ಖುಷಿ

ಭಾರತೀಯ ಇತಿಹಾಸಕಾರರು

Published On :

ಭಾರತೀಯ ಇತಿಹಾಸಕಾರರು
'ಭಾರತೀಯ ಇತಿಹಾಸಕಾರರು' ಒಂದು ಪರಿಚಯಾತ್ಮಕ ಕೃತಿ. ಡಾ.ಕೆ. ಪ್ರಭಾಕರರಾವ್ ಅವರು ಮೂವತ್ತೈದು ಇತಿಹಾಸಕಾರರನ್ನು ಇದರಲ್ಲಿ ಪರಿಚಯಿಸಿದ್ದಾರೆ. ಇಂದು ಇತಿಹಾಸವನ್ನು ಶುದ್ಧ ರೂಪದಲ್ಲಿ ನೋಡುವವರು ವಿರಳವಾಗಿದ್ದಾರೆ. ತಮ್ಮ ಇಸಂನ ಚಸ್ಮವನ್ನು ತೊಟ್ಟು ಇತಿಹಾಸದ ಅನುಸಂಧಾನ ಮಾಡುವವರ ಪೀಳಿಗೆ ಬೆಳೆದಿರುವಾಗ ಈ ಕೃತಿಯಲ್ಲಿಯ ಇತಿಹಾಸಕಾರರು ಹೇಗೆ ತಮ್ಮ ಮಾರ್ಗವನ್ನು ರೂಪಿಸಿಕೊಂಡಿದ್ದರು ಎಂಬುದನ್ನು ಅರಿಯುವುದು ಉತ್ತಮ ಪಾಠವಾಗಲಿದೆ. ಅಧ್ಯಯನದ ಶಿಸ್ತು ಕೃತಿಯಲ್ಲಿದೆ.
ಪ್ರ: ರವೀಂದ್ರ ಪುಸ್ತಕಾಲಯ, ಸಾಗರ, ಪುಟಗಳು 324, ಬೆಲೆ ರು. 225

ಜರಗನಹಳ್ಳಿಯ ಕಾವ್ಯಹೊಳೆ
ಹೂಗಳಿಗೆ ಆಶ್ಚರ್ಯ! ಕೆಳಗೆ ನಾರುವ ಗೊಬ್ಬರ/ ಸುತ್ತಲೂ ಮುಳ್ಳಿನ ಹಂದರ/ ಆದರೂ ಏಕೆ/ ಈ ದುಂಬಿಗಳಿಗೆ/ ಮುತ್ತುವ ಕಾತುರ/- ಇಂಥ 'ಚೋದ್ಯ'ವನ್ನು ಕವಿತೆಯಾಗಿಸಿದವರು ಜರಗನಹಳ್ಳಿ ಶಿವಶಂಕರ್. ಹನಿಗವಿತೆಗಳನ್ನು ಬರೆಯುವುದು ಅವರ ಗೀಳು. ಅವರು ವಿಶಿಷ್ಟ ಉಪಮೆಗಳು, ರೂಪಕಗಳನ್ನು ನೀಡಿದ್ದಾರೆ. 'ಹುಲ್ಲು ಹಸಿರು ತಿಂದ/ ಆನೆಯ ದಂತ/ ಅಧಿಕಾರದ ಅರಮನೆಯ ಸೇರಿತು/ ಹುಲ್ಲೆ ಹಸು ತಿಂದ ಹುಲಿಯ ಚರ್ಮ ಅಧ್ಯಾತ್ಮದ ಆಶ್ರಮ ಸೇರಿತು/- ಇವು ಶಿವಶಂಕರ ಅವರ ಕವಿ ಪ್ರತಿಭೆಗೆ ಕನ್ನಡಿ ಹಿಡಿಯುತ್ತವೆ.
ಪ್ರ: ಶುಭದ ಪ್ರಕಾಶನ, ಬೆಂಗಳೂರು, ಪುಟಗಳು 116, ಬೆಲೆ ರು. 80

ಹೆಣ್ಣು ಹೊನ್ನು
ವಿಭಿನ್ನ ಸಂಸ್ಕೃತಿಗಳ ತಲ್ಲಣಗಳು ಕನ್ನಡ ಸಾಹಿತ್ಯದಲ್ಲಿ ಚಿತ್ರಣಗೊಂಡಿವೆ. ಪ್ರಸ್ತುತ ಸರಸ್ವತಿ ಶಂಕರ್ ಅವರ 'ಹೆಣ್ಣು ಹೊನ್ನು' ಕಾದಂಬರಿಯು ಅಮೆರಿಕದಲ್ಲಿದ್ದಾಗ ಭಾರತದ ಸಂಸ್ಕೃತಿಗಾಗಿ ಹಂಬಲಿಸುವ ಹಾಗೂ ಭಾರತಕ್ಕೆ ಮರಳಿದ ಮೇಲೆ ಅಮೆರಿಕದ ಬದುಕಿನ ಶೈಲಿಯನ್ನು ಇಷ್ಟಪಡುವ ಒಂದು ವರ್ಗದ ಚಿತ್ರಣವನ್ನು ಒಳಗೊಂಡಿದೆ. ಈ ಎರಡೂ ದೇಶಗಳ ಸಂಸ್ಕೃತಿಗಳ ಸಮನ್ವಯ ಎಂಬುದು ಸುಲಭವಲ್ಲ. ಬಹುಶಃ ಅದು ಸಾಧ್ಯವೂ ಇಲ್ಲ. ಎಲ್ಲದಕ್ಕೂ ಮುಖ್ಯವಾಗಿ ಸಂಯಮ ಬೇಕು ಎಂಬ ಕಿವಿಮಾತು ಇಲ್ಲಿದೆ.
ಪ್ರ: ರವಿ ಪ್ರಕಾಶನ, ಬೆಂಗಳೂರು, ಪುಟಗಳು 304, ಬೆಲೆ ರು. 150

ಮೂರು ನಾಟಕಗಳು
'ಅಂಗ ಭಂಗದ ರಾಜ್ಯದಲ್ಲಿ ಮತ್ತು ಇತರ ಮಕ್ಕಳ ನಾಟಕಗಳು' ಕೃತಿಯಲ್ಲಿ ಕೃಷ್ಣಮೂರ್ತಿ ಬಿಳಿಗೆರೆಯವರು ಮೂರು ನಾಟಕಗಳನ್ನು ನೀಡಿದ್ದಾರೆ. ಸಂಗೀತ ಪ್ರಧಾನ, ಮಕ್ಕಳೂ ಅಭಿನಯಿಸಬಹುದಾದ ನಾಟಕಗಳು ಇವು. ಅಂಗ ಭಂಗದ ರಾಜ್ಯದಲ್ಲಿ, ಕೇಡಾಳ ಕೆಪ್ಪರ್ಕ ಹಾಗೂ ಕತ್ತೆ ಹಾಡು ಎಂಬ ಮೂರು ನಾಟಕಗಳು ಇದರಲ್ಲಿವೆ. ಸಮಾಜದ ವಿರೂಪಗಳನ್ನು ಧ್ವನ್ಯಾತ್ಮಕವಾಗಿ ಹೇಳುವ ಬಿಳಿಗೆರೆ ಸೃಜನಶೀಲತೆಯ ಮೇಲೆ ನಡೆದ ಸಮಕಾಲೀನ ಹಲ್ಲೆಗಳಿಗೂ ರೂಪಕದ ರೂಪ ನೀಡಿದ್ದಾರೆ.
ಪ್ರ: ನಮ್ಮ ಪ್ರಕಾಶನ, ಬಿಳಿಗೆರೆ, ತಿಪಟೂರು ತಾ., ಪುಟಗಳು 92, ಬೆಲೆ ರು. 60

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.