ಆದರ್ಶ ಹಗರಣ: ಚೌಹ್ವಾಣ್ ಹೆಸರು ಕೈ ಬಿಡಲು "ಹೈ'' ನಕಾರಾ
ಬಹುಕೋಟಿ ಆದರ್ಶ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಿಂದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್..

ಮುಂಬೈ: ಬಹುಕೋಟಿ ಆದರ್ಶ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಿಂದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌಹ್ವಾಣ್ ಅವರ ಹೆಸರನ್ನು ಕೈಬಿಡಬೇಕು ಎಂದು ಸಿಬಿಐ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹ್ವಾಣ್ ಅವರ ಹೆಸರನ್ನು ಆದರ್ಶ ಹಗರಣದ ಆರೋಪಪಟ್ಟಿಯಿಂದ ಕೈಬಿಡಬೇಕು ಎಂದು ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ.ಎಲ್.ತಹಲಿಯಾನ್ ಅವರು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದಲ್ಲದೆ ಪ್ರಕರಣದಿಂದ ಚೌಹ್ವಾಣ್ ಅವರ ಹೆಸರನ್ನು ಕೈಬಿಡಲು ನಿರ್ಧರಿಸಿದ್ದ ಸಿಬಿಐ ನಿರ್ಧಾರದ ವಿರುದ್ಧವೂ ದಾಖಲಾಗಿದ್ದ ಮತ್ತೊಂದು ತಕರಾರು ಅರ್ಜಿಯನ್ನು ಕೂಡ ನ್ಯಾಯಾಲಯ ತಿರಸ್ಕರಿಸಿದೆ.
ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹ್ವಾಣ್ ಅವರನ್ನು ವಿಚಾರಣೆಗೆಗೊಳಪಡಿಸಲು ರಾಜ್ಯಪಾಲರು ಅನುಮತಿ ನೀಡದೇ ಇರುವುದರಿಂದ ಮತ್ತು ಪ್ರಕರಣದಲ್ಲಿ ಅಶೋಕ್ ಚೌಹ್ವಾಣ್ ಅವರ ವಿರುದ್ಧದ ಪ್ರಬಲ ಸಾಕ್ಷ್ಯದಾರಗಳ ಕೊರತೆ ಇರುವುದರಿಂದ ಅವರ ಹೆಸರನ್ನು ಆರೋಪ ಪಟ್ಟಿಯಿಂದ ಕೈ ಬಿಡಬೇಕು ಎಂದು ಸಿಬಿಐ ಮನವಿ ಸಲ್ಲಿಸಿತ್ತು.
ಸಾಮಾಜಿಕ ಕಾರ್ಯಕರ್ತ ಕೀತನ್ ಕಿರೋಡ್ಕರ್ ಎಂಬುವವರು ಸಿಬಿಐ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಪ್ರಕರಣ ಸಂಬಂಧ ಅಂದಿನ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೆ.ಶಂಕರ ನಾರಾಯಣನ್ ಅವರು ವಿಚಾರಣೆಗೆ ಅನುಮತಿ ನೀಡಿರಲಿಲ್ಲ. ರಾಜ್ಯಪಾಲರ ನಿರ್ಧಾರ ಪ್ರಕರಣದಲ್ಲಿ ಅಶೋಕ್ ಚೌಹ್ವಾಣ್ ಅವರಿಗೆ ಅನುಕೂಲಕರವಾಗಲಿದೆ ಎಂದು ಭಾವಿಸಲಾಗಿತ್ತಾದರೂ, ಬಾಂಬೆ ಹೈಕೋರ್ಟ್‌ನ ಇಂದಿನ ನಿರ್ಧಾರದಿಂದಾಗಿ ಮತ್ತೆ ಮಾಜಿ ಸಿಎಂಗೆ ವಿಚಾರಣೆ ಭೀತಿ ಶುರುವಾಗಿದೆ.
ಈ ಹಿಂದೆ ಕೂಡ ಸಿಬಿಐ ಅಧಿಕಾರಿಗಳು ಅಶೋಕ್ ಚೌಹ್ವಾಣ್ ಅವರ ಹೆಸರನ್ನು ಪ್ರಕರಣದ ಆರೋಪ ಪಟ್ಟಿಯಿಂದ ಕೈಬಿಡಬೇಕು ಎಂದು ಸೆಷನ್ಸ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿಯೂ ಕೂಡ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಸಿಬಿಐ ಅಧಿಕಾರಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


