ಮಂಗ್ಳೂರಲ್ಲಿ ಮೋದಿ ಚಡ್ಡಿದೋಸ್ತು
ಚಕ್, ಚಕ್ ಒಂದೇ ಸಮನೆ ಕ್ಯಾಮೆರಾ ಮಿಂಚುಗಳು, ದಿಲ್ಲಿಯಲ್ಲಿ ನರೇಂದ್ರ ಮೋದಿ ಪ್ರಭೆ ಬಂದ ತಕ್ಷಣ ಅವೆಲ್ಲವೂ ಮಿಂಚುಹುಳಗಳು...

ಚಕ್, ಚಕ್ ಒಂದೇ ಸಮನೆ ಕ್ಯಾಮೆರಾ ಮಿಂಚುಗಳು, ದಿಲ್ಲಿಯಲ್ಲಿ ನರೇಂದ್ರ ಮೋದಿ ಪ್ರಭೆ ಬಂದ ತಕ್ಷಣ ಅವೆಲ್ಲವೂ ಮಿಂಚುಹುಳಗಳು...
ಇದೇ ಹೊತ್ತಿಗೆ ಸಾವಿರಾರು ಕಿಲೋಮೀಟರ್ ದೂರದ ಮಂಗಳೂರಿನ ಫ್ಲ್ಯಾಟೊಂದರಲ್ಲೂ ಮಾಧ್ಯಮಗಳ ಕಣ್ಣು ಕುಕ್ಕುವ ಕ್ಲಿಕ್‌ಗಳು. ಹಾಸಿಗೆಯಲ್ಲಿ ಪಾರ್ಶ್ವವಾಯು ಪೀಡಿತರಾಗಿ ಮಲಗಿದ್ದ ಬಾಬಾ ವಿಶ್ವನಾಥ್ ಕಷ್ಟದಿಂದ ಮೇಲೆದ್ದು ಕುಳಿತರೂ ಕಣ್ಣು ಕೋರೈಸುವ ಬೆಳಕನ್ನು ಎದುರಿಸಲು ಕಷ್ಟವಾಗಿ ಕಲವಿಲ ಗೊಳ್ಳುತ್ತಾರೆ. ಇದು ಇಬ್ಬರು ಗೆಳೆಯರ ಬದುಕಿನ ವೈವಿಧ್ಯ, ವೈರುಧ್ಯ...
ಮೋದಿ ಬಹುಮತ ಪಡೆದು ದಿಲ್ಲಿ ಸಂಸತ್ ಭವನಕ್ಕೆ ಅಡಿ ಇಡುತ್ತಿದ್ದಂತೆಯೇ ಮಂಗಳೂರಲ್ಲೂ ಮಾಧ್ಯಮಗಳು ಜನಸಾಮಾನ್ಯ ವ್ಯಕ್ತಿಯ ಫೋಟೋ, ವಿಡಿಯೋ ತೆಗೆಯಲು ಮುನ್ನುಗ್ಗುತ್ತಿರುವುದು ಇದಕ್ಕಾಗಿಯೇ. ಮಂಗಳೂರಿನ ವಿಶ್ವನಾಥ್ ಮತ್ತು ಪ್ರಧಾನ ಮತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿ 'ಚಡ್ಡಿ'ದೋಸ್ತುಗಳು. ಜತೆಯಾಗಿ 8 ವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕಾಗಿ ದುಡಿದಿದ್ದರು. ಪ್ರಚಾರಕರಾಗಿ ಪಂಜಾಬ್‌ನಲ್ಲಿ ಕೆಲಸ ಮಾಡುವಾಗ ಪುಟ್ಟ ಕೋಣೆಯಲ್ಲಿ ಇನ್ನಿಬ್ಬರು ಸಹೋದ್ಯೋಗಿಗಳ ಜತೆ ಜೀವನ ಕಳೆದಿದ್ದರು. ಒಟ್ಟಾಗಿ ಸೈಕಲ್ ಹೊಡೆದಿದ್ದರು. ಕಷ್ಟ, ಸುಖ, ಸಂತೋಷ, ಸಂಭ್ರಮ, ನೋವು ಹಂಚಿಕೊಂಡಿದ್ದರು.
ಇವರ ಸ್ನೇಹ ತಿಳಿಯಬೇಕಾದರೆ ಅದಕ್ಕೂ ಪೂರ್ವದ ವಿಶ್ವನಾಥ್ ಬದುಕು ತಿಳಿದುಕೊಳ್ಳಲೇಬೇಕು. 1968ರಲ್ಲಿ ಯುವಕ ವಿಶ್ವನಾಥ್ ಹೊಟ್ಟೆ ಹೊರೆಯಲೆಂದು ಪಂಜಾಬ್‌ಗೆ ಹೋಗಿದ್ದರು. ಅಲ್ಲಿ ಕೆಲ ವರ್ಷಗಳ ಬಳಿಕ ಸಂಸ್ಥೆ ಸ್ಥಾಪಿಸಿ ದೇಶದ ಗಡಿಭಾಗದ ಸೇನೆಗೆ ದಿನವಹಿ ಸಾಮಾನುಗಳನ್ನು ನೀಡುವ ಗುತ್ತಿಗೆ ವಹಿಸಿಕೊಂಡರು. ಆ ಸಂದರ್ಭದಲ್ಲಿ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿಯನ್ನು ಕಣ್ಣಾರೆ ನೋಡಿದ್ದರು. ಇಂದು ಕ್ಯಾಮೆರಾ ಬೆಳಕಿಗೆ ಈಗ ಅಂಜುವ ವಿಶ್ವನಾಥ್ ಅಂದು ಮದ್ದುಗುಂಡುಗಳಿಗೂ ಅಂಜಿರಲಿಲ್ಲ. ಕೆಲ ವರ್ಷಗಳ ಬಳಿಕ ಆರ್‌ಎಸ್‌ಎಸ್, ಪಂಜಾಬ್‌ನಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ಶಾಂತಿ ಸ್ಥಾಪನೆಗಾಗಿ ಕಾರ್ಯಕರ್ತರನ್ನು ಹುಡುಕುತ್ತಿತ್ತು. ಆಗ ಪತ್ನಿ, ಮಕ್ಕಳನ್ನು ಮಂಗಳೂರಿಗೆ ಕಳುಹಿಸಿ ಸಂಘ ಸೇರಿದ ವಿಶ್ವನಾಥ್‌ಗೆ ಚಂಡಿಗಢದಲ್ಲಿ ಇದೇ ಕೆಲಸಕ್ಕೆ ಬಂದ ನರೇಂದ್ರ ಜತೆಯಾದರು. ಮೋದಿ ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶಗಳ ಆರ್‌ಎಸ್‌ಎಸ್ ವಿಭಾಗದಿಂದ ರಾಜನೀತಿ ಉಸ್ತುವಾರಿಯಾಗಿದ್ದರು.
ನಾರು ಚಾಪೆಯಲ್ಲಿ ನಿದ್ದೆ
ಚಂಡಿಗಡ 18ನೇ ಸೆಕ್ಟರ್ 'ಮಾಧವ ಕೃಪಾ' ಇವರ ಕಾರ್ಯಕ್ಷೇತ್ರ. ಇಬ್ಬರಿಗೂ ಯೌವನ ಪೂರ್ತಿ ಮಾಸಿರಲಿಲ್ಲ. ಸುಮಾರು 40ರ ಆಸುಪಾಸು ವಯಸ್ಸು. ಈ ವಯಸ್ಸಿಗೆ ಎಲ್ಲರ ಹಣೆ ಬರಹ ಗೊತ್ತಾಗಿ ಹೋಗುತ್ತದೆ. ಈ ಕಾಲಘಟ್ಟದಲ್ಲಿ ಮೋದಿ ಇಕ್ಕಟ್ಟಾದ ಕೋಣೆಯಲ್ಲಿ ನಾಲ್ಕು ಮಂದಿ ಜತೆ ವಾಸವಿದ್ದರು. ನಾರು ಚಾಪೆಯಲ್ಲಿ ಮಲಗುತ್ತಿದ್ದರು. ಅವರ ಬಳಿ ಇದ್ದದ್ದು ಕೇವಲ ಒಂದು ಕುರ್ತಾ ಮತ್ತು ಪೈಜಾಮ!
ವಿಶ್ವನಾಥ ತನ್ನ ಗೆಳೆಯ ನರೇಂದ್ರನ ಕುರಿತು ಹೇಳುವಾಗ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ನರೇಂದ್ರಗೆ ಕೆಲಸ ಅಂದರೆ ಆಯಿತು. ಬೆಳಗ್ಗೆ ಹೋದವರು ಮಧ್ಯರಾತ್ರಿ 12 ಗಂಟೆ 1 ಗಂಟೆಗೆ ಬರುತ್ತಿದ್ದರು. ಅಷ್ಟರಲ್ಲಿ ನಾವೆಲ್ಲ ಮಲಗಿರುತ್ತಿದ್ದೆವು. ಅಂಥ ರಾತ್ರಿಯಲ್ಲೂ ಗೋಡೆಗೆ ಮುಖ ಮಾಡಿ ಅರ್ಧ ಗಂಟೆ ಧ್ಯಾನ ಮುದ್ರೆಯಲ್ಲಿ ಇರುತ್ತಿದ್ದರು.
ನಾನು ಮತ್ತು ನರೇಂದ್ರ ಮಾತನಾಡಿರುವುದರಲ್ಲಿ ಅಧ್ಯಾತ್ಮ ಪಾಲೇ ಹೆಚ್ಚು. ಅಪ್ಪಿತಪ್ಪಿಯೂ ಹುಡುಗಿಯರ ವಿಚಾರ ಸುಳಿಯುವುದಿಲ್ಲ. ಕೆಲವರು ಹೇಳಿದ್ದುಂಟು, ವಿಶ್ವನಾಥ್ ಜಿ ಒಳ್ಳೆ ಸಿನಿಮಾ ಬಂದಿದೆ, ಈ ನಾಟಕ ಒಳ್ಳೆಯದಿದೆ, ಹೋಗೋಣ. ನರೇಂದ್ರನ ಕೇಳಿದರೆ ಅವರ ಬಾಯಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದ ಇದೇ ಮಾತು. ಅಷ್ಟು ನಿರ್ಮಲ ಹೃದಯ. ದೇಶ, ಸಮಾಜ, ಧರ್ಮ ಎಂದರೆ ಅತ್ಯಂತ ಪ್ರಿಯ.
ಬಟ್ಟೆಯ ಬಗ್ಗೆಯೂ ದೇಶಭಕ್ತಿ
ಮೋದಿ ಹರಿದ ಕುರ್ತಾ ಹಾಕಿಕೊಂಡಿದ್ದರು. 'ನರೇಂದರ್ ಕುರ್ತಾ ಫಟಾ ಹುವಾ ಹೈ'ಎಂದೆ. ಅದಕ್ಕೆ ಮೋದಿ 'ಬಾಬಾ ಪತಾ ಹೈ, ದೀನ್ ದಯಾಳ್ ಕೆ ಪಾಸ್ ಏಕ್ ಐಸಾ ದೋತಿ ಥಾ, ವೋ ದಸ್ ಜಗೆ ಫಟಾ ಹುವಾ ಥಾ' ಎಂದರು. ನಮ್ಮ ಬಟ್ಟೆ ಕೂಡಾ ಸಮಾಜದ್ದು. ಪೋಲು ಮಾಡಬಾರದು ಎಂಬ ದೇಶ ಭಕ್ತಿ ಅವರಿಗೆ ಹುಟ್ಟಿನಲ್ಲಿಯೇ ಬಂದಿತ್ತು.
ಅವರಿಗೆ ಮತ್ಸರ ಎಂಬುದು ಗೊತ್ತೇ ಇಲ್ಲ, ಕೇವಲ ಮಮತೆ, ಭಾವುಕತೆ, ಪ್ರೀತಿ ಮಾತ್ರ. ಮೋದಿ ಗೋವಿಂದಾಚಾರ್ಯರಿಗೆ ತುಂಬಾ ಗೌರವ ಕೊಡುತ್ತಿದ್ದರು. ಗೋವಿಂದಾಚಾರ್ಯ ಬಿಜೆಪಿಯಿಂದ ಹೊರ ನಡೆದಾಗ ಆ ದಿನವೇ ಆರ್‌ಎಸ್‌ಎಸ್ ಅಖಿಲ ಭಾರತ ಪ್ರತಿನಿಧಿ ಸಭಾ ಬೈಠಕ್ ನಾಗಪುರದಲ್ಲಿ ನಡೆಯುತ್ತಿತ್ತು. ಆ ಬೈಠಕ್‌ನಲ್ಲಿ ನರೇಂದ್ರ ಮೋದಿಯನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು. ಆಗ ಗೋವಿಂದಾಚಾರ್ಯ ಕುರಿತು ಹೊಗಳುತ್ತಾ ಮೋದಿ ಕೂಗಿಯೇ ಬಿಟ್ಟರು. ನರೇಂದ್ರ ಮೋದಿ ಅಪ್ಪಟ ಚಿನ್ನ, ಯಾರಾದರು ಕಬ್ಬಿಣ ಎಂದರೆ ಅಪರಂಜಿ ಗುಣ ಹೋಗುವುದಿಲ್ಲ. ಗೋಧ್ರಾ ಹತ್ಯಾಕಾಂಡ ಕುರಿತು ವಿರೋಧಿಗಳು ಹೇಳಿದ್ದೆಲ್ಲವೂ ಸುಳ್ಳು. ಮೋದಿ ಮಾಧವ ಕೃಪಾ ಬಿಟ್ಟು ಬೇರೆ ಮನೆಯಲ್ಲಿ ವಾಸ್ತವ್ಯ ಹೂಡಿದರು. ಆಗ ನಮ್ಮ ಸಂಬಂಧ ದೂರವಾಯಿತು. ಇದ್ದಕ್ಕಿದ್ದಂತೆ ಮೋದಿಗೆ ಅಡ್ವಾಣಿ, ವಾಜಪೇಯಿಯಿಂದ ಕರೆ ಬಂತು. ಬಳಿಕ ಎಲ್ಲ ನಿಮಗೆ ಗೊತ್ತೇ ಇದೆ.
ನಾನು ಒಂದು ಸಂದರ್ಭದಲ್ಲಿ ಮೋದಿ ವಿರುದ್ಧವಾಗಿ ಕೆಲಸ ಮಾಡಬೇಕಾಗಿ ಬಂದಿತ್ತು. ನಾನು ಎರಡು ವರ್ಷ ನಿತ್ಯ, ಪಾರ್ಲಿಮೆಂಟ್‌ಗೆ ಹೋಗಿ ಕಲಾಪ ವೀಕ್ಷಿಸುತ್ತಿದ್ದೆ. ಅಲ್ಲಿ ಒಂದೇ ಒಂದು ದಿನ ಬಿಜೆಪಿಯವರು ರಾಮ ಮಂದಿರ ಕುರಿತು ಮಾತನಾಡಿಲ್ಲ. ಇದೇ ವೇಳೆಗೆ ಉಮಾಭಾರತಿ ಭಾರತೀಯ ಜನಶಕ್ತಿ ಪಾರ್ಟಿ ಮಾಡಿದರು. ನನಗೂ ಉಮಾಭಾರತಿ, ಗೋವಿಂದಾಚಾರ್ಯರಿಗೂ ಆತ್ಮೀಯತೆ ಇತ್ತು. ನನ್ನನ್ನು ಕರೆದಾಗ ಹೋದೆ. ನನ್ನನ್ನು ಅಖಿಲಭಾರತ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದರು.
ಬಳಿಕ ಗುಜರಾತ್‌ನಲ್ಲಿ ಚುನಾವಣೆ ಬಂತು, ಮೋದಿ ರಾಜ್ಯದಲ್ಲಿ ಕನಿಷ್ಠ 4-5 ಅಭ್ಯರ್ಥಿ ನಿಲ್ಲಿಸಬೇಕು ಎನ್ನುವುದು ಉಮಾ ಭಾರತಿ ಉದ್ದೇಶ. ನಾನು ಕೇಳಿದೆ ಉಮಾಜಿ, ಮೋದಿ ವಿರುದ್ಧ ಮಾತನಾಡಲು ಸಿದ್ಧರಿದ್ದೀರಾ? 'ನಮ್ಮದು ಈಗ ರಾಜಕೀಯ ಪಕ್ಷ' ಎಂದು ಉಮಾಜಿ ಅರೆ ಮನಸ್ಸಲ್ಲಿಯೇ ಮುಂದುವರಿದರು.
ಮುಸ್ಲಿಮರ ವಿರೋಧಿ ಅಲ್ಲ
ಗಾಂಧಿನಗರಕ್ಕೆ ಹೋಗಿ ಭಾಷಣಕ್ಕೆ ಸಿದ್ಧವಾಗುತ್ತಿದ್ದೆವು. ತುಂಬಾ ಮಂದಿ ಟೋಪಿ ಹಾಕಿದ್ದ ಮುಸ್ಲಿಮರು ಬಂದಿದ್ದರು. ನಾನು ಕಾರ್ಯಕ್ರಮ ನಿರೂಪಕ. 'ದೂರ್ ದೂರ್ ಸೆ ಕಡೆ ಹುವೆ ಲೋಗೋ ನಸ್ದೀಕ್ ಆಜಾವೋ' ಎಂದೆ. ಮುಸ್ಲಿಮರ ತಂಡ ಹತ್ತಿರ ಬಂತು. ಒಬ್ಬಾತ ಹೇಳಿದ, 'ದೇಖಿಯೇ ಸಾಬ್, ಅಪ್‌ಕೊ ಹಮ್ ನಹಿ ಜಾನ್ತೆ, ದೂಸ್ರೆ ಪಾರ್ಟಿಕೆ ಲಿಯೇ ಆಯೆ ಹೋಂಗೆ, ಮೋದಿಜಿ ಕೆ ಬಾರೆಮೆ ಬೋಲೆಂಗೆ ತೋ ಲೋಗ್ ಪತ್ತರ್ ಮಾರೆಂಗೆ' ಎಂದು ಎಚ್ಚರಿಸಿದರು.
ಆಗ ನಾನಂದೆ 'ಮುಸ್ಲಿಂ ಮೋದಿಕೆ ಕಿಲಾಫ್ ಹೈ ನಾ?'. ಆಗ ಟೋಪಿ ಹಾಕಿದವ ಹೇಳಿದ 'ಕಿಲಾಫ್ ಲೋಗೋಂಕೆ ಲಿಯೇ, ಹಮಾರೆ ನಹಿ, ಅಬಿ ಹಮ್ ಇಜ್ಜತ್ ಕೆ ಸಾತ್ ಜೀ ರಹೆ ಹೈ ತೋ ಮೋದಿಜಿ ಕಿ ವಜೆಸೆ' ಎಂದರು. ಮೋದಿ ವಿರೋಧಿಸದೆ ಉಮಾ ಭಾರತಿ ಭಾಷಣ ಮುಗಿಸಿದರು. ಅದೇ ರಾತ್ರಿ ಉಮಾ ಭಾರತಿ, ಮೋದಿ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಯಿತು. ಬಳಿಕ ಗುಜರಾತ್‌ನ ಎಲ್ಲ ಕಾರ್ಯಕ್ರಮ ರದ್ದುಮಾಡಿ ಬಂದೆವು. ಇದು ನಾನು ಕಣ್ಣಾರೆ ನೋಡಿದ್ದು, ಕಂಡಿದ್ದು, ಮುಸ್ಲಿಮರು ನರೇಂದ್ರ ಮೋದಿ ವಿರುದ್ಧ ಅಲ್ಲ ಎನ್ನುವುದು ಸ್ಪಷ್ಟ.
ಪೋಸ್ಟರ್ ಹಚ್ಚಿದ್ದು...
ನರೇಂದರ್ ನಮ್ಮನ್ನೆಲ್ಲ ಕರೆದುಕೊಂಡು ರಾತೋರಾತ್ರಿ ದೇಶರಾಜ್ ವಾರ್ಡ್‌ಗೆ ಹೋದರು. ಎಲ್ಲಿಂದಲೋ ಪಾಂಪ್ಲೆಟ್, ಪೋಸ್ಟರ್ ರಾಶಿ ಸಾರಿ ತಂದಿದ್ದರು. ರಾತ್ರಿ 2ರಿಂದ 3 ಗಂಟೆವರೆಗೆ ಎಲ್ಲೆಡೆ ಪೋಸ್ಟರ್ ಹಚ್ಚಿದೆವು. ಆ ಪೋಸ್ಟರ್‌ನಲ್ಲಿ ದೇಶರಾಜ್ ಬಿಜೆಪಿ ಸೇರಿದ್ದಾರೆ ಎಂದು ಬರೆಸಿದ್ದರು.
ಮಾರನೇ ದಿನ ವೋಟಿಂಗ್! ಎಲ್ಲರೂ ದೇಶರಾಜ್ ಬಿಜೆಪಿ ಸೇರಿದ್ದನ್ನು ನಂಬಿದರು, ಕಮಲಕ್ಕೆ ಮತ ಹಾಕಿದರು. ದೇಶರಾಜ್ ಸೋತ, ಬಿಜೆಪಿ ಅಭ್ಯರ್ಥಿ ಗೆದ್ದಿದ್ದ. ಇದು ಮೋದಿಯ ಚಾಣಕ್ಯ ಕ್ರಿಯಾಶೀಲತೆ.
ಮೋದಿ ವಿಶಾಲ ಹೃದಯಿ. ಮಂಗಳೂರಿನ ಸರ್ದಾರ್ಜಿ ಬಲ್ವಿಂದರ್ ಸಿಂಗ್ ಅವರ ಕಬ್ಬಿಣ ಲೋಡ್ ಸಹಿತ ಟ್ರಕ್ ಗುಜರಾತ್‌ನಲ್ಲಿ ಕಳವಾಗಿತ್ತು. ನನ್ನ ಬಳಿ ಬಂದು ಮೋದಿಯ ಸಹಕಾರ ಪಡೆಯುವಂತೆ ವಿನಂತಿಸಿದರು. ನಾನು ಮೋದಿಗೆ ಕರೆ ಮಾಡಿ ವಿಚಾರ ಹೇಳಿದೆ. ಅವರನ್ನು ಒಮ್ಮೆ ಕಳುಹಿಸಿ ಕೊಡು ಹೇಳಿ ಫೋನ್ ಇಟ್ಟರು.
ಮಂಗಳೂರಿಂದ ಸರ್ದಾರ್ಜಿ ಬರುತ್ತಾರೆ ನೋಡಿಕೋ ಎಂದು ಮೋದಿ ತನ್ನ ಕಾರ್ಯದರ್ಶಿ ಪಟೇಲ್‌ಗೆ ಹೇಳಿದ್ದರು. ಎರಡೇ ದಿನದಲ್ಲಿ ಟ್ರಕ್ ಮತ್ತು ಲಕ್ಷಗಟ್ಟಲೆ ಕಬ್ಬಿಣ ಸಿಕ್ಕಿತು. ಈಗ ಸರ್ದಾರ್ಜಿಗೆ ಮೋದಿಯೇ ದೇವರು.
ವಿಶ್ವನಾಥ್ ಒಂದುವರೆ ವರ್ಷದ ಹಿಂದೆ ಪಾರ್ಶ್ವವಾಯು ಬಡಿಯಿತು. ನಾಲ್ಕು ತಿಂಗಳ ಹಿಂದೆ ಕಿಡ್ನಿ ಕೂಡಾ ವೈಫಲ್ಯವಾಯಿತು. ಮೂರು ಬಾರಿ ಕೋಮಾವರೆಗೂ ಹೋಗಿದ್ದರು. ಆದರೆ ಮೋದಿ ಪ್ರಧಾನಿ ಆಗುವುದನ್ನು ನೋಡಲೇಬೇಕು ಎಂಬದೃಢಮನಸ್ಸಿನಿಂದ ಈಗ ಎದ್ದು ಕುಳಿತುಕೊಳ್ಳುವ ಹಂತಕ್ಕೆ ಬಂದಿದ್ದಾರೆ.
ಸೈಕಲ್‌ನಲ್ಲಿ ಸುತ್ತೋದು...
ಹಗಲಲ್ಲಿ ಚಡ್ಡಿ, ಅಂಗಿಯಲ್ಲಿ ಇರುತ್ತಿದ್ದೆವು. ಅವರ ಬಳಿ ಒಂದು ಪೈಜಾಮ, ಕುರ್ತಾ. ಸಂಜೆ ಶಾಖೆಗೆ ಬಂದ ತಕ್ಷಣ ತೆಗೆದು ಒಗೆಯುವುದು, ಒಣಗಿಸುವುದು. ಒಣಗಿದ ಬಳಿಕ ತಲೆ ಅಡಿ ಇಟ್ಟು ಇಸ್ತ್ರಿ ಹಾಕುತ್ತಿದ್ದೆವು. ಮರುದಿನ ಅದನ್ನು ಹಾಕಿಕೊಂಡು ಸೈಕಲ್‌ನಲ್ಲಿ ಊರೂರು ಸುತ್ತುತ್ತಿದ್ದೆವು. 'ಆಪ್ ಕೊ ತೋ ಮೈ ಬೆಠಾಕೆ ನಹಿ ಲೇ ಜಾಸಕ್ತಾ ಹೂಂ, ಮುಜೆ ತೋ ಆಪ್ ಬೈಠಾಕೆ ಲೆ ಜಾಸಕ್ತೆ ಹೋ' ಹೇಳುತ್ತಿದ್ದೆ. ಅವರದು ಯೋಗ ಮಾಡಿದ ಆರೋಗ್ಯವಂತ ಸದೃಢ ದೇಹ. ಚಂಡಿಗಢ ಸಮತಟ್ಟಾದ ನಗರ. ಮೋದಿ ಇಡೀ ದಿನ ಸೈಕಲಲ್ಲಿ ಹೋಗುತ್ತಿದ್ದರು. ಮನೆ ಮನೆಗೆ ಭೇಟಿ ಮಾಡುತ್ತಿದ್ದರು. ಊಟ ಒಂದು ಮನೆಯಲ್ಲಿ ತಿಂಡಿ ಇನ್ನೊಂದು ಮನೆಯಲ್ಲಿ. ಬಳಿಕ ಅವರಿಗೆ ಯಾರೋ ಸೆಕೆಂಡ್ ಹ್ಯಾಂಡ್ ವೆಸ್ಪಾ ಸ್ಕೂಟರ್ ಕೊಟ್ಟಿದ್ದರು. ಅವರು ಬಿಟ್ಟು ಹೋದ ಬಳಿಕ ಸ್ವಲ್ಪ ಕಾಲ ನಾನು ಬಳಸಿಕೊಂಡೆ.
- ಜಿತೇಂದ್ರ ಕುಂದೇಶ್ವರ
kundeshwara@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


