ಖುಷಿ

ಮಾವುವಾದ

ಮಾವುವಾದ
Published On :

'ಎಂತ ಮಾರಾಯ, ಈ ಕಾಟುಮಾವಿನ ಹಣ್ಣು ಒಂದೆಲ್ಲ ತಿಂದ್ರೆ ಸಾಕಾಗುದಿಲ್ಲ. ಇದು ಒಂದು ಪಪ್ಪಾಯಿ ಸೈಜಾದ್ರೂ ಇದ್ದಿದ್ರೆ ಚೆನ್ನಾಗಿತ್ತು ಅಲ್ವಾ?' ಗೆಳತಿ ಈ ಮಾತಾಡುತ್ತ ಮಾವಿನಹಣ್ಣು ಹೆಕ್ಕುತ್ತಿದ್ದಳು. ಮಾತು ಮಾಗಿಸುವ ಮುನ್ನವೇ ಒಂದು ಹಣ್ಣು ಠಪ್ಪ್ ಅಂತ ಅವಳ ತಲೆ ಮೇಲೆ ಬಿತ್ತು. ಅದು ನಿಜಕ್ಕೂ ಪಪ್ಪಾಯಿ ಗಾತ್ರ ಇದ್ದಿದ್ದರೆ! ದೇವರು ದೊಡ್ಡವನು, ನಾವು ಕೇಳಿದ್ದನ್ನೆಲ್ಲ ಆತ ಕರುಣಿಸುವುದಿಲ್ಲ.
ಕೆಲವೊಮ್ಮೆ ದೇವರು ನಾವು ಕೇಳದೆ ಇದ್ದುದನ್ನೂ ಕರುಣಿಸುತ್ತಾನೆ. ಬೈಬಲ್ ಮನುಷ್ಯನ ಸೃಷ್ಟಿಯ ಬಗ್ಗೆ ಹೇಳುವ ಈ ಕತೆ: ದೇವರು ಮೊದಲು ಆದಂನನ್ನೂ ಆಮೇಲೆ ಈವ್‌ಳನ್ನೂ ಸೃಷ್ಟಿಸಿದ. ಬಳಿಕ ಮರವೊಂದನ್ನು ತೋರಿಸಿ, ಅದರಲ್ಲಿರುವುದು ನಿಷೇಧಿತ ಫಲವೆಂದೂ ಅದನ್ನು ತಿನ್ನಬಾರದೆಂದೂ ಹೇಳಿ, ಅವರನ್ನು ದೇವರ ಉದ್ಯಾನದಲ್ಲಿ ಆಡಲು ಬಿಟ್ಟ. ಆದರೆ ಆದಂ ಮತ್ತು ಈವ್ ಅದನ್ನು ದೇವರ ಕಣ್ಣುತಪ್ಪಿಸಿ ತಿಂದೇಬಿಟ್ಟರು.
ಮುಗ್ಧತೆಯ ಸಾಕಾರಮೂರ್ತಿಗಳಾಗಿದ್ದ ಅವರಿಗೆ ಆ ಮೊದಲು ಪ್ರಣಯದ ಅರಿವಿರಲಿಲ್ಲ. ಹಣ್ಣು ತಿಂದದ್ದೇ, ನಾಚಿಕೆ, ಪ್ರೇಮ, ಕಾಮ ಮುಂತಾದ ಮನುಷ್ಯ ಸಹಜ ಭಾವಗಳು ಹುಟ್ಟಿಕೊಂಡವು. ಸೃಷ್ಟಿ ಮೊದಲಾಯಿತು.
ಬೈಬಲ್ ಹೇಳುವ ಈ ಆದಿಫಲ ಯಾವುದಿರಬಹುದು ಎಂಬ ಅನುಮಾನ ನನ್ನನ್ನು ಪದೇ ಪದೇ ಕಾಡಿದೆ. ಇತ್ತೀಚೆಗೆ ಆ ಸಂಶಯ ಪರಿಹಾರವಾಯ್ತು. ನಮ್ಮ ಪರಿಚಯದ ಆಯುರ್ವೇದ ವೈದ್ಯರೊಬ್ಬರು ಒಂದು ಶ್ಲೋಕವನ್ನು ಉಲ್ಲೇಖಿಸಿ ಅದರ ಅರ್ಥವನ್ನು ಹೀಗೆ ವಿವರಿಸಿದರು:
'ಪಕ್ವಂ ತು ಮಧುರಂ ವೃಷ್ಯಂ ಸ್ನಿಗ್ಧ ಹೃದ್ಯಂ ಬಲಪ್ರದಂ
ಗುರು ವಾತಹರಮ್ ರುಚ್ಯಂ ವರ್ಣ್ಯಂ ಶೀತಮಪಿತ್ತಲಮ್
ಮಾವಿನ ಹಣ್ಣು ಎಷ್ಟು ಒಳ್ಳೇದು ಗೊತ್ತುಂಟಾ? ಚೆನ್ನಾಗಿ ಹಣ್ಣಾದ ಮಾವು ಮಧುರ ಅಂದ್ರೆ ರುಚಿಕರ, ಸ್ನಿಗ್ಧ ಅಂದ್ರೆ ರಸವತ್ತಾದದ್ದು, ಹೃದ್ಯ ಅಂದ್ರೆ ಹೃದಯಕ್ಕೊಳ್ಳೇದು, ರುಚಿ ಮತ್ತು ವರ್ಣವನ್ನು ಉದ್ದೀಪಿಸುವಂಥದ್ದು, ಬಲಪ್ರದ ಮತ್ತು ವಾತಹರ, ಶೀತವೂ ಅಲ್ಲ ಪಿತ್ತವೂ ಅಲ್ಲದ್ದು. ವೃಷ್ಯ ಅಂದ್ರೆಂತದು ಗೊತ್ತುಂಟ? ವೀರ್ಯವೃದ್ಧಿ ಮಾಡುವಂಥದ್ದು ಅಂತ!'
ಮಾವಿನ ಈ 'ವೃಷ್ಯ' ಗುಣದ ಪರಿಣಾಮವೇ ಆದಂ ಮತ್ತು ಈವರ 'ಸ್ಪ ೃಶ್ಯ'ಕಾಯಕ ಶುರುವಾಗಲು ಕಾರಣ ಎಂದು ನಾನು ಊಹಿಸುತ್ತೇನೆ. ನಮ್ಮಜ್ಜ ಬೇಸಿಗೆಯಲ್ಲಿ ಹತ್ತಾರು ಬುಟ್ಟಿ ಮಾವು ಮುಂದಿಟ್ಟುಕೊಂಡು ನುಂಗಿ ನೊಣೆಯುತ್ತಿದ್ದುದಕ್ಕೂ ಮಾವಂದಿರ ಸಂಖ್ಯೆ ಒಂದು ಕ್ರಿಕೆಟ್ ಟೀಮಿಗಾಗುವಷ್ಟು ಇದ್ದುದಕ್ಕೂ ಸಂಬಂಧ ಇದ್ದಿರಬಹುದು ಎಂಬ ಅನುಮಾನವೂ ನನಗೀಗ ಮೂಡಿದೆ.

ಇರಲಿ, ಮಾವಿನ ಬಗ್ಗೆ ಹೇಳಲು ಹೊರಟಾಗ ಮಾವನ ವಿಷಯವೇಕೆ? ನಮ್ಮ ವಿಷಯವನ್ನೇ ತೆಗೆದುಕೊಳ್ಳಿ. ಮಾವಿನ ಹಣ್ಣು ಯಾರಿಗಿಷ್ಟವಿಲ್ಲ? ಈ ಕತೆ ಕೇಳಿ. ಉರ್ದು ಕವಿ ಮಿರ್ಜಾ ಗಾಲಿಬ್‌ನ ಮಾವುಪ್ರೇಮ ಜನಜನಿತ. ಒಮ್ಮೆ ಈತ ಗೆಳೆಯ ರಜಿಯುದ್ದೀನ್ ಖಾನ್ ಜತೆ ಮನೆ ಮುಂದೆ ಕುಳಿತಿದ್ದ. ಬೀದಿಯಲ್ಲಿ ಮಾವಿನ ಹಣ್ಣು, ಸಿಪ್ಪೆಗಳು ಬಿದ್ದಿದ್ದವು. ಅಲ್ಲೊಂದು ಕತ್ತೆ ಅಡ್ಡಾಡುತ್ತ ಬಂತು. ಮಾವಿನ ಹಣ್ಣನ್ನು ಮೂಸಿ, ತಿನ್ನದೆ ಹಾಗೇ ಹೋಯಿತು. ಅದನ್ನು ನೋಡಿ, ಗಾಲಿಬ್‌ನನ್ನು ಚುಡಾಯಿಸಲೆಂದು ರಜಿಯುದ್ದೀನ್ ಖಾನ್ ಹೇಳಿದ: 'ನೋಡು ಗಾಲಿಬ್, ಕತ್ತೆ ಕೂಡ ಮಾವಿನ ಹಣ್ಣು ತಿನ್ನಲ್ಲ!' ಥಟ್ಟಂತ ಬಂತು ಗಾಲಿಬ್‌ನ ಉತ್ತರ: 'ಹೌದು, ಕತ್ತೆಗಳು ಮಾತ್ರ ಮಾವಿನ ಹಣ್ಣು ತಿನ್ನಲ್ಲ.' ಮಾವಿನ ಹಣ್ಣನ್ನು ತಿನ್ನದವರು, ಅದನ್ನು ದ್ವೇಷಿಸುವವರು ಈ ಪ್ರಸಂಗ ಓದಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಾವೋವಾದಿಗಳಾಗಿ ಕಾಡಿನಲ್ಲಿರುವವರೂ ಬೇಸಿಗೆಯಲ್ಲಿ ಈ ಹಣ್ಣನ್ನಾದರೂ ಪ್ರೀತಿಸುವ 'ಮಾವುವಾದಿ'ಗಳಾಗಿರಲಿ.
ಈಗ ಮಾರುಕಟ್ಟೆಯಲ್ಲಿ ನಾನಾ ವಿಧ ಮಾವುಗಳು. ಯುರೋಪಿನವರು ವಾಪಸು ಕಳಿಸಲಿ; ಪಾಪಿಗಳಿಗೆ ನಮ್ಮ ಪರಮಾಯಿಷಿ ಆಲ್ಫಾನ್ಸೋ ತಿನ್ನುವ ಯೋಗವಿಲ್ಲ. ನಾವೇ ತಿಂದರಾಯಿತು ಎಂದುಕೊಳ್ಳುತ್ತ ಮಾವಿನ ಬುಟ್ಟಿಗೆ ಕೈಯಿಕ್ಕಿದರೆ, ಕಡೆಗೂ ನನ್ನ ಗಮನ ಸೆಳೆಯುವುದು ಸಣ್ಣ ಗಾತ್ರದ, ಕಾಡುಮಾವಿನ ಹಣ್ಣುಗಳೇ. ಅದನ್ನು ನೋಡನೋಡುತ್ತ 'ನೆನೆವುದೆನ್ನ ಮನಂ ಮಲೆನಾಡ ಕಾಟುಹಣ್ಣಂ'.
ಮೊನ್ನೆ ಯಾರದೋ ಮನೆಗೆ ಹೋಗಿದ್ದೆ. ನೀಟಾಗಿ ಕತ್ತರಿಸಿದ್ದ ಮಾವಿನ ಹೋಳುಗಳನ್ನು ತಟ್ಟೆಯಲ್ಲಿಟ್ಟು ತಂದು 'ಒಳ್ಳೆ ರಸಪುರಿ ಮಾರಾಯರೆ, ತಿನ್ನಿ' ಎಂದು ಮುಂದಿಟ್ಟರು. ಆಯತ ಮತ್ತು ಚೌಕಾಕಾರದ ಆ ತುಂಡುಗಳ ಜತೆಗೆ ಫೋರ್ಕು. ಅವರ ಮಕ್ಕಳು ನಾಜೂಕಾಗಿ ಹೋಳನ್ನು ಫೋರ್ಕಿನಲ್ಲಿ ಎತ್ತಿಕೊಂಡು ತುಟಿಗಳಿಗೆ ತಾಗದಂತೆ ಬಾಯಿಗೆಸೆದುಕೊಂಡು ಎದ್ದು ಹೋದರು. ಅದನ್ನು ನೋಡಿ ಬದುಕಿನ ಮೇಲೆಯೇ ಜಿಗುಪ್ಸೆ ಉಕ್ಕಿಬಂತು. ಮಾವಿನ ಹಣ್ಣನ್ನು ಹೀಗೂ ತಿನ್ನುವ ಪಾಖಂಡಿಗಳುಂಟೇ?
ಅಲ್ಲ, ಪಪ್ಪಾಯಿಯನ್ನು ಹೀಗೆ ತಿಂದರೆ ಸಮ. ಅದು ಫೋರ್ಕಿನಲ್ಲೇ ತಿನ್ನಬೇಕಾದಂಥದ್ದು. ಇಲ್ಲವಾದರೆ ಕೈಗೆ ಕಕ್ಕಸು ವಾಸನೆ ಖಂಡಿತ(ಪಪ್ಪಾಯಿ ಪ್ರೇಮಿಗಳು ಕ್ಷಮಿಸಿ). ಹಲಸಿನ ಹಣ್ಣಿನ ವ್ಯಾಕರಣವೇ ಬೇರೆ. ಅದು ಇನ್ನೊಬ್ಬರು ಬಿಡಿಸಿ ಕೊಟ್ಟರೆ ಮಾತ್ರ ನಾವು ತಿನ್ನಬೇಕಾದ್ದು. ಉಳಿದ ಹಣ್ಣುಗಳ ಕತೆ ಏನೇ ಇರಲಿ. ಮಾವಿನ ಹಣ್ಣನ್ನು ತಿನ್ನಬೇಕಾದ ರೀತಿಯೇ ಬೇರೆ. ಚಮಚ ಫೋರ್ಕುಗಳನ್ನು ಇದರ ಜತೆ ಜೋಡಿಸುವುದು ಮದುವೆ ಮಂಟಪಕ್ಕೆ ಶ್ರಾದ್ಧದ ಪಿಂಡ ತಂದಿಟ್ಟಂತೆ(ವೈದಿಕರು ಕ್ಷಮಿಸಿ). ಮಾವು ಯಾವುದೇ ಜಾತಿಯದಾಗಿರಲಿ, ಅದನ್ನು ಬುಟ್ಟಿಯಲ್ಲಿಯೇ ತಂದಿಡಬೇಕು. ಸಣ್ಣಗಾತ್ರದ ಕಾಟು ಮಾವು ಆಗಿದ್ದರೆ, ಕನಿಷ್ಠ ನೂರು ಇರತಕ್ಕದ್ದು. ತೊಳೆದಿರಲೇಬೇಕೆಂದಿಲ್ಲ.  ಮೊದಲು ತೊಟ್ಟು ಮುರಿಯುವ ಕೆಲಸ. ಮಾವಿನ ಕಾಯಿಯ ತೊಟ್ಟು ಮುರಿಯುವಾಗ ಅದರಿಂದ ಬೆಳ್ಳಗಿನ ಸೊನೆ ಸಿರ್ರನೆ ಉಕ್ಕಿ ಹಾರುತ್ತದೆ. ಉಪ್ಪಿನಕಾಯಿಗೆ ಮಿಡಿ ಆಯುವವರಿಗೆ ಈ ವಿಚಾರ ಚೆನ್ನಾಗಿ ಗೊತ್ತು. ಹಣ್ಣು ಆ ವಿಚಾರದಲ್ಲಿ ಸಾಧು. ಮತ್ತೆ ಮಾವಿನ ಹಣ್ಣಿನಲ್ಲಿ ತೊಟ್ಟು ಮತ್ತು ಓಟೆ ಮಾತ್ರವೇ ತ್ಯಾಜ್ಯ. ಉಳಿದದ್ದೆಲ್ಲ ಭೋಜ್ಯ. ಸಿಪ್ಪೆಯ ಒಂದು ಬದಿಯನ್ನು ಕಚ್ಚಿ ಅದನ್ನು ನಾಜೂಕಾಗಿ ಎಬ್ಬಿಸಿ, ತುಂಡು ಸಿಪ್ಪೆಗೆ ಅಂಟಿಕೊಂಡಿರುವ ಗುಳವನ್ನು ಚೀಪಿ ಹೀರಿ, ಹೀಗೆ ಸಿಪ್ಪೆಯನ್ನೆಲ್ಲ ಎಬ್ಬಿಸಿದ ಬಳಿಕ ಗುಳಕ್ಕೆ ಬಾಯಿ ಹಾಕಿ, ಓಟೆಯವರೆಗೂ ಹಲ್ಲೂರಿ ಅದನ್ನು ಎಬ್ಬಿಸಿ ಬಾಯೊಳಕ್ಕೆ ತಂದುಕೊಂಡು ಕಣ್ಣು ಮುಚ್ಚಿ ಸವಿದು, ಗುಳವೆಲ್ಲಾ ಮುಗಿಯಿತೆಂದ ಬಳಿಕ ಗೊರಟನ್ನು ಚೀಪಿ ಚೀಪಿ ಕಚ್ಚಿ ಕಚ್ಚಿ ಹೀರಿ ಹೀರಿ (ಪುನರುಕ್ತಿ ದೋಷ) ಓಟೆಯನ್ನು ದಿಟ್ಟಿಸಬೇಕು. ಆಗ ಅದು 'ನಿನ್ನ ದಮ್ಮಯ್ಯ, ಇನ್ನು ಸಾಕು ಮಾರಾಯ ಬಿಡು' ಎಂದು ಅಂಗಲಾಚಿದರೆ ಅದಕ್ಕೆ ಬಿಡುಗಡೆ ಕೊಡಬಹುದು ಎಂದರ್ಥ. ಆಗಲೂ ಹಾಗೇ ಅದನ್ನು ಬಿಸಾಡುವಂತಿಲ್ಲ. ನಿಮ್ಮ ತಮ್ಮನೋ ತಂಗಿಯೋ ಹತ್ತಿರದಲ್ಲಿದ್ದರೆ ಅವರನ್ನು ಕರೆದು, ಅವರು 'ಓ' ಎಂದರೆ, 'ಹಾಗಿದ್ದರೆ ಓಟೆ ಜತೆ ಓಡು' ಎಂದು ಅದನ್ನು ದೂರ ಬಿಸಾಕಿ ಅವರನ್ನು 'ಕೊರಂಟು' ಮಾಡುವ ಸೀನು ಸೃಷ್ಟಿಸಬೇಕು. ಅಲ್ಲಿಗೆ ಆಮ್ರಾಸ್ವಾದನದ ಒಂದು ಅಧ್ಯಾಯ ಸಂಪೂರ್ಣ.
ಒಂದು ಹಣ್ಣು ತಿಂದರೆ ಸಾಕೆ? ಹಣ್ಣಿನ ರುಚಿ ನಿಮ್ಮನ್ನು ಸಂಪೂರ್ಣ ಆವರಿಸಿಕೊಳ್ಳಬೇಕೆಂದರೆ ಹತ್ತಾದರೂ ತಿನ್ನಬೇಕು. ಕಾಟುಮಾವು ಕನಿಷ್ಠ ಇಪ್ಪತ್ತು. ಹಣ್ಣಿನ ರಸ ಕೈಯನ್ನೆಲ್ಲ ಒದ್ದೆಯಾಗಿಸಿ, ಮಣಿಕಟ್ಟನ್ನು ಹಾದು, ಮೊಣಕೈಯವರೆಗೂ ಇಳಿಯಬೇಕು. ಆಗ ಕೈಯನ್ನು ಮೊಣಕೈಯಿಂದ ಅಂಗೈವರೆಗೂ ಸು...ರ್ರನೆ ಆಗಾಗ ನೆಕ್ಕಿಕೊಳ್ಳಬೇಕು. ಹಣ್ಣೆಲ್ಲ ತಿಂದಾದ ನಂತರ ಹಲ್ಲುಗಳೆಡೆಯಲ್ಲಿ ಸಿಕ್ಕಿಕೊಂಡ ನಾರನ್ನು ಬಿಡಿಸುವ ಕಾರ್ಯಕ್ರಮ. ಸಾಮಾನ್ಯವಾಗಿ ಒಂದು ಕಂಬಳಿ ಹೆಣೆಯುವಷ್ಟು ನಾರು ಅಲ್ಲಿ ಸಿಕ್ಕಿಕೊಂಡಿದ್ದರೆ ಮಾತ್ರ ನೀವು ಮಾವು ತಿನ್ನುವುದರಲ್ಲಿ ಪಂಟರ್ ಎಂದರ್ಥ.
ಹಾಗೆ ಹಣ್ಣು ಮುಕ್ಕುತ್ತಿದ್ದ ಅಂದಿನ ಮುಂಜಾನೆಗಳು ನೆನಪಾಗುತ್ತವೆ. ಯಾವತ್ತೂ ಎಂಟು ಗಂಟೆಗೆ ಮುನ್ನ ಎದ್ದೇಳದ ನಮ್ಮನ್ನು ಬೇಸಿಗೆಯಲ್ಲಿ ಬೇಗನೆ ಏಳಿಸಲು ದೊಡ್ಡವರು ಕಂಡುಕೊಂಡ ಉಪಾಯ: 'ಜೀರಿಗೆ ಮಾವಿನ ಹಣ್ಣು ಆಚೆ ಮನೆಯವ್ರ ಪಾಲಾಯ್ತಾ ಅಂತ!' ಹಾಸಿಗೆಯಿಂದ ಚಂಗನೆ ನೆಗೆದು ಎರಡೇ ಗುತ್ತಿನಲ್ಲಿ ಮಾವಿನ ಮರದ ಬುಡಕ್ಕೆ. ಹಿಂದಿನ ರಾತ್ರಿ ಚೆನ್ನಾಗಿ ಗಾಳಿ ಬೀಸಿದ್ದರೆ ಮರದಡಿ ರಂಗೋಲಿ ಹಾಕಿದಂತೆ ಹಣ್ಣುಗಳು. ಅದು ಇನ್ನೊಬ್ಬರ ಪಾಲಾಗುವ ಮುನ್ನವೇ ಹೆಕ್ಕಿಕೊಳ್ಳಬೇಕು. ಕೆಲವೊಮ್ಮೆ ಮಾವಿನ ಮರದಡಿಯೇ ಮೂರನೇ ಮಹಾಯುದ್ಧ. ಮಕ್ಕಳು ಬೆಳಗ್ಗೆದ್ದು ಕಾಡುಬಿದ್ದರೆ ಸಂಜೆಯವರೆಗೂ ಮಾವಿನಹಣ್ಣುಗಳೇ ನಮ್ಮ ಜೀವ ಪೊರೆಯುತ್ತಿದ್ದವು.
ಈಗಲೂ ಹಾಗೇ ತಿನ್ನುವ ಆಸೆಯಾಗುತ್ತದೆ. ತಟ್ಟೆ ಮುಂದಿಟ್ಟರೆ, ಹನ್ನೆರಡು ಮಂದಿಗೆಂದು ತಂದ ಹಣ್ಣನ್ನು ಮಗಳೊಬ್ಬಳೇ ಮುಗಿಸುತ್ತಾಳೆ. ಗೊರಟು ಚಟ್ಟೆಯಾಗುವವರೆಗೂ ಬಿಡುವುದಿಲ್ಲ. ಮೈಯೆಲ್ಲಾ ಹಳದಿ ರಸದ ಮಹಾಮಸ್ತಕಾಭಿಷೇಕ ಮಾಡಿಕೊಂಡು ಹಾಗೇ ತಬ್ಬಿಕೊಳ್ಳಲು ಬರುತ್ತಾಳೆ. ಅವಳಿಂದ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಲೇ ಅವಳ ಕಣ್ಣಿನಲ್ಲಿ ನನ್ನ ಕನಸನ್ನು ಮರಳಿ ಕಾಣುತ್ತೇನೆ.
ನನನ
'ಈಗ ಮಾವಿನ ಹೂವಿಗೂ ಚಿಗುರಿಗೂ ಮುತ್ತುವ ದುಂಬಿಗಳ ಸಂದೋಹದ ಗುಂಗುಂರವ ಹೇಗಿದೆ ಎಂದರೆ- ವಸಂತವೆಂಬ ಹೆಣ್ಣು ತೊಟ್ಟ ಕೈಬಳೆಗಳಂತೆಯೂ ಕಾಲ್ಗೆಜ್ಜೆಗಳಂತೆಯೂ ಇದೆ' ಎಂದು ಹೇಳುತ್ತಾನೆ ಮಹಾಕವಿ ಭಾರವಿ. ಆದರೂ ಮಾವು ಎಂದ ಕೂಡಲೆ ಮನಸ್ಸು ಕಾಳಿದಾಸನ ಮೇಘದೂತಕ್ಕೇ ಮೊರೆ ಹೋಗುತ್ತದೆ. ಆತನ ಪದ್ಯವನ್ನು ದ.ರಾ.ಬೇಂದ್ರೆಯವರು ಹೀಗೆ ಪುನರ್ ಸೃಷ್ಟಿಸುತ್ತಾರೆ:  
ತೊಳೆದ ತುರುಬು ಕಪ್ಪಾದ ನೀನು
ಗಿರಿಶಿಖರದಲ್ಲಿ ತೇಲೆ
ಆಷಾಢ ಮಾವು ಸುರಿದಾವು ಗೊಂಚಲಲಿ
ಬೆಟ್ಟದೆದೆಯ ಮೇಲೆ
ಅಮರ ಮಿಥುನಗಳ ಪ್ರಣಯದೃಷ್ಟಿ
ಅರಳರಳುವಂತೆ ಆಗೆ
ಮಲೆಯ ತುದಿಯು ಕಪ್ಪಾಗಿ
ತೋರುವದು ನೆಲದ ಮೊಲೆಯ ಹಾಗೆ
ಆಮ್ರಕೂಟ ಬೆಟ್ಟದ ಮೇಲುಗಡೆ ತಂಗುವ ಮೋಡ, ಬೆಟ್ಟದ ತಪ್ಪಲ ತುಂಬಾ ಹಬ್ಬಿರುವ ಫಲಭರಿತ ಮಾವಿನ ತೋಪಿನ ಹಿನ್ನೆಲೆಯಲ್ಲಿ, ಆಕಾಶದಿಂದ ನೋಡುತ್ತಿರುವ ಅಮರಮಿಥುನಕ್ಕೆ ಕಾಣಿಸುವುದು ಹಾಗಂತೆ. ಮೊದಲ ಬಾರಿಗೆ ಈ ಸಾಲುಗಳನ್ನು ಓದಿದಾಗ ಅದರ ಉಪಮಾ ಸಾಮರ್ಥ್ಯ, ಚಿತ್ರಕ ಶಕ್ತಿಯನ್ನು ಕಂಡು ರೋಮಾಂಚನವಾಗಿತ್ತು. ಈಗ ಓದಿದರೂ ಅದೇ ಅನುಭವ. ಈ ಮೈ ನವಿರಿನ ನಿತ್ಯನೂತನತೆ ಬರಿಯ ಕಾಳಿದಾಸನಲ್ಲಿಲ್ಲ, ಬೇಂದ್ರೆಯಲ್ಲಿಲ್ಲ, ಮಾವು ಎಂಬ ಮಾಂತ್ರಿಕ ಫಲದಲ್ಲಿಯೂ ಇದೆ ಅನ್ನಿಸುವುದುಂಟು.
ಐಟಂ ಸಾಂಗಿಲ್ಲದೆ ಹೊಸ ಸಿನೆಮಾಗಳು ಹೇಗೆ ಸಂಪೂರ್ಣ ಅಲ್ಲವೋ ಹಾಗೇ ಮಾವು ವಸಂತಗಳ ವರ್ಣನೆಯಿಲ್ಲದೆ ಹಳೆಯ ಕವಿಗಳ ಕಾವ್ಯ ಪೂರ್ತಿಯಾಗದು. ಶಾಸ್ತ್ರಸಿದ್ಧ ಹದಿನೆಂಟು ವರ್ಣನೆಗಳಲ್ಲಿ ಅದೂ ಒಂದು. ಮಾವಿಗೆ ರಸಾಲ, ಕಾಮವಲ್ಲಭ, ಪಿಕಬಂಧು, ಸಹಕಾರಿ ಎಂಬ ಹೆಸರುಗಳನ್ನೂ ಈ ಕವಿಗಳೇ ಕೊಟ್ಟದ್ದು. ಇದು ವಸಂತನಿಗೆ ಸಹಕಾರಿ, ಕೋಗಿಲೆಗೆ ಬಂಧು, ಮನ್ಮಥನ ಗೆಳೆಯ. ಈ ಹೆಸರುಗಳಲ್ಲೇ ಇದರ ಗುಣಸ್ವಭಾವ ಗೊತ್ತಾಗುತ್ತದಲ್ಲವೇ?
ಸಂಸ್ಕೃತ ಮತ್ತು ಚಂಪೂ ಕವಿಗಳ ಪದ್ಯಗದ್ಯಗಳ ಕೋಲಾಹಲದಲ್ಲಿ, ಉಕ್ತಿಅನುಕ್ತಿಗಳ ಧಾಳಾಧೂಳಿಯಲ್ಲಿ ಮಾವಿನ ಉಲ್ಲೇಖವೇನೋ ಭರ್ಜರಿಯಾಯ್ತು. ಆದರೆ ಅಲ್ಲಿ ಕಾವ್ಯ ಎಲ್ಲಿದೆ ಎಂದೇ ಹುಡುಕಬೇಕು. ಅದಕ್ಕೇ ಎ.ಕೆ.ರಾಮಾನುಜನ್ ಒಂದು ಕವನದಲ್ಲಿ ಹೇಳಿದ್ದು:
'ನೂರಾರು ಷಟ್ಪದಿ
ಕಂದ ವೃತ್ತಗಳ
ನಡುವೆ ಕಂಡದ್ದು
ಚಿಗುರು
ಮಾವಿನೆಲೆ ಮೂರು'
ಅವರಿಗೆ ಕಂಡದ್ದು ಮಾವಿನೆಲೆ. ಪುಣ್ಯ, ಹಣ್ಣು ಕಾಣಿಸಲಿಲ್ಲ. ಅದನ್ನು ನಾವೇ ಹೆಕ್ಕಿಕೊಳ್ಳೋಣ.
ವಿವೇಕ ಶಾನಭಾಗರ 'ಒಂದು ಬದಿ ಕಡಲು' ಕಾದಂಬರಿ ತೆರೆದುಕೊಳ್ಳುವುದೇ ಪ್ರಾಟಗಾನಿಸ್ಟ್ ಪುರಂದರ ಮಾವಿನ ಹಣ್ಣು ಹೆಕ್ಕುವ ದೃಶ್ಯದಿಂದ. ಅಲ್ಲಿ ಪಕ್ಕದ ಮನೆಗೆ ಬಂದ ಹುಡುಗಿ ಸಿಗುತ್ತಾಳೆ. ಆಕೆಯೊಡನೆ ಏನೋ ಹೇಳಬೇಕೆಂದುಕೊಳ್ಳುತ್ತಾನೆ, ಹೇಳುವುದಿಲ್ಲ. ಅದು ಗೆಳೆತನವೇ, ಪ್ರೀತಿಯೇ, ಸಿಟ್ಟೇ, ಗೊತ್ತಾಗುವುದಿಲ್ಲ. ಕಾದಂಬರಿಯ ಕೊನೆಯಲ್ಲಿ ವಂಶವೃಕ್ಷವನ್ನು ಚಿತ್ರಿಸುವ ವ್ಯರ್ಥ ಪ್ರಯತ್ನವೊಂದಿದೆ. ಮಾವಿನ ಮರದಿಂದ ಶುರುವಾಗಿ ವಂಶವೃಕ್ಷದೊಂದಿಗೆ ಮುಗಿಯುವ ಅತಿಸಾಮಾನ್ಯ ಬದುಕಿನ ಚಿತ್ರಣದ ಕಾದಂಬರಿ ಇದು. ಹಾಗೆ ನೋಡಿದರೆ ಯಾರ ಬದುಕಿನಲ್ಲಾದರೂ ಬೇರೆ ಏನಿದೆ, ಮಾವಿನ ಹಣ್ಣು ತಿನ್ನುವ ಸುಖ ಬಿಟ್ಟು? ಎಲ್ಲರ ಬದುಕಿನ ಆರಂಭದ ಮತ್ತು ಕೊನೆಯ ಬಿಂದುಗಳನ್ನು ಜೋಡಿಸಿ ನೋಡಿದರೆ ಗೊತ್ತಾಗಬಹುದು- ಈ ಮಾವಿನ ಮರ ಮತ್ತು ವಂಶವೃಕ್ಷದ ಸಂಬಂಧ. ಹಾಗೇ ಮಾವಿನ ಮರದೊಂದಿಗೆ ಅಂಟಿಕೊಂಡ ಈ ಥರದ ನೆನಪುಗಳು.

= ಹರೀಶ್ ಕೇರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.