ಖುಷಿ

ಬದಲಾದ ಯುಗದ ರಾಗ

ಬದಲಾದ ಯುಗದ ರಾಗ
Published On :

ಹಬ್ಬಗಳು ಹಿಂದೂ ಸಂಸ್ಕೃತಿಯ ಶ್ರೀಮಂತಿಕೆಯ ಸ್ವರೂಪ. ಹತ್ತುಹಲವು ಅರ್ಥಗಳನ್ನು ತನ್ನೊಳಗೆ ಅಡಕಗೊಂಡಿರುವ ಹಬ್ಬಗಳು ಇಂದು ಕ್ಷೀಣಿಸುತ್ತಿರುವುದು ಬೇಸರದ ಸಂಗತಿ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಆದರೆ, ಆಚರಣೆಯ ಮೊದಲಿನ ಸೌಂದರ್ಯ ಕಳೆಗುಂದುತ್ತಿದೆ. ಯುವಕರು ಹಬ್ಬವನ್ನು ಒಂದು ರಜೆಯ ಹೊರತಾಗಿ ನೋಡುತ್ತಿಲ್ಲ. ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದಾಗ ನವವರ್ಷ ಯುಗಾದಿಯಾಗಿತ್ತು. ಸ್ವತಂತ್ರ ಭಾರತದಲ್ಲಿ ಅದು ಇಂಗ್ಲಿಷ್ ಕ್ಯಾಲೆಂಡರಿನ ಜನವರಿ 1ಕ್ಕೆ ಯಾಕಾದರೂ ಬದಲಾಯಿತೋ?
ಅಂದೆಲ್ಲ ಹಾಗಿತ್ತು...
ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ 'ಹೊಸವರ್ಷ ಎಂದು?' ಎಂಬ ಪ್ರಶ್ನೆಗೆ ಶಾಲಾಮಕ್ಕಳು, ಜನಸಾಮಾನ್ಯರು, ಗೃಹಿಣಿಯರು ಎಲ್ಲರೂ 'ಯುಗಾದಿಯಂದು' ಎಂದೇ ಉತ್ತರಿಸುತ್ತಿದ್ದರು. ಭಾರತದ ಅನೇಕ ರಾಜ್ಯಗಳಲ್ಲಿ ಚೈತ್ರ ಮಾಸದ ಮೊದಲ ದಿನ ಯುಗಾದಿ. ಯುಗಾದಿಗೆ ಎರಡು ಮೂರು ವಾರಗಳಿರುವಾಗ ಪೋಷಕರು ತಮ್ಮ ಮಕ್ಕಳನ್ನು ಬಟ್ಟೆ ಅಂಗಡಿಗೆ ಕರೆದೊಯ್ದು ಹೊಸ ಬಟ್ಟೆ ಖರೀದಿಸಿ ದರ್ಜಿಗೆ ಹೊಲಿಯಲು ಕೊಡುತ್ತಿದ್ದರು. ದರ್ಜಿ ಅಳತೆ ತೆಗೆದುಕೊಳ್ಳುವಾಗ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಹಬ್ಬಕ್ಕೆ ಹೊಸ ಬಟ್ಟೆ ಬರುವುದೆಂಬ ಉಲ್ಲಾಸ. ಗೆಳೆಯರೊಂದಿಗೆ ತಮಗೆ ಇಂಥ ಬಣ್ಣದ ಬಟ್ಟೆ ಬರುತ್ತಿದೆ ಎಂದು ಹೇಳಿಕೊಂಡು ಸಂತಸ ಪಡುತ್ತಿದ್ದರು. ಯುಗಾದಿಯ ಆಗಮನಕ್ಕಾಗಿ ವರ್ಷವಿಡೀ ಕಾಯುತ್ತಿದ್ದರು. ಗೃಹಿಣಿಯರು ಯುಗಾದಿಗೆ ಒಬ್ಬಟ್ಟು, ಪಾಯಸ ಮಾಡಲು ಅಗತ್ಯ ಸಾಮಾನುಗಳನ್ನು ತರಿಸಿಕೊಳ್ಳುತ್ತಿದ್ದರು. ವಸಂತ ಋತುವಿನ ಸ್ವಾಗತಕ್ಕೆ ನಾನಾ ಪೂರ್ವಸಿದ್ಧತೆಗಳಲ್ಲಿ ಮನೆಯನ್ನು ಶುಚಿಗೊಳಿಸುವುದು, ಸಾಧ್ಯವಾದರೆ ಮನೆಗೆ ಸುಣ್ಣ- ಬಣ್ಣ ಹೊಡೆಸುವುದು ಮುಂತಾದ ಕಾರ್ಯಗಳು ನಡೆಯುತ್ತಿದ್ದವು. ಯುಗಾದಿಯ ಹಿಂದಿನ ದಿನ ಮಕ್ಕಳು ತಳಿರುತೋರಣಗಳಿಂದ ಮನೆಯನ್ನು ಶೃಂಗರಿಸುತ್ತಿದ್ದರು. ಹಬ್ಬದ ದಿನ ಪ್ರಾತಃಕಾಲದಲ್ಲಿ ತಾಯಿ ಮಕ್ಕಳಿಗೆ ಎಣ್ಣೆನೀರು ಹಾಕುತ್ತಿದ್ದಳು, ಇತರರೂ ಅಭ್ಯಂಗಸ್ನಾನ ಮಾಡುತ್ತಿದ್ದರು. ಹಿರಿಯರು ಹೊಸ ಪಂಚಾಂಗದ ಪೂಜೆ ಮಾಡುತ್ತಿದ್ದರು. ದೇಗುಲಗಳಲ್ಲಿ ಅರ್ಚಕರ ಪಂಚಾಂಗಪಠಣ ಕೇಳಲು ಜನ ಸೇರುತ್ತಿದ್ದರು. ಪಂಚಾಂಗಶ್ರವಣ ಯುಗಾಗಿಯ ಮುಖ್ಯ ಅಂಗವಾಗಿತ್ತು. ಸಂಜೆ ವರ್ಷದ ಪ್ರಥಮ ಚಂದ್ರದರ್ಶನ ಮಾಡುವ ಕ್ರಮವಿತ್ತು. ಯುಗಾದಿಯಂದು ಮೊದಲು ಭಕ್ಷಿಸಬೇಕಾದದ್ದು ಬೇವುಬೆಲ್ಲ. ಬೇವಿನ ಎಲೆಗಳನ್ನು ತಿನ್ನುವುದರಿಂದ ಎಲ್ಲ ಕೆಡುಕುಗಳೂ ನಾಶವಾಗುತ್ತವೆ, ಶರೀರ ಸದೃಢವಾಗುವುದು, ಸರ್ವಸಂಪತ್ತುಗಳು ಲಭಿಸುವುದೆಂದು ನಂಬಿದ್ದರು. ಬೇವು ಕಷ್ಟಗಳನ್ನೂ, ಬೆಲ್ಲವು ಜೀವನದ ಸುಖವನ್ನೂ ಸೂಚಿಸುತ್ತದೆ. ಬೇವುಬೆಲ್ಲದಂತೆ ಜೀವನದಲ್ಲಿ ಸಮರಸವಿರಬೇಕು. ಹಬ್ಬದ ಮುಖ್ಯ ಅಂಗ ಭೋಜನ. ಪಾಯಸ ಕುಡಿಯುವುದರಲ್ಲಿ, ಹೋಳಿಗೆ ತಿನ್ನುವುದರಲ್ಲಿ ಮನೆ ಸದಸ್ಯರಲ್ಲಿ ಸ್ಪರ್ಧೆ ನಡೆಯುತ್ತಿತ್ತು.
ಇಂದು ಹೀಗಿದೆ...
ಈಗ ಯುಗಾದಿ ಬಂತೆಂದು ಮನೆಗೆ ಸುಣ್ಣಬಣ್ಣ ಹಚ್ಚಿಸುವವರು ಎಲ್ಲೋ ಐನೂರಕ್ಕೆ ಒಬ್ಬರು. ಅಭ್ಯಂಗ ಸ್ನಾನದ ಪದ್ಧತಿಯೂ ಅಲ್ಲಲ್ಲಿ. ಎಣ್ಣೆ ಕಂಡರೆ ಮಕ್ಕಳು 'ಛೀ' ಎಂದು ದೂರ ಓಡುತ್ತವೆ. ನೂತನ ವಸ್ತ್ರಧಾರಣೆ ಯುಗಾದಿಯಂದೇ ಆಗಬೇಕೆಂದಿಲ್ಲ. 'ನಾನು ಹಬ್ಬಕ್ಕೆ ಹೊಸಬಟ್ಟೆ ಕೊಂಡುಕೊಳ್ಳೋಲ್ಲ. ಯಾವಾಗ ಬೇಕೆಂದರೆ ಆಗ ಕೊಂಡುಕೊಳ್ಳುತ್ತೇನೆ' ಎಂಬ ಧೋರಣೆ. ಅದಕ್ಕೆ ಸರಿಯಾಗಿ ಹಾದಿಗೆ ನಾಲ್ಕು ಬಟ್ಟೆ ಅಂಗಡಿ, ಲಕ್ಷಲಕ್ಷ ಸಂಬಳ. ಒತ್ತಾಯಕ್ಕೆ ಬೇವು- ಬೆಲ್ಲ ಸ್ವೀಕರಿಸಿದರೂ ಹಿರಿಯರ ಕಣ್ಣು ತಪ್ಪಿಸಿ ಬೇವಿನ ಎಲೆ ಎಸೆಯುವವರೇ ಹೆಚ್ಚು.
ಪಂಚಾಂಗಶ್ರವಣದಲ್ಲಿ ಜನರಿಗೆ ಆಸಕ್ತಿಯಿಲ್ಲ. ಆಸಕ್ತರು ಟಿವಿವಾಹಿನಿಗಳಲ್ಲಿ ಬರುವ ಪಠಣ ಆಲಿಸಿ ಪುಣ್ಯ ಹೆಚ್ಚಾಯಿತೆಂದುಕೊಳ್ಳಬಹುದು. ಸಮಷ್ಟಿ ಕುಟುಂಬಗಳು ಹೋಗಿ ಈಗ ಪತಿ-ಪತ್ನಿ, ಪುತ್ರ ಇಲ್ಲವೇ ಪುತ್ರಿಯ ತ್ರಿಸದಸ್ಯ ಪರಿವಾರಗಳೇ ಅಧಿಕ. ಒಂದೇ ಊರಿನಲ್ಲಿ ತಂದೆತಾಯಿ ಇದ್ದರೂ ಹಬ್ಬದಂದು ಅವರೊಡನೆ ಕಾಲ ಕಳೆಯಲು ಐಟಿಬಿಟಿ ಕಾರ್ಮಿಕರಿಗೆ ಪುರುಸೊತ್ತು ಸಿಗುತ್ತಿಲ್ಲ. ಯುಗಾದಿಯಂದು ಹಿರಿಯ ದಂಪತಿ ಮಾತ್ರ ಕುಳಿತು ಮಕ್ಕಳಿಗಿಲ್ಲವಲ್ಲ ಎಂದು ಚಡಪಡಿಸುತ್ತ ಊಟ ಮಾಡುತ್ತಾರೆ. ಸೊಂಟನೋವು, ಮಂಡಿನೋವು ಎನ್ನುವ ಅಬಲೆಯರು ಮನೆಯಲ್ಲಿ ಹೋಳಿಗೆ ಅಂಬೊಡೆ ತಯಾರಿಸುವುದಿಲ್ಲ. ಭಕ್ಷ್ಯಗಳನ್ನು ಅಡುಗೆಭಟ್ಟರ ಮನೆಯಿಂದ ಅಥವಾ ತಿಂಡಿಯಂಗಡಿಯಿಂದ ತರಿಸಿಕೊಂಡರೆ ಸಂಪ್ರದಾಯಕ್ಕೆ ಕುಂದಿಲ್ಲವೆಂದು ಭಾವಿಸಿ ಹಬ್ಬ ಆಚರಿಸುವವರು ಮೊದಲನೇ ವರ್ಗದವರು. ಕೇಟರರ್‌ನಿಂದ ವಿಶೇಷ ಊಟವನ್ನು ಮನೆಗೆ ತರಿಸಿಕೊಂಡು ಹಬ್ಬ ಆಚರಿಸುವವರು ಎರಡನೇ ವರ್ಗದವರು. ಊಟಕ್ಕೆ ಬಳಸುವ ತಟ್ಟೆ, ಲೋಟ ಮತ್ತಿತರ ಪಾತ್ರೆಗಳನ್ನು ತೊಳೆಯುವುದು ಕಷ್ಟವೆಂದು (ಮನೆಗೆಲಸದವರು ಯುಗಾದಿಯಂದು ಕೆಲಸಕ್ಕೆ ಹಾಜರಾಗುವುದಿಲ್ಲ) ಹೋಟೆಲ್ಲಿಗೆ ಹೋಗಿ ಯುಗಾದಿಯ ವಿಶೇಷ ಊಟ ಮಾಡುವವರು ಮೂರನೇ ವರ್ಗದವರು. ವರ್ಷಾವರ್ಷ ಒಂದನೇ ವರ್ಗದವರು ಎರಡನೇ ವರ್ಗಕ್ಕೂ, ಎರಡನೇ ವರ್ಗದವರು ಮೂರನೇ ವರ್ಗಕ್ಕೂ ಬಡ್ತಿ ಪಡೆಯುತ್ತಿದ್ದಾರೆ. ನಗರದ ಪ್ರತಿಷ್ಠಿತ ಭೋಜನಾಲಯಗಳು ಯುಗಾದಿಯಂದು ವಿಶೇಷ ಹಬ್ಬದೂಟದ ವ್ಯವಸ್ಥೆ ಮಾಡಿದ್ದೇವೆಂದು ಜಾಹೀರಾತು ಕೊಟ್ಟು ಅಸಹಾಯಕರಿಗೆ ಸಹಾಯ ಮಾಡುತ್ತಾ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಈಗಿನವರಿಗೆ ಜನವರಿ 1 ಹೊಸವರ್ಷದ ಮೊದಲ ದಿನ.
ಈ ಆಧುನಿಕ ನೀತಿ ಈಗಲಾದರೂ ಬದಲಾಗಲಿ. ಮತ್ತೆ ಚೈತ್ರಮಾಸ ನಮ್ಮೊಳಗೆ ಸಾಮ್ರಾಜ್ಯ ಸ್ಥಾಪಿಸಬೇಕು. ಅದೇ ಹೊಸ ವರ್ಷದ ಚೆಲುವು ನಮ್ಮೊಳಗೆ ಉತ್ಸವವಾಗಬೇಕು. ಅಂಥ ಬಂಗಾರದ ಜ್ಞಾನೋದಯ ನಮ್ಮೊಳಗಾದರೆ ಆ ಯುಗಾದಿಯ ಮೌಲ್ಯ ಮಿಲಿಯನ್ ಡಾಲರ್ರನ್ನೂ ದಾಟುತ್ತದೆ.

- ಪಿ.ವಿ. ರಾಮಚಂದ್ರ
pvramachandraster@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.