ದೇಶ

ಐಟಿ ಕಾಯ್ದೆ ನಿಯಮ ದುರ್ಬಳಕೆ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

Published On :

ನವದೆಹಲಿ: ಐಟಿ ಕಾಯ್ದೆಯ ಕೆಲವು ನಿಯಮ ದುರ್ಬಳಕೆ ಪ್ರಶ್ನಿಸಿ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯನ್ನು ಪ್ರತಿವಾದಿಗಳನ್ನಾಗಿ ಮಾಡಿ ನೋಟಿಸ್ ಜಾರಿ ಮಾಡಿದೆ.
ನ್ಯಾ. ಡಿ.ಕೆ.ಜೈನ್ ಮತ್ತು ನ್ಯಾ. ಎ.ಆರ್.ದವೆ ಅವರನ್ನೊಳಗೊಂಡ ನ್ಯಾಯಪೀಠವು ಅರ್ಜಿಯನ್ನು ಅಂಗೀಕರಿಸಿ, ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿತು. ಐಟಿ ಕಾಯ್ದೆಯ 66(ಎ) ಸೆಕ್ಷನ್ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (ಮಧ್ಯಮ ಮಾರ್ಗಸೂಚಿಗಳು) ನಿಯಮಗಳು-2011ರ ನಿಯಮ 3(2), 3(3) ಮತ್ತು 3(7)ರ ಬಳಕೆಯನ್ನು ಪ್ರಶ್ನಿಸಿ ರಾಜೀವ್ ಚಂದ್ರಶೇಖರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹರೀಶ್ ಸಾಳ್ವೆ ಅವರು ಅರ್ಜಿದಾರ ರಾಜೀವ್ ಚಂದ್ರಶೇಖರ್ ಅವರ ಪರವಾಗಿ ಹಾಜರಿದ್ದರು.
ಮುಕ್ತ ಅಂತರ್ಜಾಲದ ಪ್ರತಿಪಾದಕ ರಾಜೀವ್: ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ಅಂತರ್ಜಾಲ ವ್ಯವಸ್ಥೆಯ ಪ್ರಬಲ ಪ್ರತಿಪಾದಕರಾಗಿರುವ ರಾಜೀವ್ ಅವರು ಮೊದಲಿನಿಂದಲೂ ಈ ವಿಷಯದಲ್ಲಿ ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತಲೆ ಬಂದಿದ್ದಾರೆ.
ಅಂತರ್ಜಾಲ ಸ್ವಾತಂತ್ರ್ಯಕ್ಕಾಗಿ ಮತ್ತು ಸರ್ಕಾರದ ಹಿಡಿತದಿಂದ ಈ ಮಾಧ್ಯಮವನ್ನು ಮುಕ್ತವಾಗಿರಿಸಲು ಸೆಣೆಸುತ್ತಿರುವ ಸಂಸದರಲ್ಲಿ ಮೊದಲಿಗರಾದ ರಾಜೀವ್, ಸಂಸತ್ತಿನಲ್ಲಿ ವಿಶೇಷ ಪ್ರಸ್ತಾಪ, ಚರ್ಚೆಗಳ ಮೂಲಕ ಸಂಬಂಧಿಸಿದ ಸಚಿವರನ್ನು ಅನೇಕ ಬಾರಿ ಪ್ರಶ್ನಿಸಿರುವುದಲ್ಲದೆ, ಪ್ರಧಾನ ಮಂತ್ರಿಗಳಿಗೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಿಗೆ ಪತ್ರಗಳನ್ನು ಬರೆದು, ಸರ್ಕಾರದ ನಡೆಗಳನ್ನು ಶೋಧಿಸುತ್ತಲೆ ಇದ್ದಾರೆ. ಮಾಧ್ಯಮಗಳಲ್ಲಿಯೂ ಅನೇಕ ಲೇಖನಗಳನ್ನು ಬರೆದು, ಚರ್ಚೆಗಳಲ್ಲಿ ಭಾಗವಹಿಸಿ ಕಾಯ್ದೆಯ ನ್ಯೂನತೆಗಳನ್ನು ರಾಜೀವ್ ಬಿಡಿಸಿಟ್ಟಿದ್ದಾರೆ. ಈ ವಿಚಾರದಲ್ಲಿ ಸೆಣಸುತ್ತಿರುವ ನಾಗರಿಕರನ್ನು ಮತ್ತು ಅನೇಕ ಸಂಘಟನೆಗಳನ್ನು ಒಗ್ಗೂಡಿಸಿ, ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. 2011ರ ಏಪ್ರಿಲ್ ನಲ್ಲಿಯೆ ಐಟಿ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲು ಹೊರಟಾಗ ಅಂತರ್ಜಾಲ ಸೆನ್ಸಾರ್‌ಶಿಫ್ ಅನ್ನು ವಿರೋಧಿಸಿದ ಮೊದಲನೆಯ ಸಂಸದರಾದ ರಾಜೀವ್, ಕಾಯ್ದೆಯ ವಿಪರೀತ ಪರಿಣಾಮಗಳ ಅಪಾಯ ಕುರಿತು ಆಗಲೇ ಎಚ್ಚರಿಸಿದ್ದರು. ಅವರ ಎಚ್ಚರಿಕೆ ನಿಜವೆನ್ನುವಂತೆ, ಇತ್ತೀಚಿನ ದಿನಗಳಲ್ಲಿ ಅನೇಕ ಅಂತರ್ಜಾಲ ಬಳಕೆದಾರರ ವಿರುದ್ಧ ಇದೇ ಕಾಯ್ದೆ ಬಳಸಿ ಸರ್ಕಾರ ಬಂಧಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.