ಲಿಮಿಟೆಡ್ ಎಂಬ ಟ್ರಸ್ಟ್ ಸ್ಥಾಪನೆಯಾಯಿತು. ನ್ಯಾಷನಲ್ ಹೆರಾಲ್ಡ್‍ನ ಮಾಲೀಕತ್ವ ಹೊಂದಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಿ.ನ ರು.90.21 ಕೋಟಿ ಸಾಲದ ಹೊರೆಯನ್ನು ಹೊತ್ತುಕೊಳ್ಳಲು ಯಂಗ್ ಇಂಡಿಯಾ ನಿರ್ಧರಿಸುತ್ತದೆ.
ಇದಕ್ಕಾಗಿ ಕಾಂಗ್ರೆಸ್ ನಿಧಿಯಿಂದ ಆರಂಬಿsಕ ಕಂತಿನ ರೂಪದಲ್ಲಿ ರು.50 ಲಕ್ಷ ಪಾವತಿಸಲಾಗುತ್ತದೆ. ಅಲ್ಲದೆ, ದಿಲ್ಲಿಯಲ್ಲಿನ ಹೆರಾಲ್ಡ್ ಹೌಸ್‍ನ ನವೀಕರಣಕ್ಕೆ ಕಾಂಗ್ರೆಸ್‍ನಿಂದ ರು.1 ಕೋಟಿ ಪಾವತಿಸಲಾಗುತ್ತದೆ. ಯಂಗ್ ಇಂಡಿಯಾ ಟ್ರಸ್ಟ್ ಮೂಲಕ ಅಸೋಸಿಯೇಟೆಡ್ ಜರ್ನಲ್ಸ್ ಸಂಸ್ಥೆಯನ್ನು ವಶಕ್ಕೆ ತೆಗೆದುಕೊಂಡ ಸೋನಿಯಾ, ರಾಹುಲ್ ಮತ್ತಿತರರು ವಂಚನೆ ಮತ್ತು ಭೂಮಿ ಅತಿಕ್ರಮಣ ಎಸಗಿದ್ದಾರೆಂದು ಸುಬ್ರಮಣ್ಯನ್ ಸ್ವಾಮಿ ಕೋರ್ಟ್‍ಗೆ ಸಲ್ಲಿಸಿರುವ ದೂರಲ್ಲಿ ಆರೋಪಿಸುತ್ತಾರೆ.
3 ದೂರುದಾರರು ಯಾರು?
ಹಿರಿಯ ಬಿಜೆಪಿ ಧುರೀಣ ಸುಬ್ರಮಣ್ಯನ್‍ಸ್ವಾಮಿ.
4 ಕಾನೂನು ಸಮರದ ಹಾದಿ
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸೇರಿದ ದಿಲ್ಲಿ ಮತ್ತು ಲಖನೌದಲ್ಲಿರುವ ಆಸ್ತಿಗಳು ಸೇರಿದಂತೆ ಸಾವಿರಾರು ಕೋಟಿ ಮೌಲ್ಯದ ರಿಯಲ್‍ಎಸ್ಟೇಟ್ ಆಸ್ತಿಪಾಸ್ತಿಗಳನ್ನು ಕಬಳಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ, ರಾಹುಲ್ ಗಾಂಧಿ ಹಾಗೂ ಮತ್ತಿತರರು ಹುನ್ನಾರ ನಡೆಸಿದ್ದಾರೆಂದು ಹಿರಿಯ ಬಿಜೆಪಿ ಧುರೀಣ ಸುಬ್ರಮಣ್ಯನ್ ಸ್ವಾಮಿ 2012ರ ನವೆಂಬರ್‍ನಲ್ಲಿ ದೂರು ಸಲ್ಲಿಸಿದ್ದರು.
ಈ ಹುನ್ನಾರದ ಅಂಗವಾಗಿ ರಾಜಕೀಯ ಪಕ್ಷವೊಂದು (ಕಾಂಗ್ರೆಸ್) ವಾಣಿಜ್ಯ ಉದ್ದೇಶಗಳಿಗೆ ಸಾಲ ನೀಡುವುದು ಅಕ್ರಮವೆನಿಸುತ್ತದೆ ಎಂದು ಅವರು ತಿಳಿಸಿದ್ದರು. ಈ ದೂರಿನ ಕುರಿತು ದೆಹಲಿಯ ವಿಚಾರಣಾ ನ್ಯಾಯಾಲಯವು 2014 ರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್‍ರಿಗೆ ಸಮನ್ಸ್ ಜಾರಿ ಮಾಡಿತ್ತು.
ಸೋನಿಯಾ ಪರ ವಕೀಲರು ಇದನ್ನು ನಂತರ ದಿಲ್ಲಿ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. 2015ರ ಡಿ.7ರಂದು ದಿಲ್ಲಿ ಹೈಕೋರ್ಟ್ ಸೋನಿಯಾ ಕೋರಿಕೆ ವಜಾಗೊಳಿಸಿ, ಕೋರ್ಟ್‍ಗೆ ಹಾಜರಾಗುವಂತೆ ಆದೇಶಿಸಿತ್ತು.
5 ಆರೋಪಿಗಳು ಯಾರ್ಯಾರು?
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್, ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್, ಮೋತಿಲಾಲ್ ವೋರಾ, ಗಾಂಧಿ ಕುಟುಂಬದ ಸ್ನೇಹಿತ ಸುಮನ್ ದುಬೆ, ಮಾಜಿ ಪ್ರಧಾನಿ ರಾಜೀವ್ ಆಪ್ತ ಸಲಹೆಗಾರ ಸ್ಯಾಮï ಪಿತ್ರೋಡಾ, ಯಂಗ್ ಇಂಡಿಯಾ ಸಂಸ್ಥೆ.
6 ಆಸ್ತಿಪಾಸ್ತಿ ಮೌಲ್ಯವೇನು?
ಇಂದಿನ ಮಾರುಕಟ್ಟೆ ದರದಲ್ಲಿ ಲೆಕ್ಕಹಾಕಿದರೆ, ನ್ಯಾಷನಲ್ ಹೆರಾಲ್ಡ್‍ಗೆ ಸೇರಿದ ದಿಲ್ಲಿ, ಲಖನೌದಲ್ಲಿರುವ ಆಸ್ತಿಗಳ ಮೌಲ್ಯ ರು.1,600 ಕೋಟಿಯಿಂದ ರು.5,000 ಕೋಟಿ ರುಪಾಯಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


