ಖುಷಿ

ಹೆತ್ತ ಶಿಶುಗಳ ಹತ್ಯೆ

ಹೆತ್ತ ಶಿಶುಗಳ ಹತ್ಯೆ
Published On :

ರೋಜಲಿ ಪ್ರೊಡೆಂಟ್‌ಗೆ ಸಂಬಂಧಪಟ್ಟ ವಿಷಯದಲ್ಲಿ ಏನೋ ರಹಸ್ಯ ಅಡಗಿತ್ತು. ಅದು ನ್ಯಾಯದರ್ಶಿಗಳಿಗಾಗಲೀ, ನ್ಯಾಯಾಧೀಶರಿಗಾಗಲಿ ಅಥವಾ ಸಾರ್ವಜನಿಕ ಅಭಿಯೋಕ್ತರಿಗಾಗಲೀ ಗೊತ್ತಾಗುತ್ತಿರಲಿಲ್ಲ. ವಾರಂಬೋ ಕುಟುಂಬದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ರೋಜಲಿ ಗರ್ಭಿಣಿಯಾಗಿದ್ದಳು. ಅವಳು ಒಂದು ಶಿಶುವಿಗೆ ಅಟ್ಟದ ಕೋಣೆಯಲ್ಲಿ ರಾತ್ರಿ ಜನ್ಮವಿತ್ತು, ನಂತರ ಮಗುವನ್ನು ಕೊಂದು ತೋಟದಲ್ಲಿ ಹೂತು ಹಾಕಿದ್ದಳು. ಇದು ಯಾವುದೂ ಮನೆಯವರ ಗಮನಕ್ಕೆ ಬಂದಿರಲಿಲ್ಲ.
ಕೆಲಸದ ಹುಡುಗಿಯರು ಹೆತ್ತ ಮಗುವನ್ನು ಹತ್ಯೆ ಮಾಡಿ ಹೂತು ಹಾಕುವ ಕಥೆ ಅಸಾಮಾನ್ಯವಾದುದೇನಲ್ಲ. ಆದರೆ ರೋಜಲಿಯ ಬಗ್ಗೆ ಒಂದು ವಿಷಯ ಬಿಡಿಸಲು ಅಸಾಧ್ಯವಾಗಿತ್ತು. ಅವಳ ಕೊಠಡಿಯನ್ನು ಪರೀಕ್ಷಿಸಿದಾಗ ಅದರಲ್ಲಿ ಅವಳೇ ಮಗುವಿಗಾಗಿ ಹೆಣೆದ ಅಥವಾ ಹೊಲಿದ ಬಟ್ಟೆಗಳಿದ್ದವು. ಮೂರು ತಿಂಗಳಿಂದಲೂ ಅವಳು ಈ ಕೆಲಸದಲ್ಲಿ ರಾತ್ರಿಯ ವೇಳೆ ನಿರತಳಾಗಿರುತ್ತಿದ್ದಳು. ಬೆಳಕಿಗೆ ಮೇಣದ ಬತ್ತಿಯನ್ನು ಅಂಗಡಿಯಿಂದ ಕೊಂಡು ಹೋಗುತ್ತಿದ್ದಳು ಎಂದು ಅಂಗಡಿಯ ಯಜಮಾನ ಹೇಳಿದ. ಜೊತೆಗೆ ಊರಿನ ನರ್ಸ್ ಅವಳಿಗೆ ಮುಂದಿನ ದಿನಗಳಲ್ಲಿ ಏನು ಮಾಡಬೇಕು, ಹೆರಿಗೆಗೆ ಸಹಾಯ ಒದಗದ ಸಂದರ್ಭದಲ್ಲಿ ಅವಳು ಯಾರಲ್ಲಿ ಉಳಿಯಬೇಕು ಎಂದೂ ತಿಳಿಸಿದ್ದಳು. ವಾರಂಬೋ ಕುಟುಂಬ ನೈತಿಕತೆಗೆ ಹೆಚ್ಚು ಮಹತ್ವ ನೀಡುವ ಕುಟುಂಬವಾಗಿತ್ತು. ಹಾಗಾಗಿ ರೋಜಲಿ ಅವರ ಮನೆಯಲ್ಲಿ ಉಳಿಯುವ ಹಾಗಿಲ್ಲ. ಆದುದರಿಂದ ನರ್ಸ್ ರೋಜಲಿಗೆ ನೀನು ಪಾಯ್ಸಿ ಮನೆಯಲ್ಲಿ ಉಳಿದುಕೊಳ್ಳುವಂತೆ ಮಾಡುತ್ತೇನೆ ಎಂದು ತಿಳಿಸಿದ್ದಳು.
ಮನೆಯನ್ನು ಅಶುಭ್ರಗೊಳಿಸಿದ ರೋಜಲಿ, ಮನೆ ಮಾಲೀಕರು, ಅವರ ಹೆಂಡತಿ ಕೋರ್ಟ್‌ಗೆ ಬಂದರು, ವಿಚಾರಣೆ ಮಾಡದೆ ಅವಳನ್ನು ಗಿಲಿಟಿನ್ ಯಂತ್ರಕ್ಕೆ ಒಡ್ಡಿ ಶಿರಚ್ಛೇದ ಮಾಡಿದರೆ ಒಳ್ಳೆಯದು ಎಂದು ಅವರ ಅಭಿಪ್ರಾಯ. ಅವಳನ್ನು ಅವರು ಸಿಕ್ಕಾಪಟ್ಟೆ ಬಯ್ದರು, ಆರೋಪ ಹೊರೆಸಿದರು.
ಅಪರಾಧಿ ಎತ್ತರವಾಗಿದ್ದ, ಅವಳ ವರ್ಗಕ್ಕೆ ಸೇರಿದವರಿಗಿಂತ ಹೆಚ್ಚು ವಿದ್ಯಾಭ್ಯಾಸ ಮಾಡಿದ್ದ ಹುಡುಗಿ. ಅವಳು ಯಾರ ಪ್ರಶ್ನೆಗೂ ಉತ್ತರ ಕೊಡದೆ ಅಳುತ್ತಲೇ ಇದ್ದಳು. ಅವಳು ನಿರಾಸೆಯಿಂದ ಬುದ್ಧಿಭ್ರಮಣೆಗೊಳಗಾಗಿ ಇಂಥ ಕ್ರೌರ್ಯ ಕೆಲಸ ಮಾಡಿದ್ದಾಳೆ ಎಂದು ಕೋರ್ಟಿಗೆ ಅನ್ನಿಸಿತು. ಅವಳಿಗೆ ಈ ಹೀನ ಕೃತ್ಯ ಎಸಗುವುದಕ್ಕೆ ಮೊದಲು ಮಗುವನ್ನು ಸಾಕಿ ಸಲಹುವುದು ಬೇಕಾಗಿತ್ತೇನೋ!
ನ್ಯಾಯಾಧೀಶರು ಮತ್ತೊಂದು ಬಾರಿ ಅವಳು ಮಾತಾಡುವಂತೆ ಪ್ರಚೋದಿಸಿದರು. ನ್ಯಾಯದರ್ಶಿಗಳಿಗೆ ಅವಳ ಬಗ್ಗೆ ಕರುಣೆ ಇದೆ ಎಂದೂ, ಅವಳಿಗೆ ಮರಣ ದಂಡನೆ ವಿಧಿಸುವುದು ಅವರಿಗೆ ಬೇಡವೆಂದೂ ಅವರು ಸೌಮ್ಯವಾಗಿ ತಿಳಿಸಿದರು.
ಕೊನೆಗೆ ಅವಳು ಮಾತನಾಡಲು ನಿರ್ಧರಿಸಿದಳು.
'ಮಗುವಿನ ತಂದೆ ಯಾರು ಅನ್ನುವುದನ್ನು ಮೊದಲು ತಿಳಿಸು' ಎಂದರು ನ್ಯಾಯಾಧೀಶರು. ಅಲ್ಲಿಯತನಕ ಅವಳು ಇದನ್ನು ಯಾರಿಗೂ ತಿಳಿಸಬಾರದೆಂದೇ ನಿರ್ಧರಿಸಿದ್ದಳು. ಈಗ ಇದ್ದಕ್ಕಿದ್ದಂತೆ ಅವಳು ಅವಳ ಮನೆಯ ಯಜಮಾನ ಮತ್ತು ಯಜಮಾನಿಯನ್ನು ದೃಷ್ಟಿಸಿ ನೋಡುತ್ತಾ ಹೇಳಿದಳು:
'ಮಗುವಿನ ತಂದೆ ಮ. ವಾರಂಬೋ ಅವರ ಸೋದರನ ಮಗ ಜೋಸೆಫ್‌'. ವಾರಂಬೋ ಮತ್ತು ಅವರ ಪತ್ನಿ ಅಚ್ಚರಿಗೊಂಡು ಗಟ್ಟಿಯಾಗಿ ಅರಚಿದರು.
'ಸುಳ್ಳು. ಅವಳು ಹೇಳುವುದು ಸುಳ್ಳು. ಅಪಖ್ಯಾತಿ ಹೊರೆಸಲು ಈ ಮಾತು'. ನ್ಯಾಯಾಧೀಶರು ಅವರಿಗೆ ಸುಮ್ಮನಿರವಂತೆ ಆಜ್ಞಾಪಿಸಿದರು. ನಂತರ ರೋಜಲಿಯನ್ನು ಉದ್ದೇಶಿಸಿ, 'ನಿನ್ನ ಮಾತು ಮುಂದುವರಿಸು. ನಡೆದುದನ್ನು ವಿವರವಾಗಿ ಹೇಳು' ಎಂದರು.
ಹುಡುಗಿ ಎದೆಯಲ್ಲಿ ತುಂಬಿದ್ದ ಅವಳ ದುಃಖ ಹೊರಗೆ ಹಾಕಲೆಂದು ಆತುರಾತುರದಿಂದ ಮಾತನಾಡಲು ಶುರು ಮಾಡಿದಳು. ಮುಂದೆ ಕುಳಿತಿದ್ದ ನ್ಯಾಯಾಧೀಶರು ಮತ್ತು ನ್ಯಾಯದರ್ಶಿಗಳ ಬಗ್ಗೆ ಅವಳಿಗಿದ್ದ ಭಯ, ಅವರೆಲ್ಲ ತನ್ನ ನಡತೆಯನ್ನು ವಿರೋಧಿಸುವವರು ಎನ್ನುವ ಪೂರ್ವಗ್ರಹ ಈಗ ಹೋಗಿತ್ತು.
'ನಿಜ. ನಾನು ಗರ್ಭಿಣಿಯಾಗುವುದಕ್ಕೆ ಕಾರಣ ಮ. ಜೋಸೆಫ್ ವರಂಬೋ. ಆತ ಬೇಸಿಗೆಯಲ್ಲಿ ಮನೆಗೆ ಬಂದಿದ್ದಾಗ ಹೀಗಾಯಿತು'.
'ಮ. ಜೋಸೆಫ್ ವಾರಂಬೋ ಅವರ ಕೆಲಸವೇನು?'
ಅವರು ಫಿರಂಗಿ ದಳ(ಆರ್ಟಿಲರಿ)ದಲ್ಲಿ ಅಂಡರ್ ಆಫೀಸರ್. ಬೇಸಿಗೆಯಲ್ಲಿ ಅವರು ನಾನಿದ್ದ ಮನೆಯಲ್ಲಿ ಎರಡು ತಿಂಗಳ ಕಾಲ ತಂಗಿದ್ದರು. ಅವರು ಆಗಾಗ ನನ್ನನ್ನೇ ನೋಡುತ್ತಾ ಏನಾದರೂ ಹೇಳುತ್ತಿದ್ದರು. ನಾನು ನೋಡಲು ಅಂದವಾಗಿದ್ದೇನೆ ಎಂದು ಹೊಗಳುತ್ತಿದ್ದರು. ನನ್ನನ್ನು ಪ್ರೀತಿಸಲು ಶುರುಮಾಡಿದರು. ನನ್ನ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ? ನಾನು ಏಕಾಂಗಿ. ನನಗೆ ಅಪ್ಪ ಅಮ್ಮ, ಅಣ್ಣ ತಮ್ಮ, ಅಕ್ಕ ತಂಗಿ ಯಾರೂ ಇಲ್ಲ. ಯಾರೊಡನೆಯೂ ನಾನು ಮಾತನಾಡುತ್ತಾ ಕಾಲ ಕಳೆಯಲಾರೆ. ಅವರು ನನ್ನನ್ನು ಪ್ರೀತಿಯಿಂದ ಮಾತನಾಡಿಸಿದಾಗ ನನಗೆ ನನಗೊಬ್ಬ ಸಹೋದರ ಸಿಕ್ಕಿದ ಎಂದೆನಿಸಿತು. ಒಂದು ದಿನ ಸಂಜೆ ಜೋಸೆಫ್ 'ನದಿಯ ತೀರಕ್ಕೆ ಹೋಗೋಣ. ಅಲ್ಲಿ ಯಾವ ಗಲಾಟೆಯೂ ಇರುವುದಿಲ್ಲ, ಪ್ರಶಾಂತ ವಾತಾವರಣದಲ್ಲಿ ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಹೊತ್ತು ಕಳೆದು ಬರೋಣ' ಎಂದರು. ನಾನು ಒಪ್ಪಿ ಅವರ ಜೊತೆ ಹೋದೆ. ಅಲ್ಲಿ ಏನಾಗಬಹುದೆಂದು ನಾನು ಊಹಿಸಿದ್ದರೆ ಚೆನ್ನಾಗಿತ್ತು. ಅವರು ತಮ್ಮ ಒಂದು ಕೈಯಿಂದ ನನ್ನ ಸೊಂಟವನ್ನು ಬಳಸಿದರು. ಅದು ನನಗೆ ಇಷ್ಟವಾಗದಿದ್ದರೂ ನಾನು ಸುಮ್ಮನೆ ಇರಬೇಕಾಯಿತು. ಬೆಚ್ಚನೆಯ ಗಾಳಿ ಮೃದುವಾಗಿ ಬೀಸುತ್ತಿತ್ತು. ಆಗಸದಲ್ಲಿ ಪೂರ್ಣ ಚಂದ್ರ ಹೊಳೆಯುತ್ತಿದ್ದ. ನಾನು ಆಣೆ ಇಟ್ಟು ಹೇಳುತ್ತೇನೆ. ನನಗೆ ಏನನ್ನೂ ಮಾಡಲು ಆಗುತ್ತಿರಲಿಲ್ಲ. ಅವರು ತಮ್ಮಿಷ್ಟ ಬಂದಂತೆ ನನ್ನನ್ನು ಉಪಯೋಗಿಸಿಕೊಂಡರು. ಮೂರು ವಾರ ಇದೇ ನಡೆಯಿತು. ನಾನು ಅವರೊಡನೆ ಪ್ರಪಂಚದ ಯಾವ ಮೂಲೆಗಾಗಲೀ ಹೋಗಲು ಸಿದ್ಧಳಿದ್ದೆ. ಆದರೆ ಅವರೊಬ್ಬರೇ ಹೊರಟು ಹೋದರು. ನಂತರ ನನಗೆ ತಿಳಿಯಿತು ನಾನು ಗರ್ಭವತಿಯಾಗಿದ್ದೆ.
ಅವಳು ಗಟ್ಟಿಯಾಗಿ ಅಳಲು ಪ್ರಾರಂಭಿಸಿದಳು. ಅವಳು ಅತ್ತು ಸುಧಾರಿಸಿಕೊಳ್ಳುವ ತನಕ ಎಲ್ಲರೂ ಸುಮ್ಮನಿದ್ದರು. ನಂತರ ನ್ಯಾಯಾಧೀಶರು, ತಂದೆ ಮಾತನಾಡುವಂತೆ ಹೇಳಿದರು.
'ಮಗೂ, ಆಮೇಲೆ ಏನಾಯಿತು? ಹೇಳು.'
'ನಾನು ಗರ್ಭಿಣಿಯಾಗಿದ್ದೇನೆ ಎಂದು ಗೊತ್ತಾದ ಕೂಡಲೇ ನರ್ಸ್ ಮದಾಂ ಬೋಡಿನ್‌ಗೆ ವಿಷಯ ತಿಳಿಸಿದೆ. ಆಕೆ ಇಲ್ಲದಿದ್ದರೆ ಏನು ಮಾಡಬೇಕು ಎಂದು ವಿಚಾರಿಸಿದೆ. ನಾನು ಆಕೆಯನ್ನು ಬಿಟ್ಟು ಯಾರೊಡನೆ ಈ ವಿಷಯ ಹೇಳಬಹುದಿತ್ತು? ನಾನು ಮಧ್ಯರಾತ್ರಿ ಕಳೆಯುವವರೆಗೂ ಮಗುವಿಗೆ ಬಟ್ಟೆ ಬರೆಗಳನ್ನು ಸಿದ್ಧಪಡಿಸುವುದರಲ್ಲಿ ಕಾಲ ಕಳೆಯಬೇಕಾಗಿತ್ತು. ವಾಸಿಸಲು ಬೇರೊಂದು ಜಾಗ ಹುಡುಕುವ ಅಗತ್ಯವಿತ್ತು. ಆದರೆ ಬೇರೆ ಮನೆ ಎಂದರೆ ಖರ್ಚು. ಸಾಧ್ಯವಾದಷ್ಟು ದಿನ ಮ. ವಾರಂಬೋ ಅವರ ಮನೆಯಲ್ಲೇ ಇರಲು ನಿರ್ಧರಿಸಿದೆ. ಮಗುವಿಗಾಗಿ ಹಣ ಉಳಿಸುತ್ತಿದ್ದೆ.'
'ಅಂದರೆ ಮಗುವನ್ನು ಹತ್ಯೆ ಮಾಡುವ ಯೋಚನೆ ಮಾಡಿರಲಿಲ್ಲ, ಅಲ್ಲವೇ?'
'ಓ, ಖಂಡಿತಾ ಇಲ್ಲ.'
'ಹಾಗಾದರೆ ಮಗುವನ್ನು ಏಕೆ ಕೊಂದೆ?'
'ನಾನು ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಹೆರಿಗೆ ಬೇನೆ ಶುರುವಾಯಿತು. ಹೆರಿಗೆಗೆ ಇನ್ನು ಕೆಲವು ದಿನಗಳಿವೆ ಎಂದು ಭಾವಿಸಿದ್ದೆ. ಆದರೆ ಇದ್ದಕ್ಕಿದ್ದಂತೆ ಪ್ರಸವ ವೇದನೆ. ಸದ್ಯ ವಾರಂಬೋ ದಂಪತಿ ಮಲಗಲು ಅವರ ಕೊಠಡಿಗೆ ಹೋಗಿದ್ದರು. ನಾನು ಕಷ್ಟಪಟ್ಟು, ಮಟ್ಟಿಲುಗಳ ಪಕ್ಕದಲ್ಲಿರುವ ಕಂಬಿ ಹಿಡಿದುಕೊಂಡು, ಮೇಲೆ ನನ್ನ ಕೊಠಡಿಗೆ ಹೋಗಿ ನೆಲದ ಮೇಲೆ ಮಲಗಿದೆ- ಮಂಚದ ಮೇಲಿರುವ ಹಾಸಿಗೆ ಕೊಳಕಾಗಬಾರದೆಂದು ಒಂದು ಅಥವಾ ಎರಡು ಮೂರು ಗಂಟೆ ನಾನು ಹೇಳಲಾರದಷ್ಟು ನೋವು ಅನುಭವಿಸಿದೆ. ನಂತರ ಮಗು ಹೊರಗೆ ಬಂತು. ನಾನು ಮಗುವನ್ನು ಎತ್ತಿಕೊಂಡೆ...
ನಿಜ. ನನಗೆ ತುಂಬ ಸಂತೋಷವಾಯಿತು. ಮದಾಂ ಬೋಡಿನ ಹೇಳಿದ ಹಾಗೆ ಎಲ್ಲವನ್ನೂ ಮಾಡಿದೆ; ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದೆ. ನನಗೆ ಪುನಃ ನೋವು ಶುರುವಾಯಿತು. ಅಂಥ ನೋವಿನಿಂದ ಯಾರಾದರೂ ಸಾಯಬಹುದು. ನಿಮಗೆ ಅಥವಾ ಇಲ್ಲಿರುವ ಯಾರಿಗಾದರೂ ಅಂಥ ನೋವು ಬಂದಿದ್ದರೆ ನಾನು ಮಾಡಿದಷ್ಟು ನೀವು ಯಾರೂ ಮಾಡುತ್ತಿರಲಿಲ್ಲ. ಒಂದೆರಡು ಗಂಟೆ ನಂತರ ಇನ್ನೊಂದು ಮಗು ಈಚೆಗೆ ಬಂತು. ನಾನು ಅದನ್ನು ಒರೆಸಿ ಮೊದಲನೆಯ ಮಗುವಿನ ಪಕ್ಕದಲ್ಲಿ ಮಲಗಿಸಿದೆ. ನಾನು ಹಡೆದದ್ದು ಒಂದಲ್ಲ ಎರಡು ಶಿಶುಗಳನ್ನು. ನನ್ನ ಸಂಪಾದನೆ ತಿಂಗಳಿಗೆ ಇಪ್ಪತ್ತು ಫ್ರ್ಯಾಂಕುಗಳು. ಇದರಿಂದ ಇಬ್ಬರು ಮಕ್ಕಳನ್ನು ಸಾಕುವುದು ಸಾಧ್ಯವೇ?
ಒಂದಾಗಿದ್ದರೆ ಹೇಗೋ ಎಂತೋ ಅದನ್ನು, ನನ್ನ ಒಪ್ಪತ್ತಿನ ಊಟವನ್ನಾದರೂ ಬಿಟ್ಟು ಸಲುಹಬಹುದಾಗಿತ್ತು. ಈಗ ಇರುವುದು ಎರಡು ಮಕ್ಕಳು. ಏನು ಮಾಡಲಿ? ಒಂದು ದಿಂಬನ್ನು ತೆಗೆದುಕೊಂಡು ಎರಡು ಮಕ್ಕಳನ್ನು ಅದರಿಂದ ಮುಚ್ಚಿದೆ. ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ಅರ್ಥವಾಗಲಿಲ್ಲ. ನಾನು ದಿಂಬಿನ ಮೇಲೆ ಒರಗಿದೆ. ರಾತ್ರಿಯೆಲ್ಲ ಹಾಸಿಗೆಯ ಮೇಲೆ, ದಿಂಬಿನ ಮೇಲೆ ಹೊರಳಾಡುತ್ತಿದ್ದೆ. ಬೆಳಗಾಯಿತು. ಸೂರ್ಯನ ಕಿರಣಗಳು ಕಿಟಕಿಯ ಮೂಲಕ ಹರಿಯಿತು. ದಿಂಬನ್ನು ಎತ್ತಿ ನೋಡಿದೆ. ಎರಡೂ ಮಕ್ಕಳೂ ಸತ್ತು ಹೋಗಿದ್ದವು. ಸತ್ತ ಮಕ್ಕಳನ್ನು ಕಂಕಳಲ್ಲಿ ಹಿಡಿದುಕೊಂಡು ಮಹಡಿ ಇಳಿದು ಮನೆಯ ತೋಟಕ್ಕೆ ಬಂದೆ. ಮಾಲಿ ಇಟ್ಟಿದ್ದ ಗುದ್ದಲಿ ಕಾಣಿಸಿತು. ಅದರಿಂದ ಹಳ್ಳ ತೋಡಿ ಒಂದು ಮಗುವನ್ನು ಮುಚ್ಚಿದೆ. ಸ್ವಲ್ಪ ದೂರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಆಳದ ಹಳ್ಳ ತೋಡಿ ಇನ್ನೊಂದು ಮಗುವನ್ನು ಹೂಳಿದೆ. ಮಕ್ಕಳು ತಮ್ಮ ತಾಯಿಯ ಬಗ್ಗೆ ಮಾತನಾಡಬಾರದಲ್ಲಾ, ಅದಕ್ಕೇ ಬೇರೆ ಬೇರೆ ಕಡೆ ಅವರನ್ನು ಸಮಾಧಿ ಮಾಡಿದ್ದು!
ನಂತರ ಕೊಠಡಿಗೆ ಹೋಗಿ ಮಲಗಿದೆ. ನನಗೆ ತುಂಬಾ ಸುಸ್ತಾಗಿತ್ತು. ಆರೋಗ್ಯ ಕುಸಿದಿತ್ತು. ನನ್ನನ್ನು ಕಂಡ ಮನೆಯವರು ವೈದ್ಯರನ್ನು ಕರೆಸಿದರು. ಅವರಿಗೆ ಎಲ್ಲವೂ ಗೊತ್ತಾಯಿತು. ನಾನು ಎಲ್ಲವನ್ನೂ ಹೇಳಿದ್ದೇನೆ. ನಾನು ಹೇಳಿದ್ದೆಲ್ಲ ಸತ್ಯ. ತಾವು ನನಗೆ ಯಾವ ಶಿಕ್ಷೆಯನ್ನಾದರೂ ವಿಧಿಸಬಹುದು. ನಾನು ಸಿದ್ಧಳಾಗಿದ್ದೇನೆ.'
ಅವಳು ಮಾತಾಡುವುದನ್ನು ಗಮನವಿಟ್ಟು ಕೇಳುತ್ತಿದ್ದ ನ್ಯಾಯದರ್ಶಿಗಳಲ್ಲಿ ಅರ್ಧಭಾಗ ಆಗಾಗ ಕಣ್ಣೊರೆಸಿಕೊಳ್ಳುತ್ತಿದ್ದರೆ, ಮಿಕ್ಕವರು ಭಾವಾವೇಶಕ್ಕೆ ಒಳಗಾಗಿರುವುದನ್ನು ಮುಚ್ಚಲು ಪ್ರಯತ್ನಿಸುತ್ತಿದ್ದ ಕೋರ್ಟ್‌ನಲ್ಲಿ ನೆರೆದಿದ್ದ ಹೆಂಗಸರೆಲ್ಲ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
'ತೋಟದ ಯಾವ ಜಾಗದಲ್ಲಿ ಮಕ್ಕಳನ್ನು ಹೂಳಿದೆ?' ಕೇಳಿದರು ನ್ಯಾಯಾಧೀಶರು.
'ತಮಗೆ ಸಿಕ್ಕಿದ್ದು ಎಲ್ಲಿ?' ರೋಜಲಿ ಕೇಳಿದಳು.
'ಅರ್ಟಿಬೋಕ್ ಮುಳ್ಳುಗಿಡದ ಪಕ್ಕದಲ್ಲಿ.'
'ಸರಿ, ಇನ್ನೊಂದನ್ನು ಭಾವಿಯ ಪಕ್ಕ ಸ್ಟ್ರಾಬೆರಿಸ್ ಪಾತಿಯಲ್ಲಿ' ಎಂದು ಹೇಳುತ್ತಾ ಹುಡುಗಿ ಪುನಃ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ಅಲ್ಲಿದ್ದವರ ಹೃದಯ ಒಡೆಯುವಂತಾಯಿತು.
ನ್ಯಾಯದರ್ಶಿಗಳು ಅವಳನ್ನು ಬಿಡುಗಡೆ ಮಾಡಿದರು.

       ಮೂಲ: ಮೊಪಾಸನ ಕಥೆ
= ಎಚ್.ಆರ್. ಚಂದ್ರವದನರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.