ಭಕ್ತಿರಸದ ಪರಿಪಾಕ ಶಿರಡಿ ಸಾಯಿಬಾಬಾ
ಕನ್ನಡದ ವೃತ್ತಿ ರಂಗಭೂಮಿಯ ನಾಟಕಗಳು ಅಶ್ಲೀಲತೆಯಿಂದ ತುಂಬಿ ತುಳುಕುತ್ತಿವೆ, ಸಂಸ್ಕೃತಿಯ ಎಲ್ಲ ಮೀರುತ್ತಿವೆ...

ಕನ್ನಡದ ವೃತ್ತಿ ರಂಗಭೂಮಿಯ ನಾಟಕಗಳು ಅಶ್ಲೀಲತೆಯಿಂದ ತುಂಬಿ ತುಳುಕುತ್ತಿವೆ, ಸಂಸ್ಕೃತಿಯ ಎಲ್ಲ ಮೀರುತ್ತಿವೆ ಎಂಬ ಆರೋಪಗಳ ನಡುವೆಯೇ, ಕೆಬಿಆರ್ ಡ್ರಾಮಾ ಕಂಪೆನಿಯ 'ಶಿರಡಿ ಸಾಯಿಬಾಬಾ' ನಾಟಕ ನಿರ್ಮಾಣಗೊಂಡಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿದೆ.
88 ವರ್ಷಗಳ ಸುದೀರ್ಘ ಅವಧಿಯಿಂದ ಪ್ರದರ್ಶನಗಳನ್ನು ನೀಡುತ್ತ ಬಂದಿರುವ ಕೆಬಿಆರ್ ಡ್ರಾಮಾ ಕಂಪೆನಿಯಲ್ಲಿ ಸಾವಿರಾರು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಇವರ ನೂರಾರು ನಾಟಕಗಳು ಕನ್ನಡ ರಂಗಪ್ರೇಮಿಗಳನ್ನು ರಂಜಿಸಿವೆ, ಹಿತಾನುಭವ ನೀಡಿವೆ. ಹೊಸ ನಾಟಕಗಳೂ ಆಗಾಗ ರಂಗವೇರುತ್ತಿರುತ್ತವೆ. ಅಂಥ ಹೊಸ ನಾಟಕ 'ಶಿರಡಿ ಸಾಯಿಬಾಬಾ' ರಚಿಸಿ ನಿರ್ದೇಶಿಸಿರುವ ಚಿಂದೋಡಿ ಬಂಗಾರೇಶ್ ರಂಗಭೂಮಿಯ ಹಳೆಯ ಹುಲಿ. ಇವರ ನಿರ್ದೇಶನದ 'ಗಾನಯೋಗಿ' ಸಿನೆಮಾ ರಾಜ್ಯ, ರಾಷ್ಟ್ರಪ್ರಶಸ್ತಿ ಪಡೆದಿದೆ. ರಂಗಭೂಮಿಯ ಎಲ್ಲ ವಿಭಾಗಗಳಲ್ಲಿ ಅಭೂತಪೂರ್ವ ರೀತಿಯಲ್ಲಿ ಪರಿಣತರು. ತಮ್ಮ ಎಲ್ಲ ಅನುಭವವನ್ನು ಎರಕ ಹೊಯ್ದು ಈ ನಾಟಕವನ್ನು ತಯಾರಿಸಿದ್ದಾರೆ. ಯಶಸ್ವಿ ರಂಗ ನಿರ್ದೇಶಕ, ಯಶಸ್ವಿ ಸಿನೆಮಾ ನಿರ್ದೇಶಕನೂ ಅಗಬಲ್ಲ ಎಂದು ತೋರಿಸಿದವರು. ಈ ನಾಟಕದ ನಿರ್ಮಾಣಕ್ಕೆ ಧೈರ್ಯ ಮಾಡಿದ ಚಿಂದೋಡಿ ಮಧುರೇಶರು ಅದಕ್ಕೆ ತಕ್ಕ ಲಾಭವನ್ನು ಕಂಡಿಲ್ಲ ಎನ್ನಬೇಕು. ಹತ್ತಾರು ಭಾಷೆಗಳಲ್ಲಿ ಯಶಸ್ವಿಯಾಗಿರುವ ಈ ನಾಟಕ ಕನ್ನಡದ ಪ್ರೇಕ್ಷಕರಿಗೆ ರುಚಿಸಬಹುದು ಎನ್ನಲು ಕಾರಣಗಳಿವೆ.
ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಬಾಳಿ ಬದುಕಿದ ಶಿರಡಿ ಸಾಯಿಬಾಬಾ ಕತೆಯನ್ನು ಚಿಂದೋಡಿಯವರು ಕನ್ನಡೀಕರಿಸಿ ಹೇಳಿದ್ದಾರೆ. ಕನ್ನಡ ಹಾಗೂ ಮರಾಠಿಯ ಮಹಾಪುರುಷರನ್ನು ಸಮೀಕರಿಸಿರುವ ರೀತಿ ಅದ್ಭುತವಾಗಿದೆ. ನಾಟಕ ಬಿಚ್ಚಿಕೊಳ್ಳುವ ರೀತಿ, ರಂಗವಿನ್ಯಾಸ, ತಂತ್ರಗಾರಿಕೆ, ಬೆಳಕುನೆರಳಿನ ಆಟ, ಸೌಂಡ್ ಎಫೆಕ್ಟ್‌ಗಳು ಒಂದಕ್ಕೊಂದು ಪೂರಕವಾಗಿವೆ, ದೃಶ್ಯಗಳಿಗೆ ತಕ್ಕಂತೆ ಹದವಾಗಿವೆ. ಸಂಗೀತ ಕಿವಿಗೆ ತುಂಬಾ ಹಿತವಾಗಿದೆ. ಕಲಾವಿದರು ಜಿದ್ದಿಗೆ ಬಿದ್ದಂತೆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಬಾಬಾ ಪಾತ್ರದಲ್ಲಿ ವಿಜಯಕುಮಾರ ಮಿಂಚುತ್ತಾರೆ. ಏಣಗಿ ಬಾಳಪ್ಪನವರು ಬಸವಣ್ಣನವರ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುತ್ತಿದ್ದಂತೆ, ವಿಜಯಕುಮಾರ ಬಾಬಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿ.ವಿ.ಸಾವಿತ್ರಮ್ಮ, ಶಿವಾನಂದಪ್ಪ, ದೀಪಾ, ಮಂದಾಕಿನಿ, ಚಿಂದೋಡಿ ಶ್ರೀಕಂಠ ಮುಂತಾದವರು ರಂಗಕ್ಕೆ ಮೆರುಗು ತುಂಬುತ್ತಾರೆ. ಒಟ್ಟಿನಲ್ಲಿ ಕೆಬಿಆರ್ ಕಂಪೆನಿಯ ಬಾಬಾ ನಾಟಕ ಒಂದು ಪರಿಪೂರ್ಣ ರಂಗಪ್ರಸ್ತುತಿ. ಕನ್ನಡದ ನಾಟಕಪ್ರಿಯರು ಹೆಮ್ಮೆ ಪಡುವಂತಹ ಸೂಪರ್‌ಹಿಟ್ ಕಲಾಕೃತಿ. ಕಂಪೆನಿಯ ಇನ್ನೊಂದು ನಾಟಕ 'ಸರಿಯಿದ್ದರೆ ಸಂಸಾರ'. ಆಧುನಿಕ ತಂತ್ರಜ್ಞಾನ, ವಿಶೇಷ ಪರದೆ ಬಳಸಿಕೊಂಡು ತೋರಿಸುವ ಫ್ಲ್ಯಾಶ್‌ಬ್ಯಾಕ್ ದೃಶ್ಯಗಳು, ಗಟ್ಟಿ ಕತೆ, ಉತ್ತಮ ಅಭಿನಯ ಈ ನಾಟಕದ ವಿಶೇಷ ಆಕರ್ಷಣೆಗಳು. ಜೂನ್ 1ರಿಂದ ಹುಬ್ಬಳ್ಳಿಯಲ್ಲಿ ಇವೆರಡೂ ನಾಟಕಗಳ ಪ್ರದರ್ಶನ ರಂಗವೇರಲಿದೆ. ವಿಜಯಕುಮಾರ್ ಸಂಪರ್ಕ: 9739237811
-ಯಶವಂತ ಸರದೇಶಪಾಂಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


