ಕನ್ನಡ ಕಟಕಟೆಯ ಪ್ರಯತ್ನ

ನ್ಯಾಯಾಲಯ ಸುತ್ತಿಗೆ ಗುದ್ದಿದಾಕ್ಷಣ, ಕನ್ನಡಿಗರೆದೆ ಝಲ್ಲೆಂದಿದೆ! ಕಲಿಕಾ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕು ಪಾಲಕರದ್ದೇ ಹೊರತು ರಾಜ್ಯ ಸರ್ಕಾರದ್ದಲ್ಲ- ಎಂದಿದೆ ಸರ್ವೋಚ್ಚ ನ್ಯಾಯಾಲಯ. ಜನರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ನೋಡಿದರೆ ಅದು ಸರಿ. ಆದರೆ 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ನಮ್ಮ ನಾಡಿನ ಕಲಿಕೆಯ ಏರ್ಪಾಟನ್ನು ತೀರ್ಮಾನಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ವಲ್ಲ?' ಎನ್ನುವುದನ್ನು ಕಂಡಾಗ ಆಕ್ರೋಶ ಪುಟಿಯುತ್ತದೆ. ಇಷ್ಟಕ್ಕೂ ಈ 'ಕಲಿಕೆಯ ಮಾಧ್ಯಮದ ಪ್ರಶ್ನೆ' ಕೋರ್ಟಿನ ಮುಂದೆ ಹೋದದ್ದೇ ಬೇರೆ ಕಾರಣದಿಂದಾಗಿ. ಸದರಿ ತೀರ್ಪಿನ ಬೆಂಬಲಕ್ಕೆ ಯಾವುದೇ ವೈಜ್ಞಾನಿಕ ಅಧ್ಯಯನದ ತಳಹದಿ ಇಲ್ಲದಿರುವುದನ್ನು ಕಂಡಾಗಲೂ ಈ ತೀರ್ಪು ಸರಿಯಿಲ್ಲ ಅನಿಸಿದರೆ ಅಚ್ಚರಿಯಿಲ್ಲ. ಒಟ್ಟಾರೆ ಭಾಷಾವಾರು ಪ್ರಾಂತ್ಯಗಳಾದ ಅರವತ್ತು ವರ್ಷದ ನಂತರ ಕಲಿಕೆಯ ವಿಷಯದಲ್ಲಿ ಕನ್ನಡದ ಸಾರ್ವಭೌಮತ್ವವನ್ನೇ ಅಲುಗಾಡಿಸುವ ಈ ತೀರ್ಪಿನ ಬಗ್ಗೆ, ಮುಂದೆ ಹುಡುಕಬೇಕಾದ ದಾರಿಗಳ ಬಗ್ಗೆ ಗಂಭೀರ ನೋಟ ಎದುರಾಗಿದೆ.
ಹೊಣೆ ಸರ್ಕಾರದ್ದಲ್ಲವೇ?
ನಾಡಿನ ಮಕ್ಕಳು ಏನನ್ನು ಕಲಿಯಬೇಕೆಂಬುದನ್ನು ತೀರ್ಮಾನಿಸುವ ಹೊಣೆ ಸರ್ಕಾರದ್ದಲ್ಲವೇ? ಜರ್ಮನಿ, ಜಪಾನಿನಲ್ಲಿ ಯಾವ ಮಾಧ್ಯಮದ ಕಲಿಕೆಯಿರಬೇಕೆನ್ನುವುದನ್ನು ಅಲ್ಲಿನ ಸರ್ಕಾರವೇ ತೀರ್ಮಾನಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಜನರು, ಮಕ್ಕಳ ಕಲಿಕೆಯ ಏರ್ಪಾಡು ಕಟ್ಟುವ, ನಿರ್ವಹಿಸುವ ಹಕ್ಕನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿರುವುದರಿಂದ ಯಾವುದೇ ಸರ್ಕಾರಕ್ಕೆ ತನ್ನ ನಾಡಿನ ಕಲಿಕೆಯ ಏರ್ಪಾಡನ್ನು ನಿರ್ಣಯಿಸುವ ಹಕ್ಕಿರುವುದು ಸಹಜ ನ್ಯಾಯ. ಯಾಕೆಂದರೆ ಶಿಕ್ಷಣ ವ್ಯವಸ್ಥೆ ಎನ್ನುವುದು ಒಂದು ಸರ್ಕಾರ, ತನ್ನ ನಾಡಿನ ನಾಳೆಗಳನ್ನು ಕಟ್ಟಿಕೊಳ್ಳುವ ಸಾಧನ. ಯಾವುದೇ ಸಂದರ್ಭದಲ್ಲಿ ಇಂಥ ಹಕ್ಕನ್ನೇ ಇಲ್ಲವಾಗಿಸುವುದು ನ್ಯಾಯಯುತ ತೀರ್ಪು ಆಗಿರುವುದಿಲ್ಲ.
ನಿಲುವಿಗೆ ಕಾರಣ
ನ್ಯಾಯಾಲಯವು ಈ ತೀರ್ಪಿನ ವೇಳೆ 'ಸರ್ಕಾರದಿಂದ ಸಹಾಯ ಪಡೆಯದ ಶಾಲೆಗಳಿಗೆ ಸರ್ಕಾರಿ ನೀತಿ ಅನ್ವಯವಾಗದು' ಅಂತಲೂ ಹೇಳಿದೆ. ಆದರೆ ಸರ್ಕಾರದಿಂದ ಕಡಿಮೆ ದರದ ಭೂಮಿ, ನೀರು, ತೆರಿಗೆ ವಿನಾಯ್ತಿ ಸೌಲಭ್ಯ ಪಡೆಯುವ ಖಾಸಗಿ ಶಾಲೆಗಳನ್ನು ಉದ್ಯಮವೆಂದು ಪರಿಗಣಿಸಿ, ಶಾಲೆಗಳನ್ನು ನಡೆಸುವುದನ್ನು 'ಉದ್ಯಮ ನಡೆಸುವ ಹಕ್ಕು' ಎಂದು ನ್ಯಾಯಾಲಯ ಪರಿಗಣಿಸುತ್ತಿರುವುದೇ ಗೊಂದಲಕಾರಿ. ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಮತ್ತು ನಿರ್ವಹಿಸುವ ಹೊಣೆಗಾರಿಕೆ ಸರ್ಕಾರದ್ದು ಎನ್ನುವುದು ಬೇರುಮಟ್ಟದ ದಿಟ. ಎಲ್ಲರಿಗೂ ಒಳ್ಳೆಯ ಕಲಿಕೆ ಕಲ್ಪಿಸಬೇಕಾದ ಸರ್ಕಾರದ ಒತ್ತಡ ಒಂದಿಷ್ಟು ಕಡಿಮೆ ಮಾಡಲು ಸಾಮಾಜಿಕ ಕಳಕಳಿಯ ಸಂಘ-ಸಂಸ್ಥೆಗಳು ಸರ್ಕಾರದಿಂದ ಅನುದಾನ ಪಡೆದು ಶಾಲೆಗಳನ್ನು ನಡೆಸುವ ಅನುಮತಿ ಕಲ್ಪಿಸಲಾಗಿದೆಯೇ ಹೊರತು ಲಾಭಕ್ಕಾಗಿ ಶಾಲೆ ನಡೆಸುವಂತಿಲ್ಲ ಅಂತಿರುವಾಗ ಈ ತೀರ್ಪು ಗೊಂದಲ ಹುಟ್ಟಿಸುತ್ತದೆ. ಜಗತ್ತಿನಾದ್ಯಂತ ಒಳ್ಳೆಯ ಕಲಿಕೆ ಏರ್ಪಾಟು ಇರುವ ನಾಡುಗಳಲ್ಲೆಲ್ಲ ಶಿಕ್ಷಣ ಸಂಸ್ಥೆಗಳು ಬರಿಯ ಸರ್ಕಾರದ್ದಾಗಿದ್ದು, ಹಲವೆಡೆ ಉಚಿತವೂ ಆಗಿದೆ. ಇಂಥ ವ್ಯವಸ್ಥೆಯಾಗಬೇಕಾಗಿದ್ದ ನಮ್ಮ ನಾಡಿನ ಶಿಕ್ಷಣ ಕ್ಷೇತ್ರ, ನಿಧಾನವಾಗಿ ಖಾಸಗಿ ಉದ್ಯಮವಾಗಿದ್ದೂ... ಇದನ್ನು ನ್ಯಾಯಾಲಯವೂ ಉದ್ಯಮವಾಗಿ ಪರಿಗಣಿಸಿದ್ದು ವಿಪರ್ಯಾಸ.
ಮುಂದೆ!?
ವಾಸ್ತವವಾಗಿ ರಾಜ್ಯದ ಶೇ.75 ಕನ್ನಡ ಶಾಲೆಗಳ ಮೇಲಾಗಲೀ, ಶೇ. 8-10 ಪರಭಾಷಾ ಮಾಧ್ಯಮದ ಶಾಲೆಗಳ ಮೇಲಾಗಲಿ ನೇರವಾಗಿ ಈ ತೀರ್ಪು ಪರಿಣಾಮ ಬೀರದು. ಅಲ್ಲೆಲ್ಲ ಸರ್ಕಾರದ ಭಾಷಾನೀತಿಯೇ ಮುಂದುವರಿಯಲಿದೆ. ಆದರೆ, ಖಾಸಗಿ ಶಾಲೆಗಳು ಸರ್ಕಾರದ ಎಲ್ಲ ನಿಯಂತ್ರಣಗಳಿಂದ ಮುಕ್ತವಾಗಲಿವೆ. ಸರ್ಕಾರಕ್ಕೆ ಕಲಿಕೆಯ ಏರ್ಪಟನ್ನು ಕಟ್ಟಿ, ನಿರ್ವಹಿಸುವುದರ ಮೇಲಿನ ಹಿಡಿತ ಸಡಿಲವಾಗಲಿದೆ. ಶಾಲೆಗಳನ್ನು ತೆರೆಯುತ್ತೇವೆ ಎನ್ನುವವರಿಗೆ ಅನುಮತಿ ನೀಡುವುದನ್ನು ಬಿಟ್ಟು ಯಾವ ಹಿಡಿತವೂ ಸರ್ಕಾರಕ್ಕೆ ಇರುವುದಿಲ್ಲ. ಲೆಕ್ಕವಿಲ್ಲದಂತೆ ಶಾಲೆಗಳ ಹೆಸರಲ್ಲಿ ಖಾಸಗಿ ಸುಲಿಗೆ ಕೇಂದ್ರಗಳು ಹುಟ್ಟಬಹುದು. ಇಂಥ ವೇಳೆ ನಾಡಿನ ಜನರಲ್ಲೂ ಇಂಗ್ಲಿಷ್ ಮಾಧ್ಯಮದ ಬಗ್ಗೆ ಒಲವು ಉಕ್ಕುತ್ತಿರುವಾಗ ನ್ಯಾಯಾಲಯವು ಕನ್ನಡ ಮಾಧ್ಯಮದ ಪರವಾಗಿ ತೀರ್ಪು ನೀಡಿದ್ದರೂ ಜನರಿಂದ ವಿರೋಧ ಎದುರಿಸಬೇಕಾಗುತ್ತಿತ್ತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಈಗಿರುವ ಕನ್ನಡ ಮಾಧ್ಯಮದ ಶಾಲೆಗಳನ್ನು ಸೌಕರ್ಯ, ಅನುಕೂಲತೆ, ಕಲಿಕೆಯ ಗುಣಮಟ್ಟದ ದೃಷ್ಟಿಯಲ್ಲಿ ಅತ್ಯುತ್ತಮಗೊಳಿಸಬೇಕು. ಕನ್ನಡದಲ್ಲಿ ಎಲ್ಲ ಹಂತದ ಕಲಿಕೆಯನ್ನೂ, ಕಲಿಕೆಯ ಎಲ್ಲ ವಿಭಾಗಗಳನ್ನೂ ತರಬೇಕು. ಇದರಿಂದ ಕನ್ನಡದ ಮಕ್ಕಳ ನಾಳೆಗಳು ಅತ್ಯುತ್ತಮವಾಗುತ್ತವೆ. ಜಗತ್ತಿನ ಜ್ಞಾನವನ್ನೆಲ್ಲ ಕನ್ನಡದಲ್ಲಿ ಕೂರಿಸಿದರೂ ಆದೀತು. ಇದು ರಾತ್ರೋರಾತ್ರಿ ಆಗುವಂಥದ್ದಲ್ಲ. ಆದರೆ ಯಾರು ತುಳಿಯದ ಆ ಹಾದಿಯೊಂದೇ ಈ ಸಮಸ್ಯೆಗೆ ನೈಜ ಪರಿಹಾರ. ಸರ್ಕಾರಕ್ಕೆ ಐಐಟಿ, ಐಐಎಮ್ನಂಥ ವಿಶ್ವದರ್ಜೆಯ ಕಲಿಕೆಯ ವ್ಯವಸ್ಥೆಯನ್ನು ಕಟ್ಟಲಾಗುವಾಗ ಇದು ಯಾಕಾಗದು? ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ, ಮನಸ್ಸೊಂದಿದ್ದರೆ ಮಾರ್ಗವೂ ಉಂಟು. ಮಾರುಕಟ್ಟೆಯ ಪ್ರವಾಹದ ವಿರುದ್ಧ ಹೋಗಿ ಇದನ್ನು ಸಾಧ್ಯವಾಗಿಸುವ ಇಚ್ಛಾಶಕ್ತಿ ಸರ್ಕಾರಕ್ಕೆಷ್ಟಿದೆ ಅನ್ನುವುದರಲ್ಲೇ ಇದಕ್ಕಿದೆ ಉತ್ತರ.
-ಆನಂದ್ ಜಿ.
anandgj@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


