ಖುಷಿ

ಕಳ್ಳನೊಳಗೊಬ್ಬ ಸಾಚಾ ಇರುತ್ತಾನೆ...

Published On :

ನನಗೆ ಮೊದಲಿನಿಂದಲೂ ಎಲ್ಲರಿಗಿಂತ ಭಿನ್ನವಾಗಿ ಬದುಕುವಾಸೆ. ಸಮಯ ಕಾಲು ಬುಡಕ್ಕೆ ಬಂದು ನನ್ನನ್ನೆಳೆಯತೊಡಗಿದರೆ, ನಾನೇನು ಬೇಕಾದರೂ ಮಾಡಬಲ್ಲೆನೆಂಬ ಹುಂಬು ಧೈರ್ಯ. ನನಗೆ ಕೆಲವೊಂದು ವಿಚಿತ್ರ ಚಟಗಳಿದ್ದು, ಅದರಲ್ಲಿ ಸಣ್ಣ ಮಟ್ಟದಲ್ಲಿ ಕಳ್ಳತನ ಮಾಡುವುದೂ ಒಂದು. ಎಷ್ಟೋ ಸಲ ನಮ್ಮ ಫ್ರೆಂಡ್ಸ್ ಜೊತೆ ಬೆಟ್ಸ್ ಕಟ್ಟಿ ಕಳ್ಳತನ ಮಾಡುತ್ತಿದ್ದೆ.
ಆದರೆ, ಯಾವತ್ತೂ ನನ್ನ ಅಗತ್ಯಕ್ಕೋಸ್ಕರ ಕಳ್ಳತನ ಮಾಡಿಲ್ಲ. ಆ ಕಳ್ಳತನವನ್ನು ನಾನು ಬಹಳ ಎಂಜಾಯ್ ಮಾಡುತ್ತಿದ್ದೆ. ಪ್ರತಿ ಸಲ ಕಳ್ಳತನ ಮಾಡಿದಾಗ ಏನೋ ಒಂಥರಾ ಖುಷಿ ಅನುಭವಿಸುತ್ತಿದ್ದೆ ಅಷ್ಟೇ. ಕೆಲವು ವರುಷಗಳ ಹಿಂದೆ ನಾನು ನಮ್ಮೂರಿನ ಪಕ್ಕದ ಸಿಟಿ ಬಸ್‌ಸ್ಟಾಪ್‌ನಲ್ಲಿ ಕಾದು ಕುಳಿತಿದ್ದೆ. ನನ್ನ ಪಕ್ಕದಲ್ಲೇ ಒಬ್ಬ ಕುಡುಕ ಬೆಂಚಿನ ಮೇಲೆ ಮಲಗಿದ್ದ. ಐದು ರುಪಾಯಿಯ ನೋಟು ಮತ್ತು ಕೆಲವೊಂದಿಷ್ಟು ಚಿಲ್ಲರೆ ನಾಣ್ಯಗಳು ಅವನ ಜೇಬಿನ ಸಮೀಪದಲ್ಲಿ ಬಿದ್ದಿದ್ದವು.
ನನ್ನೆದುರಿನ ಬೆಂಚ್ ಮೇಲೆ ಮೂವರು ಕಾಲೇಜು ವಿದ್ಯಾರ್ಥಿಗಳು ಕುಳಿತಿದ್ದು, ಅವರ ಪಾಡಿಗೆ ಯಾವುದೋ ಲೋಕದಲ್ಲಿ ಮುಳುಗಿದ್ದರು. ನಾನು ಸುತ್ತ ಒಂದು ಸಲ ಕಣ್ಣಾಡಿಸಿ ಯಾರೂ ನನ್ನನ್ನು ಗಮನಿಸುತ್ತಿಲ್ಲವೆಂದು ದೃಢ ಪಡಿಸಿಕೊಂಡು ಪಟ್ಟನೆ ಐದರ ನೋಟನ್ನು ಎತ್ತಿಕೊಂಡು ನಿಧಾನವಾಗಿ ಜೇಬಿಗೆ ಇಳಿಸಿಬಿಟ್ಟೆ. ಆ ವೇಳೆ ಏನು ಮಾಡುತ್ತಿದ್ದೇನೆಂಬ ಪ್ರಜ್ಞೆಯೇ ನನಗಿರಲಿಲ್ಲ.
ಒಂದು ನಿಮಿಷದ ನಂತರ ಅಲ್ಲಿಂದ ಇನ್ನೇನು ಎದ್ದೇಳಬೇಕು ಎನ್ನುತ್ತಿರುವಾಗಲೇ ಆ ಮೂವರು ನನ್ನ ಬಳಿ ಬಂದು, 'ಏನ್ ಸಾರ್, ನೋಡೋಕೆ ತುಂಬಾ ಓದಿದವರ ಥರ ಕಾಣಿಸ್ತಿದ್ದೀರಾ, ಪಾಪ ಕುಡಿದು ಬಿದ್ದವನ ಹಣ ಕದೀತೀರಲ್ಲಾ ಸಾರ್?' ಎಂದುಬಿಟ್ಟರು. ಆಗ ನನಗೆ ಜುಜುಬಿ ಐದು ರುಪಾಯಿಗಾಗಿ ಚಪ್ಪಲಿಯಿಂದ ಹೊಡೆದುಕೊಂಡ ಹಾಗಾಯಿತು. ಏನೂ ಮಾತಾಡದೆ, ಐದು ರುಪಾಯಿಯನ್ನು ಅಲ್ಲಿಯೇ ಬಿಟ್ಟುಬಿಟ್ಟೆ.
ಅಲ್ಲಿಯೇ ಪಕ್ಕದಲ್ಲೇ ನಿಂತಿದ್ದ ಮೇಸ್ಟ್ರೊಬ್ಬರು ನನ್ನನ್ನು ನೋಡಿ 'ಸರ್, ಒಳಗಡೆ ಇದ್ದರಲ್ಲ ಆ ಮೂವರು ನನಗೂ ನಿಮ್ಮ ರೀತಿಯೇ ಹೇಳಿದರು' ಅಂದರು. ನನಗೆ ಅಚ್ಚರಿಯಾಯಿತು. ಅವರನ್ನು ಕೇಳಿದೆ, 'ಅಲ್ಲಾ ಸರ್, ನಾವಾದರೆ ಚಿಕ್ಕವರು ನೀವು ಯಾಕೆ ಆ 5 ರುಪಾಯಿಗೆ ಕೈ ಹಾಕಿದಿರಿ?' ಕೇಳಿದೆ. ಅದಕ್ಕವರು ಅಂದರು, 'ನನ್ನ ಜೇಬಿನಿಂದ ದುಡ್ಡು ಕದ್ದೇ ಅವನು ಕುಡಿದು ಮಲಗಿದ್ದು. ಇದನ್ನು ನಾನು ಅವರಿಗೆ ಹೇಗೆ ಹೇಳಲಿ?'. ನಾನು ಇನ್ನೂ ಚಕಿತನಾದೆ. ಮತ್ತೆ ಅವರೆಂದರು, 'ಅದ್ಸರಿ ನೀನ್ಯಾಕೆ ಆ ದುಡ್ಡು ಕದ್ದೆ?'.
ನನ್ನಲ್ಲಿ ಉತ್ತರವಿರಲಿಲ್ಲ. 'ಓಹೋ, ನಿಮ್ಮ ಕುಡಿತಕ್ಕೂ ಹಣ ಬೇಕಿತ್ತಾ?' ಎಂದು ಬೆಂಕಿ ಪ್ರಶ್ನೆ ಎಸೆದರು. 'ಅಯ್ಯೋ, ನಾನು ಕುಡಿಯುವವನಲ್ಲ' ಎಂದೆ. 'ಕ್ಷಮಿಸಪ್ಪಾ, ಈ ಸಮಾಜದಲ್ಲಿ ನಡತೆಗ್ಯಾರೂ ಪ್ರಮಾಣಪತ್ರ ಕೊಡುವುದಿಲ್ಲ. ಅದಕ್ಕೆ ಹೀಗೆಲ್ಲ ಅನುಮಾನ ಹುಟ್ಟುತ್ತದೆ' ಎಂದರು.
ನಾನು ಅಂದಿನಿಂದಲೇ ಕಳ್ಳತನ ಬಿಟ್ಟೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.