ಬೇಸಿಗೆಯ ನಡುಹಗಲು
ಬೇಸಿಗೆಯ ನಡುಹಗಲು. ಕಂದೀಲು ಹೊಗೆಗೆ ಕಪ್ಪಡರಿದ ನಡುಮನೆಯ ಮಾಳಿಗೆ ಬೆಳಕಿನಲ್ಲಿ ಮಂಕುಮಂಕಾಗಿ. ಎಲ್ಲೋ ಯಾರೋ ಒಳಮನೆಯಲ್ಲಿ ಸಣ್ಣಕೆ ಹಾಡಾಗಿದ್ದಾರೆ. ತೊಟ್ಟಿಲ ಒಳಗೊಂದು ಹಾಡು ಹಾಗೇ ನಿದ್ದೆಹೋಗಿದೆ. ಹಣೆಯಲ್ಲಿ ತೆಳ್ಳಗೆ ಬೆವರ ಸಾಲು.
ಪಾರಿಜಾತದ ತೊಟ್ಟುಗಳು ಸಂಜೆಗೆ ಕಾಯುತ್ತಿವೆ. ಚಿಗುರುಗಳು ಬಾಡಿದ ಮೌನ. ಗಾಳಿಯಲ್ಲಿ ತೇಲಿಬಂದ ಸಿಳ್ಳು ಕಾಜಾಣದ್ದಿರಬೇಕು. ದನಗಳು ಉಸ್ಸೋ ಎಂದು ನಿಂತುಕೊಂಡಿವೆ ಆಲದ ಕೆಳಗೆ ಮೆಲುಕಾಡಿಸುತ್ತ. ಬಾಲದ ಬಳಿ ಸುತ್ತಾಡುವ ಗುಂಗಾಡುಗಳಿಗೆ ರಪ್ಪ ಒಂದೇಟು. ಅಳಿಲು ತಿಂದೆಸೆದ ಹಣ್ಣಿನ ಸಿಪ್ಪೆ ಹುಲ್ಲಿನ ಮೇಲೆ ಸದ್ದಾಗದಂತೆ ಕೂತಿದೆ. ಹುಲ್ಲು ನೆಲವೊಡೆವ ಸದ್ದಂತು ಕೇಳಿಸದು. ನೀರೆರೆದವರಾರು ಈ ಹಿರಿಯ ಆಲಕ್ಕೆ, ಕಿರಿಯ ತೃಣಕ್ಕೆ. ನೆರಳು ತೊರೆವವರನ್ನೆ ಕಾಯುತ್ತಿದ್ದಾನೆ ಭಾನು ಕಾಯಿಸಲು. ನೆತ್ತಿ ಬಿರಿವ ಸುಸೂಕ್ಷ್ಮ ಸದ್ದು ಆಗೀಗ.
ನೀರು ನಿಂತ ತಾಣಗಳಲ್ಲಿ ಫಳ್ಳೆಂಬ ತುಂತುರು ಆಗೀಗ. ತಂಪಿಗಾಗಿ ಕೈಕಾಲು ಬಡಿವ ಜೀವಗಳು. ನೊಣಗಳ ದಂಡು ದಾಳಿಯಿಕ್ಕಿದೆ ಉಸಿರಾಡುವ ನೆಲೆಗಳಲ್ಲಿ. ಇರುವೆಗಳ ಮೆರವಣಿಗೆ ಹೊರಟಿದೆ ಮುಂದಿನ ನಾಕು ತಿಂಗಳ ಕೂಳು ತಂದು ಗೂಡಿನ ಕತ್ತಲಲ್ಲಿ ಬಚ್ಚಿಡಲು.
ಕಡಲು ತೀರದಿಂದಾಚೆಗೆ ಸರಿದಿವೆ. ಅವು ತೊರೆದ ಮರಳ ದಿಣ್ಣೆಗಳು ಬರಿಮೈಯಂತೆ ಕೆರಳಿಸಿವೆ, ಹೇವರಿಸಿವೆ. ಆಗಾಗ ದಡಕ್ಕೆ ಬಡಿದು ಸಂತವಿಡುತ್ತಿವೆ ಅಲೆಗಳು. ಬಂಡೆಗೆ ಬಡಿದ ಒಂದು ಹನಿ ನೂರು ಚಿಮ್ಮು. ಮೆತ್ತುವ ಮರಳು ಉಪ್ಪು, ಬೀಸುವ ಗಾಳಿ ಉಪ್ಪು, ಕರೆವ ನೀರೋ ಉಪ್ಪುಪ್ಪು. ಅಂಟುವ ಧಗೆ ಬೆವರು.
ಒಂಟಿ ತೆಂಗಿನ ಮರ, ಒಂಟಿ ಕೊಡೆ, ಒಂಟಿ ಮನೆ, ಒಂಟಿ ಉಸಿರು. ಗಾಳಿಯಲ್ಲಿ ತೇಲಿ ಬಂದ ಪರಿಮಳ ಕೇದಗೆ ಬನದ್ದೇ? ಅಲ್ಲಿಂದಿಲ್ಲಿಗೂ ಎಷ್ಟು ದೇಹಗಳ ಹೊಕ್ಕು ಹೊರಬಂದ ಗಾಳಿಗೆ ಇನ್ನು ಯಾವ ದಿಕ್ಕು. ಮೊದಲೆಲ್ಲಿ, ಕೊನೆಯೆಲ್ಲಿ ಎಂದು ತಿಳಿಯದ ಮೆರವಣಿಗೆ. ಎಲ್ಲವೂ ಹೀಗೆ ಹದವಾಗಿರಲು, ಎಲ್ಲ ಜೀವಗಳು ತಮ್ಮನ್ನೂ ಇತರರನ್ನೂ ತಂಪಾಗಿಡಲು ಹೆಣಗುತ್ತಿವೆ. ಮಾನವನೊಬ್ಬನೇ ಉರಿವಗ್ನಿಶಿಖೆಯಂತೆ ಬಿಸಿಲ ನೆತ್ತಿಯಲ್ಲಿ ಹೊತ್ತಿ ಕೆಂಡವಾಗಿದ್ದಾನೆ. ಕಂಗಳಿಗೆ ಮಂಪರು ಕವಿಸಿದೆ ಬಿಸಿಲು. ಹೊರಬಂದಿದೆ ನಿಗಿನಿಗಿ ಪಿಸ್ತೂಲು. ಕಡಲ ತೀರದಲ್ಲಿ ಬಿತ್ತು ಹೆಣ. ಕಾರಣ? ಇನ್ನೇನಿಲ್ಲ, ಬಿಸಿಲು ಅಷ್ಟೆ.ಹೀಗೇ ಒಂದು ನಡುಹಗಲು, ಬೇಸಿಗೆಯದು.
(ಅಲ್ಬರ್ಟ್ ಕಾಮುವಿನ 'ಔಟ್‌ಸೈಡರ್' ಕೃತಿಯ ಮುಖ್ಯಪಾತ್ರ, ಬಿಸಿಲಿನ ಬೇಗೆಗೆ ತುತ್ತಾಗಿ, ನಿರುದ್ದಿಶ್ಯವಾಗಿ ಇನ್ನೊಬ್ಬನ ಕೊಲೆ ಮಾಡುತ್ತಾನೆ. ಅದರ ನೆನಪಿನಲ್ಲಿ.)
= ಹರೀಶ್ ಕೇರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

