ದೇಶ

ಇನ್ನೂ ನಿಂತಿಲ್ಲ ಪಾಕ್ ದುಸ್ಸಾಹಸ

ಜಮ್ಮು-ಕಾಶ್ಮೀರದಲ್ಲಿ ಮಂಗಳವಾರ ಮೂರನೇ ಹಂತದ ಮತದಾನ...

ಇನ್ನೂ ನಿಂತಿಲ್ಲ ಪಾಕ್ ದುಸ್ಸಾಹಸ
ಜಮ್ಮು-ಕಾಶ್ಮೀರ
Published On :

ಶ್ರೀನಗರದಲ್ಲಿ ಮೋದಿ ರ್ಯಾಲಿ ಇಂದು

ಶ್ರೀನಗರ:
ಜಮ್ಮು-ಕಾಶ್ಮೀರದಲ್ಲಿ ಮಂಗಳವಾರ ಮೂರನೇ ಹಂತದ ಮತದಾನ ನಡೆಯಲಿದೆ. ಅದರ ಬೆನ್ನಲ್ಲೇ ಪಾಕ್ ಬೆಂಬಲಿತ ಉಗ್ರಗಾಮಿಗಳು ಕಿಡಿಗೇಡಿತನ ಬಿಟ್ಟಿಲ್ಲ. ಪುಲ್ವಾಮ ಜಿಲ್ಲೆಯ ತ್ರಾಲ್‌ನಲ್ಲಿ ಸಿಆರ್‌ಪಿಎಫ್‌ನ ತಾತ್ಕಾಲಿಕ ಶಿಬಿರದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಇದರಿಂದಾಗಿ ಒಬ್ಬ ಯೋಧ ಗಾಯಗೊಂಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ನೆರೆಯ ರಾಷ್ಟ್ರ ಕಿತಾಪತಿ ನಡೆಸಲು ಹೋಗಿ ಭಾರಿ ಪೆಟ್ಟು ತಿಂದಿತ್ತು. ಅದರ ಹೊರತಾಗಿಯೂ ಅದು ಮತ್ತೊಮ್ಮೆ ದುಃಸ್ಸಾಹಸಕ್ಕೆ ಕೈ ಹಾಕಿದೆ.

ರ್ಯಾಲಿಗೆ ಬಿಗಿಭದ್ರತೆ

 ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಅವರ ಚೊಚ್ಚಲ ಚುನಾವಣಾ ಪ್ರಚಾರ ರ್ಯಾಲಿ ಸೋಮವಾರ ನಡೆಯಲಿದೆ. ಉಗ್ರ ದಾಳಿ ನಡೆದರೂ ರ್ಯಾಲಿ ನಡೆಸಿಯೇ ತೀರುತ್ತೇವೆ ಎಂದು ಬಿಜೆಪಿ ಹೇಳಿರುವ ಕಾರಣ, ಭದ್ರತಾ ಲೋಪ ಉಂಟಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ರ್ಯಾಲಿ ನಡೆಯಲಿರುವ ಶೇರ್-ಎ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂ ಸುತ್ತಲೂ ಸರ್ಪಗಾವಲು ಹಾಕಲಾಗಿದೆ. ಹೆಲಿಕಾಪ್ಟರ್ ಮೂಲಕ ಸ್ಟೇಡಿಯಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಈ ಪ್ರದೇಶಕ್ಕೆ ತೆರಳುವ ಎಲ್ಲ ರಸ್ತೆಗಳನ್ನೂ ಬ್ಲಾಕ್ ಮಾಡಲಾಗಿದ್ದು, ಶ್ರೀನಗರದಾದ್ಯಂತ ಭಾರಿ ಸಂಖ್ಯೆಯ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ವಿಶೇಷ ತರಬೇತಿ

'ಜಮ್ಮು ಮತ್ತು ಕಾಶ್ಮೀರದಲ್ಲಿ ಸರಣಿ ದಾಳಿ ನಡೆಸಿದವರಹು ಲಷ್ಕರ್-ಎ-ತೋಯ್ಬಾಕ್ಕೆ ಸೇರಿದವರು. ಉಗ್ರರು ಪಾಕ್ ಬೆಂಬಲದಿಂದ ಭಾರತಕ್ಕೆ ಬಂದಿದ್ದು, ವಿಶೇಷ ಕಾರ್ಯಾಚರಣೆಗೆಂದು ತರಬೇತಿ ಪಡೆದಿದ್ದರು. ಇದನ್ನು ಸಾಬೀತುಪಡಿಸುವಂತಹ ಸಾಕ್ಷ್ಯಗಳು ನಮ್ಮಲ್ಲಿವೆ' ಎಂದು ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಾಹಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರನ್ನು ಭಯಪಡಿಸಲೆಂದೇ ಉಗ್ರರು ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಶುಕ್ರವಾರ ನಡೆದ ದಾಳಿಯು ಗಡಿಯಲ್ಲಿ ಸಾಮಾನ್ಯವಾಗಿ ನಡೆಯುವ ಒಳನುಸುಳುವಿಕೆ ಎಂದು ಹೇಳಿದರೆ ತಪ್ಪಾಗುತ್ತದೆ. ಏಕೆಂದರೆ, ಉಗ್ರರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡೇ ದೇಶದೊಳಕ್ಕೆ ಬಂದಿದ್ದರು. ಮೃತ ಉಗ್ರಕ ಬಳಿ ಸಿಕ್ಕಿದ ಆಹಾರ ಪೊಟ್ಟಣಗಳು, ಶಸ್ತ್ರಾಸ್ತ್ರಗಳು, ಔಷಧಗಳು, ಬಟ್ಟೆಬರೆಗಳು ಎಲ್ಲವೂ ಪಾಕಿಸ್ತಾನದಲ್ಲಿ ಉತ್ಪಾದನೆಯಾಗಿರುವಂಥದ್ದು ಎಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ ಎಂದಿದ್ದಾರೆ ಲೆ.ಜ.ಸಾಹಾ.

ಇವರೆಲ್ಲರೂ ಭಾರಿ ತರಬೇತಿ ಪಡೆದ ಉಗ್ರರು ಎಂಬುವುದರಲ್ಲಿ ಸಂದೇಹವೇ ಇಲ್ಲ. ಒಂದು ಉಗ್ರರ ತಂಡ ಭಾರಿ ಹಿಮ ಇರುವಂತಹ ಪ್ರದೇಶದಲ್ಲಿ ನುಸುಳಿದೆ. ಅಂತಹ ವಾತಾವರಣದಲ್ಲಿ ನುಸುಳಬೇಕೆಂದರೆ ಉನ್ನತ ಮಟ್ಟದ ದೈಹಿಕ ಸಾಮರ್ಥ್ಯ ಹೊಂದಿರಬೇಕು. ಮತ್ತೊಂದು ತಂಡ ನಡೆದುಕೊಂಡೇ ಜೇಲಂ ನದಿಯನ್ನು ದಾಟಿದೆ. ಈ ಉಗ್ರರು ವಿಶೇಷ ತರಬೇತಿ ಪಡೆದಿದ್ದಾರೆ ಎನ್ನುವುದು ಇದರಲ್ಲೇ ಸಾಬೀತಾಗುತ್ತದೆ ಎಂದೂ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.