ಈಗಿನ ಸುದ್ದಿ

ಸದನದಲ್ಲಿ 'ಕಾವೇರಿ' ಕೋಲಾಹಲ

ತಮಿಳುನಾಡಿಗೆ 2.44 ಟಿಎಂಸಿ ಕಾವೇರಿ ಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ/ಸದನದಲ್ಲಿ ಕೋಲಾಹಲ.

ಸದನದಲ್ಲಿ 'ಕಾವೇರಿ' ಕೋಲಾಹಲ
Published On :

ಬೆಂಗಳೂರು: ತಮಿಳುನಾಡಿಗೆ 2.44 ಟಿಎಂಸಿ ಕಾವೇರಿ ಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಸದನದಲ್ಲಿ 'ಕಾವೇರಿ' ಕೋಲಾಹಲ ಉಂಟಾಗಿ, ಸದನವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ.

ಸದನ ಆರಂಭವಾಗುತ್ತಿದಂತೆ ವಿರೋಧ ಪಕ್ಷಗಳು ಕಾವೇರಿ ವಿಚಾರವಾಗಿ ಸದನದಲ್ಲಿ ಗಲಾಟೆಗೆ ಮುಂದಾದರು. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸುತ್ತಿಲ್ಲ, ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ವಿರೋಧಿಯಾಗಿ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಗಲಾಟೆ ನಡೆಸಿದವು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ವಸ್ತು ಸ್ಥಿತಿ ಸಾಬೀತಾಗಿದ್ದು, ಕೂಡಲೇ ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸದನಕ್ಕೆ ತಿಳಿಸಿದರು. 2003ರಲ್ಲಿ ಸಹ ರಾಜ್ಯಕ್ಕೆ ಇಂತಹದೇ ಪರಿಸ್ಥಿತಿ ಎದುರಾಗಿತ್ತು, ಈ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಪಕ್ಷಗಳು ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಶೆಟ್ಟರ್ ಹೇಳಿದರು.

ಶೆಟ್ಟರ್ ಮಾತಿಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರದ ವಕೀಲರು ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಂಡಿಸುತ್ತಿಲ್ಲವಾದ್ದರಿಂದ ಕೂಡಲೇ ಅವರನ್ನು ಕಿತ್ತೊಗೆದು ಅವರ ಸ್ಥಾನದಲ್ಲಿ ಉತ್ತಮ ವಕೀಲರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ, ಸರ್ಕಾರ ನೇಮಿಸಿರುವ ವಕೀಲರು ನ್ಯಾಯಾಲಯದಲ್ಲಿ ರಾಜ್ಯದ ಪರ ಸರಿಯಾಗಿಯೇ ವಾದ ಮಂಡಿಸಿದ್ದಾರೆ. ಹಾಗಾಗಿ ಅವರನ್ನು ಸದ್ಯಕ್ಕೆ ಬದಲಾವಣೆ ಮಾಡುವ ಮಾತಿಲ್ಲ ಎಂದರು. ಸದ್ಯ ತಮಿಳುನಾಡಿಗೆ ಯಾವುದೇ ನೀರು ಬಿಡುವ ತರಾತುರಿಯಲ್ಲಿ ರಾಜ್ಯ ಸರ್ಕಾರ ಇಲ್ಲ ಎಂದು ಹೇಳಿದರು.

ಇಂದು ಸದನ ಮುಗಿದ ಬಳಿಕ ನಾನು ಮತ್ತು ಸಿಎಂ ಶೆಟ್ಟರ್ ಅವರು ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿ, ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ಬೊಮ್ಮಾಯಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.