ಗುರು ಶಿಷ್ಯರು

ಗುಜರಾತ್ನ ಗಾಂಧಿನಗರ ಸರ್ಕ್ಯುಟ್ ಹೌಸ್ನಲ್ಲಿ ಬಿಜೆಪಿ ಪಾರ್ಟಿ ಮೀಟಿಂಗ್ ಮುಗಿದಿತ್ತು. ಲಾಲ್ಕೃಷ್ಣ ಆಡ್ವಾಣಿ ಮತ್ತು ಕೇಶುಭೈ ಪಟೇಲರು ಹಿಂದಿನ ಸೀಟಿನಲ್ಲಿ ಕುಳಿತಿದ್ದ, ಮುಂದೆ ಚಾಲಕನ ಪಕ್ಕ ನರೇಂದ್ರ ಮೋದಿ ಎಂಬ ತರುಣ ನಾಯಕ ಕುಳಿತಿದ್ದ ಕಾರು ಹೊರಟಿತ್ತು. ಕೇಶುಭೈ ಪಟೇಲರ ಆಪ್ತರಾಗಿದ್ದ ಗೋವಿಂದಾಚಾರ್ಯ ನಡೆದು ಹೊರಟಿರುವುದು ಚಾಲಕನ ಕಣ್ಣಿಗೆ ಬಿತ್ತು. ಕೇಶುಭೈ ಜತೆ ದಶಕಗಳನ್ನೇ ಕಳೆದಿದ್ದ ಚಾಲಕ, ಅವರ ಇಶಾರೆಗೂ ಕಾಯದೆ, ಕಾರು ನಿಲ್ಲಿಸಿ ಮೋದಿಯವರನ್ನು ಇಳಿಯಲು ಹೇಳಿದ. ಗೋವಿಂದಾಚಾರ್ಯರನ್ನು ಹತ್ತಿಸಿಕೊಂಡು ಹೊರಟ. ಮೋದಿ ಇಳಿದು ಸರ್ಕ್ಯುಟ್ ಹೌಸ್ ಕಡೆ ನಡೆಯತೊಡಗಿದರು.
ಅದಾಗಿ ಎರಡು ದಶಕ. ಚರಿತ್ರೆ ಒಂದು ಸುತ್ತು ಬಂದಿದೆ.
ಆಡ್ವಾಣಿ ಮತ್ತು ಕೇಶುಭೈ ನಡೆದು ಸುಸ್ತಾಗಿ ಕಾರಿಗೆ ಕಾಯುತ್ತಿದ್ದಾರೆ. ರೊಂಯ್ಯನೆ ಹಾದು ಹೋದ ಕಾರು ಸಿಡಿಸಿದ ಧೂಳು ಇಬ್ಬರನ್ನೂ ರಾಚಿದೆ. ಹಿಂದಿನ ಸೀಟಿನಲ್ಲಿ ಮೋದಿ. ಮುಂದೆ ಅಮಿತ್ ಶಾ.
ಅಧಿಕಾರದ ಕಾರು ಯಾರ್ಯಾರನ್ನೋ ಹತ್ತಿಸಿಕೊಳ್ಳುತ್ತದೆ. ಅದಕ್ಕಾಗಿ ತಾನು ನಾಲ್ಕಾರು ದಶಕ ಅವಿರತ ಶ್ರಮಿಸಿದ್ದೇನೆ, ರಥಯಾತ್ರೆ ಮಾಡಿದ್ದೇನೆ, ಬಿಜೆಪಿಯನ್ನು ಎರಡು ಬಾರಿ ಗೆಲ್ಲಿಸಿದ್ದೇನೆ, ಪಕ್ಷದವರು ಅಧಿಕಾರ ಅನುಭವಿಸುವಂತೆ ಮಾಡಿದ್ದೇನೆ, ತಾನು ಹಿಂದೆ ನಿಂತು ವಾಜಪೇಯಿ ಗದ್ದುಗೆಯೇರುವಂತೆ ಮಾಡಿದ್ದೇನೆ...
ಉಹುಂ. ಆ ಕಾರಿನ ಚಾಲಕ ನಿಷ್ಕರುಣಿ. ತನಗೀಗ ಯಾರು ಮಾಲಿಕನೋ ಅವನ ಮಾತನ್ನು ಮಾತ್ರವೇ ಆತ ಕೇಳುವುದು. ತಾನು ಗುರು- ಆತ ಶಿಷ್ಯ ಎಂದರೂ ಆತ ಕೇಳಲಾರ. ಅದೆಲ್ಲ ಅವನ ಪಾಲಿಗೆ ಅರ್ಥಹೀನ ಪದಗಳು.
ಜನಪ್ರಿಯತೆ ಮತ್ತು ಅಧಿಕಾರಗಳು ಕೇಳುವ ಮೊದಲ ಕಂದಾಯವೇ ಗುರು- ಶಿಷ್ಯ ಸಂಬಂಧ. ಇದು ಭಾರತದ ಚರಿತ್ರೆಯಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತ ಬಂದಿದೆ. ಅಧಿಕಾರದ ಸನ್ನಿಧಿಯಲ್ಲಿ ಒಂದೋ ಶಿಷ್ಯ, ಗುರುವಿನ ತಲೆ ತರಿಯುತ್ತಾನೆ. ಇಲ್ಲಾ, ಗುರುವೇ ಶಿಷ್ಯನ ಕತ್ತು ಕತ್ತರಿಸಬೇಕಾಗುತ್ತದೆ. ನಮ್ಮದು ದ್ರೋಣ- ಏಕಲವ್ಯರ ಪರಂಪರೆಯ ದೇಶವಲ್ಲವೆ!? ಅಂದ ಹಾಗೆ, ದ್ರೋಣರ ತಲೆ ಹಾರಿಸಿದ ಧೃಷ್ಟದ್ಯುಮ್ನ ಬಿಲ್ವಿದ್ಯೆ ಕಲಿತದ್ದು ದ್ರೋಣರಲ್ಲೇ ಎಂಬುದು ನಿಮಗೆ ಗೊತ್ತೆ?
'ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ' ಎಂದು ಹಾಡಿದವರೂ ನಮ್ಮವರೇ. 'ಪಿತೃಹತ್ಯೆ ಮಾಡದೆ ಯಾವ ಜನಾಂಗವೂ ಮುಂದುವರಿಯುವುದಿಲ್ಲ' ಎಂದವರೂ ನಮ್ಮವರೇ. ಇಲ್ಲಿ ಪಿತೃ ಅಂದರೆ ಗುರುವೇ. ರಾಜಕಾರಣದಲ್ಲಿ ಮೊದಲು ಶಿಷ್ಯ ಗುರುವಿನ ಹೆಜ್ಜೆಗಳ ಮೇಲೆ ತನ್ನ ಹೆಜ್ಜೆಗಳನ್ನಿಡುತ್ತಾನೆ. ಸಾಗಿ ಬಂದ ದಾರಿಯನ್ನು ಗುರು ಹಿಂತಿರುಗಿ ನೋಡಿದರೆ, ತನ್ನ ಹೆಜ್ಜೆ ಗುರುತುಗಳಿಂತಲೂ ಶಿಷ್ಯನ ಫೂಟ್ಪ್ರಿಂಟ್ಗಳು ಕಾಣುವ ಸಂಭವವೇ ಹೆಚ್ಚು. ಕಿವಿಯಲ್ಲಿ ಕುರುಡು ಅಭಿಮಾನಿಗಳ ಹೇಷಾರವ.
ಈಗ ಆಡ್ವಾಣಿಗೆ ಆಗಿರುವುದೂ ಅದೇ. ಅಂದು ನರೇಂದ್ರ ಮೋದಿಯವರನ್ನು ಬೆಳೆಸಿದವರೂ ಅವರೇ. ಕೇಶುಭೈ ಪಟೇಲರೇನು ಆಡ್ವಾಣಿಗೆ ಆಪ್ತರಾಗಿರಲಿಲ್ಲವೆ? ಅವರೂ ಮೋದಿಗೆ ಗುರುವಿನ ಸ್ಥಾನದಲ್ಲಿದ್ದವರೇ. ಅಂಥವರನ್ನೇ ಮೋದಿ ದಯಾದಾಕ್ಷಿಣ್ಯವಿಲ್ಲದೆ ಮೂಲೆಗೊತ್ತಿದಾಗ, ಸುಮ್ಮನೆ ನಿಂತು ನೋಡಿದವರು ಇದೇ ಆಡ್ವಾಣಿ. ತನ್ನ ರಥಯಾತ್ರೆಗಳಲ್ಲಿ ಜತೆಗೊಯ್ದು, ರಾಷ್ಟ್ರ ರಾಜಕಾರಣದಲ್ಲಿ ಮೋದಿ ಪ್ರಭಾವ ಹೆಚ್ಚಿಸಿಕೊಳ್ಳುವಂತೆ ಮಾಡಿದವರೂ ಅವರೇ. ತಾನೇ ಬೆಳೆಸಿದ ಶಿಷ್ಯ ತನ್ನ ಮುಂದೆಯೇ ಗದ್ದುಗೆ ಏರುತ್ತೇನೆಂದಾಗ ಅವರ ಮನವೇಕೆ ತಲ್ಲಣಿಸಿತು? ತನ್ನ ಗುರು ತನಗೇ ಅಡ್ಡಗಾಲಾಗುತ್ತಿದ್ದಾರೆಂದು ಗೊತ್ತಾದಾಗ ಮೋದಿಯೇಕೆ ಆಡ್ವಾಣಿಗೆ ಟಿಕೆಟ್ ಕೊಡದೆ ಸತಾಯಿಸಿ ಪಾಠ ಕಲಿಸಿದರು? ಗುರು- ಶಿಷ್ಯ ಸಂಬಂಧ ಒಂದು ಹಂತ ತಲುಪಿದ ಬಳಿಕ ನಂಜೇರುತ್ತದೆಯೆ?
ಇದನ್ನು ಇನ್ನೊಂದು ರೀತಿಯಲ್ಲೂ ನೋಡಬಹುದು. ನಮ್ಮ ಭಾರತೀಯ ರಾಜಕಾರಣದ ಚರಿತ್ರೆ ಎಂದರೆ, ತಾತ್ವಿಕತೆಗಳ ಸಮರದ ಕತೆ. ಇಲ್ಲಿ ಗುರುವಿನ ಸಿದ್ಧಾಂತವನ್ನು ಶಿಷ್ಯ ಒಪ್ಪಬಹುದು, ಬಿಡಬಹುದು. ಕೌಶಲ್ಯಗಳನ್ನೆಲ್ಲ ಕಲಿತ ನಂತರ ಗುರುವಿಗೇ ತಿರುಮಂತ್ರ ಹೊಡೆಯಬಹುದು. ಆಡ್ವಾಣಿ- ಮೋದಿಯವರದು ಯಾವ ತಾತ್ವಿಕತೆಯ ಬಿಕ್ಕಟ್ಟು? ಇಬ್ಬರೂ ಉಗ್ರ ಹಿಂದುತ್ವ ಪ್ರತಿಪಾದಕರು. ಮೋದಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರಷ್ಟೇ. ಇದು ಶುದ್ಧ ಅಧಿಕಾರ ಹಂಚಿಕೆಯ ಬಿಕ್ಕಟ್ಟು.
ಹಿಂದಿನ ಗುರು- ಶಿಷ್ಯ ಸಂವಾದ, ಸಮರಗಳು ಹೀಗಿರಲಿಲ್ಲವೇನೋ. ಜವಾಹರಲಾಲ್ ನೆಹರು, ರಾಮಮನೋಹರ ಲೋಹಿಯಾ, ಡಾ.ಬಿ.ಆರ್.ಅಂಬೇಡ್ಕರ್ ಮೂವರೂ ಮಹಾತ್ಮ ಗಾಂಧಿಯವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಆದರೆ ಈ ಮೂವರೂ ತುಳಿದ ಹಾದಿಯ ತಾತ್ವಿಕತೆಗಳು ಗಾಂಧಿಗಿಂತ ಸಂಪೂರ್ಣ ಭಿನ್ನವಾಗಿದ್ದವು. ಒಬ್ಬರನ್ನೊಬ್ಬರು ಒಪ್ಪದಿದ್ದರೂ, ಪರಸ್ಪರ ಗೌರವವಿಟ್ಟುಕೊಂಡಿ ಢಿದ್ದರು. ಅದು ಆ ತಲೆಮಾರಿನ ಮೌಲ್ಯವಾಗಿತ್ತು.
ರಾಜಕೀಯ ಚಾಣಾಕ್ಷರಿಗೆ ಒದಗುವ ಕಲೆ. ಆದರೆ ಮುತ್ಸದ್ದಿತನವೆಂಬುದು ಗುರು- ಶಿಷ್ಯ ಸಂಬಂಧದಿಂದಷ್ಟೇ ಕಲಿಯಬಹುದಾದ ಕಲೆ. ಇದಕ್ಕೆ ಉದಾಹರಣೆಯಾಗಿ ಜನತಾ ಪರಿವಾರವನ್ನು ನೋಡಬಹುದು. ಜನತಾ ಪರಿವಾರದ ಪಿತಾಮಹರಾದ ಜಯಪ್ರಕಾಶ ನಾರಾಯಣ ಕೂಡ ಮಹಾತ್ಮರ ಶಿಷ್ಯರಾಗಿದ್ದರು. ಇವರ ಚಳುವಳಿಯಲ್ಲಿ ಭಾಗವಹಿಸಿ ಮುಂದೆ ರಾಷ್ಟ್ರದ ರಾಜಕಾರಣದಲ್ಲಿ ಮಿಂಚಿದ ಅನೇಕ ಜನತಾ ನಾಯಕರು, ಜೆಪಿ ಚಳವಳಿಯ ಗರಡಿಯಲ್ಲೇ ಸಾಮು ನಡೆಸಿದ್ದನ್ನು ಕಾಣಬಹುದು. ಹೆಚ್ಚೇಕೆ, ತುರ್ತುಪರಿಸ್ಥಿತಿ ಸಂದರ್ಭ ಜನಸಂಘ ಕೂಡ ಜೆಪಿ ಜತೆ ಸೇರಿತ್ತು ಎಂಬುದಿಲ್ಲಿ ಗಮನಾರ್ಹ. ಅಂದರೆ ಐತಿಹಾಸಿಕ ಕ್ಷಣದಲ್ಲಿ ಎಲ್ಲರಿಗೂ ಒಬ್ಬ ಪರಮಗುರು ಬೇಕಾಗುತ್ತಾನೆ.
ಗುರುವನ್ನು ಧಿಕ್ಕರಿಸಿ ಬೇರೆಯಾದ ಶಿಷ್ಯರು ಸಾಕಷ್ಟಿದ್ದಾರೆ. ದಲಿತರ ಹಿತಚಿಂತನೆಯ ಪ್ರಶ್ನೆಯೆತ್ತಿ ಗಾಂಧಿಯಿಂದ ಬೇರೆಯಾದ ಅಂಬೇಡ್ಕರ್ ಇಂಥವರು. ನಿಜಲಿಂಗಪ್ಪನವರಿಂದ ಬೇರೆಯಾಗಿ ಜನತಾ ಸೇರಿದ ರಾಮಕೃಷ್ಣ ಹೆಗಡೆ, ಅಣ್ಣಾ ಹಜಾರೆ ಜತೆಗೆ ಲೋಕಪಾಲ್ ಚಳವಳಿ ಕಟ್ಟಿ ನಂತರ ಪಕ್ಷ ಕಟ್ಟುವ ವಿಚಾರದಲ್ಲಿ ಭಿನ್ನಮತ ಮೂಡಿ ಅಣ್ಣಾನಿಂದ ಬೇರೆಯಾಗಿ ಪೊರಕೆ ಹಿಡಿದ ಅರವಿಂದ ಕೇಜ್ರಿವಾಲ್ ಇಂಥವರು.
ಗುರುವಿನ ನೆರಳಲ್ಲೇ ನಡೆದು ಒಳಿತು ಕಂಡ ಶಿಷ್ಯರೂ ಬೇಕಾದಷ್ಟಿದ್ದಾರೆ. ಗುರು ಮಹಾ ಪ್ರಭಾವಿಯಾಗಿದ್ದರೆ ಹೀಗಾಗುತ್ತದೆ. ಕಾನ್ಷಿರಾಂ ಗರಡಿಯಲ್ಲಿ ಪಳಗಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಮಾಯಾವತಿ, ಎಂ.ಜಿ. ರಾಮಚಂದ್ರನ್ ಅವರ ಜತೆಗಿದ್ದು ಗದ್ದುಗೆ ಕಂಡ ಜಯಲಲಿತಾ, ಎನ್ಟಿಆರ್ ಶಿಷ್ಯತ್ವದಿಂದ ಉದ್ಧಾರವಾದ ಚಂದ್ರಬಾಬು ನಾಯ್ಡು ಕಾಣುತ್ತಾರೆ.
ಗುರುವಿನ ಸಿದ್ಧಾಂತ ತಾತ್ವಿಕತೆಗಳನ್ನು ಅನುಷ್ಠಾನದ ಹಂತದಲ್ಲಿ ಮುಂದಕ್ಕೊಯ್ದು, ಮರೆಯಾಗದ ಛಾಪು ಮೂಡಿಸಿದವರು ಹಲವರು. ಕರ್ನಾಟಕದ ಶಾಂತವೇರಿ ಗೋಪಾಲ ಗೌಡರು ಅಂಥ ಶಿಷ್ಯ. ಅವರು ಲೋಹಿಯಾರ ನೇರ ಶಿಷ್ಯರಾಗಿದ್ದರೋ ಇಲ್ಲವೋ. ಆದರೆ ಲೋಹಿಯಾವಾದವನ್ನು ಕರ್ನಾಟಕದಲ್ಲಿ ಬಿತ್ತಿ ಬೆಳೆದು, ಹತ್ತಾರು ಸಮಾಜವಾದಿ ಶಿಷ್ಯರ ಬೆಳೆ ತೆಗೆದವರು ಅವರು. ಎಸ್.ಬಂಗಾರಪ್ಪ, ದೇವರಾಜ ಅರಸ್,
ಅವರ ಶಿಷ್ಯವರ್ಗ ರಾಜಕೀಯದಿಂದಾಚೆಗೆ ಯು.ಆರ್.ಅನಂತಮೂರ್ತಿ, ಲಂಕೇಶ್, ಗೋಪಾಲಕೃಷ್ಣ ಅಡಿಗ ಎಂದೆಲ್ಲ ಚಾಚಿಕೊಂಡಿದೆ.
ಗುರುವು ಸಾವನ್ನಪ್ಪಿದ ಬಳಿಕ, ಅದುವರೆಗೂ ಒಟ್ಟಿಗಿದ್ದ ಅವರ ಶಿಷ್ಯರು ಬೇರೆಬೇರೆಯಾಗುತ್ತಾರೆ. ಇದಕ್ಕೂ ಗಾಂಧಿ ಪಾಳಯದಲ್ಲೇ ಉದಾಹರಣೆಗಳಿವೆ. ಎಂ.ಡಿ.ನಂಜುಂಡಸ್ವಾಮಿ ಬಳಿಕ ರೈತಸಂಘದ ಒಡಕು, ಪುಟ್ಟಣ್ಣಯ್ಯ- ಸುಂದರೇಶ್ ಬೇರೆಯಾದದ್ದು, ರಾಮಕೃಷ್ಣ ಹೆಗಡೆಯವರ ಜತೆಗಿದ್ದ ದೇವೇಗೌಡ- ಸಿದ್ದರಾಮಯ್ಯ- ಬೊಮ್ಮಾಯಿ- ಎಂ.ಪಿ.ಪ್ರಕಾಶ್ ಮಂತಾದವರು ಚೂರು ಚೂರಾಗಿ ಹಂಚಿಹೋದದ್ದನ್ನು ಗಮನಿಸಿ. ಹೆಗಡೆ ಬದುಕಿದ್ದಾಗಲೇ ದೇವೇಗೌಡರ ಕೈಗೆ ಸಿಕ್ಕಿ ಅರ್ಧ ಸತ್ತಿದ್ದರು ಅನ್ನಿ.
ತಮಿಳುನಾಡು ಕಂಡ ಮಹಾಚಿಂತಕ ಪೆರಿಯಾರ್ ರಾಮಸ್ವಾಮಿ. ಇವರ ದ್ರಾವಿಡ ಶೈಲಿ ರಾಜಕೀಯ ಚಿಂತನೆ ಫೇಮಸ್ಸು. ಇವರಿಂದಲೇ ಮೊಳೆತ ಕುಡಿ ಸಿ.ಎನ್.ಅಣ್ಣಾದುರೈ. ಪೆರಿಯಾರ್ ತನಗಿಂತ 40 ವರ್ಷ ಸಣ್ಣವಳನ್ನು ಮದುವೆಯಾದರೆಂದು ಸಿಟ್ಟಿಗೆದ್ದು ಆಚೆ ಬಂದು ಅವರು ಕಟ್ಟಿದ ಪಕ್ಷವೇ ದ್ರಾವಿಡ ಮುನ್ನೇತ್ರ ಕಳಗಂ. ಅಣ್ಣಾದುರೈ ಬದುಕಿದ್ದಾಗಲೇ ಅವರಿಗೂ, ಡಿಎಂಕೆ ಕಾರ್ಯಕರ್ತ ಕರುಣಾನಿಧಿಗೂ ಭಿನ್ನಮತವಿತ್ತು. ಅಣ್ಣಾದುರೈ ತೀರಿಕೊಂಡ ನಂತರ, ಅವರ ಇನ್ನೊಬ್ಬ ಶಿಷ್ಯ ಎಂಜಿರಾಮಚಂದ್ರನ್ ಹೊರಗೆ ಬಂದು ಎಐಎಡಿಎಂಕೆ ಸ್ಥಾಪಿಸಿದರು. ಮುಂದೆ ಕರುಣಾನಿಧಿ ಡಿಎಂಕೆಯ ಪಾಳೆಯಗಾರರಾದದ್ದೂ, ಎಂಜಿಆರ್ ಶಿಷ್ಯೆ ಜಯಾ ಎಐಎಡಿಎಂಕೆಯ ರಾಣಿಯಾದದ್ದೂ ಇತಿಹಾಸ.
ಹೀಗೇ ನೋಡುತ್ತ ಹೋದರೆ ಎಲ್ಲ ಮುತ್ಸದ್ದಿಗಳ ಹಿನ್ನೆಲೆಯಲ್ಲೂ ಒಬ್ಬ ಗುರುವಿದ್ದಾನೆ. ಎಲ್ಲ ಗುರುಶಿಷ್ಯರೂ ಭಿನ್ನಾಭಿಪ್ರಾಯ ಎದುರಿಸಿರುತ್ತಾರೆ. ಕತ್ತು ಕತ್ತರಿಸುವಂಥ ಪೈಪೋಟಿ ಅಪರೂಪಕ್ಕಾದರೂ ನಡೆಯುತ್ತದೆ. ಅದೂ ಅಧಿಕಾರ ಕಣ್ಣಳತೆಯಲ್ಲಿದ್ದಾಗ. ಇದು ಗುರು- ಶಿಷ್ಯ ಸಂಬಂಧಕ್ಕೇ ಅಂಟಿದ ಶಾಪ. ಭಾರತೀಯ ಗುರು-ಶಿಷ್ಯ ಸಂಬಂಧ ಅತಿ ಶ್ರೇಷ್ಠ ಅನ್ನುತ್ತೇವಲ್ಲ, ಅದು ಏಕಕಾಲಕ್ಕೆ ನಿಜ ಮತ್ತು ಸುಳ್ಳು.
ಇನ್ನು ಇಪ್ಪತ್ತು ವರ್ಷಗಳ ನಂತರದ ದೃಶ್ಯ ಹೇಗಿರಬಹುದು? ಇನ್ಯಾರೋ ಕಾರಿನಲ್ಲಿ ಸ್ಪೀಡಾಗಿ ಹೋಗುತ್ತಾರೆ. ರಸ್ತೆ ಬದಿ ನಿಂತಿರುವ ಮೋದಿ, ಕಣ್ಣಿಗೆ ಮರೆಯಾಗಿ ಕೈ ಹಿಡಿದು ಅದು ಯಾರದೆಂದು ನೋಡುತ್ತಿದ್ದಾರೆ. ಅಲ್ಲಿಗೆ ಚರಿತ್ರೆ ಮತ್ತೊಂದು ಸುತ್ತು ತಿರುಗಿರುತ್ತದೆ.
- ಹರೀಶ್ ಕೇರ
harishkera@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


