ಖುಷಿ

ಆಂಬಿ ಕಾರ್ ಮೋಡ

ಅಂಬಾಸಿಡರ್ ಎಂಬ ಕಾರಿನ ಜತೆಗೆ ಸ್ವತಂತ್ರ ಭಾರತದ ನೆನಪುಗಳು ತಳುಕು ಹಾಕಿಕೊಂಡಿವೆ. ಗಾಂಧಿ...

ಆಂಬಿ ಕಾರ್ ಮೋಡ
Published On :

ಅಂಬಾಸಿಡರ್ ಎಂಬ ಕಾರಿನ ಜತೆಗೆ ಸ್ವತಂತ್ರ ಭಾರತದ ನೆನಪುಗಳು ತಳುಕು ಹಾಕಿಕೊಂಡಿವೆ. ಗಾಂಧಿ ಇದರಲ್ಲಿ ಸಂಚರಿಸಿದ್ದರು. ನೆಹರೂ ಕೆಂಪು ಕೋಟೆಗೆ ಇದರಲ್ಲೇ ಆಗಮಿಸಿದ್ದರು. ಭಾರತದ ವೈಸರಾಯ್‌ಗಳಿಗೆ ಇದು ಅಚ್ಚುಮೆಚ್ಚಾಗಿತ್ತು. ದೇಶದ ನೂರಾರು ರಾಜರ ವೈಭವಕ್ಕೆ ಸಾಕ್ಷಿಯಾಗಿತ್ತು. ಅಂಥ ನಮ್ಮ ರಸ್ತೆಗಳ ರಾಜನಾಗಿರುವ ಅಂಬಾಸಿಡರ್ ಕಾರು ಇನ್ನು ನೆನಪು ಮಾತ್ರ. ಈಗಾಗಲೇ ನೆನಪಿನ ಅಂಗಳಕ್ಕೆ ಸೇರಿರುವ, ದೇಶದ ಜನಪ್ರಿಯ ಬ್ರಾಂಡ್‌ಗಳಲ್ಲೊಂದಾಗಿದ್ದ ಅಂಬಾಸಿಡರ್ ಕಾರಿಗೆ ಇನ್ನು ಅಧಿಕೃತ ವಿದಾಯ ಹೇಳಬಹುದು. 2014ರ ಮೇ ತಿಂಗಳ 24ರಂದು ಪಶ್ಚಿಮ ಬಂಗಾಳದ ಉತ್ತರಪಾರದಲ್ಲಿರುವ ಕಾರಿನ ಉತ್ಪಾದನಾ ಘಟಕ ಮುಚ್ಚಿದೆ. ಹೀಗಾಗಿ ಇನ್ನು ಈ ಘಟಕದಿಂದ ಐತಿಹಾಸಿಕ ಕಾರುಗಳ ಉತ್ಪಾದನೆ ಸಂಪೂರ್ಣವಾಗಿ ನಿಂತು ಹೋಗಲಿದೆ.
ಅಂಬಾಸಿಡರ್ ಕಾರಿನ ಪ್ರವರ್ತಕ ಸಂಸ್ಥೆ ಹಿಂದುಸ್ಥಾನ್ ಮೋಟರ್ಸ್. ಕಳೆದ ಕೆಲವು ವರ್ಷಗಳಿಂದ ಕಂಪನಿಯ ಹಣಕಾಸು ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿನ ಉತ್ಪಾದನೆ ಹೇಳುವಂಥ ಪರಿಸ್ಥಿತಿಯಲ್ಲಿರಲಿಲ್ಲ. ಕಂಪನಿಯೇ ಹೇಳಿಕೊಂಡಂತೆ ಉತ್ಪಾದನಾ ಘಟಕದಲ್ಲಿನ ಕಾರ್ಮಿಕರಲ್ಲಿನ ಅಶಿಸ್ತು, ಕಾರುಗಳಿಗೆ ಕುಸಿದ ಬೇಡಿಕೆಗಳ ಪರಿಣಾಮವಾಗಿ ಇಂಥ ನಿರ್ಧಾರ. ಕಾಕತಾಳೀಯವೆಂದರೆ 56 ವರ್ಷಗಳ ಹಿಂದೆ ಉತ್ತರಪಾರ ಘಟಕದಲ್ಲಿ ಕಾರಿನ ಉತ್ಪಾದನೆ ಆರಂಭವಾದ ದಿನದಂದೇ ಘಟಕ ಮುಚ್ಚುವ ನಿರ್ಧಾರವನ್ನು ಕಂಪನಿ ಕೈಗೊಂಡಿತು.
ಹಿಂದುಸ್ತಾನ್ ಮೋಟರ್ಸ್ ಪ್ರವರ್ತಕ ಸಂಸ್ಥೆ ಸಿ.ಕೆ.ಬಿರ್ಲಾ ಕಂಪನಿ. ಈ ಕಂಪನಿಯ ಒಟ್ಟು ಆಸ್ತಿಯೇ 9,500 ಕೋಟಿ. ಈ ಕಂಪನಿಗೆ 150 ವರ್ಷಗಳ ಇತಿಹಾಸವಿದೆ. ತಂತ್ರಜ್ಞಾನ ಮತ್ತು ಅಟೋಮೊಬೈಲ್, ಕಟ್ಟಡ ತಂತ್ರಜ್ಞಾನ, ಆರೋಗ್ಯ ಮತ್ತು ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಕಂಪನಿ ತನ್ನ ಛಾಪು ಮೂಡಿಸಿದೆ.
ಅಂಬಾಸಿಡರ್ ಹುಟ್ಟು
ಮೂಲತಃ ಈ ಕಾರಿನ ವಿನ್ಯಾಸ ಯುನೈಟೆಡ್ ಕಿಂಗ್‌ಡಮ್‌ನ ಮಾರಿಸ್ ಆಕ್ಸ್‌ಫರ್ಡ್ ಮೂರನೇ ಮಾದರಿಯದ್ದು (ಂ್ಟ್ಠ್ಠ್ಝಡ ಕ್ಢಜ್ಟ್ಠಿಜ ಐಐಐ). ಸಿ.ಕೆ.ಬಿರ್ಲಾ ಸಮೂಹ ಪಶ್ಚಿಮ ಬಂಗಾಳದ ಉತ್ತರಾಪಾರದಲ್ಲಿ ಕಾರಿನ ಉತ್ಪಾದನಾ ಘಟಕವನ್ನು ಆರಂಭಿಸಿತು. ಕೆಲವೊಂದು ತಾಂತ್ರಿಕ ಬದಲಾವಣೆಗಳೊಂದಿಗೆ ನಮ್ಮ ಭಾರತಕ್ಕೆ ಅನುಗುಣವಾಗುವಂತೆ ವಿನ್ಯಾಸವನ್ನೂ ಮಾಡಲಾಯಿತು. ಆರಂಭದಲ್ಲಿ ಮಾರ್ಕ್ ಮಾದರಿಯ ನಾಲ್ಕು ವಿನ್ಯಾಸಗಳನ್ನು 1948ರಿಂದ 1979ರ ವರೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿತು.
ಅಂಬಾಸಿಡರ್ ನೋವಾ ಎಂಬ ಹೊಸ ಮಾದರಿಯ ಕಾರನ್ನು ಬಿಡುಗಡೆ ಮಾಡಿದ್ದು 1999ರಲ್ಲಿ. 1992ರಲ್ಲಿ ಅಂಬಾಸಿಡರ್ 1800 ಎಸ್‌ಜೆಡ್ ಎಂಬ ಮತ್ತೊಂದು ಕಾರನ್ನೂ ಬಿಡುಗಡೆ ಮಾಡಿತ್ತು. ಇತ್ತೀಚಿನ ವರ್ಷಗಳಲ್ಲಿ ಅಂಬಾಸಿಡರ್ ಕ್ಲಾಸಿಕ್, ಗ್ರಾಂಡ್, ಎನ್‌ಕೋರ್ ಎಂಬ ಹೊಸ ಮಾದರಿಯ ಕಾರುಗಳು ರಸ್ತೆಗೆ ಇಳಿದಿದ್ದವು.

ಇವ ನಮ್ಮ ರಸ್ತೆ ರಾಜ
ಹೆಸರಿಗೆ ತಕ್ಕಂತೆ ಇದು ರಸ್ತೆಯ ರಾಜ, ಪ್ರತಿನಿಧಿ. ನಮ್ಮ ದೇಶದ ರಸ್ತೆಗಳು (ಎಕ್ಸ್‌ಪ್ರೆಸ್ ಹೈವೇಗಳನ್ನೂ ಸೇರಿಸಿ) ಹೇಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಅಂಥ ರಸ್ತೆಗಳಲ್ಲಿ ಬಿದ್ದೆದ್ದುಕೊಂಡು ಹೋದರೂ ಅಂಬಾಸಿಡರ್ ಕಾರಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ದಪ್ಪಗಿನ ಹಿಂದಿನ ಮತ್ತು ಮುಂದಿನ ಸೀಟುಗಳಲ್ಲಿ ಹಾರಿ ಬಿದ್ದುಕೊಂಡು ಹೋಗುವುದೇ ಒಂದು ಆನಂದವಾಗಿತ್ತು. ಅದಕ್ಕೆ ತಕ್ಕಂತೆ ಅದರ ಚಾಸಿಸ್ ಕೂಡ ಉತ್ತಮ ದರ್ಜೆಯಿಂದಲೇ ತಯಾರಾಗುತ್ತಿತ್ತು. ಎಂಥ ಹಳ್ಳಕೊಳ್ಳದ ರಸ್ತೆಯಲ್ಲಿಯೂ ಅದು ಹೋಗುತ್ತಿತ್ತು. ಹೀಗಾಗಿಯೇ ಬರೋಬ್ಬರಿ ಐದು ದಶಕಗಳ ಕಾಲ ರಾಜನಂತೆ ರಸ್ತೆಯಲ್ಲಿ ಮೆರೆದಿತ್ತು.
ದಿಲ್ಲಿಯಲ್ಲಿರುವ ಪ್ರಧಾನಮಂತ್ರಿಯಿಂದ ಹಿಡಿದು ಸಹಾಯಕ ಆಯುಕ್ತರ ವರೆಗಿನ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಕೆಂಪು ದೀಪದ ಅಂಬಾಸಿಡರ್ ಕಾರಿನಲ್ಲಿ ಬರುವುದೆಂದರೆ ಅದರ ಗತ್ತೇ ಬೇರೆ.



ಸೇನೆಯ ವಿವಿಧ ಹಂತದ ಅಧಿಕಾರಿಗಳು, ರಾಜ್ಯ ಮತ್ತು ಕೇಂದ್ರದ ವಿವಿಧ ಹಂತದ ಅಧಿಕಾರಿಗಳು ತೀರಾ ಇತ್ತೀಚಿನ ವರೆಗೆ ಅಂಬಾಸಿಡರ್ ಕಾರನ್ನೇ ಅಧಿಕೃತ ಪ್ರಯಾಣಕ್ಕೆ ಉಪಯೋಗಿಸುತ್ತಿದ್ದರು. ಅಧಿಕಾರಿಗಳೆಲ್ಲ ಹವಾನಿಯಂತ್ರಿತ, ಬಿಳಿ ಬಣ್ಣದ ಅಂಬಾಸಿಡರ್‌ನಲ್ಲಿ ಕುಳಿತು, ಕಾರಿನ ಕಿಟಕಿಗೆ ಬಿಳಿ ಪಾರದರ್ಶಕ ಪರದೆ ಹಾಕಿಕೊಂಡು ಬರುವುದೇ ಗೈರತ್ತು. ಈಗ ಮಧ್ಯವಯಸ್ಕರಾಗಿರುವವರೆಲ್ಲ ಸಣ್ಣ ವಯಸ್ಸಿನಲ್ಲಿ ಬಿಳಿ ಬಣ್ಣದ ಅಂಬಾಸಿಡರ್ ಕಾರನ್ನೇ ನೋಡಿ ಮುಟ್ಟಿ ಬೆಳೆದವರು.
ನಮ್ಮ ದೇಶ ಹೇಳಿಕೇಳಿ ಸೆಕ್ಯುಲರ್ ರಾಷ್ಟ್ರ. ಅಂಬಾಸಿಡರ್ ಕಾರಿನಲ್ಲಿ ದೇಶದ ಅತ್ಯಂತ ಬಡ ವರ್ಗದ ಜನರಿಂದ ಹಿಡಿದು ಗರಿಷ್ಠ ಶ್ರೀಮಂತರೂ ಪ್ರಯಾಣಿಸಿದ್ದಾರೆ. ಜಾತಿ, ಬೇಧ, ಧರ್ಮದ ನಡುವೆ ಬೇಧ ಎಣಿಸದೆ ದೇಶದ ಸೇವೆಯನ್ನು ಅದು ಮಾಡಿದೆ. ಹಾಲಿ ಕಾರುಗಳಿಗೆ ಹೋಲಿಸಿದರೆ ಅಂಬಾಸಿಡರ್‌ನಲ್ಲಿ ಹೆಚ್ಚಿನ ಸ್ಥಳಾವಕಾಶವಿತ್ತು. ಈಗಿನ ಸಣ್ಣ ಮಾದರಿ ಕಾರುಗಳಲ್ಲಿ ನಾಲ್ವರು ಕುಳಿತುಕೊಂಡರೆ ಒಂದು ಕೈಚೀಲವನ್ನಿಡಲೂ ಸ್ಥಳ ಇರುವುದಿಲ್ಲ. ಆದರೆ ಅಂಬಾಸಿಡರ್ ಕಾರಿನ ಡ್ಯಾಷ್ ಬೋರ್ಡ್‌ನಲ್ಲಿ ಒಂದು ಸಂಸಾರವೇ ಹಿಡಿಸುತ್ತಿತ್ತು.

ಪೆಟ್ಟು ಬಿದ್ದದ್ದು ಯಾವಾಗ?
ಮೇಲೆ ಏರಿದವನು ಇಳಿಯಲೇಬೇಕು ಎಂಬ ಜಗತ್ತಿನ ನಿಯಮದಂತೆ ನಮ್ಮ ಆಂಬಿ ಕಾರಿನ ಮೇಲೆಯೂ ಜನರ ಪ್ರೀತಿ ಕಡಿಮೆಯಾಗಲಾರಂಭಿಸಿತು. ಮೊದಲ ಪೆಟ್ಟು ಬಿದ್ದದ್ದು 1980ರ ದಶಕದಲ್ಲಿ ಕೇಂದ್ರ ಸರ್ಕಾರ ಮಾರುತಿ ಕಾರು ಉತ್ಪಾದನೆಗೆ ಅನುಮತಿ ಕೊಟ್ಟಾಗ. ಎರಡನೇ ಪೆಟ್ಟು ಬಿದ್ದದ್ದು 1990ರ ದಶಕದಲ್ಲಿ ಅಂದಿನ ಕೇಂದ್ರ ಸರ್ಕಾರ ದೇಶದ ಹಣಕಾಸು ವ್ಯವಸ್ಥೆಯನ್ನು ತೆರೆದ ಕಾರಣ ವಿವಿಧ ತಂತ್ರಜ್ಞಾನಗಳನ್ನು ಹೊಂದಿದ ವಿದೇಶಿ ಕಾರುಗಳು ದೇಶದ ವಾಹನ ಮಾರುಕಟ್ಟೆಗೆ ಲಗ್ಗೆ ಹಾಕಿದಾಗ. ಇಂಧನ ಉಳಿತಾಯ, ಗ್ಯಾಸ್‌ನಿಂದ ಓಡುವ ಕಾರುಗಳು ಹೀಗೆ ಹಲವು ವಿಧದ ಕಾರುಗಳು ಮಾರುಕಟ್ಟೆಯಲ್ಲಿ ಲಭಿಸಲು ಆರಂಭವಾಯಿತು. ಎಲ್ಲದಕ್ಕಿಂತ ಹೆಚ್ಚಾಗಿ ಹಿಂದುಸ್ತಾನ್ ಮೋಟರ್ಸ್ ಲಿಮಿಟೆಡ್ ಅಂಬಾಸಿಡರ್ ಕಾರಿನ ವಿನ್ಯಾಸದಲ್ಲಿ ಬದಲು ಮಾಡದೇ ಇದ್ದದ್ದು. ನಂತರದ ವರ್ಷಗಳಲ್ಲಿ ಎಂಜಿನ್ ಮಾದರಿ ಬದಲಾಯಿತೇ ವಿನಃ ಕಾರಿನ ಹೊರ ವಿನ್ಯಾಸದಲ್ಲಿ ಹೇಳುವಂಥದ್ದೇನೂ ಬದಲಾವಣೆಯಾಗಲಿಲ್ಲ.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವರ್ಷಗಳಲ್ಲಿ ನಿಧಾನವಢಾಗಿ ಅಂಬಾಸಿಡರ್ ಕಾರುಗಳಿಗೆ ಬದಲಾಗಿ ಅತ್ಯಾಧುನಿಕ ಬಿಎಂಡಬ್ಲ್ಯೂ ಗುಂಡು ನಿರೋಧಕ ಕಾರುಗಳಿಗೆ ಕೇಂದ್ರ ಸರ್ಕಾರ ಮೊರೆ ಹೋಯಿತು. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಟಾಟಾ ಸಫಾರಿ ಎಸ್‌ಯುವಿ (ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್) ನೀಡಲಾಗಿತ್ತು.

ನಾಯ್ಡು ಜೀವ ಉಳಿಸಿದ ಕಾರು
ಇದು ಬರೋಬ್ಬರಿ ಹನ್ನೊಂದು ವರ್ಷಗಳ ಹಿಂದಿನ ಮಾತು. ಹಿಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ನರಾ ಚಂದ್ರಬಾಬು ನಾಯ್ಡು ಅವರನ್ನು ಹತ್ಯೆ ಮಾಡಲು ನಕ್ಸಲರು ಸಂಚು ರೂಪಿಸಿದ್ದರು. ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಯ್ಡು ತಿರುಪತಿಗೆ ತೆರಳುತ್ತಿದ್ದರು. ಆಲಿಪಿರಿ ಎಂಬಲ್ಲಿ ನಕ್ಸಲೀಯರು ರಸ್ತೆಯಲ್ಲಿ ಹುದುಗಿರಿಸಿದ್ದ ಅತ್ಯಂತ ಪ್ರಬಲವಾದ ನೆಲಬಾಂಬ್ ಸ್ಫೋಟಿಸಿ ಅಂಬಾಸಿಡರ್ ಕಾರ್‌ನಲ್ಲಿದ್ದ ನಾಯ್ಡು ಅವರ ಕತ್ತಿನ ಎಲುಬು ಮತ್ತು ಪಕ್ಕೆಲುಬು ಫ್ರಾಕ್ಚರ್ ಆಯ್ತು. ಜತೆಗೆ ಅಲ್ಪಸ್ವಲ್ಪ ಗಾಯಗಳ. ವಿಧಿವಿಜ್ಞಾನ ತಜ್ಞರ ಪ್ರಕಾರ ಆ ದಿನ ನಾಯ್ಡು ಬೇರೆ ಯಾವುದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಕಥೆ ಬೇರೆಯೇ ಆಗಿರುತ್ತಿತ್ತು. ನಾಯ್ಡು ಪ್ರಯಾಣಿಸುತ್ತಿದ್ದ ಅಂಬಾಸಿಡರ್ ಗುಂಡು ನಿರೋಧಕ ಆಗಿದ್ದರೂ, ಅಂದು ನಕ್ಸಲರು ಉಪಯೋಗಿಸಿದ್ದ ನೆಲಬಾಂಬ್ ಅತ್ಯಂತ ಪ್ರಬಲವಾಗಿತ್ತು. ಕಂಪನಿ ಹೊಂದಿರುವ ಹಣಕಾಸು ಸಂಕಷ್ಟ ತೀರುವ ವರೆಗೆ ಕಾರಿನ ಉತ್ಪಾದನೆ ಇಲ್ಲ. ಇದರ ಜತೆಗೆ ಚೀನಾದ ಕಂಪನಿಯೊಂದಕ್ಕೆ ಅಂಬಾಸಿಡರ್ ತಯಾರಿಕಾ ಕಂಪನಿ ಮಾರುವ ಬಗ್ಗೆ ವರದಿಗಳಿವೆ. ಅದೇನೇ ಇರಲಿ. ಹಾಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಳೆಯ ಮಾದರಿ ಆಂಬಿಗೆ ಸ್ಥಾನವಿದ್ದೀತೇ? ಏನಿದ್ದರೂ ಅದು ಇನ್ನು ನೆನಪು ಮಾತ್ರ. ಹಾಗೆಂದು ಅದು ಮತ್ತೆ ಮೈತಳೆದು ಬಂದರೆ ನಿಜಕ್ಕೂ ಸ್ವಾಗತವಿದೆ.ಟಿ <


ವಿಶ್ವದ ಬೆಸ್ಟ್ ಟ್ಯಾಕ್ಸಿ


ಟ್ಯಾಕ್ಸಿ ಅಂದರೆ ಅಂಬಾಸಿಡರ್. 1960-1980ರ ವರೆಗಿನ ಎಲ್ಲ ಸಿನಿಮಾಗಳಲ್ಲಿ ಕಾರುಗಳು ಅಂದರೆ ಅಂಬಾಸಿಡರ್. ಕಪ್ಪು ಮತ್ತು ಬಿಳಿ ಬಣ್ಣದ್ದು ಸಾಮಾನ್ಯವಾಗಿ ಕಂಡುಬರುತ್ತಿದ್ದದ್ದು. 2013ರ ಜು.20ರಂದು ಇಂಗ್ಲೆಂಡ್‌ನ ಹ್ಯಾಂಪ್‌ಶೈರ್ ಸಮೀಪದ ಬ್ಯೋಲಿಯೋ ಎಂಬಲ್ಲಿ ಆಯೋಜಿಸಲಾಗಿದ್ದ ಮೋಟರ್ ಶೋದಲ್ಲಿ 'ವಿಶ್ವದ ಅತ್ಯುತ್ತಮ ಟ್ಯಾಕ್ಸಿ' ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಬಿಬಿಸಿಯ 'ಟಾಪ್ ಗಿಯರ್‌' ಕಾರ್ಯಕ್ರಮದಲ್ಲಿ ಈ ಕಾರಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ವಾಣಿಜ್ಯ ನಗರ ಮುಂಬೈನ ಟ್ಯಾಕ್ಸಿ ಪ್ರಪಂಚದಲ್ಲಿ ಅಂಬಾಸಿಡರ್‌ಗೆ ಅಗ್ರ ಸ್ಥಾನ. ಆರಂಭದ ಪ್ರೀಮಿಯರ್ ಪದ್ಮಿನಿ ಕಾರುಗಳ ಜಾಗವನ್ನು ಅಂಬಾಸಿಡರ್‌ಗಳು ಕದ್ದಿದ್ದವು.


-ಸದಾಶಿವ ಕೆ.
khandige29@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.