ವೈಶಾಖದ ಪದಗಳು

ಈ ಮಧ್ಯ ಒಂದು ಪದ್ಯ
ಚೈತ್ರದ ಚಿಗುರು ಚಿತ್ತ ಅತ್ತಿಯ ಹಣ್ಣು
ಚೊಗಚಿ ನಗೆಯ ಹೂ ಬಿದಿಗೆ ಚಂದ್ರ
ಚೌತಿಗೆ ಬರೆದ ಚಂದ್ರಮಂಡಲ ತಾರಾನಿವಹ
ಲಕ್ಷನಕ್ಷತ್ರಕ್ಕೆ ಮರಳ ರಾಶಿಯ ಲೆಕ್ಕ
ಕೂಡಿ ಕಳೆದೆವು ಅಕ್ಕಪಕ್ಕ.
ಮತ್ತೆ ಪುಷ್ಪಕ ವಿಮಾನ ರಾಮನ ಮಾನ
ರಾವಣ ದಹನ ಸಮುದ್ರ ಮಥನ
ವಾಸುಕಿಯ ಗಂಟಲಿಂದ ಗರಳಾಗ್ನಿ ಪ್ರಳಯ
ಶಿವನ ಕಂಠಕ್ಕೆ ಕೈಯಿಕ್ಕಿ ತಡೆದ ಉಮೆ
ಜ್ವಾಲಾಮುಖಿಗೆ ಅವಳೇ ಉಪಮೆ.
ಬೇಸರಕ್ಕೆ ಸರ ಸರಸ ವಿರಸ ಸಮರಸ
ಪನ್ನು ಪೆನ್ನು ಮನೆ ಮಣ್ಣು ಮಸಿ
ಮನಸ್ಸು ಕೊಟ್ಟು ಕೇಳ್ಬಾರ್ದಾ ವಸಿ
ಗಂಟಲು ಸುಡುವ ಅಮೃತದ ಹೊಡೆತಕ್ಕೆ
ತಲೆ ಮೇಲೆ ಮೇಲೆ ಮೋಡದ ಮೇಲಕ್ಕೆ
ಚಿತ್ತ ಮಾವಿನ ಹಣ್ಣು ಚೀಪಿ ಚೀಪಿ ಓಟೆ
ಉಳಿದದ್ದು ಬೀಜ ಬಿತ್ತುವ ಗಲಾಟೆ
ಬೇಸಿಗೆಯ ಬಿಸಿಲುರಿಗೆ ಜಲಪಾತ ನಾವೆ
ಉಳಿದ ಮಾತುಗಳೆಲ್ಲ ಲೆಕ್ಕಕ್ಕೆ ಜಮೆ
ಬದುಕು ಮುಗಿದರೂ ಮೆಚ್ಯೂರಾಗದ ವಿಮೆ.
= ಹರಿಶೇಖರ
ದನಿ
ನೀನು ಜಗಳವಾಡಿರಲಿಲ್ಲ
ನಾನು ಮಾತು ಬಿಟ್ಟ ಮೆಸೇಜ್
ಕಳಿಸಿದೆ
ಎದೆಯ ತುಂಬಾ ನೋವು ಹರಿದು
ನಿನ್ನ ದನಿಗಾಗಿ, ಪ್ರೀತಿಗಾಗಿ
ಹುಂಬನಂತೆ ಫೋನಾಯಿಸಿದ್ದೆ,
ನೀನು ಸುಮ್ಮನಿದ್ದೆ.
ಆ ಕ್ಷಣ ಎಷ್ಟೊಂದು ಒಂಟಿ ಗೊತ್ತಾ?
ದನಿ ಇದ್ದು ಮೂಕಳಾಗಿ,
ಸಮುದ್ರದೊಡಲ ಬೆಂಕಿಯನ್ನು
ದಹಿಸುವುದು
'ಇವಳದು ಇದ್ದದ್ದೇ, ಮತ್ತೆ ಮಾತಾಡಿದರಾಯಿತು'
ನೀನು ಸುಮ್ಮನಾಗಿಬಿಟ್ಟಿದ್ದೆ.
ಅದಕ್ಕೆ ನಾನು ನಿನ್ನನ್ನು, ನಿನ್ನ ಹರುಕು ಮುರುಕು
ಸಾಂತ್ವನದ ಮಾತುಗಳನ್ನು
ಎಲ್ಲವನ್ನು ಬಿಟ್ಟೇ ಬಿಟ್ಟೆ
ಯಾರಿಗೋಸ್ಕರ ಬೇಕು?
ಕೂಡಿ ಕಳೆದು ಗುಣಿಸಿ ಮತ್ತೆ
ನನ್ನ ಹತ್ತಿರ ನಾನೇ ಒರಗಿ ನಿಂತು
ದನಿಯಾಗುತ್ತಿದ್ದೇನೆ, ಮನಸ್ಸು
ಹತೋಟಿಗೆ ಬರುತ್ತಿದೆ.
ಕಣ್ಣಾಲಿಗಳು ಒದ್ದೆಯಾಗಿ
ಒಂದು ಹನಿ ನೀರು ಜಿನುಗುತ್ತದೆ
ನಿನ್ನ ನೆನಪಾ ಅದು?
=
ಡಿ. ನಳಿನ
Nalina.Dharmaraj@nielsen.com
---
ಕಣ್ಣಾಮುಚ್ಚಾಲೆ
ಅವರ ಹಕ್ಕಿಗಳು ಅಡಗಿಕೊಳ್ಳುವ ತನಕ
ನಮ್ಮ ಹಕ್ಕಿಗಳ ಕಣ್ಣು ಬಿಡುವಂತಿಲ್ಲ
ಉರುಳಿದ್ದು ತಿಳಿಯಲೇ ಇಲ್ಲ
ಉದ್ದಿನ ಮೂಟೆ
ಮುಚ್ಚಿದವರೇ ಹೇಳಿದ ಲೆಕ್ಕ
ಒಪ್ಪದಿರಲು ಆಯ್ಕೆಯಿಲ್ಲ
ಕಾಣಲಾರದ ಕಣ್ಣೊಳಗೆ
ತೆರೆದುಕೊಳ್ಳುವ ಕಾಡು
ಕಟ್ಟಿಕೊಳ್ಳುವ ಗೂಡು
ಗಾಢವಾಗದ ನಿಗೂಢಗಳು
ಬಿಗಿದು ಮುಚ್ಚಿದ ರೆಪ್ಪೆ ಒತ್ತೊತ್ತಿ
ಕತ್ತಲೆ ಕಾಯಮ್ಮಾಗಿ ಒಳಗೆ
ಬಿಡಲೆ ಬಿಡಲೇ ಪ್ರಶ್ನೆಗೆ
ಬೇಡ ಬೇಡ ಉತ್ತರ ರೂಢಿಯಾಗಿ
ಬಿಟ್ಟರೂ ತೆರೆಯುವುದು ಅನುಮಾನ
ಅನಾದಿ ಕತ್ತಲೆಯ ಅಪ್ಪಿಕೊಂಡ
ರೆಪ್ಪೆಗಳು ಬೆಳಕಿಗೆ ತತ್ತರಿಸುತ್ತ
ಅಡಗುವ ಜಾಡುಗಳ ಜಾಲಾಡುತ್ತ
ರೆಕ್ಕೆ ಸದ್ದಿಲ್ಲದೇ ಬಾನ ವಿಸ್ತಾರಕ್ಕೆಳೆಸುವ
ಸೋಜಿಗದ ಇರವ ಇರುಕಿನಲ್ಲಿಣುಕುತ್ತ
ಇಲ್ಲದೆಡೆಯಲ್ಲಿ ಇರುವ ಸುಳಿವು
ಇಣುಕಿ ಕಳೆಯುವ ಭ್ರಮೆ
ಮುಚ್ಚಿದ ಕಣ್ಣಿನ ಬೆಚ್ಚನೆ ಗೂಡು
ಸುಖವಿತ್ತೆಂಬ ಸಣ್ಣ ತಿಳಿವು
ಹುಡುಕದೇ ಹಿಂತಿರುಗಲಾರದೆ
ಗೂಡೇ ಕಾಡತೊಡಗಿ
ಅಡಗಿದ್ದು ಸಿಕ್ಕಿಬಿದ್ದರೆ ಕಣ್ಣು ಮುಚ್ಚಿ
ಮರೆಯಾಗಲು ಗೂಢಗೊಳ್ಳಲು
ತವಕದ ಪರದಾಟ
ಕಾಣದ ಕಣ್ಣು ಕಾಡುವ ಗೂಡು
ರೂಢಿಗತ ಜಾಡು ಗೊತ್ತಿದ್ದ
ತಾಣದಲ್ಲಷ್ಟೇ ಹುಡುಕುವ ಚಟ
ಕೆಲವರ ಕಂಡರೂ ಕೂಗದೇ
ಕಾಣದವರ ಹೆಸರು ಹೇಳಿ
ಮುಗಿಯುವ ತನಕ ಆಡುವ ಆಟ
= ಪ್ರಜ್ಞಾ ಮತ್ತಿಹಳ್ಳಿ
prajna.mattihalli@rediffmail.com
------
ಪವಾಡ ಸಂಭವಿಸಬಹುದು...
ನೋವಿನ ಕೊಟ್ಟ ಕೊನೆಯ ಹನಿಯನ್ನೂ
ಅದು ಬಿಡದೇ ಕುಡಿದು ಬಂದಿತ್ತು.
ಹಾಗಂತ ಯಾರೂ ಕೇಳಲೂ ಇಲ್ಲ. ಅದೂ ಏನನ್ನೂ
ಬಾಯಿ ಬಡಕೊಂಡು ಹೇಳಲೂ ಇಲ್ಲ.
ತಿಳಿದವರಿಗೆ ಮಾತ್ರ ಗೊತ್ತಿತ್ತು.
ಹಿಂದೊಮ್ಮೆ ಅದು ಬೋಳು ಬರಡಾಗಿತ್ತು
ಆದರೂ ಸೂರ್ಯನಿಗೇ ಸೆಡ್ಡು ಹೊಡೆದು ಆಕಾಶಕ್ಕೇ
ಮುಖ ಮಾಡಿ ನಿಂತದ್ದು ನೋಡಿದರೆ ನಗು ತರಿಸುತ್ತಿತ್ತು.
ಗಿಲಕಿಯಾಡುವ ಹಸಿರು, ಚಿಲಿಪಿಲಿ ಸದ್ದು, ಚಿಗುರು ಹೂವು
ಕಾಯಿ ಮಾಗಿ ಹಣ್ಣಾಗುವ ಹೊತ್ತು.
ಈ ನಡುವಿನ ಮರೆವಿನ ತಾತ್ಸಾರದಲ್ಲಿ ಇಷ್ಟೊಂದು
ಸಂಭವಿಸಿದೆ. ಇದನ್ನು ಪವಾಡ ಎನ್ನಬಹುದೇ?
ಆದರ ಅನಾದರಗಳ ಅಳತೆಗೋಲಿಗಿಡದೆ ಸಾಗಿದರೆ
ಪವಾಡವೂ ಸಂಭವಿಸಬಹುದಲ್ಲ?
ಮತ್ತಷ್ಟೂ ಅದ್ಭುತವಾಗಿ...?!
ಈಗ ದಿಟ್ಟಿಸಿ ನೋಡಿದರೂ ನೋವಿನ ಕೊನೇ ಹನಿಯನ್ನೂ
ಹೀರಿ ಬಂದ ಯಾವ ಕುರುಹುಗಳೂ ಗೋಚರಿಸುತ್ತಿಲ್ಲ ಅಲ್ಲಿ.
ತಿರುಗಿ ನೋಡಿದರೆ ಬಂದು ಹೋದ ಒಂದು ಹಳೇ ಯಾತನೆಯನ್ನು
ಬಗಲಿಗೆ ಕಟ್ಟಿಕೊಂಡು ತಿರುಗುತ್ತಿದ್ದೇವೆ ಇನ್ನೂ ಹೊಸತೆಂಬಂತೆ
ನಾವು ಇಲ್ಲಿ.
= ಸ್ಮಿತಾ ಅಮೃತರಾಜ್ ಸಂಪಾಜೆ
smitha.hasiru@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


