ಸುವರ್ಣ ಸದಾ ಸಂಪದ
ಕನ್ನಡದ ಬಹುಮುಖ ಪ್ರತಿಭೆ ಮತ್ತು ಹೊರನಾಡಿನಲ್ಲಿದ್ದುಕೊಂಡು ಕನ್ನಡ ಸೇವೆ ಮಾಡಿದವರಲ್ಲಿ ಅಗ್ರಗಣ್ಯರು ಸದಾನಂದ ಸುವರ್ಣ. ತಮ್ಮ ಬದುಕನ್ನು ಒಂದು ಸಾಂಸ್ಕೃತಿಕ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡ ಅವರು ಸಂಶೋಧನ ಅಧ್ಯಯನಕ್ಕೆ ವಸ್ತುವಾಗಿರುವುದರಲ್ಲಿ ಯಾವುದೇ ವಿಸ್ಮಯವಿಲ್ಲ. ಪತ್ರಕರ್ತೆ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿಯವರು 'ಸದಾನಂದ ಸುವರ್ಣರ ಬದುಕು ಮತ್ತು ಸಾಧನೆ'ಯನ್ನು ತಮ್ಮ ಎಂ.ಫಿಲ್. ಅಧ್ಯಯನದ ವಸ್ತುವನ್ನಾಗಿ ಮಾಡಿಕೊಂಡಿದ್ದು ವಿಶಿಷ್ಟ ಆಯ್ಕೆಯಾಗಿದೆ. ಅದೀಗ 'ಸುವರ್ಣ ಸಂಪದ' ಕೃತಿಯಾಗಿ ಹೊರಬಂದಿದೆ.
ದಕ್ಷಿಣ ಕನ್ನಡದ ಮೂಲ್ಕಿಯಲ್ಲಿ ಜನಿಸಿದ, ತಮ್ಮ ಆರಂಭದ ಹತ್ತು ವರ್ಷಗಳನ್ನು ಅಲ್ಲಿಯೇ ಕಳೆದ ಸದಾನಂದ ಸುವರ್ಣ ಅವರು ನಂತರ ಮುಂಬೈಗೆ ವಲಸೆ ಹೋದರು. ಅವರ ತಂದೆ ಅಲ್ಲಿಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದುದೇ ಅದಕ್ಕೆ ಕಾರಣ. ತೀರಾ ಬಡತನದ ನಡುವೆ ಬೆಳೆದ ಅವರು ಹಗಲು ದುಡಿಯುತ್ತ ರಾತ್ರಿ ಶಾಲೆಯಲ್ಲಿ ತಮ್ಮ ಅಭ್ಯಾಸ ಮಾಡಿದರು. ಗುಮಾಸ್ತಗಿರಿಯಿಂದ ಹಿಡಿದು ಪೇಂಟ್ ಏಜೆನ್ಸಿಯವರೆಗೆ ವ್ಯಾವಹಾರಿಕ ಬದುಕನ್ನು ವಿಸ್ತರಿಸಿಕೊಂಡಿದ್ದ ಅವರು ಕನ್ನಡ ರಂಗಭೂಮಿಯ ರಂಗನ್ನೂ ಅಷ್ಟೇ ದಟ್ಟವಾಗಿ ಅಂಟಿಸಿಕೊಂಡವರು.
ಸುವರ್ಣರ ಹಿರಿತೆರೆ ಮತ್ತು ಕಿರಿ ತೆರೆ ನಂಟು ಬಲವಾದದ್ದು. ಘಟಶ್ರಾದ್ಧ ಚಿತ್ರವನ್ನು ಅವರೇ ನಿರ್ಮಿಸಿದ್ದು. ಇದಕ್ಕೆ ಸುವರ್ಣ ಕಮಲ ಪ್ರಶಸ್ತಿ ಬಂತು. ಅವರ ಎರಡನೇ ನಿರ್ಮಾಣ 'ಕುಬಿ ಮತ್ತು ಇಯಾಲಾ'ಕ್ಕೆ ಮೂರು ರಾಜ್ಯ ಪ್ರಶಸ್ತಿಗಳು ಬಂದಿದ್ದವು. 'ತಬರನ ಕತೆ', 'ಮನೆ', 'ಕ್ರೌರ್ಯ' ಚಿತ್ರಗಳಿಗೆ ಇವರೇ ಕಾರ್ಯಕಾರಿ ನಿರ್ವಾಹಕ ನಿರ್ಮಾಪಕರು. ದೂರದರ್ಶನಕ್ಕೆ ಅವರು 'ಗುಡ್ಡದ ಭೂತ' ಧಾರಾವಾಹಿಯನ್ನು ನಿರ್ಮಿಸಿ ನಿರ್ದೇಶಿಸಿದ್ದರು.
ಸುವರ್ಣರು ಒಳ್ಳೆಯ ನಟ ಕೂಡ ಆಗಿದ್ದರು. ತಮ್ಮ ನಾಟಕಗಳಲ್ಲಿ ಅವರು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. 'ಪಾತ್ರವೊಂದು ರಂಗದಲ್ಲಿ ನಟಿಸುವುದಲ್ಲ, ಬದುಕಬೇಕು' ಅನ್ನುವ ನಂಬಿಕೆ ಅವರದಾಗಿತ್ತು. ಅಭಿನಯವನ್ನು ಅವರು ಅದೆಷ್ಟು ಗಂಭೀರವಾಗಿ ಸ್ವೀಕರಿಸಿದ್ದರು ಎನ್ನುವುದಕ್ಕೆ ಪರ್ವತವಾಣಿಯವರ 'ಮೀನಾ ಮದುವೆ' ನಾಟಕದಲ್ಲಿ ವಿಧವೆ ಪಾತ್ರವನ್ನು ನಿರ್ವಹಿಸಲು ಅವರು ಹೇಗೆ ಸಿದ್ಧತೆ ನಡೆಸಿದ್ದರು ಎಂಬುದನ್ನು ಸೀತಾಲಕ್ಷ್ಮೀಯವರು ವಿವರಿಸಿದ್ದಾರೆ. ಮುಂಬಯಿ ಮಹಾನಗರಿಯಲ್ಲಿ ಅಂಥ ಬೋಳಮ್ಮನನ್ನು ಅವರು ಹುಡುಕಿದ್ದು, ಒಬ್ಬಳು ಸಿಕ್ಕಾಗ ಅವಳನ್ನು ಅನುಸರಿಸಿಕೊಂಡು ಹೋಗಿದ್ದು, ಅವಳ ಚಲನವಲನಗಳನ್ನು, ಮಾತನಾಡುವ ರೀತಿಯನ್ನು ಗಮನಿಸಿದ್ದು, ಮನೆಗೆ ಬಂದು ಅನೇಕ ದಿನ ಅದೇ ರೀತಿ ತಾಲೀಮು ನಡೆಸಿದ್ದು, ರಂಗದ ಮೇಲೆ ನೈಜವಾಗಿ ಅದನ್ನು ಅಭಿನಯಿಸಿದ್ದು, ಅದಕ್ಕೆ ಚಪ್ಪಾಳೆ ಬಿದ್ದದ್ದು... ಹೀಗೆ ವಿವರಗಳನ್ನು ನೀಡುತ್ತ ಸದಾನಂದರ ಸುವರ್ಣ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಿದ್ದಾರೆ.
ಮುಂಬಯಿಯ ಕನ್ನಡ ರಂಗಭೂಮಿಯನ್ನೊಮ್ಮೆ ಅವಲೋಕಿಸುತ್ತ ಅಲ್ಲಿ ಸದಾನಂದ ಸುವರ್ಣರ ಪ್ರಯೋಗಶೀಲತೆಯ ಕಡೆಗೆ ದೃಷ್ಟಿ ಹಾಯಿಸಿದಾಗ ಸುವರ್ಣರು ರಂಗ ಬದುಕನ್ನು ಇಂಚಿಂಚಾಗಿ ಸವಿದ, ರಂಗಲೋಕದ ಬಗೆಗಿನ ಎಲ್ಲ ಸೂಕ್ಷ್ಮಗಳನ್ನೂ, ವ್ಯಾಪ್ತಿಗಳ್ನೂ ಅರ್ಥಮಾಡಿಕೊಂಡು ರಂಗಾಸಕ್ತರಿಗೆ ಹಂತಹಂತವಾಗಿ ದಾಟಿಸಿದ 'ರಂಗ ವಿಶ್ವವಿದ್ಯಾಲಯ' ಅನ್ನುವುದು ಅರಿವಿಗೆ ಬರುತ್ತದೆ ಎಂಬ ಶರಾ ಬರೆದಿದ್ದಾರೆ ಸೀತಾಲಕ್ಷ್ಮೀ.
ಸುವರ್ಣರು ರಂಗ ತರಬೇತಿ ಕೇಂದ್ರ 'ರಂಗಸ್ಥಳ'ದ ಸಂಸ್ಥಾಪಕರಾಗಿದ್ದರು. ಸುವರ್ಣರು ನಟರನ್ನು, ನಿರ್ದೇಶಕರನ್ನು ತಯಾರು ಮಾಡುವ ನಿಟ್ಟಿನಲ್ಲಿಯೇ ಹೆಚ್ಚಾಗಿ ತೊಡಗಿಕೊಂಡವರು. ಅಭಿನಯ ಕಲೆಯ ಶಿಸ್ತುಗಳನ್ನು ರಂಗ ಶಿಕ್ಷಣದ ಮೂಲಕ ಹೊಸ ತಲೆಮಾರಿಗೆ ದಾಟಿಸುತ್ತಿರಬೇಕು ಅನ್ನುವ ಪ್ರಬಲ ಹಂಬಲ ಸುವರ್ಣರದು. ಆದ್ದರಿಂದಲೇ ನಾಟಕ ವಾಚನ ನಡೆಸಿಕೊಡುತ್ತ, ನಾಟಕ ಪ್ರದರ್ಶನ ನಡೆಸುತ್ತ ಬರುತ್ತಿದ್ದಾರೆ. ಅವರ ನಿರ್ದೇಶನದ ನಾಟಕಗಳೇ ರಂಗ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತ ಬರುತ್ತಿವೆ ಎಂಬ ಮಾತನ್ನೂ ಹೇಳಿದ್ದಾರೆ.
ಸುವರ್ಣ ಅವರ ಸಾಹಿತ್ಯ ಕೃತಿಗಳ ಮೇಲೂ ಇಲ್ಲಿ ಬೆಳಕು ಬಿದ್ದಿದೆ. ಸುವರ್ಣರು ತಮ್ಮ ಬದುಕಿನಲ್ಲಿ ಯಾರ್ಯಾರಿಂದ ಪ್ರೇರಣೆ ಪಡೆದರು, ಅವರ ವ್ಯಕ್ತಿತ್ವವನ್ನು ರೂಪಿಸಿದ ಸಂಗತಿಗಳು ಯಾವವು ಎಂಬುದನ್ನೆಲ್ಲ ಇಲ್ಲಿ ದಾಖಲಿಸಿದ್ದಾರೆ. ಸುವರ್ಣರ ಸಂದರ್ಶನವಿದೆ. ಅಪರೂಪದ ಛಾಯಾಚಿತ್ರಗಳಿವೆ. ಸುವರ್ಣರ ಕೊಡುಗೆಯ ಬಗ್ಗೆ ನಿರ್ದಿಷ್ಟವಾದ ಮಾತುಗಳನ್ನು ಹೇಳಿದ್ದಾರೆ. ಮಿತಿಗಳನ್ನು ಗುರುತಿಸಿದ್ದಾರೆ. ಉತ್ತಮವಾದ ಅಧ್ಯಯನದ ಶಿಸ್ತು ಇಲ್ಲಿದೆ. ಸದಾನಂದರ ಅರಿಯಲು ಇದೊಂದು ಸುವರ್ಣ ದೀವಿಗೆ.
ಪ್ರ: ಸುವರ್ಣಗಿರಿ ಪ್ರಕಾಶನ, ಮಂಗಳೂರು,
ಪುಟಗಳು 294, ಬೆಲೆ ರು. 400
ಲೋಹಿಯಾ ಜೊತೆಯಲ್ಲಿ..
ಸಮಕಾಲೀನ ಕನ್ನಡದ ಗಟ್ಟಿ ಚಿಂತಕರಲ್ಲಿ ಒಬ್ಬರಾಗಿರುವ ಡಿ.ಎಸ್. ನಾಗಭೂಷಣ ಅವರು ಮಾರ್ಕ್ಸ್- ಗಾಂಧಿ- ಲೋಹಿಯಾ- ಅಂಬೇಡ್ಕರ್ ಕುರಿತು ಬರೆದಿರುವ ಲೇಖನಗಳ ಸಂಕಲನ 'ಲೋಹಿಯಾ ಜೊತೆಯಲ್ಲಿ...'. ಭಾರತದ ರಾಜಕಾರಣಕ್ಕೆ ತಾತ್ವಿಕ ನೆಲೆಯನ್ನು ಒದಗಿಸಿದವರಲ್ಲಿ ಮೇಲೆ ಹೇಳಿದ ನಾಲ್ವರು ಪ್ರಮುಖರು. ಸಮಕಾಲೀನ ರಾಜಕಾರಣಿಗಳು ಯಾವುದೇ ತತ್ವವಿಲ್ಲದೆ ಅಧಿಕಾರವೊಂದನ್ನೇ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ. ಅಂಥವರು ಈ ಕೃತಿಯನ್ನು ಓದಬೇಕು. ರಾಜಕಾರಣವನ್ನು ಅದರೆಲ್ಲ ಮೂರ್ತ ಮತ್ತು ಅಮೂರ್ತ ನೆಲೆಗಳಲ್ಲಿ ಪರಿಭಾವಿಸುವ ಪ್ರಯತ್ನ ಇಲ್ಲಿಯ 28 ಲೇಖನಗಳಲ್ಲಿದೆ.
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ,
ಪುಟಗಳು 248, ಬೆಲೆ ರು. 175
ಕನ್ನಡ ಸಂತ ಕರೀಂಖಾನ್
ಆಫ್ಘಾನಿಸ್ತಾನ ಮೂಲದ ಎಸ್.ಕೆ. ಕರೀಂಖಾನ್ ಅವರು ಕನ್ನಡ ನೆಲದಲ್ಲಿ ಅಚ್ಚ ಕನ್ನಡಿಗನಾಗಿ ಬೆಳೆದದ್ದು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದು, ಗಾಂಧೀಜಿಯವರ ಅನುಯಾಯಿಯಾದದ್ದು, ಕನ್ನಡ ಜಾನಪದ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಮಾಡಿದ್ದು, ಸಾಹಿತಿಯಾದದ್ದು, ಕನ್ನಡ ಸಿನಿಮಾಗಳಿಗೆ ಗೀತೆಗಳನ್ನು ರಚಿಸಿದ್ದು, ಮುಸ್ಲಿಮನಾಗಿದ್ದೂ 'ನಟವರ ಗಂಗಾಧರ'ದಂಥ ಹಾಡನ್ನು ಬರೆದದ್ದು ಎಲ್ಲವೂ ಅಪ್ರತಿಮ ಸಾಧನೆಯಾಗಿದೆ. ಪ್ರೊ.ಡಿ. ಲಿಂಗಯ್ಯನವರು ಈ ಕನ್ನಡ ಸಂತನ ಜೀವನ ಚರಿತ್ರೆಯನ್ನು ಅಪರೂಪದ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಪ್ರ: ಗೋಧೂಳಿ ಪ್ರಕಾಶನ, ಬೆಂಗಳೂರು, ಪುಟಗಳು 488, ಬೆಲೆ ರು. 300
ಸಾವಿರದ ರೆಕ್ಕೆ
'ಆ ಮನುಷ್ಯನ ಹಸಿವು ತೀರಲೇ ಇಲ್ಲ/ ಪ್ರಾಣಿ ಪಕ್ಷಿ ಗಿಡ ಮರ ಗುಡ್ಡ ಬೆಟ್ಟ/ ಎಲ್ಲವನ್ನೂ ತಿಂದ; ನದಿ ಕೆರೆ ಕೊಳ/ ಸಮುದ್ರಗಳ ನೀರನ್ನೆಲ್ಲ ಕುಡಿದು/ ಖಾಲಿ ಮಾಡಿದ; ನೆಲ ಬಗೆದ/ ಮಣ್ಣು ಕಲ್ಲು ಕಲ್ಲಿದ್ದಲು ಕಬ್ಬಿಣ/ ಎಲ್ಲವನ್ನೂ ಅಗಿದಗಿದು ಉಗಿದ....' ಈ ರೀತಿ ಮನುಷ್ಯನ ಸ್ವಾರ್ಥದ ಮತ್ತು ಅದರ ಅಪಾಯದ ಅನಾವರಣ ಮಾಡುವ ಜಿ.ಪಿ.ಬಸವರಾಜು ಅವರ 'ಒಂದೂರಿನಲ್ಲಿ' ಕವಿತೆ ಅವರ ಬಗ್ಗೆ ಗೌರವವನ್ನು ಮೂಡಿಸುತ್ತದೆ. ಅವರ 'ಸಾವಿರದ ರೆಕ್ಕೆ' ಸಂಕಲನದಲ್ಲಿ ಇಂಥ ಹಲವು ಉತ್ತಮ ಕವಿತೆಗಳಿವೆ. ಎಲ್ಲಿಯೂ ಕಾಣದ ನೆಮ್ಮದಿ ಕವಿತೆಯಲ್ಲಿ ಕಾಣಿಸುವುದು. ಕವಿತೆ ಭರವಸೆಯಾಗುವುದು ಎಂಬ ನಂಬಿಕೆ ಅವರ ಕಾವ್ಯೋದ್ಯೋಗದ ಹಿಂದಿದೆ.
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ,
ಪುಟಗಳು 154, ಬೆಲೆ ರು. 60
ಡಾ. ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

