ಖುಷಿ

ಅರೆನಗ್ನ ಜೂಲಿಗೆ ಅರ! ಲಗ್ನ

ಅರೆನಗ್ನ ಜೂಲಿಗೆ ಅರ! ಲಗ್ನ
Published On :

ಹಾಲಿವುಡ್‌ನ ಮದನಾರಿ ಏಂಜಲಿನಾ ಜೂಲಿ, ತಾನು ಮದುವೆ ಆಗುವುದಾಗಿ ಘೋಷಿಸಿದ್ದಾಳೆ. ಹಲವಾರು ವರ್ಷಗಳಿಂದ ನಟ ಬ್ರಾಡ್ ಪಿಟ್ ಜೊತೆ ಆಕೆ ಲಿವಿಂಗ್ ಟುಗೆದರ್ ಜೀವನ ನಡೆಸುತ್ತಿದ್ದಳಲ್ಲಾ.... ಅದೇ ಬ್ರಾಡ್ ಪಿಟ್ ಜೊತೆ ಆಕೆ ಈಗ ಮದುವೆ ಆಗೋದಾಗಿ ತಿಳಿಸಿದ್ದಾಳೆ. ಆದರೆ, ಅದಕ್ಕಿಂತಲೂ  ಇಂಟರೆಸ್ಟಿಂಗ್ ವಿಷಯ ಮತ್ತೊಂದಿದೆ. ಅದೇನೆಂದರೆ, ಈಕೆಯ ಮದುವೆಯ ತಯಾರಿ, ಉಸ್ತುವಾರಿಯನ್ನು ಸ್ವತಃ ಏಂಜಲೀನಾಳ ಮಕ್ಕಳೇ ನೋಡಿಕೊಳ್ತಿರೋದು!
ನಿಮಗೆ ಗೊತ್ತಿತ್ತೋ, ಇಲ್ವೋ... ಆಕೆಗೆ ಬರೋಬ್ಬರಿ ಆರು ಮಕ್ಕಳಿದ್ದಾರೆ. ಎಲ್ಲವೂ ಸುಮಾರು 6ರಿಂದ 12 ವರ್ಷನೊಳಗಿನವರು. ಇದೀಗ, ಇದೇ ಮಕ್ಕಳೇ ಅವರ ತಾಯಿಯ ಮದುವೆಗೆ ತಯಾರಿ ನಡೆಸುತ್ತಿದ್ದಾರಂತೆ. ಹಾಗಂತ, ಜೂಲಿಯೇ ಹೇಳಿಕೊಂಡಿದ್ದಾಳೆ. ಆಕೆ ಮದುವೆಯಾಗಬೇಕು ಅಂತ ಡಿಸೈಡ್ ಮಾಡಿದ್ದೂ ಆಕೆಯ ಮಕ್ಕಳೇ ಅಂತೆ!
ಇದಪ್ಪಾ ವಿಷ್ಯ. ಸುಖಮಯವಾದ ದಾಂಪತ್ಯ ನಡೆಸಿ, ಆರು ಮಕ್ಕಳನ್ನು ಹೆತ್ತಿರುವ ಈ ವಯ್ಯಾರಿ, ಈಗ... 38ರ ಪ್ರಾಯದಲ್ಲಿ ಮದುವೆ ಆಗ್ತೀನಿ ಅಂತ ಹೊರಟಿದ್ದಾಳೆ. ಆದೂ, ಆಕೆಯ ಮಕ್ಕಳ ಆಣತಿ ಮೇರೆಗೆ...!
ಇದ್ದಕ್ಕಿದ್ದಂತೆ ಏಕೀ ಮದುವೆ ವಿಚಾರ ಬಂತು ಅಂತಲೂ ಕೆಲವು ಹಾಲಿವುಡ್ ಪಂಡಿತರು ಭೂತಗನ್ನಡಿ ಹಿಡಿದುಕೊಂಡು ಹುಡುಕಾಡಿ ಕಾರಣ ಕಂಡುಕೊಂಡಿದ್ದಾರೆ. ಇತ್ತೀಚೆಗಷ್ಟೇ, ಜೂಲಿ ಯಾವುದೋ ಒಂದು ಮುಂಜಾಗ್ರತಾ ಕ್ರಮದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬ್ರೆಸ್ಟ್ ಕ್ಯಾನ್ಸರ್‌ನಿಂದ ಪಾರಾಗಿದ್ದಾಳಂತೆ. ಹೀಗೆ, ಆಪರೇಷನ್‌ನಿಂದ ಕೊಂಚ ಸುಸ್ತಾಗಿದ್ದ ತಮ್ಮ ತಾಯಿಯನ್ನು ಸಂತೋಷಪಡಿಸಲು ಮಕ್ಕಳು ಮದುವೆ ಇಟ್ಟುಕೊಂಡಿದ್ದಾರೆ ಎಂದು ಪಂಡಿತರು ಮದುವೆ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ. ಇದು ಎಷ್ಟು ನಿಜವೋ, ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ, ಜೂಲಿ ಮದುವೆ ಸುದ್ದಿ ಬಿದ್ದ ಕಿವಿಗಳಂತೂ ನೆಟ್ಟಗಾಗಿವೆ.
ಅಂದಹಾಗೆ, ಮದುವೆ ಎಲ್ಲಿ ನಡೆಯುತ್ತೆ... ಹೇಗಿರುತ್ತೆ ಅನ್ನೋ ಪ್ರಶ್ನೆಗೂ ಆಕೆಯೇ ಉತ್ತರವಿತ್ತಿದ್ದಾಳೆ. ಆಕೆಯ ಮದುವೆ ಅಮೆರಿಕದ ಖ್ಯಾತ ಪ್ರವಾಸಿತಾಣವಾದ ಡಿಸ್ನಿಲ್ಯಾಂಡ್‌ನಲ್ಲಿ ನಡೆಯುತ್ತದಂತೆ! ಆಕೆಯ ಮಕ್ಕಳು ಅದರಲ್ಲೇ ತಮ್ಮ ಅಪ್ಪ-ಅಮ್ಮಳನ್ನು ವಿವಾಹಬಂಧನಕ್ಕೊಳಗಾಗಿಸಲು ನಿಶ್ಚಯಿಸಿದ್ದಾರೆ. ಅದಕ್ಕಾಗಿ ಪ್ರಯತ್ನಗಳು ನಡೆದಿವೆ.
ಆದರೆ, ಆಕೆಯ ಮದುವೆ ಅದ್ಧೂರಿಯಾಗಷ್ಟೇ ಅಲ್ಲ, ಹೆಚ್ಚು ಭದ್ರತೆಯಿಂದಲೂ ಕೂಡಿರುತ್ತದೆ ಎನ್ನಲಾಗುತ್ತಿದೆ. ಯಾಕಂದ್ರೆ, ಹೇಳಿಕೇಳಿ ಒಂದಾನೊಂದು ಕಾಲದಲ್ಲಿ, ಪಡ್ಡೆ ಹೈಕಳಿಗೆ ಹುಚ್ಚು ಹಿಡಿಸಿದ್ದವಳು. ಇದೀಗ, ಈಕೆಯ ಮದುವೆ ಅಂದ್ರೆ ಸುಮ್ನೇನಾ..? ಅದೆಷ್ಟು ಜನರ ನೂಕುನುಗ್ಗಲು ನೋಡಬೇಕಾಗುತ್ತೋ ಎಂದು ಆಕೆಗೆ ಭಯವಂತೆ. ಹಾಗಾಗಿಯೇ, ತನ್ನ ಮದುವೆಗೆ ಭಾರಿ ಸೆಕ್ಯೂರಿಟಿ ಅರೇಂಜ್ ಮಾಡಿಕೊಂಡಿದ್ದಾಳೆ. ಕೇವಲ ಸೆಕ್ಯೂರಿಟಿಗಾಗಿಯೇ ಆಕೆ ಸುಮಾರು ಕೋಟಿ ಖರ್ಚು ಮಾಡಲಿದ್ದಾಳೆ ಎನ್ನುತ್ತಿವೆ ಕೆಲ ಮೂಲಗಳು. ಈ ಸುದ್ದಿ ಕೇಳಿ ಇಡೀ ಹಾಲಿವುಡ್ಡಿಗೆ ಹಾಲಿವುಡ್ಡೇ ಹುಬ್ಬೇರಿಸಿದೆ. ಏಕೆಂದರೆ, ಸೆಕ್ಯೂರಿಟಿಗಾಗಿಯೇ ಜೂಲಿ ಇಷ್ಟು ಖರ್ಚು ಮಾಡಿದ್ದೇ ಆದರೆ, ಅದು ವಿಶ್ವ ಸಿನಿಮಾ ಹಿಸ್ಟರಿಯಲ್ಲಿ ಭಾರಿ ಬಿಗಿ ಭದ್ರತೆಯಲ್ಲಿ ನಡೆದ ನಟ-ನಟಿಯರ ಮದುವೆ ಎಂದೇ ದಾಖಲೆ ಮಾಡುತ್ತದೆ ಎಂಬುದು ಹಲವರ ಅಂಬೋಣ. ಅಮೆರಿಕ ಮಾಧ್ಯಮಗಳು ಈ ಸುದ್ದಿಗೆ ಸಾಕಷ್ಟು ಒಗ್ಗರಣೆ ಹಾಕಿ ಬಿತ್ತರಿಸಿವೆ. ಅಷ್ಟರ ಮಟ್ಟಿಗೆ ಜೂಲಿ, ತನ್ನ ಮದುವೆಯ ಕ್ರೇಜ್ ಹುಟ್ಟಿಸಿದ್ದಾಳೆ.
ಇಷ್ಟೆಲ್ಲ ಹೇಳಿರುವ ಆ ಚಕೋರಿ, ತನ್ನ ಮದುವೆಯ ದಿನಾಂಕವನ್ನು ಇನ್ನೂ ಬಹಿರಂಗಗೊಳಿಸಿಲ್ಲ. ಏಕೆಂದರೆ, ಅದನ್ನು ಆಕೆಯ ಮಕ್ಕಳು ಇನ್ನೂ ಡಿಸೈಡ್ ಮಾಡಿಲ್ವಂತೆ!

ಚೇತನ್ ಒ.ಆರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.