ದೇಶ

ನಿಮಗೇ ಸೊಕ್ಕು ಜಾಸ್ತಿ

ರಾಜ್ಯಸಭೆಯಲ್ಲಿ ಮರು ಮತಾಂತರ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಮೂರು ದಿನಗಳಿಂದ ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿವೆ.

ನಿಮಗೇ ಸೊಕ್ಕು ಜಾಸ್ತಿ
ಮರುಮತಾಂತರ ಕುರಿತಂತೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ (ಸಂಗ್ರಹ ಚಿತ್ರ)
Published On :

ನವದೆಹಲಿ: ಚಳಿಗಾಲದ ಅಧಿವೇಶನ ಡಿ.23ಕ್ಕೆ ಮುಕ್ತಾಯವಾಗಲಿದೆ. ಲೋಕಸಭೆಯಲ್ಲಿ ಕಲಾಪ ಮುಂದುವರಿಯುತ್ತಿದ್ದರೂ, ರಾಜ್ಯಸಭೆಯಲ್ಲಿ ಮರು ಮತಾಂತರ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಮೂರು ದಿನಗಳಿಂದ ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿವೆ.

ಗುರುವಾರವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಪ್ರಧಾನಿ ಹೇಳಿಕೆ ನೀಡಬೇಕು ಎಂದು ಗದ್ದಲ ಮಾಡಿದ್ದರಿಂದ ಶುಕ್ರವಾರಕ್ಕೆ ಕಲಾಪವನ್ನು ಮುಂದೂಡಲಾಯಿತು. ದಿನದ ವಿಶೇಷ ಎಂದರೆ ಪ್ರಧಾನಿ ಮೋದಿ ಸದನದಲ್ಲಿ ಇದ್ದದ್ದು ಪ್ರತಿಪಕ್ಷಗಳ ಕೋಲಾಹಲ ಹೆಚ್ಚಲು ಕಾರಣವಾಯಿತು.

ನಿಮಗೇ ಸೊಕ್ಕು
ವಿವಾದಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯೇ ಉತ್ತರಿಸಬೇಕು ಎಂದು ಪಟ್ಟು ಹಿಡಿದ ಪ್ರತಿಪಕ್ಷಗಳಿಗೆ ಬಿಜೆಪಿ ತಿರುಗೇಟು ನೀಡಿದೆ. ಎಲ್ಲದಕ್ಕೂ ಪ್ರಧಾನಿಯೇ ಉತ್ತರಿಸಬೇಕೆಂಬ ಕಾನೂನು ಎಲ್ಲಿಯೂ ಇಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಉತ್ತರಿಸಿದರು. ಆರಂಭದಲ್ಲಿ ಮಾತನಾಡಿದ ಕಾಂಗ್ರೆಸ್‌ನ ಆನಂದ್ ಶರ್ಮಾ, ಉತ್ತರ ಪ್ರದೇಶದಲ್ಲಾದ ಮುಸ್ಲಿಂ ಕುಟುಂಬಗಳ ಮರುಮತಾಂತರ ಬಗ್ಗೆ ಪ್ರಧಾನಿ ಮೋದಿ ಅವರು ಉತ್ತರಿಸಬೇಕು. ನಾವು ಇಷ್ಟು ಕೇಳಿದರೂ ಉತ್ತರಿಸುತ್ತಿಲ್ಲ ಎಂದರೆ, ಸರ್ಕಾರಕ್ಕೆ ಸೊಕ್ಕು ಹೆಚ್ಚಾಗಿದೆ ಎಂದು ತಿವಿದರು.

ಇದರಿಂದ ಆಕ್ರೋಶಗೊಂಡ ಹಣಕಾಸು ಸಚಿವ ಜೇಟ್ಲಿ, ಇಲ್ಲಿ ನಡೆಯುವ ಚರ್ಚೆಯಲ್ಲಿ ಯಾರು ಉತ್ತರಿಸಬೇಕು ಎಂದು ನಿರ್ಧಾರ ಮಾಡುವುದು ಪ್ರತಿಪಕ್ಷಗಳಲ್ಲ. ಇಂಥವರೇ ಉತ್ತರಿಸಬೇಕು ಎಂಬ ಕಾನೂನು ನಮ್ಮಲ್ಲಿ ಇಲ್ಲ. ನಮ್ಮ ಸರ್ಕಾರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ತಯಾರಿದೆ. ಯಾರು ಉತ್ತರಿಸಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ. ಆದರೆ, ನಿಮಗೆ ಚರ್ಚೆ ಬೇಕಿಲ್ಲ. ಹೀಗಾಗಿ ಪ್ರತಿಪಕ್ಷಗಳಿಗೆ ಸೊಕ್ಕು ಹೆಚ್ಚು ಎಂದು ತಿರುಗೇಟು ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಪಿಎಂ ಸದಸ್ಯ ಸೀತಾರಾಮ್ ಯಚೂರಿ, ಲೋಕಸಭೆಯಲ್ಲಿ ಸರಾಗ ಕಲಾಪ ನಡೆಯಲು ಕಾರಣ ನಿಮ್ಮ ದಬ್ಬಾಳಿಕೆ. ಬಹುಸಂಖ್ಯಾಬಲ ಹೊಂದಿರುವ ನಿಮ್ಮ ಪಕ್ಷ ದಬ್ಬಾಳಿಕೆ ನಡೆಸುತ್ತಿದೆ. ನಿಮ್ಮ ಕಥೆಯಲ್ಲ ನಮಗೆ ಬೇಡ, ಪ್ರಧಾನಿಯೇ ಈ ಎಲ್ಲ ವಿಷಯಗಳಿಗೆ ಉತ್ತರಿಸಬೇಕು ಎಂದು ಪಟ್ಟುಹಿಡಿದರು. ಇದಕ್ಕೆ ಕಾಂಗ್ರೆಸ್ ಸಹಿತ ಉಳಿದ ಪಕ್ಷಗಳ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ದಿನವಿಡಿ ತೀವ್ರ ಗದ್ದಲವಾಗಿದ್ದರಿಂದ ಉಪಸಭಾಪತಿ ಪಿಜೆ ಕುರಿಯನ್ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು. ಕೇಂದ್ರದಿಂದ ಬುಧವಾರ ಅಂಗೀಕಾರಗೊಂಡಿರುವ ಜಿಎಸ್‌ಟಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿದೆ.

ತಿದ್ದುಪಡಿ ವಿಧೇಯಕ ಮಂಡನೆ
ಲೋಕಪಾಲ ಮುಖ್ಯಸ್ಥರು, ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಸಮಿತಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೇರ್ಪಡೆ ಮಾಡುವ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಗುರುವಾರ ಮಂಡಿಸಲಾಗಿದೆ. ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಈಗಾಗಲೇ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.