ಖುಷಿ

ಖುಷ್ವಂತಜ್ಜನ ಕಾಲೆಳೆದವರಾರು?

ಖುಷ್ವಂತಜ್ಜನ ಕಾಲೆಳೆದವರಾರು?
Published On :

ಯಾರದ್ದು ಸರಿ ಎಂದು ತೀರ್ಪು ಕೊಡುವುದು ಸ್ವಲ್ಪ ಕಷ್ಟ. ಒಂದು ವರುಷದ ಹಿಂದೆ, ಜಿ. ವೆಂಕಟಸುಬ್ಬಯ್ಯನವರಿಗೆ ನೂರು ತುಂಬಿದಾಗ ಅವರೊಂದು ಮಾತಂದಿದ್ದರು; 'ಚಟಗಳಿಂದ ದೂರವಿರುವ ಯಾವುದೇ ವ್ಯಕ್ತಿ ನೂರರ ಕನಸು ಕಾಣಬಲ್ಲ'. ಅದೇ ಹೊತ್ತಿಗೆ, ಕೆಲವು ದಿನಗಳ ಕೆಳಗೆ ಖುಷ್ವಂತ್ ಸಿಂಗ್ ಕೂಡ 'ನಾನು ನೂರು ವರುಷ ಆರಾಮಾಗಿರಬಲ್ಲೆ' ಎಂಬ ವಿಶ್ವಾಸದಲ್ಲಿ ಹೇಳಿಕೊಂಡಿದ್ದರು. ಜಿವಿಗೆ ಕೇಳಿದೆ, 'ಅಷ್ಟೆಲ್ಲ ಕುಡಿದೂ 98ರ ಖುಷ್ವಂತಜ್ಜ ಶತಕದ ಸಮೀಪ ಬಂದಿದ್ದಾರಲ್ಲ?'. ಜಿವಿ ನಕ್ಕರು. ಕಿರುಗಣ್ಣರಳಿಸಿ ಹೇಳಿದರು, 'ಎಲ್ಲೋ ಅಪರೂಪದ ಪ್ರಕರಣ ಖುಷ್ವಂತ್ ಸಿಂಗ್. ನಾನು ಅಂಥ ಬದುಕನ್ನು ಒಪ್ಪುವುದಿಲ್ಲ'.
'ಖುಷ್ವಂತ್‌ಸಿಂಗ್ ನೂರು ಮುಟ್ಟಲಿ' ಎಂಬ ಹರಕೆಯನ್ನು ಅಂದೇ ಹೊತ್ತುಕೊಂಡೆ. ಆ ಹರಕೆ ತೀರಿದ ದಿನ ಜಿವಿಗೆ 'ಯಾಕೆ ಸುಳ್ಳು ಹೇಳಿದಿರಿ?' ಅಂತ ಕೇಳಲೇಬೇಕು ಅಂತಲೂ ನಿರ್ಧರಿಸಿದೆ. ಈಗ ಖುಷ್ವಂತ್‌ಸಿಂಗ್ ಎಲ್ಲಿ ಎಡವಿದರು ಗೊತ್ತಾಗಲಿಲ್ಲ, ಜಿವಿ ಎಲ್ಲಿ ಗೆದ್ದರು ಅಂತಲೂ ತಿಳಿಯುತ್ತಿಲ್ಲ.
ವ್ಯಸನವೊಂದು ಬಿಟ್ಟರೆ, ಇಬ್ಬರ ಬದುಕಲ್ಲೂ ವ್ಯತ್ಯಾಸದ ಎಳೆ ಅಂಥದ್ದೇನೂ ಕಾಣಿಸದು. ನ್ಯೂ ಡೆಲ್ಲಿಯ ಸುಜನ್‌ಸಿಂಗ್ ಪಾರ್ಕ್ ರೆಸಿಡೆನ್ಸ್‌ನಲ್ಲಿ ಹಾಗೂ ಜಯನಗರ 7ನೇ ಬ್ಲಾಕಿನ 31ನೇ ಕ್ರಾಸಿನಲ್ಲಿರುವ ಜಿವಿ ಅವರ ಮನೆಯಲ್ಲಿ ಮುಂಜಾನೆ ಒಂದೇ ಸಲಕ್ಕೆ ಅಂದರೆ, ನಾಲ್ಕೂ ಮೂವತ್ತಕ್ಕೆ ವಿದ್ಯುತ್ ಬಲ್ಬು ಹೊತ್ತಿಕೊಳ್ಳುತ್ತದೆ. ಮನೆಯವರೆಲ್ಲರಿಗೂ ಜಿವಿ ಸ್ವತಃ ಚಹಾ ತಯಾರಿಸಿದರೆ, ಅಲ್ಲಿ ಖುಷ್ವಂತ್ ಸಿಂಗ್ ಟೇಬಲ್ಲಿಗೆ ಚಾಯ್ ಸಿದ್ಧವಾಗಿ ಬರುತ್ತದೆ. ಇಬ್ಬರೂ ಮನೆಯಾಚೆಯ ಪಾರ್ಕುಗಳಲ್ಲಿ ಮುನ್ನೂರೋ, ಐನೂರೋ ಮೀಟರ್ ನಡೆದು ಬೆವರುತ್ತಾರೆ. ಜಿವಿ ಆಟಗೀಟ ಅಂತ ಅಂಟಿಕೊಳ್ಳುವುದಿಲ್ಲ. ಖುಷ್ವಂತ್‌ಗೆ ಟೆನಿಸ್ ಆಡದಿದ್ದರೆ ಸಮಾಧಾನ ಆಗುವುದಿಲ್ಲ. ಅಷ್ಟೆಲ್ಲ ಮುಗಿದಾದ ಮೇಲೆ ಆರಾಮ ಖುರ್ಚಿಯಲ್ಲಿ ಪುಟ್ಟ ವಿರಾಮ. ಇಬ್ಬರೂ ದಿನಪತ್ರಿಕೆಯ ಮೇಲೆ ಕಣ್ಣಾಡಿಸಬೇಕು. ಕಾಲ ಓಡುತ್ತಿದೆ, ಅದನ್ನು ಹೇಗಾದರೂ ಓವರ್‌ಟೇಕ್ ಮಾಡಬೇಕೆಂಬ ಹಠ ಹೃದಯದೊಳಗೆ ಕೂತಿದೆ. ಖುಷ್ವಂತ್ ಒಂದೊಂದೇ ಪದಕ್ಕೆ ಗಾಳ ಹಾಕುತ್ತಾ, ಹತ್ತೇ ನಿಮಿಷದಲ್ಲಿ ಪದಬಂಧ ತುಂಬಿಸುತ್ತಾರೆ. ಜಿವಿ ಯಾವ ಪತ್ರಿಕೆಯ ಯಾವ ಪದದಲ್ಲಿ ಕಾಗುಣಿತದ ತಪ್ಪಾಗಿದೆ ಅಂತ ಲೆಕ್ಕವಿಡುತ್ತಾರೆ. ಜಿವಿ ಮನೆಯ ಬೆಚ್ಚನೆ ನೀರಿನಲ್ಲಿ ಸ್ನಾನ ಮಾಡಲು ಬಯಸಿದರೆ, ಖುಷ್ವಂತಜ್ಜನಿಗೆ ಸನಿಹದ ಜಿಮ್‌ಖಾನ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿ ಏಳುವ ಆಸೆ ಉಕ್ಕುತ್ತದೆ. ಹೆಚ್ಚೆಂದರೆ ಜಿವಿಯ ಮನೆಯಲ್ಲಿ ಉಪ್ಪಿಟ್ಟೋ, ಇಡ್ಲಿಯೋ ಸಿದ್ಧವಿರಬಹುದು ಆದರೆ, ಖುಷ್ವಂತ್‌ಗೆ ಮೊಟ್ಟೆ ಬೆರೆಸಿದ ಟೋಸ್ಟ್ ಹೊಟ್ಟೆಗಿಣುಕಬೇಕು. ನಂತರ ಇಬ್ಬರೂ ಪುಸ್ತಕ ಓದುತ್ತಾರೆ. ಜಗತ್ತು ಏನಾಯಿತೆಂದು ಕೊಂಚ ಟಿವಿ ನೋಡುತ್ತಾರೆ. ಹಾಗೂ ಬೇಸರವಾದರೆ ಇಬ್ಬರೂ ಸಂಗೀತ ಆಲಿಸುತ್ತಾರೆ. ಜಿವಿಗೆ ಕೆಲವು ಕಾರ್ಯಕ್ರಮಗಳಿಗೆ ಭೇಟಿ ಕೊಡುವ ಅನಿವಾರ್ಯ ಓದಗಬಹುದು. ಆದರೆ, ಖುಷ್ವಂತ್ ಅಷ್ಟಾಗಿ ಸಾರ್ವಜನಿಕವಾಗಿ ತೆರೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಮಧ್ಯಾಹ್ನ ಜಿವಿಗೆ ದಕ್ಷಿಣ ಭಾರತ ಶೈಲಿಯ ಲಘು ಆಹಾರ. ಅಲ್ಲಿ ಖುಷ್ವಂತ್ ಕೆಲಸದಾಕೆ ತಯಾರಿಸಿದ ಮುಘ್ಲಾಯ್ ಊಟವನ್ನು ಪಕ್ಕಕ್ಕೆ ತಳ್ಳಿ, ಒಂದು ಬೌಲ್ ಸೂಪ್ ಕುಡಿದು ಯುರೋಪಿಯನ್ ಶೈಲಿಯ ಆಹಾರಕ್ಕೆ ಬಾಯಿ ಕೊಡುತ್ತಾರೆ.
ಇಷ್ಟೆಲ್ಲ ಆದಮೇಲೆ ಜಿವಿ ಸಂಜೆ, ರಾತ್ರಿ ಕಳೆಯುವುದು ನಮ್ಮ ನಿಮ್ಮಂತೆಯೇ. ಆದರೆ, ಆ ವೇಳೆ ಖುಷ್ವಂತ್ ದಾರಿ ಬೇರೆಯಾಗುತ್ತದೆ. ಮನೆಯ ಒಂದು ಕೋಣೆ ಬಾರ್ ಆಗುತ್ತದೆ. ಹಲವು ದಶಕಗಳ ಕಾಲ ಪತ್ರಕರ್ತರಾಗಿ ಡೆಡ್‌ಲೈನ್ ನಡುವೆ ಬದುಕಿದ ಖುಷ್ವಂತ್, ಆ ಕುಡಿತದ ಸಂಭ್ರಮಕ್ಕೂ ಒಂದು ಡೆಡ್‌ಲೈನ್ ಕೊಡುತ್ತಾರೆ. ರಾತ್ರಿ 7ರಿಂದ 8.30ರ ವರೆಗೆ ಆಪ್ತರು ಯಾರು ಬೇಕಾದರೂ ಅವರೊಂದಿಗೆ ಪೆಗ್ ಇಳಿಸಬಹುದು. ನೇತುಬಿದ್ದ ಗಡಿಯಾರ 'ಏಯ್ಟ್ ಥರ್ಟಿ' ಎಂದು ಗಂಟಲರಚಿದ ಕೂಡಲೇ ಆ ಅತಿಥಿಗೆ ಅಲ್ಲಿ ಜಾಗವಿಲ್ಲ. ಯಾವುದೇ ಚರ್ಚೆಯಿದ್ದರೂ, ಇನ್ನಾವುದೇ ಪೋಲಿ ಜೋಕ್ ಇದ್ದರೂ ಅರ್ಧಕ್ಕೆ ನಿಲ್ಲಿಸಿ ನಡೆಯುತ್ತಿರಬೇಕಷ್ಟೇ. ಚರ್ಚೆ ಇನ್ನೂ ತೀವ್ರವಾದರೆ ತಾನೆಲ್ಲಿ ಮತ್ತೆ ಮತ್ತೇರಿಸಿಕೊಳ್ಳಬೇಕೋ ಎಂಬುದು ಅವರೊಳಗೆ ಮನೆ ಮಾಡಿದ ಫೋಬಿಯಾ.
ಆದರೆ, ಆ ಒಂದೂವರೆ ಗಂಟೆಯಲ್ಲಿ ನೀವು ಎಷ್ಟೇ ಮತ್ತೇರಿಸಿಕೊಳ್ಳಿ... ಖುಷ್ವಂತ್ ಎದುರಿನ ಬಾಟಲಿ ಹಾಗೆಯೇ ಇರುತ್ತದೆ. ಐರಿಷ್ ವ್ಹಿಸ್ಕಿಯ ಎರಡು ಪೆಗ್ಗಷ್ಟೇ ಅವರ ಈಗೀಗಿನ ಶಿಸ್ತು. ಅಲ್ಲಿಯ ತನಕ ಬಿಲ್ಲಿನಂತೆ ಬಿರುಸಾಗಿದ್ದ ಆ ಹಣ್ಣು ಮೀಸೆ, ಅಷ್ಟರಲ್ಲಾಗಲೇ ನೆನೆದು ತೊನೆದಾಡುತ್ತಿರುತ್ತದೆ. ಮೊದಲು ಮೀಸೆ ಕುಡಿದು ಟೈಟಾಗಬೇಕು. ಕೊನೆಗೆ ತಾನು! ಆ್ಯಂಟಿಕ್ ಗ್ಲಾಸಿನೊಳಗೆ ಎರಡು ಐಸ್ ಕ್ಯೂಬ್‌ಗಳು, ಮುಚ್ಚುಳ ತೆಗೆದ ಸೋಡಾ ಬಾಟಲಿಗಳಿಲ್ಲದೆ ಅವರ ಟೇಬಲ್ಲು ಇವರ ಪಾರ್ಟಿಗೆ ಜೋಶ್ ನೀಡುವುದಿಲ್ಲ.
ನೀವು  ಆ ಪಾರ್ಟಿಗೆ ಹೊಸಬರಾದರೆ, ಖುಷ್ವಂತ್ ತಮ್ಮ ಮದ್ಯವೃತ್ತಾಂತವನ್ನು ಹೇಳುತ್ತಾ ಹೋಗುತ್ತಾರೆ; ಐರಿಷ್, ಆಸ್ಟ್ರೇಲಿಯಾನ್, ಕೆನಡಿಯನ್, ಜಪಾನಿ ವ್ಹಿಸ್ಕಿಗಳ ಟೇಸ್ಟ್ ಹೇಗಿತ್ತು? ತಾನೇಕೆ ಬ್ಲ್ಯಾಕ್ ಲೇಬಲ್ಲನ್ನೇ ಇಷ್ಟಪಟ್ಟೆ? ಜಾನಿ ವಾಕರ್ ಬ್ಲ್ಯೂ ಲೇಬಲ್‌ಗೆ ತಾನೇಕೆ ಪೂರ್ಣ ಅಂಕ ಕೊಡುತ್ತೇನೆ? ಭಾರತದಲ್ಲಿ ತಾವು ಕುಡಿದ ಅತಿ ಕೆಟ್ಟ ವೈನ್ ಯಾವುದು? ಇವೆಲ್ಲ ಮುಗಿದ ನಂತರ ಅವರ ನಾಲಗೆ ಈಗಿನ ಜಗತ್ತಿಗೆ ಬರುತ್ತದೆ. ಅಲ್ಲೊಂದಿಷ್ಟು 'ಸ್ಪಾಟ್‌ಜೋಕ್‌'ಗಳು ಹುಟ್ಟಿಕೊಳ್ಳುತ್ತವೆ. ಇನ್ನ್ಯಾರದ್ದೋ ಸೆಕ್ಸ್ ಅನುಭವಗಳ ಸ್ವಾರಸ್ಯವನ್ನು ಕ್ರಿಕೆಟ್ ಕಾಮೆಂಟರಿಯಂತೆ ಸೋಸಿಡುತ್ತಾರೆ. ಕರೀನಾ, ಕತ್ರೀನಾರ ಸೊಂಟದ ಅಳತೆಯನ್ನು ಟೈಲರ್‌ಗಿಂತ ಪಕ್ಕಾ ಕೊಡಬಹುದು. ಈ ಖುಷ್ವಂತ್ ಮತ್ತಿನೊಳಗೆ ಮುಳುಗಬಲ್ಲರು, ಅದೇ 'ಮದ್ಯ'ಪ್ರದೇಶದ ಬೇಲಿ ನೆಗೆದೂ ಹೊರಬರಬಲ್ಲರು. ಯಾವುದೇ ಅತ್ಯುತ್ತಮಬರವಣಿಗೆ ಮಾಡುವ ಹಿಂದಿನ ದಿನ ಅವರು ಕುಡಿಯುವುದಿಲ್ಲ.
ಖುಷ್ವಂತ್‌ರಂತೆ, ಜಿವಿ ಎಂದೂ ಆ ಮದ್ಯದ ವಾಸನೆ ನೋಡಿಲ್ಲ. ಬಹುಶಃ ಜಿವಿ ವಿರುದ್ಧ ಖುಷ್ವಂತ್ ಸೋತಿದ್ದು, ಇದು ಮೊದಲ ಕಾರಣ. ಮತ್ತಿನಲ್ಲಿ ಆ ಪರಿ ತೇಲಿದ ಮೇಲೂ ಜೋಕ್‌ಗಳು ಅವರ ಆರೋಗ್ಯದ ಹೊಣೆ ಹೊತ್ತಿರಬಹುದು. ಅವರ ಪತ್ರಿಕೋದ್ಯಮದ ಒತ್ತಡದ ಬದುಕು ಶತಕದಂಚಿಗೆ ಖುಷ್ವಂತ್‌ರ ಕಾಲೆಳೆದಿರಬಹುದು. ಜಿವಿ ರೀತಿ ಉಪನ್ಯಾಸಕರಾಗಿ, ಶಾಂತರಾಗಿ, ಬರವಣಿಗೆ ಕೃಷಿಯಲ್ಲಿ ತೊಡಗುವ ಭಾಗ್ಯ ಖುಷ್ವಂತ್‌ಗೆ ಸಿಗದೇ ಹೋಗಿದ್ದೂ ಖುಷ್ವಂತ್ ಶತಕವಂಚಿತರಾಗುವುದಕ್ಕೆ ಕಾರಣವಾಯಿತೇನೋ? ಇಲ್ಲಾ ಟೈಟಾದ ಮೀಸೆ ಅಜ್ಜನಿಗೆ ಭಾರವಾಯಿತಾ?
ಅಂತೂ 'ನೈಂಟಿ' ಮನುಷ್ಯ, ನೈಂಟಿ ನರ್ವಸ್‌ಗೆ ಒಳಗಾದ. ಬದುಕಿನಲ್ಲಿ ಔಟೆಂದರೆ ಔಟ್. ಇಲ್ಲಿ ಕೆಂಪು- ಹಸಿರು ದೀಪಗಳ ಮೇಲೆ ನಂಬಿಕೆಯಿಡಲಾಗದು. ಇಲ್ಲಿ ತೀರ್ಪನ್ನು ಪರಾಮರ್ಶಿಸಲು ಥರ್ಡ್ ಅಂಪೈರೂ ಇಲ್ಲ. ಅಂಪೈರ್ ಇದ್ದರೂ ಅವರೇನು ಜಿವಿಯ ಪರ ಇದ್ದಾರಾ? ಗೊತ್ತಿಲ್ಲ!

=  ಕೀರ್ತಿ ಕೋಲ್ಗಾರ್
kolgarkeerthi@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.