ಖುಷಿ

ತುಕಡ ತುಕಡದ ಪ್ರಾಣಿ

ಈ ಪ್ರಾಣಿ ಪ್ರಾಚೀನ ಋಷಿಗಳ ಯಜ್ಞಕುಂಡದಿಂದ ಉದ್ಭವಿಸಿತ್ತು. ಹೊಟ್ಟೆ ತುಂಬ ಆಕಾಶ. ಕಣ್ಣಲ್ಲಿ ಕಡಲು. ..

ತುಕಡ ತುಕಡದ ಪ್ರಾಣಿ
Published On :

ಈ ಪ್ರಾಣಿ ಪ್ರಾಚೀನ ಋಷಿಗಳ ಯಜ್ಞಕುಂಡದಿಂದ ಉದ್ಭವಿಸಿತ್ತು. ಹೊಟ್ಟೆ ತುಂಬ ಆಕಾಶ. ಕಣ್ಣಲ್ಲಿ ಕಡಲು. ಓಡಾಡಿದೆಡೆಯಲ್ಲ ಅಮರಾವತಿ, ಕೂತ ಕಡೆ ಕೈಲಾಸ. ನಿಂತೆಡೆ ನಾಕ. ಮೇವು ಹಾಕಿ ಬೆಳೆಸಿದವರೆಷ್ಟು ಜನ! ಸರ್ಪ ಕಾವಲಿತ್ತು. ಕಾಣದ ಕಾವಳದಲ್ಲಿ ಕಾವಲು ಕರಗಿತು. ರಾಕ್ಷಸರ ಪಾಳೆಯಕ್ಕೆ ಸಾಗಿಸುತ್ತಿದ್ದ ಇದನ್ನು ಚಾಣಕ್ಯ ಬಿಡಿಸಿಕೊಂಡು ಬಂದು ಮಜಬೂತಾಗಿ ಬೆಳೆಸಿದ. ಪ್ರತಿ ಮನೆಯ ಅಂಗಳದಲ್ಲೆಲ್ಲ ಪೊಗದಸ್ತಾಗಿ ಮೇವು ಸಿಗುತ್ತಿತ್ತು. ಹಳ್ಳಿ ಹಳ್ಳಿಯಲ್ಲೆಲ್ಲ ಇದಕ್ಕೆ ಕೈ ಮುಗಿಯುವವರೇ. ಕವಿಗಳೆಲ್ಲ ಇದರ ಮೇಲೆ ಹಾಡು ಕಟ್ಟಿದರು. ಮೇಳದವರು ಇದನ್ನು ಮುಂದಿಟ್ಟುಕೊಂಡು ಮೆರವಣಿಗೆ ಮಾಡಿದರು. ಇದರ ಉಳಿವಿಗಾಗಿ ನಡೆದ ಯುದ್ಧಗಳು ಲೆಕ್ಕ ಮೀರಿದವು. ಇದನ್ನು ಕಬಳಿಸಲು ಹೊಂಚು ಹಾಕುತ್ತಿದ್ದ ರಾಕ್ಷಸರು ನಾಶವಾದರು ಎನ್ನುವಷ್ಟರಲ್ಲಿ ಅಲ್ಲೊಬ್ಬ ಇಲ್ಲೊಬ್ಬ ರಾಕ್ಷಸ ತಲೆಯೆತ್ತುತ್ತಲೇ ಇದ್ದ.
ಈ ಪ್ರಾಣಿಗೆ ಅದೆಷ್ಟೋ ಜನ ಪ್ರಾಚೀನ ಋಷಿಗಳು, ಮಹಾರಾಜರು ಅಲಂಕಾರ ಮಾಡಿ ದಣಿದಿದ್ದರು. ಹಣೆಗೆ ರಾಮ ನಾಮ, ಕೊಂಬಿಗೆ ಕೃಷ್ಣನ ನವಿಲುಗರಿ. ಬಾಲ ಥೇಟ್ ಆಂಜನೇಯನದೇ. ವಸ್ತ್ರ ಹೊಲೆದದ್ದು ಅಗಸ್ತ್ಯ. ಇದನ್ನು ಉಳಿಸಲು ಹೋರಾಡಿ ಸತ್ತವರ ಚಿತೆಯ ಬೂದಿಯನ್ನು ತೇದು ಕಣ್ಣಿಗೆ ಕಾಡಿಗೆಯಂತೆ ಹಚ್ಚಲಾಗಿತ್ತು. ತಮ್ಮ ತಮ್ಮ ಕತ್ತಿಗಳನ್ನು ಚೂಪು ಮಾಡುವಾಗ ಬಂದ ಬೆವರಿನಿಂದ ಇದರ ಸ್ನಾನ ಮಾಡಿಸುತ್ತಿದ್ದ ವೀರಪುರುಷರು ತಮ್ಮ ತಮ್ಮ ತಲೆಗಳನ್ನು ಇದಕ್ಕೆ ಕಿರೀಟವಾಗಿ ಕೊಟ್ಟಿದ್ದರು. ಗೊರಸು ಸವೆಯದಿರಲಿ ಎಂದು ಎಣಿಸಲಾಗದಷ್ಟು ಮಹಾಪುರುಷರು ತಮ್ಮ ತಮ್ಮ ಬೆರಳುಗಳನ್ನು ಮೊಳೆಗಳಾಗಿ ಹೊಡೆದರು. ಎಣಿಸಲಾಗದಷ್ಟು ಮಹಾಪುರುಷರು ಸ್ವಂತ ಬಟ್ಟೆಗಳನ್ನು ಸ್ವಂತ ರಕ್ತದಲ್ಲಿ ಅದ್ದಿ, ನೆನೆಸಿ, ಸ್ವಂತ ಮೂಳೆಗಳ ಸ್ತಂಭಕ್ಕೆ ಕಟ್ಟಿ ಕೇತನ ಹಾರಿಸಿದ್ದರು. ಆದರೆ... ಎಲ್ಲಿತ್ತು ಈ ವಿಲಾಯತ್ತು? ನದಿಗಳೆಲ್ಲ ಮರಳುಗಾಡಾದವು. ಮರಳೇ ನಿನಗೆ ತೇವದ ಪರಿಚಯವಿಲ್ಲವೇ? ಯಾರು ಕತ್ತಿ ಬೀಜ ಬಿತ್ತಿದ್ದು? ಪ್ರಾಣಿಯನ್ನು ಯಾರೂ ರಕ್ಷಿಸಲಾಗಲಿಲ್ಲ. ಸ್ವಂತ ರಕ್ಷಣೆಯನ್ನು ಎಲ್ಲರೂ ನೋಡಿಕೊಂಡರು. ಪ್ರಾಣಿಯನ್ನು ಕತ್ತರಿಸಲಾಯ್ತು. ಅದು ಬದುಕಿದ್ದಾಗ ಎಲ್ಲರೂ ತೂಗುಯ್ಯಾಲೆ ಆಡುತ್ತಿದ್ದರು. ಆ ಉಯ್ಯಾಲೆಯ ಸರಪಳಿಗೆ ಈಗ ಚರ್ಮ ಸುಲಿಸಿಕೊಂಡ, ಕುತ್ತಿಗೆಯಿಲ್ಲದ ಈ ಪ್ರಾಣಿಯನ್ನು ನೇತು ಹಾಕಿದ್ದಾರೆ. ತುಕಡ ತುಕಡ ಮಾಡುತ್ತಿದ್ದಾರೆ.





ಎಲ್ಲ ಇರುವ ಊರಿನಲ್ಲಿ ಅದೇ ಇಲ್ಲ!
ನಿಮ್ಮೂರು ಎಷ್ಟೇ ಒಳಕ್ಕಿರಬಹುದು, ಇಲ್ಲಿದೆ ರೋಡು, ನಿಮ್ಮ ಸೂರು ಎಷ್ಟೇ ಸೋರಬಹುದು ಇಲ್ಲಿದೆ ಗೋಡು. ಇಲ್ಲಿದೆ ನಿಮ್ಮೂರಿನ ನದಿಗೆ ಸೇತುವೆ. ನಿಮ್ಮ ಹೊಲಕ್ಕೆ ತಕ್ಕ ಕಾಲುವೆ, ಇಲ್ಲಿದೆ ನಿಮ್ಮ ದನಕ್ಕೆ ತಕ್ಕನಾದ ಗೂಟ, ನಿಮ್ಮ ಜನಕ್ಕೆ ತಕ್ಕುದಾದ ಊಟ. ನಿಮ್ಮ ಬಾಗಿಲಿಗೆ ತಕ್ಕ ಬೀಗ, ಜಗುಲಿಗೆ ತಕ್ಕ ಜಾಗ. ಇಲ್ಲಿದೆ ನಿಮ್ಮ ನೆನೆದು ಹೋಗಲಿರುವ ಬಟ್ಟೆ ಒಣಿಗಿಸುವ ತಂತಿ, ನಿಮ್ಮ ಖಾಲಿ ಬಲ್ಬುಗಳಿಗೆ ಕಾಂತಿ. ಇಲ್ಲಿ ದುಡ್ಡಿದೆ, ಕಾನೂನಿದೆ. ಬ್ರೆಡ್ಡಿದೆ ಜಾಮೂನಿದೆ. ಬೇಕಾದ ಅಂಗಡಿ, ಬೇಕಾದ ಬೀಡಿ ಇಲ್ಲಿದೆ. ನಿಮ್ಮ ತುಟಿಗೆ ಪೀಪಿ ಬೇಕೋ, ಕಾಪಿ ಬೇಕೋ? ಎಲ್ಲ ಇಲ್ಲಿದೆ. ಆದರೆ ನಿಮ್ಮ ತಪ್ಪಿಗೆ ಶಿಕ್ಷೆ ಮಾತ್ರ ಇಲ್ಲ. <



ಹಚ್ಚಿದರೆ ಆರುವ ದೀಪ
ಒಬ್ಬನು ಜೀವನಪೂರ್ತಿ ದುಡಿದು ಮನೆ ಕಟ್ಟಿದ. ಗೆದ್ದೆನೆಂದು ಬೀಗಿದ. ಮನೆಯ ಮೆಟ್ಟಿಲುಗಳು ಮುಕ್ತಾಯಗೊಂಡಿದ್ದವು. ಚೂರು ಗೀರಿದರೆ ಧಗ್ ಎನ್ನುವ ಒಣ ಸೌದೆಗಳಿರುವ, ಚೂರು ಗಾಳಿ ಬೀಸಿದರೆ ಸಾಕು ಹಾರಿ ಹೋಗುವ ಬಟ್ಟೆಗಳಿರುವ, ಪುಟಾಣಿ ಮಹಡಿಯಲ್ಲಿ. ಅಲ್ಲಿಂದ ಕಾಣಿಸುತ್ತಿದ್ದವು, ಅಣಕಿಸುತ್ತಿರುವ ಬಳಿಗೆ ಬಿಟ್ಟುಕೊಳ್ಳದ ಬೆಟ್ಟಗಳು. ಅಂಗಳ ಅಳುತ್ತಿತ್ತು. ನೀರಿದ್ದರೂ ಸುವಾಸನೆ ಅರಳುತ್ತಿರಲಿಲ್ಲ. ಒಳಗೆ ಗೋಳು. ದಿಕ್ಕಾಪಾಲು, ಒಡೆದುಹೋಗುತ್ತಿತ್ತು ಹಾಲು. ವರಗಳೊಂದೂ ಇಲ್ಲ. ಬರೀ ಶಾಪ. ಹಚ್ಚಿದರೆ ಆರುತ್ತಿತ್ತು ದೀಪ.


ನಗರಕೂಪ
ನಗರ ತೋರಿಸಿದ ನಗ್ನ ಚಿತ್ರ ನೋಡಿ ಹಳ್ಳಿಗಳು ಹಳ್ಳಕ್ಕೆ ಬಿದ್ದವು. ಬೆಳಗಾದ ಕೂಡಲೆ ನಗರಗಳು ಕಿರುಚುತ್ತಿವೆ. 'ಹಳ್ಳಿ ಮಕ್ಕಳೇ ಬಂದುಬಿಡಿ ಬೇಗ, ನನ್ನ ಹೋಟೆಲುಗಳ ಎಂಜಲು ತಟ್ಟೆ ತೋಟ ತೊಳೆಯುವವರಿಲ್ಲ. ಶೂಗಳನ್ನು ಪಾಲಿಶ್ ಮಾಡುವವರಿಲ್ಲ'. ಬೆಳಗಾದ ಕೂಡಲೆ ನಗರಗಳು ನುಡಿಯುತ್ತಿವೆ; 'ಎದ್ದೇಳಿ ನನ್ನ ಮಕ್ಕಳೆ... ಕಾನ್ವೆಂಟ್‌ಗಳು ಕರೆಯುತ್ತಿವೆ. ಚಾನಲ್‌ಗಳು ಚಲಿಸುತ್ತಿವೆ. ಕಾಲೇಜುಗಳ ಬಳಿ ಕಣ್ ಹೊಡೆಯುವವರಿಲ್ಲ. ಪಾರ್ಟಿಗಳಲ್ಲಿ ಕುಡಿಯುವವರಿಲ್ಲ, ಥಿಯೇಟರ್‌ಗಳಲ್ಲಿ ಕ್ಯೂ ನಿಲ್ಲುವವರಿಲ್ಲ'. ಎಲ್ಲ ಕಡೆ ಭಾಷಣೆ ನಡೆದಿದೆ, 'ಇಂದಿನ ಮಕ್ಕಳೇ ನಾಳಿನ ಪ್ರಜೆಗಳು!'



ದುಡ್ಡಿನ ಗುಡ್ಡದ ಭೂತ


ಸ್ವಂತದೆದೆ ಬಡಿತ, ಸ್ವಂತ ಕುಡಿತ, ಜೀವಂತ ಕೂಗಾಯಿತು. ಕರು ಓಡಿ ಬಂತು. ದುಡ್ಡಿನ ಗುಡ್ಡದಿಂದ ಹಸು ಕೂಗಲಿಲ್ಲ. ಹೆತ್ತ ಕರುಳಿನ ಬೆರಳು ಮಮತೆಯನು ಮೀಟಿತು. ಮಗು ಓಡಿ ಬಂತು. ದುಡ್ಡಿನ ಗುಡ್ಡದಿಂದ ತಾಯಿ ಕೂಗಲಿಲ್ಲ. ಬಸ್ಸಿನ ಕಣ್ಣಲ್ಲಿ ಊರಿನ ಹೆಸರಿದ್ದರೂ, ಬಸ್ಸಿನವರು ಕೂಗುತ್ತಿದ್ದಾರೆ. ಯಾರೂ ಕೇಳುತ್ತಿಲ್ಲ. ದುಡ್ಡಿನ ಗುಡ್ಡ ಅಡ್ಡ. ಪ್ರಾರ್ಥನಾ ಕೇಂದ್ರದಿಂದ ಒಂದೇ ಸಮನೆ ಕೂಗುತ್ತಿದ್ದಾರೆ. ಯಾರೂ ಕೇಳುತ್ತಿಲ್ಲ, ದುಡ್ಡಿನ ಗುಡ್ಡ ಅಡ್ಡ. ಯಾರೋ ಬರೆದ ಹಾಡು. ಯಾರದೋ ಸಂಗೀತ, ಬೇರೆ ಯಾರೋ ಗಾಯಕ ಹಾಡಿದ, ಯಾರೂ ಕೇಳುತ್ತಿಲ್ಲ, ದುಡ್ಡಿನ ಗುಡ್ಡ ಅಡ್ಡ.


ಕ್ರೂರ ತಪಸ್ವಿ
ರಾತ್ರಿ ಹೊತ್ತು ಹುಲಿಗಳು ಅರಚುತ್ತಿವೆ. ಅವು ಏಕೆ ಅರಚುತ್ತಿವೆ? ಕಾಡಿನ ಕಣ್ಣಿಗೆ ಆ ಕೂಗು ಪ್ರಾರ್ಥನೆಯಂತೆ ಕಂಡರೆ ಜಿಂಕೆಗಳ ಪಾಲಿಗೆ ಅಪಾಯದ ಕೂಗಾಗಿದೆ. ತಪಸ್ಸಿಗೆ ಕೂತಿದ್ದ ಜಿಂಕೆಗಳು ಕಣ್ಣು ಬಿಡುತ್ತಿವೆ. ಎದ್ದು ಓಡುತ್ತಿವೆ. ಎಲ್ಲಿ ಓಡಿದರೂ ಹುಲಿಗಳ ಅರಚಾಟ ಕೇಳುತ್ತಿದೆ. ಎಲ್ಲಿ ಓಡಿದರೂ ಹುಲಿಗಳು ಅಟ್ಟಿಸಿಕೊಂಡು ಬರುತ್ತಿವೆ. ಇದ್ದಕ್ಕಿದ್ದಂತೆ ಓಡುತ್ತಿದ್ದ ಜಿಂಕೆಗಳು ನಿಂತವು. ಮೃದುತನವನ್ನು ಮಣ್ಣೊಳಗೆ ಹೂತವು. ತೀರ ಹತ್ತಿರ ಬಂದ ಹುಲಿಯೊಂದರ ಮರ್ಮಾಂಗಕ್ಕೆ ಕೊಂಬಿನಿಂದ ತಿವಿದವು. ವಿಕಾರವಾಗಿ ಕೂಗಿದ ಹುಲಿ ಸತ್ತು ಬಿತ್ತು. ಅಲ್ಲೇ ನಿಂತ ಜಿಂಕೆಗಳು ಅಲ್ಲೇ ತಪಸ್ಸಿಗೆ ಕೂತವು. ಅವಕ್ಕೆ ಈಗ ಉಳಿದ ಹುಲಿಗಳ ಕಿರುಚಾಟ ಯಾವ ಭಯ ಅಥವಾ ಭಂಗವನ್ನೂ ತರುತ್ತಿಲ್ಲ. ಏಕೆಂದರೆ ಈಗ ಜಿಂಕೆಗಳು ತಮ್ಮ ಕೆಳಗೆ ಹುಲಿ ಚರ್ಮವನ್ನು ಹಾಕಿಕೊಂಡು ತಪಸ್ಸಿಗೆ ಕೂತಿವೆ.

ಕೀಟಗಳಿದ್ದ ರಾತ್ರಿ
ಕತ್ತಲಿನಲ್ಲಿ ಓದುತ್ತಾ ಕೂತಿದ್ದೇನೆ ದೀಪ ಹಾಕಿಕೊಂಡು. ನಡು ನಡುವೆ ಏನೇನೋ ಹುಳುಗಳು ಬರುತ್ತಿವೆ. ದೀಪದ ಸುತ್ತ ಹಾರಲು ಬಂದವೋ ಅಥವಾ ನನ್ನ ರಕ್ತ ಕುಡಿಯುವುದಕ್ಕೆ ಬಂದವೋ? ಹಾಸಿಗೆ ಮೇಲೆಲ್ಲ ಓಡಾಡುತ್ತಿವೆ. ಮಲಗಿದಾಗ ಕಚ್ಚುತ್ತವೆಂದು ಪುಸ್ತಕದಿಂದಲೇ ಅವನ್ನೆಲ್ಲ ಬಡಿದೆ. ಈಗ ನೆಮ್ಮದಿ. ಯಾವ ಹುಳುಗಳೂ ಇಲ್ಲವೆಂದು. ಇನ್ನು ನಿಶ್ಚಿಂತೆಯಿಂದ ಓದಿ ಆರಾಮವಾಗಿ ಮಲಗಬಹುದು. ರಾತ್ರಿ ನನ್ನ ರಕ್ತ ಯಾರೂ ಕುಡಿಯುವುದಿಲ್ಲ. ದೀಪದ ಬಳಿ ಬಂದ ಹುಳುಗಳು ಮಾತ್ರವೇನು ಈ ಕೋಣೆಯಲ್ಲಿರುವುದು..? ಅಲಮಾರು, ಬಾಗಿಲು, ಅಟ್ಟ, ಪಾತ್ರೆ- ಪಡಗ, ಹೊಲಿಗೆ ಯಂತ್ರ, ಟಿವಿ, ಎಷ್ಟೊಂದು ಸಾಮಾನುಗಳ ಸಂದಿಗಳಲ್ಲಿ ಇನ್ನೆಷ್ಟು ಹುಳುಗಳು ಇರಬಹುದು..? ದೀಪ ಆರಿಸಿದ ಕೂಡಲೇ ಅವೆಲ್ಲ ತಮ್ಮ ಸೈನ್ಯದೊಂದಗೆ ಬಂದೇ ಬರುತ್ತವೆ. ಆಗ ನನಗೆ ಬಹಳ ನಿದ್ದೆ ಬಂದಿರುತ್ತದೆ. ಗೊತ್ತೇ ಆಗುವುದಿಲ್ಲ ರಕ್ತ ಎಷ್ಟು ಕಳೆದು ಹೋಗುತ್ತಿದೆಯೆಂದು. ಕೆಲವೇ ಕೆಲವು ಕೀಟಗಳನ್ನು ಸದೆ ಬಡಿದ ನಾನು ಕಾಣದ ಸಂದಿಗಳ ಕಾಣದ ಕೀಟಗಳನ್ನು ಹೇಗೆ ಸದೆ ಬಡಿಯಲಿ? ಕಣ್ಣಿಗೆ ಬೀಳುವ ಹುಳುಗಳು ಹೊರಗಿನಿಂದ ಬಂದವು. ಸಂದಿಯಲ್ಲಿರುವುವು, ಇಲ್ಲೇ ನನ್ನ ಕೋಣೆಯಲ್ಲಿರುವುವು. ಆದರೂ ನನ್ನ ರಕ್ತ, ರಾತ್ರಿ ಪೂರಾ ಇನ್ನೊಬ್ಬರ ಪಾಲಾಗುತ್ತಿದ್ದರೂ ಬೆಳಗಾದ ಕೂಡಲೇ ನೆಮ್ಮದಿಯಿದೆ. ಏಕೆಂದರೆ ಇಲ್ಲಿ ನಾನೊಬ್ಬನೇ ರಕ್ತ ಕಳೆದುಕೊಳ್ಳುತ್ತಿಲ್ಲ, ಎಲ್ಲರೂ ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇಕೆ ನಮ್ಮ ಹಿಂದಿನ ಶಕ್ತಿಯೂ ರಕ್ತ ಕಳೆದುಕೊಳ್ಳುತ್ತಿದೆ. ಪ್ರಳಯವಾದರೆ ಅದಕ್ಕೂ ಆಗುತ್ತದೆ. ಈಗ ಇಲ್ಲಿ ಯಾರಿರುತ್ತಾರೆ? ಕೀಟಗಳು?

-ಸಿ.ವಿ. ಶೇಷಾದ್ರಿ ಹೊಳವನಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.