ಖುಷಿ

ವಿಂಡೋಸ್ XPiry!

ವಿಂಡೋಸ್  XPiry!
Published On :

ಆಪರೇಟಿಂಗ್ ಸಿಸ್ಟಮ್ ಎಂದರೆ ವಿಂಡೋಸ್ ಎಕ್ಸ್‌ಪಿ ಎಂಬ ಕಾಲವೊಂದಿತ್ತು. ಸುಮಾರು ಅರ್ಧ ದಶಕ ಟಾಪ್- 5 ಜಾಗತಿಕ ಬ್ರ್ಯಾಂಡ್‌ಗಳಲ್ಲಿ ಇದು ಹೆಸರು ಗಳಿಸಿತ್ತು. ಆದರೆ ಇನ್ನೆಂಟು ದಿನಗಳಲ್ಲಿ ಹನ್ನೆರಡೂವರೆ ವರ್ಷ ಕಂಪ್ಯೂಟರ್ ಬಳಕೆದಾರರ ಸಂಗಾತಿಯಂತಿದ್ದ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ ಎಕ್ಸ್‌ಪಿಗೆ ವ್ಯಾವಹಾರಿಕವಾಗಿ ಅಂತ್ಯಸಂಸ್ಕಾರ ಮಾಡುವ ಕಾಲ ಬಂದಿದೆ. ಜಗತ್ತಿನ ಖ್ಯಾತ ಕಂಪ್ಯೂಟರ್ ಓಎಸ್ ಶಾಶ್ವತವಾಗಿ ಇತಿಹಾಸ ಪುಟ ಸೇರಲಿದೆ.
ಸುಮಾರು ಒಂದೂಕಾಲು ದಶಕ ಕಂಪ್ಯೂಟರ್ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದ್ದ ಎಕ್ಸ್‌ಪಿ, ಸ್ಮಾರ್ಟ್ ಯುಗಕ್ಕೆ ಕಾಲಿಡುವ ಹೊತ್ತಿಲಲ್ಲಿ ಕಣ್ಮರೆಯಾಗುತ್ತಿದೆ. ವಿಂಡೋಸ್ ಎಕ್ಸ್‌ಪಿಯ ಗತವೈಭವಕ್ಕೆ ಕೊನೆಯಾಗುತ್ತಿದ್ದಂತೆ ದೊಡ್ಡನೆಯ ಡೂಮ್‌ಕಂಪ್ಯೂಟರ್‌ಗಳೂ ತೆರೆಮರೆಗೆ ಹೋಗಲಿವೆ. ಕಂಪ್ಯೂಟರ್ ಕೂಡ ಮತ್ತಷ್ಟು ಸ್ಮಾರ್ಟ್ ಆಗುವ ಸೂಚನೆಯ ಆರಂಭದ ಮೈಲಿಗಲ್ಲಿದು.
ವಿಂಡೋಸ್ ಎಕ್ಸ್‌ಪಿಯನ್ನು 2000ನೇ ಇಸವಿಯಲ್ಲಿ ಮಾರುಕಟ್ಟೆಗೆ ಬಿಟ್ಟಾಗ ಕಂಪ್ಯೂಟರ್ ಬಳಕೆದಾರರಲ್ಲಿ ಒಂದು ಹೊಸ ಆಲೋಚನೆಗೆ ಕಾರಣವಾಗಿತ್ತು. ಮೈಕ್ರೋಸಾಫ್ಟ್ ಕಂಪನಿಯು ಆ ಬಳಿಕ ವಿಸ್ತಾ, ವಿಂಡೋಸ್ 7 ಮತ್ತು 8ನ್ನು ಬಿಡುಗಡೆ ಮಾಡಿದರೂ ಸಾಮಾನ್ಯ ಜನತೆ ತಲೆ ಕೆಡಿಸಿಕೊಳ್ಳದಷ್ಟು ವ್ಯಾಮೋಹವನ್ನು ಎಕ್ಸ್‌ಪಿ ಹೊಂದಿತ್ತು. ಈಗ ತನ್ನ ಉತ್ಕೃಷ್ಟ ಬ್ರ್ಯಾಂಡ್‌ಗೆ ಅಂತ್ಯ ಹಾಡಲು ನಿರ್ಧರಿಸಿರುವ ಮೈಕ್ರೋಸಾಫ್ಟ್, ಏ.8ರ ಬಳಿಕ ಯಾವುದೇ ಸೇವೆಯನ್ನು ಒದಗಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದೆ. ವಿಂಡೋಸ್ 7ನ್ನು ಬಿಡುಗಡೆ ಮಾಡಿದ ಬಳಿಕ ಕಂಪ್ಯೂಟರ್ ಕೊಂಡವರು ಅನಿವಾರ್ಯವಾಗಿ ಮುಂದಿನ ಓಎಸ್‌ಗೆ ಬದಲಾಗಿದ್ದರು. ಆದರೆ ಎಕ್ಸ್‌ಪಿಯಿಂದ ವಿಂಡೋಸ್ 7 ಅಥವಾ 8ಗೆ ಪರಿವರ್ತನೆಯಾಗುವ ಬಗ್ಗೆ ಕಂಪ್ಯೂಟರ್ ಗ್ರಾಹಕರು ತಲೆ ಕೆಡಿಸಿಕೊಳ್ಳಲೇ ಇಲ್ಲ. ಇದಕ್ಕೆ ಕೆಲ ಉದ್ಯಮಗಳು ಹೊರತಾಗಿಲ್ಲ. ಇದೇ ಕಾರಣದಿಂದ 2000ದ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಕಾಲಿಟ್ಟ ವಿಂಡೋಸ್ ಎಕ್ಸ್‌ಪಿಯು ಇಂದಿಗೂ ಜಾಗತಿಕ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಶೇ.30ರಷ್ಟು ಪಾಲನ್ನು ಹೊಂದಿದೆ. ಇನ್ನು ಅನಧಿಕೃತವಾಗಿ ಬಳಸುತ್ತಿರುವವರಲ್ಲೂ ಎಕ್ಸ್‌ಪಿ ಪಾಲು ದೊಡ್ಡದಿದೆ.
ಏ.8ರಿಂದ ವಿಂಡೋಸ್ ಎಕ್ಸ್‌ಪಿ ಆಧಾರಿತ ಕಂಪ್ಯೂಟರ್‌ಗಳು ಕೆಲಸ ಮಾಡುವುದು ನಿಲ್ಲಿಸುವುದಿಲ್ಲ. ಆದರೆ ಮಾಲ್‌ವೇರ್‌ಗಳ ರಿಸ್ಕ್ ಹೆಚ್ಚಾಗುವ ಸಾಧ್ಯತೆಯಿದೆ. ಹ್ಯಾಕರ್ಸ್‌ಗಳಿಗೆ ಸುಲಭ ಮಾರ್ಗವಾಗುವ ಅಪಾಯವಿದೆ. ಸಾರ್ವಜನಿಕವಾಗಿ ಬಳಕೆಯಾಗುತ್ತಿರುವ ಕಂಪ್ಯೂಟರ್‌ಗಳಲ್ಲಿ ಅನಿವಾರ್ಯವಾಗಿ ಓಎಸ್ ಬದಲಿಸಬೇಕಾಗಬಹುದು, ಇಲ್ಲವಾದಲ್ಲಿ ಅನಿರೀಕ್ಷಿತ ಅಪಾಯಗಳು ಎದುರಾಗುತ್ತವೆ. ವಿಂಡೋಸ್ 8ಗಿಂತ 6 ಬಾರಿ ಹೆಚ್ಚು ವೈರಸ್ ಕಾಟಕ್ಕೆ ಎಕ್ಸ್‌ಪಿ ತುತ್ತಾಗುವ ಸಾಧ್ಯತೆಯಿದೆ. ವಿಂಡೋಸ್ ಎಕ್ಸ್‌ಪಿಯ ಬಳಕೆಯನ್ನು ನಿಲ್ಲಿಸುವ ದೃಷ್ಟಿಯಿಂದ ಅಥವಾ ಇದರ ದುರುಪಯೋಗ ಪಡೆಯಲು ಈಗಾಗಲೇ ಸಾಕಷ್ಟು ಹ್ಯಾಕರ್ಸ್‌ಗಳು ತಯಾರಾಗಿದ್ದಾರೆ. ಆದರೆ ಕೆಲವು ಮುನ್ನೆಚ್ಚರಿಕೆ ತೆಗೆದುಕೊಂಡರೆ ಇದೇ ಅವಸ್ಥೆಯಲ್ಲಿ ವೈಯಕ್ತಿಕ ಕಂಪ್ಯೂಟರ್ ಅನ್ನು ಕನಿಷ್ಠ ಒಂದು ವರ್ಷಗಳವರೆಗೆ ದೂಡಬಹುದು.
ಆದರೆ ಉದ್ಯಮಗಳಿಗೆ ಇದು ಅನ್ವಯವಾಗುವುದಿಲ್ಲ. ಅನಿವಾರ್ಯವಾಗಿ ಅಪ್‌ಡೇಟ್ ಆಗಲೇಬೇಕು. ಇಲ್ಲವಾದಲ್ಲಿ 'ಮಾಹಿತಿ ಕಳ್ಳ'ರ ಜಾಲಕ್ಕೆ ಬೀಳಬೇಕಾಗುತ್ತದೆ.
ಎಕ್ಸ್‌ಪಿಯ ಸೇಫ್ ಬಳಕೆಗೆ ಒಂದಿಷ್ಟು ಟಿಪ್ಸ್
ಏ.8ರಿಂದ ಆಚೆಗೆ ವಿಂಡೋಸ್ ಎಕ್ಸ್‌ಪಿಯ ಯಾವುದೇ ಸಾಫ್ಟ್‌ವೇರ್ ಅಥವಾ ಸಿಸ್ಟಮ್ ಅಪ್‌ಡೇಟ್ ಆಗುವುದಿಲ್ಲ ಬದಲಾಗಿ ಜು.15, 2015ರವರೆಗೆ ಮಲಾಷಿಯಸ್ ಸಾಫ್ಟ್‌ವೇರ್ ರಿಮೂವಲ್ ಟೂಲ್ (ಎಂಎಸ್‌ಆರ್‌ಟಿ)ಗೆ ಅಲ್ಪ ಪ್ರಮಾಣದ ಅಪ್‌ಡೇಟ್ ನೀಡುತ್ತದೆ. ಕಂಪ್ಯೂಟರ್ ತಂತ್ರಜ್ಞರ ಪ್ರಕಾರ, ಈ ಟೂಲ್‌ನಿಂದ ಮಾಲ್‌ವೇರ್ ಪ್ರವೇಶ ತಡೆ ಸಂಪೂರ್ಣವಾಗಿ ಸಾಧ್ಯವಿಲ್ಲ. ನೂತನ ಮಾಲ್‌ವೇರ್‌ಗಳನ್ನು ಇದು ಕಂಡುಹಿಡಿಯಲಾರದು, ಕೇವಲ ಅಸ್ತಿತ್ವದಲ್ಲಿರುವ ಮಾಲ್‌ವೇರ್‌ಗಳು ಕಂಪ್ಯೂಟರ್‌ಗೆ ಪ್ರವೇಶಿಸದಂತೆ ಇದು ಎಚ್ಚರಿಕೆವಹಿಸಲಿದೆಯಷ್ಟೆ.
ಬ್ರೌಸಿಂಗ್‌ಗೆ ಕೂಡ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬದಲು ಗೂಗಲ್ ಕ್ರೋಮ್ ಅಥವಾ ಮೋಝಿಲ್ಲಾ ಫೈರ್‌ಫಾಕ್ಸ್ ಮೊರೆ ಹೋಗುವುದು ಒಳಿತು. ವಿಶೇಷವಾಗಿ ಜಾವಾ ಮತ್ತು ಅಡೋಬ್ ರೀಡರ್‌ನಿಂದ ನಿಮ್ಮ ಕ್ಯಂಪ್ಯೂಟರ್‌ಗಳಿಗೆ ನೂತನ ವೈರಸ್‌ಗಳು ದಾಳಿ ಮಾಡುವ ಸಾಧ್ಯತೆಯಿದೆ.
ಇದಕ್ಕಾಗಿ ಕಂಟ್ರೋಲ್ ಪ್ಯಾನಲ್‌ನ ಕ್ಲಾಸಿಕ್ ವ್ಯೂವ್‌ಗೆ ಹೋಗಿ, ಜಾವಾವನ್ನು ಕ್ಲಿಕ್ ಮಾಡಿ. ಅಲ್ಲಿ ಸೆಕ್ಯುರಿಟಿ ಟ್ಯಾಬ್ ಮೇಲೆ ಕ್ಲಿಕ್ಕಿಸಿ 'ಎನೇಬಲ್ ಜಾವಾ ಕಂಟೆಂಟ್ ಫ್ರಾಮ್ ದಿ ಬ್ರೌಸರ್‌' ಎಂಬ ಆಪ್ಷನ್ ಅನ್ನು ಡಿಸಬೇಲ್ ಮಾಡಿ. ಇದರಿಂದ ಜಾವಾ ಫೈಲ್‌ಗಳಿಂದ ಕಂಪ್ಯೂಟರ್‌ಗೆ ವೈರಸ್ ಪ್ರವೇಶಿಸುವುದು ನಿಲ್ಲುತ್ತದೆ.
ಲಾಗ್ ಇನ್‌ಗೆ ಹತ್ತಾರು ಅಕೌಂಟ್‌ಗಳನ್ನು ಬಳಸುವವರಿದ್ದಾರೆ, ಆದಷ್ಟು ಒಂದೇ ಅಕೌಂಟ್ ಅನ್ನು ಬಳಸುವುದು ಉತ್ತಮ. ಇದರಿಂದ ವೈರಸ್‌ಗಳ ಪ್ರವೇಶ ನಿಯಂತ್ರಿಸಬಹುದು. ಇನ್ನು ಅವಾಸ್ತಾ, ಕಾಸ್ಪರ್‌ಸ್ಕೈ ಸಂಸ್ಥೆಗಳು ವಿಂಡೋಸ್ ಎಕ್ಸ್‌ಪಿಗೆ ಆ್ಯಂಟಿ ವೈರಸ್ ನೀಡುವ ಭರವಸೆ ನೀಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ವಿಂಡೋಸ್ ಡ್ರೈವ್ ಸಿಡಿಯನ್ನು ಇರಿಸಿಕೊಳ್ಳಿ, ಜತೆಗೊಂದು ಹಾರ್ಡ್ ಡಿಸ್ಕ್‌ನಲ್ಲಿ ಡಾಟಾ ಸೇವ್ ಮಾಡಿಟ್ಟುಕೊಳ್ಳಿ.
ಈಗಿರುವ ಕಂಪ್ಯೂಟರ್‌ಗೆ ವಿಂಡೋಸ್ 8ನ್ನು ಅಪ್‌ಡೇಟ್ ಮಾಡಿಕೊಳ್ಳುವಾಗಲೂ ಕೆಲ ಸಾಫ್ಟವೇರ್ ಹಾಗೂ ಹಾರ್ಡ್‌ವೇರ್ ಅನಿವಾರ್ಯಗಳಿವೆ. ಒಂದು ಗಿಗಾ ಹರ್ಟ್ಸ್ ಪ್ರೊಸೆಸರ್, 32 ಬಿಟ್ ಒಂದು ಜಿಬಿ ರ್ಯಾಮ್ ಅಥವಾ 64 ಬಿಟ್ 2 ಜಿಬಿ ರ್ಯಾಮ್, 32 ಬಿಟ್ 16 ಜಿಬಿ ಹಾರ್ಡ್‌ಡಿಸ್ಕ್ ಅಥವಾ 64 ಬಿಟ್ 32 ಜಿಬಿ ಹಾರ್ಡ್‌ಡಿಸ್ಕ್ ಹಾಗೂ ಗ್ರಾಫಿಕ್ಸ್ ಕಾರ್ಡ್ ಅನ್ನು ಕಂಪ್ಯೂಟರ್ ಹೊಂದಿರಬೇಕಾಗುತ್ತದೆ.
ಹೊಸತನದ ಉಸಾಬರಿಯೇ ಬೇಡ ಎಂದು ನಿರ್ಧರಿಸಿ ನೀವು ಸೇಫ್ ಆಗಿ ಬ್ರೌಸ್ ಮಾಡಿ, ಕಂಪ್ಯೂಟರ್ ಅನ್ನು ಚೆಂದವಾಗಿ ಬಳಸಿಕೊಂಡಿದ್ದರೆ ಮಾರುಕಟ್ಟೆಯಲ್ಲಿ ಮಾತ್ರ ವಿಂಡೋಸ್ ಎಕ್ಸ್‌ಪಿ ಸಾಯಲಿದೆ. ನಿಮ್ಮ ಕಂಪ್ಯೂಟರ್‌ನಲ್ಲಿ ನಿಮಗೆ ಬೋರ್ ಬರುವವರೆಗೆ ಬಳಸುತ್ತಲೇ ಇರಬಹುದು. ಆದರೆ ಸಾಫ್ಟ್‌ವೇರ್ ಹಾಗೂ ಆ್ಯಂಟಿ ವೈರಸ್ ಡೆವಲಪರ್ಸ್ ಕಂಪನಿಗಳು ಅಪ್‌ಡೇಟ್ ನಿಲ್ಲಿಸಿದರೆ ವಿಂಡೋಸ್ ಎಕ್ಸ್‌ಪಿ ಮೇಲಿನ ವ್ಯಾಮೋಹ ಬಿಡಲೇಬೇಕಾಗುತ್ತದೆ.

-  ರಾಜೀವ ಹೆಗಡೆ
meet.hegde@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.