ಓಹ್! ಹೆನ್ರಿ

ಖಂಡಿತಾ ಅಮೆರಿಕ ಮಂದಿ ರೂಲ್ಸ್ ಫಾಲೋ ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ, ಇದ್ದಬದ್ದ ರೂಲ್ಸ್ ಎಲ್ಲವನ್ನೂ ಅರೆದು ಕುಡಿದಿರಬೇಕು ಅನ್ನೋದು ಇಲ್ಲಿನ ಕಾನೂನಿನ ಆಶಯ. ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯೋಕೆ ಹೋದಾಗ ಕಾರ್ ಡ್ರೈವ್ ಮಾಡೋದಕ್ಕಿಂತ ಅಮೆರಿಕ ಟ್ರಾಫಿಕ್‌ನ ಬಗ್ಗೆ ಹಾಗೂ ಇಲ್ಲಿನ ಲೇನ್ ಡಿಸಿಪ್ಲಿನ್ ಬಗ್ಗೆ ಎಷ್ಟು ತಿಳಿದಿರ್ತೀವಿ ಅನ್ನೋದನ್ನು ಅಳೆದು ತೂಗಿ ನೋಡ್ತಾರೆ. ನಂತರವೇ ಡ್ರೈವಿಂಗ್ ಲೈಸೆನ್ಸ್ ಕೊಡೋದು. ಅಮೆರಿಕದಂಥಮುಂದುವರಿದ ದೇಶದಲ್ಲಿ ಎಲ್ಲವೂ ಪ್ರೀಪ್ಲ್ಯಾನ್ಡ್. ಇಲ್ಲಿನ ಗಲ್ಲಿರಸ್ತೆಗಳು ಸಹ ನಮ್ಮೂರಿನ ಮುಖ್ಯರಸ್ತೆಗಳಂತಿರುತ್ತವೆ. ಯುಎಸ್‌ನ ಸಾಮಾನ್ಯ ಮುಖ್ಯರಸ್ತೆಯೊಂದು 7 ಲೇನ್ ಹೊಂದಿರುತ್ತೆ. (ಸಪ್ತಪಥ ರಸ್ತೆ ಅನ್ನಬಹುದೇನೋ!). ಹಾಗಾಗಿ ಯಾವ ಲೇನ್ ಯಾವಾಗ ಹೇಗೆ ಬದಲಿಸ್ತಾರೆ ಅನ್ನೋದನ್ನೇ ಲೈಸೆನ್ಸ್ ಕೊಡುವ ಮೋಟರ್ ವೆಹಿಕಲ್ ಡಿವಿಷನ್ (ಎಂವಿಡಿ, ನಮ್ಮಲ್ಲಿ ಅರ್‌ಟಿಒ ಇದ್ದಂತೆ) ಅಧಿಕಾರಿ ಪಕ್ಕದಲ್ಲೇ ಕುಳಿತು ಕಾರ್ ಬಿಡೋದನ್ನ ನೋಡ್ತಾ ಇರ್ತಾರೆ. ಇಲ್ಲೇ ಸಾಮಾನ್ಯವಾಗಿ ಎಲ್ಲರೂ ಎಡವೋದು. ಇವ್ರು ದಿಟ್ಟಿಸಿ ನೋಡ್ತಾ ಇದ್ರೆ ಡ್ರೈವ್ ಮಾಡೋ ಆತ್ಮವಿಶ್ವಾಸ ಕುಸಿಯೋದು ಗ್ಯಾರೆಂಟಿ. ಇಂಥವರಿಗೆ ಆತ್ಮವಿಶ್ವಾಸ ತುಂಬಿ ಯುದ್ಧಕ್ಕೆ ಸನ್ನದ್ಧ ಮಾಡುವ ದ್ರೋಣಾಚಾರ್ಯ ಈ ಹೆನ್ರಿ... ಹೆನ್ರಿ ವಿಲಿಯಮ್ಸ್.
ಡ್ರೈವಿಂಗ್ ಲೈಸೆನ್ಸ್‌ಗಾಗಿ ಇರೋ ಪರೀಕ್ಷೆಗಳಲ್ಲಿ ಪಾಸ್ ಆಗೋದು ತುಂಬಾ ಕಷ್ಟ. ಹ್ಯಾಗೋ ಭಾರತದಲ್ಲಿ ಕಾರ್‌ಡ್ರೈವ್ ಮಾಡಿದ್ದೀವಿ ಎಂದುಕೊಂಡ್ರೆ ಅಂಥವರಿಗೆ ಇನ್ನಷ್ಟು ಕಷ್ಟ. ಭಾರತದಲ್ಲಿ ಸೇಫ್ ಲೆಫ್ಟ್ ಡ್ರೈವ್, ಬಲಕ್ಕೆ ಸ್ಟೀರಿಂಗ್. ಅಮೆರಿಕದಲ್ಲಿ ಸೇಫ್ ರೈಟ್ ಡ್ರೈವ್, ಎಡಕ್ಕೆ ಸ್ಟೀರಿಂಗ್. ಇದು ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸುತ್ತೆ. ಅಮೆರಿಕನ್ನರು ಸೇರಿದಂತೆ ಬಹುತೇಕರು ಡ್ರೈವಿಂಗ್ ಕ್ಲಾಸ್‌ಗೆ ಹೋಗೋಕೆ ಇಷ್ಟಪಡ್ತಾರೆ. ಇದರಿಂದಾಗಿ ಕಾರ್ ಚಾಲನೆಗೆ ಬೇಕಾದ ಅಗತ್ಯ ಪಟ್ಟುಗಳು ಸುಲಭವಾಗಿ ತಿಳಿದುಕೊಳ್ಳಬಹುದು. ಇಂಥವರಿಗೆ ಸಿಗೋರೇ ಈ ಹೆನ್ರಿ ಥರದ ಡ್ರೈವಿಂಗ್ ಟೀಚರ್‌ಗಳು.
ಫೋನ್ ಮಾಡಿ ಅಪಾಯಿಂಟ್ ಫಿಕ್ಸ್ ಮಾಡಿಕೊಂಡ ಮೇಲೆ, '2 ಗಂಟೆಗಳ ಡ್ರೈವಿಂಗ್ ಕ್ಲಾಸ್ ಮತ್ತು ಮರುದಿನ ಲೈಸನ್ಸ್ ಪಡೆಯೋಕ್ಕೆ ಎಂವಿಡಿಗೆ ಕರೆದುಕೊಂಡು ಹೋಗೋದು ಸೇರಿದಂತೆ ಕಾರ್ ಡ್ರೈವಿಂಗ್ ಸ್ಕಿಲ್ಸ್ ಹೇಳಿಕೊಡೋಕೆ 150 ಡಾಲರ್ ಆಗುತ್ತೆ' ಎಂದು ಒಂದೇ ಉಸಿರಿನಲ್ಲಿ ಅಮೆರಿಕನ್ ಇಂಗ್ಲಿಷ್‌ನಲ್ಲಿ ಮಾತು ಮುಗಿಸಿರ್ತಾನೆ ಹೆನ್ರಿ. ಮರುದಿನ ಸಂಜೆ 5ರಿಂದ 7ಕ್ಕೆ ಸಮಯ ನಿಗದಿಯಾಗಿತ್ತು. ಸಂಜೆ 4.50 ಆದ್ರೂ ಪತ್ತೆ ಇಲ್ಲ. ಮನೆ ಬಾಗಿಲು ತೆರೆದು ಹೊರಬಂದರೆ ಮೆಟ್ಟಿಲುಗಳ ಮೇಲೆ ಕೂತಿದ್ದ ಈ ಮಹಾಶಯ. ನನ್ನನ್ನು ನೋಡ್ತಾ ಇದ್ದಂತೆ 'ಹೇ, ಐ ಗೆಸ್ ಯು ಆರ್ ಏನೇಲ್ ರೈಟ್' ಎಂದು ಶೇಕ್ ಹ್ಯಾಂಡ್ ಕೊಡುವ ಮೂಲಕ ಪರಿಚಯವಾದ ಹೆನ್ರಿ ವಿಲಿಯಮ್ಸ್. ಇಬ್ಬರು ಕಾರು ಹತ್ತಿದ್ದಾಯ್ತು. 'ನಾನು 2008ರಿಂದ ಈ ವೃತ್ತಿ ಆರಂಭಿಸಿದೆ. ಎಲ್ಲದಕ್ಕೂ ಮೊದಲು ನಿಮ್ಮ ದೇಶವನ್ನು ಮೊದಲು ನೆನಪು ಮಾಡಿಕೋ. ಅದನ್ನೇ ಇಲ್ಲಿ ಉದಾಹರಣೆಯಾಗಿ ನಾವು ಬಳಸಿಕೊಳ್ಳೋಣ. ಲೆಫ್ಟ್ ಈಸ್ ಪಾಕಿಸ್ತಾನ್, ರೈಟ್ ಈಸ್ ಬಾಂಗ್ಲಾದೇಶ್, ಆ್ಯಂಡ್ ಬಿ ಇನ್ ಮಿಡಲ್ ಇಟ್ಸ್ ಸೇಫ್ ಇನ್ ಇಂಡಿಯಾ ಇಂಡಿಯಾ' ಎಂದು ಮಾತು ಆರಂಭಿಸುವ ಹೆನ್ರಿ, ಹೆಂಡತಿಯನ್ನು ಬಿಟ್ಟಿದ್ದು, ಗರ್ಲ್‌ಫ್ರೆಂಡ್ ಜೊತೆ ಡೇಟಿಂಗ್ ಹೋದಾಗ ನಡೆದಿದ್ದು, ಎಲ್ಲವನ್ನು ಹೇಳುವಷ್ಟು ಆತ್ಮೀಯನಾಗುತ್ತಾನೆ 2 ಗಂಟೆಗಳಲ್ಲಿ. ಇದುವರೆಗೂ ಭಾರತದಿಂದ ಯುಎಸ್‌ನ ಅರಿಝೋನಾ ರಾಜ್ಯಕ್ಕೆ ಬಂದ ಬಹುತೇಕ ಭಾರತೀಯರು ಡ್ರೈವಿಂಗ್ ಕಲಿಯೋಕೆ ಈತನ ಮೊರೆ ಹೋಗ್ತಾರೆ. ಅಂಥ ಸೆಳೆತವಿದೆ ಈತನ ಮಾತಿನ ಧಾಟಿಯಲ್ಲಿ. ಪಟಪಟಾಂತ ಮಾತು ಶುರು ಮಾಡೋ ಹೆನ್ರಿ ಒಮ್ಮೆಲೆ ಮಾತು ನಿಲ್ಲಿಸಿ, 'ಯು ನೋ ಇಂಗ್ಲೀಷ್?' ಎಂದು ಗಾಬರಿಯಾದವನಂತೆ ಕೇಳ್ತಾನೆ. ತಾನು ಇದುವರೆಗೂ ಮಾತನಾಡಿದ್ದು ವ್ಯರ್ಥ ಆಗಬಾರದು ಅನ್ನೋ ಸ್ವಂತ ಕಳಕಳಿ.
ನೂರಾರು ಡಾಲರ್ ಕೊಟ್ಟು ಕಲಿಯೋಕೆ ಬಂದ್ರೆ ಈತನದ್ದು ಬರೀ ಮಾತೇ ಆಯ್ತು ಅಂದುಕೊಳ್ಳೋದ್ರಲ್ಲಿ, ಈಗ ನೋಡಿ, ಹೀಗೆ ಬ್ರೇಕ್ ಹಾಕಿದ್ರಲ್ಲ ಅದು ಇಂಡಿಯನ್ಸ್ ಸ್ಟೈಲ್. ಅಲ್ಲಿಗೆ ಓಕೆ. ಆದ್ರೆ ಇಲ್ಲಿ ಕಷ್ಟ ಆಗುತ್ತೆ. ನಿಮ್ಮ ಮುಂದಿರುವ ಕಾರು ಅಲ್‌ಖೈದಾ ಅಂದುಕೊಳ್ಳಿ. ಯಾಕ್ರಿ ಬೇಕು ಅವರ ಸಹವಾಸ. ಅವ್ರನ್ನ ಪೊಲೀಸರು ನೋಡ್ಕೋತಾರೆ.
ನಿಮಗ್ಯಾಕೆ ಅವನನ್ನ ಹಿಡಿಯೋ ಆಸೆ ಎಂದು ಉದಾಹರಣೆ ಸೇರಿಸಿ ಮತ್ತೆ ಮಾತು ಮುಂದುವರಿಸ್ತಾನೆ. ಎಲ್ಲ ದೇಶಗಳ ಬಗ್ಗೆ ತಿಳಿದಿರೋ ಹೆನ್ರಿಗೆ ಆಯಾ ದೇಶದವರು ಅಮೆರಿಕ ಬಂದಾಗ ಅವರೊಂದಿಗೆ ಅದೇ ಧಾಟಿಯಲ್ಲಿ ಮಾತನಾಡಿ ಮನ ಗೆಲ್ಲುತ್ತಾನೆ. ಮೂರು ಲೇನ್ ಇರೋ ಮುಖ್ಯ ರಸ್ತೆಯಲ್ಲಿ ಆಯಾ ದೇಶದ ಅಕ್ಕಪಕ್ಕದ ದೇಶಗಳನ್ನು ಉದಾಹರಸಿ ಮತ್ತಷ್ಟು ಬೆರಗುಗೊಳಿಸ್ತಾನೆ.
ಒಮ್ಮೆ ಹೆನ್ರಿಗೆ ಸಿಕ್ಕ ವಿದ್ಯಾರ್ಥಿ ತಾನು ಕಾರ್ ಡ್ರೈವಿಂಗ್ ಸಂಪೂರ್ಣ ಕಲಿಯೋವರೆಗೂ ಕೆಳಗೆ ಇಳಿಯೋದಿಲ್ಲ ಎಂದು ಶಪಥ ಮಾಡಿದ್ದನಂತೆ. ಆಗ ಸತತ 36 ಗಂಟೆ ಅವನ ಜೊತೆಗೇ ಇದ್ದು ಡ್ರೈವಿಂಗ್ ಹೇಳಿಕೊಟ್ಟಿದ್ದ ಹೆನ್ರಿ! ಅದೇ ವಿದ್ಯಾರ್ಥಿ ಡ್ರೈವರ್ ಲೈಸೆನ್ಸ್ ಪಡೆದು ಕಚೇರಿಯಿಂದ ಹೊರಬಂದು, ದೂರದಲ್ಲಿ ನಿಂತಿದ್ದ ಹೆನ್ರಿಗೆ ಥಮ್ಸ್ ಅಪ್ ಮಾಡಿದಾಗ ಅಲ್ಲಿ ಹೆನ್ರಿ, ಇಲ್ಲಿ ವಿದ್ಯಾರ್ಥಿ ಇಬ್ಬರೂ ಆನಂದದಲ್ಲಿ ಕಣ್ಣೀರು ಹಾಕಿದ್ದನ್ನು ಹೆನ್ರಿ ಹೇಳುವಾಗ ಈಗಲೂ ಆತನ ಕಣ್ಣು ತೇವವಾಗುತ್ತೆ.
...ಇದುವರೆಗೂ ನಾನು ಅಂದಾಜು 400 ಭಾರತೀಯರಿಗೆ ಡ್ರೈವಿಂಗ್ ಹೇಳಿಕೊಟ್ಟಿದ್ದೀನಿ ಇಲ್ಲಿ ಎನ್ನುವ ಹೆನ್ರಿ, ಭಾರತೀಯ ಗಂಡಸರು ಮೊದಲು ತುಂಬಾ ಗಂಭೀರವಾಗಿದ್ದು ನಂತರ ಮಾತು ಶುರುಮಾಡ್ತಾರೆ. ಆದರೆ ಭಾರತೀಯ ಹೆಣ್ಣುಮಕ್ಕಳು ಕಾರ್ ಡ್ರೈವಿಂಗ್ ಮಾಡುವಾಗ ಅಪ್ಪಿತಪ್ಪಿ ಕಣ್ಣುಗುಡ್ಡೆ ಬಲಕ್ಕೆ ತಿರುಗಿಸೋದಿಲ್ಲ ಎಂದು ವ್ಯಾಖ್ಯಾನಿಸುತ್ತಾನೆ. ಅಂದಹಾಗೆ ಮಹಿಳೆಯರು ಅದ್ಯಾಕೆ ಗಾಬರಿಯಾದಾಗ ಬ್ರೇಕ್ ಹಾಕೋಕೆ ಬದಲಿಗೆ ಗ್ಯಾಸ್ ರಿಲೀಸ್ ಮಾಡ್ತಾರೆ (ಎಕ್ಸಲರೇಟರ್ ತುಳಿಯೋದಕ್ಕೆ ಅಮೆರಿಕದಲ್ಲಿ ಗ್ಯಾಸ್ ರಿಲೀಸ್ ಎನ್ನುತ್ತಾರೆ. ಇಲ್ಲಿ ಪೆಟ್ರೋಲ್‌ಗೆ ಗ್ಯಾಸ್ ಎನ್ನುತ್ತಾರೆ) ಅನ್ನೋದನ್ನ ಇನ್ನೂ ಸಂಶೋಧನೆ ಮಾಡ್ತಾಯಿದ್ರೂ ಉತ್ರ ಸಿಕ್ಕಿಲ್ಲ ಈತನಿಗೆ. ಆದರೆ ಚೌಕಾಸಿ ವ್ಯಾಪಾರ ಹೆನ್ರಿಗೆ ಆಗಿಬರೋದೇ ಇಲ್ಲ. ಅಲ್ಲಾ ಸ್ವಾಮಿ, ನೀವು ನನಗೆ ಕೊಡೋದು 150 ಡಾಲರ್. ಆದರೆ ನಿಮ್ಮ ಕಾರು 23 ಸಾವಿರ ಡಾಲರ್, ನಿಮ್ಮ ಕುಟುಂಬ- ಅದಕ್ಕೆ ಬೆಲೆ ಕಟ್ಟೋಕೆ ಆಗಲ್ಲ ಬಿಡಿ. ಹಾಗಿರುವಾಗ ನಿಮ್ಮ ಜೀವಮಾನ ಇಡೀ ನಾನು ಹೇಳಿಕೊಟ್ಟ ಡ್ರೈವಿಂಗ್‌ನಿಂದ ಅಮೆರಿಕದಲ್ಲಿ ತಿರುಗ್ತೀರ. ನನಗ್ಯಾಕೆ 10 ಡಾಲರ್ ಕಡಿಮೆ ಮಾಡಿಕೊಳ್ಳಿ ಅಂತೀರ ಅನ್ನೋದು ಈತನ ವಾದ. ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ಕಾರ್ ಡ್ರೈವಿಂಗ್ ಕಲಿಯುವಾಗ ಆತನ ಬಗ್ಗೆ ತುಂಬಾ ಕೊಚ್ಚಿಕೊಂಡಿದ್ದನಂತೆ. ವರ್ಷಕ್ಕೆ 120 ಸಾವಿರ ಡಾಲರ್ ಸಂಪಾದಿಸುತ್ತೇನೆ ಎಂದು ಹೇಳಿಕೊಂಡು ಕೊನೆಗೆ ಈತನ ಫೀಸ್ ನೀಡುವಾಗ ಸಿಕ್ಕಾಪಟ್ಟೆ ಚೌಕಾಸಿ ಮಾಡಿದ್ದನಂತೆ. ಅದಕ್ಕೆ ಹೆನ್ರಿ ಮಾಡಿದ್ದೇನು ಗೊತ್ತಾ? ಆತನ ಹೆಂಡತಿಗೆ ಈತನ ಸಂಬಳದ ಬಗ್ಗೆ ಹೇಳಿದ ಅಷ್ಟೇ. ಈಪಾಟಿ ಸಂಬಳ ಬರೋದನ್ನ ಕಟ್ಟಿಕೊಂಡಿರೋ ಹೆಂಡತಿಗೆ ಹೇಳದೇ ಯಾರೋ ಮೂರನೇ ವ್ಯಕ್ತಿಗೆ ಹೇಳಿದ್ದನ್ನ ಸಿಕ್ಕಾಪಟ್ಟೆ ಖಂಡಿಸಿ ಗಂಡನನ್ನು ಬಾಯಿಗೆ ಬಂದಂತೆ ಬೈದಿದ್ದಳಂತೆ. ಹೀಗೂ ತಂದಿಡೋದ್ರಲ್ಲಿ ಈತ ನಿಸ್ಸೀಮ.
ಇಷ್ಟೆಲ್ಲ ಮಾತಾಡ್ತೀರಾ, ಹಿಂದಿ ಕಲಿತ್ರೆ ಚೆನ್ನಾಗಿರುತ್ತಲ್ವಾ ಅಂತ ಬಾಂಬೆ ಹುಡುಗಿಯೊಬ್ಬಳು ಒಮ್ಮೆ ಹೆನ್ರಿಗೆ ಸಲಹೆ ಕೊಟ್ಟಳು. ಇದೊಳ್ಳೆ ಕತೆ ಆಯ್ತು. ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ಜರ್ಮನ್ ಭಾಷೆ ಬರೋ ನನಗೆ ನಿಮ್ಮ ಹಿಂದಿ ಯಾಕೆ ಬೇಕು. ಮೂರು ರುಪಾಯಿ ಪ್ಲೇಟ್ ಪಕೋಡ ತಿಂದು ಇಂಡಿಯಾ ಬಗ್ಗೆ ತಿಳಿಕೋಬೇಕು ಅನಿಸಿದಾಗ ಹಿಂದಿ ಕಲೀತೀನಿ ಎಂದು ಹೇಳಿ ಹುಬ್ಬೇರುವಂತೆ ಮಾಡ್ತಾನೆ. ಹೀಗೆ ಒಬ್ಬ ಡ್ರೈವಿಂಗ್ ವಿದ್ಯಾರ್ಥಿಯೊಂದಿಗೆ ಕಾರು ಚಲಾಯಿಸುವುದನ್ನು ಕಲಿಸುತ್ತಾ 500 ಮೈಲಿ ದೂರದ ಮೆಕ್ಸಿಕೋ ಗಡಿ ತಲುಪಿದ್ದ ಹೆನ್ರಿ. ಮನೆಯಿಂದ ಕರೆ ಮಾಡಿದ ಮಡದಿ ಹೀಗೆ ಸುತ್ತಾಡೋದಿದ್ರೆ ಅಲ್ಲೇ ಇರು ಎಂದು ಬೈದಿದ್ದಳು. ಸರಿ ಹಾಗೇ ಮಾಡ್ತೀನಿ ಎಂದು ವಾಪಸ್ ಬಂದವನೇ ಹೆಂಡತಿಗೆ ಡೈವೋರ್ಸ್ ಕೊಟ್ಟ! ಆದರೆ ಅಮೆರಿಕ ಅಲ್ವೇ. ವಿದ್ಯಾರ್ಥಿಯಾಗಿ ಬಂದ ಹುಡುಗಿಯೊಬ್ಬಳು ಇದೀಗ ಹೆನ್ರಿ ಗೆಳತಿಯಾಗಿದ್ದಾಳೆ. ಸ್ವಭಾವತಃ ಆಕೆ ಗಾಬರಿಯಂತೆ. ಫ್ರೀವೇ(ಹೈವೇ)ನಲ್ಲಿ ದೂರ ಹೋಗೋಣ, ಗ್ಯಾಸ್- ಹೋಟೆಲ್ ಖರ್ಚು ನಂದೇ ಎಂದು ಹೆನ್ರಿ ಅಫರ್ ಮಾಡಿದ್ದಕ್ಕೆ '2 ರೂಮ್ ಬುಕ್ ಮಾಡಿದ್ರೆ ಮಾತ್ರ ಬರ್ತೀನಿ' ಎಂದು ನಿರಾಸೆ ಮಾಡಿದ್ಲು ಎಂದು ಬೇಸರದಲ್ಲೇ ಹೇಳೋವಾಗ ಹೆನ್ರಿ ಮುಖ ನೋಡಬೇಕು. 2 ಫೆರಾರಿ, 1 ಪೋಷರ್, 1 ಬಿಎಂಡಬ್ಲ್ಯು ಹಾಗೂ 2 ಬೈಕ್ ಇಟ್ಟಿರೋ ಹೆನ್ರಿ, ದೂರದಿಂದ ಹೊಂಡಾ ಕಾರ್ ಕಂಡ್ರೆ ಅಲ್ನೋಡಿ ನಿಮ್ಮ ಇಂಡಿಯನ್ ಬಂದ ಎನ್ನುತ್ತಾನೆ. ಯಾಕೆ ಅಂದ್ರೆ ನೀವು ಹೊಂಡಾ ಕೊಳ್ಳೋದೇ ರೀಸೇಲ್ ವ್ಯಾಲ್ಯೂ ನೋಡಿ. ಇರೋವಾಗ ಎಂಜಾಯ್ ಮಾಡೋದು ಬಿಟ್ಟು ಮಾರುವುದನ್ನು ಯೋಚಿಸಿ ಈಗ ಕಾರ್ ಕೊಳ್ತೀರ ಎಂದು ಹೇಳ್ತಾ ಇದ್ದಾಗ ಅದೇ ಕಾರ್‌ನಿಂದ ಒಬ್ಬ ಭಾರತೀಯ ಇಳಿದು ಗ್ಯಾಸ್ ಫಿಲ್ ಮಾಡಿಕೊಳ್ತಾ ಇದ್ದ.
ಕೊನೆಯದಾಗಿ ಹೇಳಬೇಕಾದ್ದು- ನನ್ನ ಜೊತೆ ಎಂವಿಡಿಗೆ ಬಂದಿದ್ದ ಹೆನ್ರಿ ದೂರದಲ್ಲಿ ನಿಂತಿದ್ದ. ನಾನು ಕಚೇರಿ ಒಳಗೆ ಹೋಗಿ ಬರೋದ್ರಲ್ಲಿ ಇಬ್ಬರು ಹೊಸ ಡ್ರೈವಿಂಗ್ ವಿದ್ಯಾರ್ಥಿಗಳನ್ನ ಬುಕ್ ಮಾಡಿಕೊಂಡಿದ್ದ. ಹೇಗೆ ಅಂತೀರಾ. ಲೈಸೆನ್ಸ್‌ಗಾಗಿ ಪಾಸ್ ಆದವರು ಕಾರ್ ಪಾರ್ಕ್ ಮಾಡಿ ಮತ್ತೆ ಕಚೇರಿಯೊಳಗೆ ಹೋಗ್ತಾರೆ. ಫೇಲ್ ಆದವರು, ಆಫೀಸರ್ ಆ ಕಾರು ಇಳಿದ ನಂತರ ಹಾಗೇ ಹೊರ ಬಂದುಬಿಡ್ತಾರೆ. ಇದನ್ನೇ ಗಮನಿಸುವ ಹೆನ್ರಿ ಅವರಿಗೆ ಗಾಳ ಹಾಕ್ತಾನೆ.
ಈತನನ್ನು ಹಿಡಿಯೋದು ಹೇಗೆ ಎಂದರೆ, ಫೇಸ್‌ಬುಕ್ ಲೈಕ್‌ಗಳು ನನಗೆ ಹೊಟ್ಟೆ ತುಂಬಿಸಲ್ಲ. ಆ್ಯಡ್‌ಗಳನ್ನು ಕೊಡುವಷ್ಟು ಬಂಡವಾಳ ನನ್ನಲ್ಲಿಲ್ಲ. ನನ್ನ ವಿಸಿಟಿಂಗ್ ಕಾರ್ಡ್‌ಗಳು ನನಗೆ ಬೀಜಗಳಿದ್ದಂತೆ. ಅಲ್ಲಲ್ಲಿ ಚೆಲ್ಲಿದಾಗ ಒಂದಲ್ಲ ಒಂದು ದಿನ ಅದು ಮೊಳಕೆ ಒಡೆಯುತ್ತೆ. ಸುಮಾರು ತಿಂಗಳ ನಂತರ ಕರೆ ಮಾಡಿ ನಿಮ್ಮ ಬಗ್ಗೆ ತಿಳೀತು, ನನ್ನ ಮಗ ಈಗ 16 ವರ್ಷಕ್ಕೆ ಬಂದಿದ್ದಾನೆ ಅವನಿಗೆ ಡ್ರೈವಿಂಗ್ ಕಲಿಸಬೇಕಿತ್ತು ಎಂದು ಆ ಕಡೆಯಿಂದ ಕರೆ ಬರುತ್ತೆ. ಮಿಕ್ಕಂತೆ ನಿಮ್ಮಂಥ ಗೆಳೆಯರು ನನಗೆ ಸಹಾಯ ಮಾಡ್ತಾರೆ... ಎಷ್ಟು ಸಿಂಪಲ್ ಅಲ್ವಾ ಎನ್ನುತ್ತಾನೆ ಹೆನ್ರಿ.
48ರ ಹರೆಯದ ಹೆನ್ರಿ ಮನೆಯಲ್ಲಿ ಯಾರ್ಯಾರಿದ್ದಾರೆ? ಆತನ ಮಕ್ಕಳ ಕತೆ ಏನು ಎಂದು ಕೇಳಿದಾಗ ಸಿಕ್ಕ ಉತ್ತರ ಹೀಗಿತ್ತು.
'...ಗೆಳೆಯರು ಬೇಕಾದಷ್ಟಿದ್ದಾರೆ. ಅವ್ರನ್ನು ಬಿಟ್ಟು ನನ್ನವರು ಅಂಥ ಇಬ್ಬರಿದ್ದಾರೆ. 2 ಪುಟಾಣಿ ಬೆಕ್ಕುಗಳು. ಅವು ನಾನು ಮನೆಗೆ ಹೋಗುವುದನ್ನೇ ಕಾಯ್ತಾ ಇರುತ್ವೆ. ಎಲ್ರೂ ಒಟ್ಟಿಗೆ ಸೇರಿ ರಾತ್ರಿ ಊಟ ಮಾಡಿ ಮಲಗ್ತೀವಿ'.
ಅನಿಲ್ ಭಾರದ್ವಾಜ್
reporteranil@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


