ಖುಷಿ

ಸಂಸ್ಕೃತ ಕಲಿತವರ್ಯಾರೂ ಮನೇಲಿ ಕುಳಿತಿಲ್ಲ...

ಸಂಸ್ಕೃತ ಕಲಿತವರ್ಯಾರೂ ಮನೇಲಿ ಕುಳಿತಿಲ್ಲ...
Published On :

ಪ್ರಸ್ತುತ ಸಂಸ್ಕೃತ ಕಲಿಕೆಯ ಅಗತ್ಯ ಏನಿದೆ?
ಕನ್ನಡ ಭಾಷೆಯ ಅಗತ್ಯ ಎಷ್ಟಿದೆಯೋ ಅಷ್ಟೇ ಅಗತ್ಯ ಸಂಸ್ಕೃತದ್ದೂ ಇದೆ. 5000 ವರ್ಷಗಳ ಇತಿಹಾಸ ಇರುವ ಭಾಷೆ ಸಂಸ್ಕೃತ. ಇತಿಹಾಸಾತ್ಮಕ ಭಾಷೆಯಲ್ಲಿರುವ ಅಧ್ಯಾತ್ಮ, ತತ್ವಜ್ಞಾನ ಇತರೆ ವಿದ್ಯೆಗಳು ಬೇರೆ ಭಾಷೆಗಳೊಂದಿಗೆ ಅಂತರ್ಗತವಾಗಿ ರೂಪಾಂತರಗೊಂಡಿವೆ. ಈ ಭಾಷೆ ನಮ್ಮ ಆಚರಣೆಯಲ್ಲಿ, ಸಂಸ್ಕೃತಿಯಲ್ಲಿ, ಕಲೆಯಲ್ಲಿ ಅಂತರ್ಗತವಾದ್ದರಿಂದ ಭಾರತೀಯ ಆಲೋಚನಾ ಕ್ರಮ ಬಂದಿದ್ದೇ ಸಂಸ್ಕೃತದ ಮೂಲಕ. ಆದರೆ ಆಧುನಿಕ ಆಲೋಚನಾ ಕ್ರಮಗಳಿಗೆ ಈ ಪ್ರಾಚೀನ ಆಲೋಚನಾ ಕ್ರಮ ವಿರೋಧವಾಗಿಲ್ಲ. ಅದರಲ್ಲಿ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿಯೂ ಮೈತ್ರಿ ಭಾವ ಇದೆ. ಹೀಗಾಗಿ ಅದನ್ನು ಹೊರತುಪಡಿಸಿ ನಾವು ಭಾರತೀಯ ಸಂಗತಿಗಳನ್ನು ನೋಡಲಾಗುವುದಿಲ್ಲ.

ಜಾಗತಿಕ ಮಟ್ಟದಲ್ಲಿ ನೋಡಿದಾಗ ಸಂಸ್ಕೃತದ ಪ್ರಾತಿನಿಧ್ಯ ಏನು?

ಜಾಗತಿಕ ಮಟ್ಟದಲ್ಲಿ ಇಂದು ವೈಜ್ಞಾನಿಕ ಕ್ಷೇತ್ರದಲ್ಲಿ, ಕಲೆಯಲ್ಲಿ ಸಂಸ್ಕೃತಕ್ಕೆ ಸಮಾನ ಧಾರಣೆ ಕೊಡಲಾಗಿದೆ. ಸಂಸ್ಕೃತದ ಬೋಧನಾ ಕ್ರಮ ತುಂಬಾ ಹಳೆಯದಾದದ್ದು ಹಾಗೂ ಅಚ್ಚುಕಟ್ಟಾಗಿದೆ. ಅದನ್ನು ಇಂದು ಜಾಗತಿಕ ಮಟ್ಟದಲ್ಲಿ ಅಳವಡಿಸಿಕೊಂಡಿದ್ದಾರೆ. ಇದನ್ನು ಭಾಷಾತಜ್ಞರೂ ಒಪ್ಪಿದ್ದಾರೆ. ಸಂಸ್ಕೃತಕ್ಕೆ ವಿಜ್ಞಾನ, ತಂತ್ರಜ್ಞಾನದಲ್ಲೂ ಜಾಗತಿಕ ಪಾಶಸ್ತ್ಯವಿದೆ.

ಅಳಿವು ಉಳಿವಿನ ದೃಷ್ಟಿಯಿಂದ ಪ್ರಸ್ತುತ ಸಂಸ್ಕೃತ ಭಾಷೆಯ ಸ್ಥಿತಿ ಹೇಗಿದೆ?
ಅಳಿವು ಎನ್ನುವುದು ಯಾವುದಕ್ಕೂ ಇಲ್ಲ. ದೇಹದ ಅಳಿವಾದರೂ ಆತ್ಮ ಅವಿನಾಶಿ. ಇದನ್ನೇ ನಮ್ಮ ಪ್ರಾಚೀನ ದರ್ಶಿತ್ವ ಹೇಳುವುದು. ಭೌತಿಕವಾದ ಕಣ್ಣಿಂದ ಅದು ಕಣ್ಮರೆಯಾಗಬಹುದು. ಆದರೆ ಮಾನಸಿಕ ಜಗತ್ತಿನಲ್ಲಿ ಯಾವುದಕ್ಕೂ ಅಳಿವಿಲ್ಲ. ಸಂಸ್ಕೃತವನ್ನು ಪಕ್ಕಕ್ಕೆ ಸರಿಸಿ ನಮ್ಮ ಜಾಗತಿಕ ಆಲೋಚನಾ ಕ್ರಮಗಳು, ದೃಷ್ಟಿಯಿಲ್ಲ. ಸಾವಿರಾರು ರೂಪಾಂತರಗಳ ನಡುವೆ ಸಂಸ್ಕೃತ ಇದ್ದೇ ಇರುತ್ತದೆ. ಸಂಸ್ಕೃತದಲ್ಲಿ ಹುಟ್ಟಿದ ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದಗಳು ಅನುವಾದಗೊಂಡಷ್ಟು ಜಗತ್ತಿನ ಬೇರೆ ಯಾವ ಪುಸ್ತಕಗಳೂ ಅನುವಾದಗೊಂಡಿಲ್ಲ. ಗ್ಯಾರಟ್ ಎಂಬ ಜರ್ಮನಿಯ ಪಾದ್ರಿ 140 ವರ್ಷದ ಹಿಂದೆ ಲ್ಯಾಟಿನ್, ಜರ್ಮನ್, ಇಂಗ್ಲಿಷ್, ಕನ್ನಡ ನಾಲ್ಕು ಭಾಷೆಗಳಲ್ಲೂ ಭಗವದ್ಗೀತೆಯನ್ನು ಅನುವಾದಿಸಿದ್ದಾರೆ. ಅಂದರೆ ಜಾಗತಿಕ ಮಟ್ಟದಲ್ಲಿ ಅಷ್ಟು ಪ್ರಭಾವ ಬೀರಬಲ್ಲಂಥ ಭಾಷೆ ಸಂಸ್ಕೃತ.

ಸಂಸ್ಕೃತದತ್ತ ವಿದ್ಯಾರ್ಥಿಗಳ ಒಲವು ಹೇಗಿದೆ?
ನಾನು ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಬಂದಾಗ ಶೇ.40ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಶೇ.80ರಷ್ಟಾಗಿದೆ. ಪ್ರತಿವರ್ಷವೂ 10 ಸಾವಿರದಷ್ಟು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಂಸ್ಕೃತ ಉಳಿವಿನ ಭಾಷೆಯಾಗಬೇಕೆಂಬ ಸಂವೇದನೆ ಕರ್ನಾಟಕದಾದ್ಯಂತ ಕಂಡುಬರುತ್ತಿದೆ. ಮೊದಲು 325 ಇದ್ದ ಪಾಠಶಾಲೆಗಳು ಇಂದು 465 ಆಗಿವೆ. ಮೊದಲು 16-17ರ ಸಂಖ್ಯೆಯಲ್ಲಿದ್ದ ಸಂಸ್ಕೃತ ಕಾಲೇಜುಗಳು ಈಗ 32 ತಲುಪಿದೆ. ಅದೂ ಇವೆಲ್ಲ ಅನುದಾನರಹಿತ ಕಾಲೇಜುಗಳು ಎಂಬುದು ಗಮನಿಸಬೇಕಾದ ಅಂಶ.

ವಿದ್ಯಾರ್ಥಿಗಳು ಜಾತ್ಯತೀತವಾಗಿ ಸಂಸ್ಕೃತ ಕಲಿಯಲು ಬರುತ್ತಿದ್ದಾರೆಯೇ?
ಸಂಸ್ಕೃತ ಯಾರದೋ ಸೊತ್ತಿನ ಭಾಷೆ, ಜನಾಂಗದ ಭಾಷೆ ಎಂದು ಅನೇಕರು ತಿಳಿದಿದ್ದಾರೆ. ಆದರೆ ಸಂಸ್ಕೃತ ಜ್ಞಾನದ ಭಾಷೆ. ವೇದದಲ್ಲಿ ಕೌಶಯೂಶ ಎಂಬ ಶೂದ್ರ 'ಸರಸ್ವತಿ ಸೂಕ್ತ' ರಚಿಸಿದ ಮಹರ್ಷಿ. ಈ ರೀತಿ ಅನೇಕರ ಕೊಡುಗೆ ಸಂಸ್ಕೃತಕ್ಕಿದೆ. ಜಾತಿ, ಮತ, ಲಿಂಗ ಬೇಧಗಳಿಲ್ಲದ ನೈಸರ್ಗಿಕ ಭಾಷೆ ಸಂಸ್ಕೃತ. ನಾಲ್ಕೈದು ವರ್ಷಗಳಿಂದ ಇತ್ತೀಚೆಗೆ ಸಂಸ್ಕೃತ ಕಲಿಯಲು ಬರುತ್ತಿರುವವರಲ್ಲಿ ಶೂದ್ರ ವರ್ಗದವರು, ಅಸ್ಪೃಶ್ಯ ವರ್ಗದವರೆನಿಸಿಕೊಂಡವರೇ ಹೆಚ್ಚಾಗಿದ್ದಾರೆ. ಹಿಂದೆ ಯಾವುದೋ ಒಂದು ಉದ್ಯೋಗಕ್ಕಾಗಿ ಸಂಸ್ಕೃತ ಒಂದು ವರ್ಗದವರ ಪಾಲಾಗಿತ್ತು. ಆದರೆ ಭಾಷೆ ಒಂದು ಮಿತಿಯೊಳಗೆ ಬದುಕಲಾರದು. ಮಿತಿಗೆ ಸಿಲುಕಿದಾಗ ಮಿತಿಯನ್ನು ಮೀರಿ ಅಮಿತತ್ವವನ್ನು ಸಾಧಿಸಬೇಕು. ಇದು ಸಾಧ್ಯವಾಗುವುದು ಆ ಭಾಷೆಗೆ ಅಷ್ಟು ಶಕ್ತಿ ಇದ್ದಾಗ ಮಾತ್ರ. ಹೀಗಾಗಿ ಸಂಸ್ಕೃತವನ್ನು ಪ್ರತ್ಯೇಕಿಕರಣಗೊಳಿಸುವ ದೃಷ್ಟಿಕೋನ ನಮ್ಮಲ್ಲಿಲ್ಲ. ಆಕ್ಸ್‌ಫರ್ಡ್ ವಿವಿ, ಹಾರ್ವರ್ಡ್, ಜರ್ಮನ್, ಫ್ರೆಂಚ್ ವಿವಿಗಳಲ್ಲಿ ಸಂಸ್ಕೃತವನ್ನು ಆ ಭಾಷೆಗೆ ಸಮಾನ ಎಂಬಂತೆ ತಿಳಿದು ಕಲಿಸಲಾಗುತ್ತಿದೆ. ಅಂಥದ್ದರಲ್ಲಿ ನಾವು ಆ ಭಾಷೆಯನ್ನು ಪ್ರತ್ಯೇಕೀಕರಣಗೊಳಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಕೃತ ಕಲಿಯಲು ಆಸಕ್ತಿ ವಹಿಸುತ್ತಿದ್ದಾರಾ?
ಬರ್ತಾ ಇದಾರೆ. ಉತ್ತರ ಕನ್ನಡ ಭಾಗದಲ್ಲಿ ಹೆಚ್ಚು ಹೆಣ್ಣುಮಕ್ಕಳು ಸಂಸ್ಕೃತ ಕಲಿಯಲು ಆಸಕ್ತಿ ತೋರುತ್ತಿದ್ದಾರೆ.

ಸಂಸ್ಕೃತದ ಮೇಲಿನ ಆಸಕ್ತಿ ಹೆಚ್ಚಿಸಲು ಸಂಸ್ಕೃತ ವಿವಿ ಏನೇನು ಕ್ರಮ ಕೈಗೊಂಡಿದೆ?

ಭಾರತದಲ್ಲಿ ನಡೆವ ರಾಷ್ಟ್ರಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ ಕರ್ನಾಟಕದವರೇ ಮುಂದು. ಈ ವರ್ಷ ನಮಗೆ (ಕರ್ನಾಟಕಕ್ಕೆ) ರಾಷ್ಟ್ರ ಮಟ್ಟದ ಶಾಸ್ತ್ರ ಸ್ಪರ್ಧೆಗಳಲ್ಲಿ 8 ಚಿನ್ನದ ಪದಕಗಳು ಬಂದಿವೆ. ಎಲ್ಲ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಸಂಸ್ಕೃತಕ್ಕೆ ಬೇಕಾದ ಪೂರಕ ವಾತಾವರಣವನ್ನು ನಮ್ಮ ವಿವಿ ಒದಗಿಸಿಕೊಟ್ಟಿದೆ. ಐಟಿಬಿಟಿ ಸೇರಿದಂತೆ ಬೇರೆಬೇರೆ ವೃತ್ತಿಗಳಲ್ಲಿರುವವರಿಗೆ, ಆಸಕ್ತ ಗೃಹಿಣಿಯರಿಗೆ ಅನುಕೂಲವಾಗಲಿ ಎಂದು ಸಂಸ್ಕೃತ ವಿವಿ ಸಂಜೆಕಾಲೇಜು ತೆರೆದಿದೆ. ಒಂದು ವರ್ಷದಲ್ಲಿ 62 ವಿದ್ಯಾರ್ಥಿಗಳು ಸಂಜೆಕಾಲೇಜಿಗೆ ಸೇರಿದ್ದಾರೆ. 20 ವರ್ಷದಿಂದ ಅಧ್ಯಾಪಕರ ನಿಯುಕ್ತಿಯಾಗಿರಲಿಲ್ಲ. ಆದರೆ ನಾವು ಇದೀಗ ಪಾಠಶಾಲೆಗಳಲ್ಲಿ 120 ಅಧ್ಯಾಪಕರನ್ನು ನಿಯುಕ್ತಿ ಮಾಡಿದೀವಿ. ಕಾಲೇಜುಗಳಿಗೂ ಹೊಸ ಅಧ್ಯಾಪಕರನ್ನು ನೇಮಿಸಿದ್ದೇವೆ. ಸಂಸ್ಕೃತ ಭಾರತಿ ಜೊತೆ ಸೇರಿ ಹೆಚ್ಚು ವಿಧದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಮಠಮಾನ್ಯಗಳೂ ವಿವಿಯ ಆಶೋತ್ತರಗಳಿಗೆ ಸ್ಪಂದಿಸುತ್ತಿವೆ. ಇವೆಲ್ಲ ಸಂಸ್ಕೃತದ ವಾತಾವರಣವನ್ನು ಹಬ್ಬಿಸಲು ಸಹಕಾರಿಯಾಗಿವೆ.

ಸಂಸ್ಕೃತ ಕಲಿತವರ ಭವಿಷ್ಯ ಏನು?

ಕರ್ನಾಟಕದವರ ಸಂಸ್ಕೃತ ಉಚ್ಚಾರಣೆ ಶುದ್ಧವಾಗಿದೆ. ಹೀಗಾಗಿ ಹೊರರಾಜ್ಯಗಳ ಸಂಸ್ಕೃತ ಕಾಲೇಜುಗಳಿಗೆ, ಪಾಠಶಾಲೆಗಳಿಗೆ, ಸಂಶೋಧನಾ ಸಂಸ್ಥೆಗಳಿಗೆ ಕರ್ನಾಟಕದವರನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಸಂಸ್ಕೃತ ಕಲಿತವರ್ಯಾರೂ ಮನೆಯಲ್ಲಿ ಕುಳಿತಿಲ್ಲ. <


ದೇವಭಾಷೆ ಬಗ್ಗೆ ಮಲ್ಲೇಪುರಂ ಮಾತು



ಹೊಸ ಪೀಳಿಗೆಯವರಲ್ಲಿ ಭವಿಷ್ಯದಲ್ಲಿ ಸಂಸ್ಕೃತದ ಹೆಸರು ಉಳಿಸುವಂಥವರು ತಯಾರಾಗ್ತಿದ್ದಾರಾ? ಅಥವಾ ಎಲ್ಲದರಂತೆ ಉದ್ಯೋಗಕ್ಕಾಗಿ ಇದೂ ಒಂದು ಡಿಗ್ರಿ ಎನ್ನುವ ಮನೋಭಾವ ಇದೆಯಾ?
ರಾಷ್ಟ್ರ ಮಟ್ಟದ ಶಾಸ್ತ್ರ ಸ್ಪರ್ಧೆಗಳಲ್ಲಿ ಚಿನ್ನದ ಪದಕ ತಂದಂಥವರು ವ್ಯಾಕರಣ ಶಾಸ್ತ್ರದಲ್ಲಿ, ಧರ್ಮಶಾಸ್ತ್ರದಲ್ಲಿ, ವೇದಾಂತದಲ್ಲಿ ಇತರೆ ಶಾಸ್ತ್ರಗಳಲ್ಲಿ ಒಂದೊಂದು ಇಡೀ ಗ್ರಂಥವನ್ನೇ ಸ್ವಾಧೀನಪಡಿಸಿಕೊಂಡಂಥವರು. ಅವರು ತಮ್ಮ ವಿಷಯಗಳಲ್ಲಿ ತಾರ್ಕಿಕ ಅಂತ್ಯವನ್ನು ಮುಟ್ಟಿದಂಥವರು. ಅಂಥವರಿಂದ ನಮ್ಮ ಕರ್ನಾಟಕದ ಸಂಸ್ಕೃತ ಹೆಸರು ಉಳಿಯುತ್ತದೆ. ಅವರನ್ನು ಬೆಳೆಸಲು ಪೂರಕ ವೇದಿಕೆಯನ್ನು ನಾವೇ ನಿರ್ಮಿಸಿಕೊಡುತ್ತಿದ್ದೇವೆ.

- ರೇಷ್ಮಾ ರಾವ್ ಸೊನ್ಲೆ
reshmaraksha.rao7@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.