ದೇಶ

ಷೇರು ಯಾವಾಗ ಮಾರಾಟ ಮಾಡ್ಬೇಕು

Published On :

ಕಂಪನಿಗೆ ಸಮಸ್ಯೆಯಾದಾಗ
ಯಾವುದೇ ಕಂಪನಿಯ ಷೇರುಕೊಳ್ಳುವ ಮುನ್ನ ನೀವು ಆ ಕಂಪನಿಯ ವಿಶ್ವಾಸಾರ್ಹತೆ ಕುರಿತು ಸಾಕಷ್ಟು ವಿಚಾರ ವಿಮರ್ಶೆ ನಡೆಸಿರುತ್ತೀರಿ. ಈ ಕಂಪನಿಯ ಷೇರಿನಲ್ಲಿ ಹಣ ತೊಡಗಿಸಿದರೆ ಹೇಗೆ ಎಂದು ಒಂದಷ್ಟು ಮಂದಿ ತಜ್ಞರಲ್ಲಿ ಕೇಳಿಕೊಂಡಿರುತ್ತೀರಿ ನಿಜ. ಆದರೆ, ಆ ಷೇರು ಕೊಂಡುಕೊಂಡ ಕೆಲ ವರ್ಷಗಳ ಬಳಿಕ ಕಂಪನಿಗೆ ಹೊಸ ಪ್ರತಿಸ್ಪರ್ಧಿ ಹುಟ್ಟುಕೊಂಡಿರಬಹುದು. ಮಾರುಕಟ್ಟೆಯಲ್ಲಿ ಆ ಕಂಪನಿಗೆ ತೀವ್ರ ಪ್ರತಿಸ್ಪರ್ಧೆ ನೀಡುತ್ತಿರಬಹುದು. ಇಂಥ ಸಂದರ್ಭದಲ್ಲಿ ಆ ಕಂಪನಿಯ ಷೇರನ್ನು ಇಟ್ಟುಕೊಳ್ಳುವ ಕುರಿತು ಮರು ಪರಿಶೀಲನೆ ನಡೆಸುವುದು ಒಳಿತು. ಯಾಕೆಂದರೆ ಅಂಥ ಕಂಪನಿಗಳ ಷೇರುಗಳನ್ನು ಇಟ್ಟುಕೊಳ್ಳುವುದರಿಂದ ನಷ್ಟದ ಅಪಾಯ ಜಾಸ್ತಿ.
ದಿಢೀರ್ ಏರಿಕೆಯಾದರೆ
ಯಶಸ್ವಿ ಹೂಡಿಕೆದಾರರು ಹೆಚ್ಚಾಗಿ ಆಸೆಬುರುಕರಲ್ಲ. ಅವರು ಒಂದು ನಿರೀಕ್ಷಿತ ಲಾಭದ ಗುರಿ ಇಟ್ಟುಕೊಂಡಿರುತ್ತಾರೆ. ಕೈಯಲ್ಲಿರುವ ಷೇರು ಅಷ್ಟು ಲಾಭ ತಂದುಕೊಡುವಂತಿದ್ದರೆ ಅದನ್ನು ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ಷೇರಿನ ಬೆಲೆಯು ಅವರು ಕೊಂಡುಕೊಂಡಿದ್ದ ಶೇ.20ರಿಂದ 30ರಷ್ಟು ಹೆಚ್ಚಾದಾಗ ದುರಾಸೆಗೆ ಬೀಳುವುದು ಸರಿಯಲ್ಲ. ಷೇರು ಮಾರಾಟ ಮಾಡಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ. ಯಾಕೆಂದರೆ ಮತ್ತಷ್ಟು ದರ ಏರಲಿ ಎಂದು ಕೂತಾಗ ಕೆಲವೊಮ್ಮೆ
ಆ ಷೇರಿನ ಮೌಲ್ಯ ದಿಢೀರ್ ಕುಸಿಯುವ ಸಾಧ್ಯತೆ ಇರುತ್ತದೆ. ಷೇರುಪೇಟೆಯಲ್ಲಿ  ಅತಿಯಾಸೆಗೆ ಎಲ್ಲಾ ಸಂದರ್ಭದಲ್ಲಿ ನಿರೀಕ್ಷಿತ ಫಲ ಸಿಗುವುದಿಲ್ಲ.
ಕಡಿಮೆ ಮಟ್ಟಕ್ಕೆ ಕುಸಿದರೆ
ನೀವು ಯಾವುದೋ ಒಂದು ಕಂಪನಿಯ ಷೇರು ಕೊಂಡುಕೊಂಡಿರುತ್ತೀರಿ. ಆ ಷೇರು ಮೌಲ್ಯವು ನಿರೀಕ್ಷೆಗಿಂತ ಕೆಳಕ್ಕೆ ಕುಸಿದರೆ ಸುಮ್ಮನೆ ಕೂರುವುದು ತರವಲ್ಲ. ಅಂಥ ಸಂದರ್ಭದಲ್ಲಿ ಆ ಷೇರನ್ನು ಮಾರಾಟ ಮಾಡುವುದೇ ಒಳಿತು. ಯಾಕೆಂದರೆ ಇಂಥ ಷೇರುಗಳನ್ನು ಇಟ್ಟುಕೊಳ್ಳುವುದರಿಂದ ಕೈಸುಟ್ಟುಕೊಳ್ಳುವ ಸಾಧ್ಯತೆಯೇ ಹೆಚ್ಚು. ಸಾಮಾನ್ಯವಾಗಿ ತಜ್ಞರು ಸಾಮಾನ್ಯವಾಗಿ ಷೇರು ಬೆಲೆಯು ಶೇ.15ರಿಂದ 20ರಷ್ಟು ಕುಸಿತ ಕಾಣುವ ವರೆಗೆ ಸುಮ್ಮನಿರಿ ಎಂದು ಸಲಹೆ ನೀಡುತ್ತಾರೆ. ಆದರೆ, ಇದು ಆಯಾ ವ್ಯಕ್ತಿಯ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಷೇರು ಬೆಲೆಯು ಅದಕ್ಕಿಂತಲೂ ಕುಸಿದಾಗ ಅಂಥ ಷೇರನ್ನು ಇಟ್ಟುಕೊಂಡು ಏನೂ ಪ್ರಯೋಜನ ಇಲ್ಲ ಎನ್ನುತ್ತಾರೆ ಅವರು.
ಉತ್ತಮ ಅವಕಾಶ
ನಿಮ್ಮ ಕೈಯಲ್ಲಿ ಎ ಮತ್ತು ಬಿ ಎಂಬ ಎರಡು ಕಂಪನಿಗಳ ಷೇರುಗಳಿರುತ್ತವೆ ಅಂತಿಟ್ಟುಕೊಳ್ಳಿ. ಅದರಲ್ಲಿ ಎ ಕಂಪನಿಯ ಷೇರು ಬಿ ಕಂಪನಿಗಿಂತ ಉತ್ತಮ ರಿಟರ್ನ್ ತಂದುಕೊಡುತ್ತಿರುತ್ತದೆ. ಅಂಥ ಪರಿಸ್ಥಿತಿಯಲ್ಲಿ ಬಿ ಕಂಪನಿಯ ಷೇರು ಮಾರಾಟ ಮಾಡಬಹುದು. ಅದರಿಂದ ಬಂದ ಹಣವನ್ನು ಎ ಕಂಪನಿಯಲ್ಲಿ ತೊಡಗಿಸುವುದರಿಂದ ಹೆಚ್ಚಿನ ಲಾಭ ಮಾಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.