ನೇಪಾಳ ಭೂಕಂಪನ ದುರಂತ: 20 ಸಾವಿರ ಭಾರತೀಯರ ರಕ್ಷಣೆ
ಭೀಕರ ಭೂಕಂಪನದಿಂದಾಗಿ ತತ್ತರಿಸಿ ಹೋಗಿರುವ ನೇಪಾಳದಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 20 ಸಾವಿರ ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ...

ಕಠ್ಮಂಡು: ಭೀಕರ ಭೂಕಂಪನದಿಂದಾಗಿ ತತ್ತರಿಸಿ ಹೋಗಿರುವ ನೇಪಾಳದಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 20 ಸಾವಿರ ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ನೇಪಾಳದಲ್ಲಿ ಉಂಟಾಗಿರುವ ಭೂಕಂಪನದಿಂದಾಗಿ ಅಪಾಯದಲ್ಲಿ ಸಿಲುಕಿರುವ ಭಾರತೀಯರಿಗಾಗಿ ನಡೆಯುತ್ತಿರುವ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಈ ವರೆಗೂ ನೇಪಾಳದಲ್ಲಿ ಸುಮಾರು 20 ಸಾವಿರ ಮಂದಿ ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.
"ನೇಪಾಳದಲ್ಲಿ ಅಪಾಯಕ್ಕೆ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ವಿವಿಧ ಸ್ಥಳಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 20 ಸಾವಿರ ಮಂದಿ ಭಾರತೀಯರು ಸುರಕ್ಷಿತವಾಗಿ ರಕ್ಸಾಲ್ ಪ್ರದೇಶವನ್ನು ತಲುಪಿದ್ದು, ರೈಲಿನ ಮುಖಾಂತರ ಅವರನ್ನು ವಿವಿಧ ಸ್ಥಳಾಂತರ ಮಾಡಲಾಗುವುದು. ಭಾರತೀಯರನ್ನು ಸುರಕ್ಷಿತವಾಗಿ ಅವರ ಸ್ವಸ್ಥಾನಕ್ಕೆ ಸೇರಿಸಲು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ರೈಲಿಗೂ 7 ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸುವಂತೆ ಸೂಚಿಸಲಾಗಿದೆ" ಎಂದು ಪ್ರಧಾನ್ ಹೇಳಿದರು.
ಅಲ್ಲದೆ ಈ ಎಲ್ಲ ವಿಶೇಷ ರೈಲುಗಳಿಗೆ ಕೋಲ್ಕತಾದಲ್ಲಿ ಹೆಚ್ಚುವರಿ ಬೋಗಿಗಳನ್ನು ಅಲವಡಿಸಲಾಗುತ್ತದೆ. ಅಲ್ಲಿಂದ ನೇಪಾಳದ ಕಠ್ಮಂಡುವಿಗೆ ಈ ವಿಶೇಷ ರೈಲು ಪ್ರಯಾಣಿಸುತ್ತದೆ. ಅಲ್ಲದೆ ನೇಪಾಳಿ ಹಣದೊಂದಿಗೆ ಆಗಮಿಸುವ ಪ್ರಯಾಣಿಕರಿಗಾಗಿ ಸ್ಟೇಟ್ ಬ್ಯಾಂಕ್ ಇಂಡಿಯಾ ವತಿಯಿಂದ ರಕ್ಸಾಲ್ ನಲ್ಲಿ ವಿಶೇಷ ಶಾಖೆ ತೆರೆದು ಅಲ್ಲಿ ಹಣವನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಇನ್ನು ನೇಪಾಳ ಮತ್ತು ಭಾರತ ನಡುವೆ ಸಂಪರ್ಕ ಕಲ್ಪಿಸುವ ಎನ್ಎಚ್-28 ಭೂಕಂಪನದಿಂದಾಗಿ ಹಾಳಾಗಿದ್ದು, ರಕ್ಷಣಾ ಸಮಾಗ್ರಿಗಳನ್ನು ರವಾನೆ ಮಾಡಲು ತೀವ್ರ ಅಡಚಣೆಯಾಗಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ತುರ್ತಾಗಿ ರಸ್ತೆಯನ್ನು ರಿಪೇರಿ ಮಾಡುವಂತೆ ಸೂಚಿಸಲಾಗಿದೆ ಎಂದು ಪ್ರಧಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಒಟ್ಟಾರೆ ನೇಪಾಳದಲ್ಲಿ ನಡೆದ ಭೀಕರ ಭೂಕಂಪನದಲ್ಲಿ ಸಿಲುಕಿರುವ ಅಪಾರ ಪ್ರಮಾಣದ ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲಿಯೇ ಸಂರಕ್ಷಿತರನ್ನು ಅವರವರ ಸ್ವಸ್ಥಾನಗಳಿಗೆ ರವಾನಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


