ದೇಶ

ಅಧಿವೇಶನ ನಡೆಯದಿದ್ದರೆ ನೋ ವರ್ಕ್, ನೋ ಪೇ!

ಕೇಂದ್ರ ಸರ್ಕಾರವು ಸಂಸತ್ ಗದ್ದಲಕ್ಕೆ ಕೊನೆಹಾಡುವ ನಿಟ್ಟಿನಲ್ಲಿ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದ್ದರೆ, ಅದರ ನಡುವೆಯೇ ಕೇಂದ್ರ ಸಚಿವ ಮಹೇಶ್ ಶರ್ಮಾ ಅವರು ಹೊಸ ವಿವಾದ ಸೃಷ್ಟಿಸಿ...

ಅಧಿವೇಶನ ನಡೆಯದಿದ್ದರೆ ನೋ ವರ್ಕ್, ನೋ ಪೇ!
ಕೇಂದ್ರ ಸಚಿವ ಮಹೇಶ್ ಶರ್ಮಾ
Published On :

ನವದೆಹಲಿ: ಕೇಂದ್ರ ಸರ್ಕಾರವು ಸಂಸತ್ ಗದ್ದಲಕ್ಕೆ ಕೊನೆಹಾಡುವ ನಿಟ್ಟಿನಲ್ಲಿ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದ್ದರೆ, ಅದರ ನಡುವೆಯೇ ಕೇಂದ್ರ ಸಚಿವ ಮಹೇಶ್ ಶರ್ಮಾ ಅವರು ಹೊಸ ವಿವಾದ ಸೃಷ್ಟಿಸಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. `ನೋ ವರ್ಕ್, ನೋ ಪೇ'(ಕಲಾಪ ನಡೆಯದಿದ್ದರೆ, ವೇತನವೂ ಇಲ್ಲ) ನೀತಿಯನ್ನು ಸಂಸದರಿಗೆ ಅನ್ವಯಿಸುವಂತೆ ಮಾಡಬೇಕು ಎಂದು ಶರ್ಮಾ ಹೇಳಿದ್ದಾರೆ.

ಇದರಿಂದ ಸಿಟ್ಟಿಗೆದ್ದಿರುವ ಪ್ರತಿಪಕ್ಷಗಳು, `ಇದು ಸಚಿವರೇ ಮಾಡಿದ ಶಿಫಾರಸೋ ಅಥವಾ ಸರ್ಕಾರದ ನಿರ್ಧಾರವೋ ಎಂಬುದನ್ನು ಸ್ಪಷ್ಟಪಡಿಸಿ' ಎಂದು ಹೇಳಿವೆ. ಸರ್ವಪಕ್ಷ ಸಭೆಗೆ ಒಂದು ದಿನ ಇರುವಾಗಲೇ ಈ ಬೆಳವಣಿಗೆ ನಡೆದಿದ್ದು, ಸಭೆಯ ಯಶಸ್ಸಿನ ಮೇಲೆ ಮತ್ತಷ್ಟು ಅನುಮಾನ ಮೂಡುವಂತೆ ಮಾಡಿದೆ. ವಿವಾದ ಸೃಷ್ಟಿಸಿದ ಸಚಿವ: ಭಾನುವಾರ ವಾರಾಣಸಿಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ, ``ಅಧಿಕಾರಿಗಳಿಗೆ ಹೇಗೆ ``ನೋ ವರ್ಕ್, ನೋ ಪೇ'' ಅನ್ವಯಿಸುತ್ತದೋ, ಸಂಸದರಿಗೂ ಇದೇ ನೀತಿ ಜಾರಿ ಮಾಡಬೇಕು.

ಅಧಿವೇಶನ ನಡೆದರೆ ಮಾತ್ರ ಗೌರವ ಧನ ಎಂಬ ನೀತಿ ಅನುಷ್ಠಾನ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಮಾತನಾಡಲು ಹಿರಿಯ ಸಚಿವರು ಪ್ರತಿಪಕ್ಷಗಳೊಂದಿಗೆ ಸಂಪರ್ಕ ದಲ್ಲಿದ್ದಾರೆ'' ಎಂದಿದ್ದಾರೆ. ಸಚಿವರ ಹೇಳಿಕೆಗೆ ಕೆಂಡಾಮಂಡಲ ವಾಗಿರುವ ಪ್ರತಿಪಕ್ಷಗಳು, ``ಇದು ಸಚಿವರ ಹೇಳಿಕೆಯೋ, ಸರ್ಕಾರದ ನಿರ್ಧಾರವೋ ಎಂಬುದನ್ನು ಸ್ಪಷ್ಟಪಡಿಸಬೇಕು'' ಎಂದು ಹೇಳಿವೆ. ಜತೆಗೆ, ಪ್ರತಿಪಕ್ಷಗಳು ಕೆಲಸ ಮಾಡುತ್ತಿಲ್ಲ ಎಂದು ಹೇಳಿದವರಾರು'' ಎಂದೂ ಪ್ರಶ್ನಿಸಿವೆ.

ಸಚಿವ ಶರ್ಮಾ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿಜೆಪಿ, ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಜತೆಗೆ, ಶರ್ಮಾ ಅವರೂ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ``ಇಂಥ ನೀತಿ ಜಾರಿಯಾಗಬೇಕು ಎಂದು ನಾನು ಹೇಳಿದ್ದಷ್ಟೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನನಗಿಲ್ಲ. ತೆರಿಗೆದಾರರ ಹಣ
ಪೋಲಾಗಬಾರದು ಎನ್ನುವುದಷ್ಟೇ ನನ್ನ ಹೇಳಿಕೆ ಹಿಂದಿನ ಉದ್ದೇಶವಾಗಿತ್ತು'' ಎಂದಿದ್ದಾರೆ.

ಸರ್ವಪಕ್ಷ ಸಭೆ ಇಂದು:
ಮುಂಗಾರು ಅಧಿವೇಶನದ ಅರ್ಧ ಭಾಗ ಗದ್ದಲದಲ್ಲೇ ಕೊಚ್ಚಿಹೋದ ಹಿನ್ನೆಲೆಯಲ್ಲಿ ಉಳಿದರ್ಧ ಭಾಗದಲ್ಲಾದರೂ ಕಲಾಪ ನಡೆಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದೆ. ಆದರೆ, ``ರಾಜಿನಾಮೆ ಇಲ್ಲದಿದ್ದರೆ, ಚರ್ಚೆಯೂ ಇಲ್ಲ'' ಎಂಬ ನೀತಿಗೆ ಅಂಟಿಕೊಂಡಿರುವ ಪ್ರತಿಪಕ್ಷಗಳು, ಯಾವುದೇ ಕಾರಣಕ್ಕೂ ಸಚಿವೆ ಸುಷ್ಮಾ, ರಾಜಸ್ಥಾನ ಸಿಎಂ ರಾಜೇ, ಮಧ್ಯಪ್ರದೇಶ ಚೌಹಾಣ್ ವಿವಾದವನ್ನು ಬದಿಗಿಟ್ಟು ಸಭೆ ನಡೆಸಕೂಡದು ಎಂದು ಪಟ್ಟುಹಿಡಿದಿವೆ.

ಬಿಜೆಪಿ ನಾಯಕರ ರಾಜಿನಾಮೆ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಆಡಳಿತ ಹಾಗೂ ಪ್ರತಿಪಕ್ಷಗಳು ಪರಸ್ಪರ ಪಟ್ಟು ಸಡಿಲಿಸದ ಹೊರತು ಸರ್ವಪಕ್ಷ ಸಭೆ ಯಶಸ್ವಿಯಾಗುವ ಸಾಧ್ಯತೆಯಿಲ್ಲ ಎನ್ನುವುದು ರಾಜಕೀಯ ತಜ್ಞರ ಅಬಿsಪ್ರಾಯ. ಇದೇ ವೇಳೆ, ಸರ್ವಪಕ್ಷ ಸಭೆಗೂ ಮುನ್ನ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಯಲಿದ್ದು, ಈ ಎಲ್ಲ ವಿಚಾರಗಳ ಬಗ್ಗೆ ಪಕ್ಷದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.