ರ್ಯಾಂಕ್ ಬ್ಯಾಂಕ್
ಪೋಷಕರಲ್ಲಿ ಇರುವ ಕೆಟ್ಟ ಚಾಳಿ ಎಂದರೆ ಮಕ್ಕಳನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಓದಲು ಹೇಳುವುದು! ಇತ್ತ ಟಿವಿ ನೋಡುತ್ತ, ಹರಟುತ್ತ, ...

ಪೋಷಕರಲ್ಲಿ ಇರುವ ಕೆಟ್ಟ ಚಾಳಿ ಎಂದರೆ ಮಕ್ಕಳನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಓದಲು ಹೇಳುವುದು! ಇತ್ತ ಟಿವಿ ನೋಡುತ್ತ, ಹರಟುತ್ತ, ನೆಂಟರಿಷ್ಟರನ್ನು ಮನೆಗೆ ಕರೆತರುತ್ತ ಆನಂದಿಸುವುದು. ಕೆಲವು ಪೋಷಕರು ಕಿತ್ತಾಡುತ್ತಿರುತ್ತಾರೆ, ಕಿರುಚಾಡುತ್ತಿರುತ್ತಾರೆ, ಜಗಳವಾಡುತ್ತಿರುತ್ತಾರೆ. ಅತ್ತ ಮಗು ಇವರ ಹಾರಾಟದ ಧ್ವನಿ ಕೇಳಿ ಓದಲೂ ಆಗದೆ ಚಡಪಡಿಸುತ್ತಿರುತ್ತದೆ. ಮಾನಸಿಕವಾಗಿ ಕುಗ್ಗಿಹೋಗುತ್ತದೆ. ಮಗುವಿನ ಇಂಗಿತ ಅರ್ಥ ಮಾಡಿಕೊಂಡು ಓದಲು ಪ್ರೋತ್ಸಾಹ ನೀಡಬೇಕು.
ಯಂಡಮೂರಿ ವೀರೇಂದ್ರನಾಥ್ ತೆಲುಗಿನ ಖ್ಯಾತ ಕಾದಂಬರಿಕಾರರು. ಇವರ ವ್ಯಕ್ತಿತ್ವ ವಿಕಸನ ಪುಸ್ತಕಗಳಿಗೂ ಬಲು ಬೇಡಿಕೆಯಿದೆ. ಇವರ ಸಾಕಷ್ಟು ಕೃತಿಗಳು ಕನ್ನಡಕ್ಕೆ ಬಂದು ಜನಪ್ರಿಯತೆ ಪಡೆದಿವೆ. ಪರೀಕ್ಷೆ ಎದುರಿಸುವ ಮಕ್ಕಳು, ರ್ಯಾಂಕ್ ಪಡೆಯಬೇಕಾದರೆ ಅನುಸರಿಸಬೇಕಾದ ನೂರು ಸೂತ್ರಗಳನ್ನು ಅವರು ಪುಸ್ತಕ ರೂಪದಲ್ಲಿ ತಂದಿದ್ದಾರೆ.
ನಮ್ಮ ಆಶಯ ಇಷ್ಟೇ, ಯಂಡಮೂರಿಯವರು ಹೇಳಿರುವ ಸೂತ್ರಗಳನ್ನು ಪೋಷಕರು 'ತಮ್ಮದೇ ಮಾತುಗಳು' ಎಂಬ ರೀತಿಯಲ್ಲಿ ಮಕ್ಕಳಿಗೆ ಪ್ರೀತಿಯಿಂದ ಹೇಳಬೇಕು. ಆರಿಸಿದ ಇಪ್ಪತ್ತೈದು ಸೂತ್ರಗಳನ್ನು ನಿಮಗೆ 'ಖುಷಿ'ಯಲ್ಲಿ ನೀಡುತ್ತಿದ್ದೇವೆ. ಖುಷಿಯಿಂದ ನೀವು ನಿಮ್ಮ ಮಕ್ಕಳಿಗೆ ಹೇಳಿ. 'ರ್ಯಾಂಕ್ ಪಡೆಯಲು ನೂರು ಟಿಪ್ಸ್' ಕೃತಿಯನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಪ್ರಕಟಿಸಿದೆ. ಇವು ಅಂತರ್ಜಾಲದ http://www.yandamoori.com/english/100tips.html ಲಿಂಕ್ನಲ್ಲೂ ಲಭ್ಯ.
ಮೆದುಳಿನ ಚುರುಕು
ಧ್ಯಾನ ಎಂಬ ಪದವನ್ನು ಸರಿಯಾಗಿ ಆರ್ಥೈಸದಿದ್ದರೆ ಕಠಿಣ ಎನಿಸುತ್ತದೆ. ಧ್ಯಾನ ಎಂದರೆ ಸದ್ಯದ ಸ್ಥಿತಿಯಲ್ಲಿ ಆಳವಾದ ಅನುಭವ ಹೊಂದುತ್ತ ಮಾನಸಿಕ ಮತ್ತು ದೈಹಿಕವಾಗಿ ಆನಂದಿಸುವುದು. ಉದಾಹರಣೆಗೆ ತಲೆ ಬಾಚುವಾಗ ಕೂದಲಿನ ಮೇಲೆ ಗಮನವಿರಿಸುವುದು. ಊಟ ಮಾಡುವಾಗ ರುಚಿಯನ್ನು ಅರಿಯುವುದು. ಓದುವಾಗ ಪಾಠವನ್ನು ಆನಂದಿಸುವುದು.
ಸಿಟ್ಟು, ಸೋಮಾರಿತನ, ಸಂವೇದನಾಶೀಲತೆ, ಭಯ, ಒತ್ತಡ, ಕೀಳರಿಮೆ, ಭವಿಷ್ಯದ ಬಗ್ಗೆ ಅಭದ್ರತೆ, ಸಾರ್ವಜನಿಕವಾಗಿ ಮಾತನಾಡಲು ಹಿಂಜರಿಕೆ, ಗಮನ ಮತ್ತು ನೆನಪಿನ ಕೊರತೆ ಸಾಮಾನ್ಯವಾಗಿ ವಿದ್ಯಾರ್ಥಿಗಳನ್ನು ಕಾಡುವ ಸಮಸ್ಯೆ. ಆದರೆ ಇವುಗಳು ಸಮಸ್ಯೆಗಳಲ್ಲ!
ಮೇಲೆ ಹೇಳಲಾಗಿರುವ ಅವುಗಳು ಸಮಸ್ಯೆಯೇ? ಅಥವಾ ವೈಫಲ್ಯಗಳೇ? ಒಂದು ವೇಳೆ ವಿದ್ಯಾರ್ಥಿ ಓರ್ವ ಪರೀಕ್ಷೆಗೂ ಮೊದಲು ಅಪಘಾತಕ್ಕೀಡಾದ ಎಂದರೆ ಅದು ಸಮಸ್ಯೆ. ಪರೀಕ್ಷೆಗೂ ಹಾಜರಾಗುವ ಮುನ್ನ ಹಾಲ್ ಟಿಕೆಟ್ ಕಳೆದುಕೊಳ್ಳುವುದು ಸಮಸ್ಯೆ. ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ ನ್ಯೂನತೆಗಳನ್ನು ಪರಿಹರಿಸಬಹುದು.
ಮನಸ್ಥಿಯ ನಿಯಂತ್ರಣ
ಓದುವ ಸ್ವಲ್ಪ ಮೊದಲು ಏನು ಮಾಡುತ್ತಿದ್ದೆ ಎಂಬುದರ ಬಗ್ಗೆ ಜಾಗೃತನಾಗಿರು. ಓದುವ ಮೊದಲು ಗಾಸಿಪ್ಗಳಿಗೆ ಕಿವಿಕೊಡುವುದು, ವಾದಿಸುವುದು, ಫೋನ್ನಲ್ಲಿ ಸಂಭಾಷಿಸುವುದು, ಸುದೀರ್ಘ ಚರ್ಚೆ ಮಾಡುವುದು ಸರಿಯಲ್ಲ. ಅಂತಹ ನಡೆಯಿಂದ ಹಗಲುಗನಸಿಗೆ ಎಡೆಮಾಡಿಕೊಟ್ಟ ಹಾಗಾಗುತ್ತದೆ.
ಸಂಜೆ 6 ಗಂಟೆಯ ನಂತರ ಗೆಳೆಯರಲ್ಲಿ ನಿಮ್ಮ ಮುಂದೆ ಸುತ್ತಾಡದಂತೆ ವಿನಂತಿಸಿಕೋ. ಯಾವ ಆಟಗಳಿಗೂ ತನ್ನನ್ನು ಕರೆಯದಂತೆ ಮೊದಲೇ ಹೇಳಿಬಿಡು. ಓದುವಾಗ ಮನೆಗೆ ನೆಂಟರನ್ನು ಕರೆದು ತರಬೇಡಿ ಎಂದು ಪೋಷಕರಲ್ಲಿ ಕೇಳಿಕೋ.
ಓದುವ ಸಂದರ್ಭದಲ್ಲಿ ನಿನ್ನ ಮನಸ್ಸು ಅಲೆದಾಡಲು ಶುರು ಮಾಡಿದರೆ ಓದುವ ಸ್ಥಳದಲ್ಲಿ ಕುಳಿತುಕೊಳ್ಳಬೇಡ. ಎದ್ದು ಹೊರಗೆ ಬಾ. ತಾಜಾ ಗಾಳಿ ಸೇವಿಸು. ನಿನ್ನ ಮನಸ್ಸನ್ನು ಮತ್ತೆ ಓದಿನೆಡೆಗೆ ಕೇಂದ್ರೀಕರಿಸಲು ಸಹಾಯವಾಗುತ್ತದೆ. ಆದರೆ ಯಾವ ಕಾರಣಕ್ಕೂ ಅಂತಹ ಬಿಡುವಿನ ಸಮಯದಲ್ಲಿ ಗೆಳೆಯರಲ್ಲಿ, ಮನೆಯವರಲ್ಲಿ ಮಾತನಾಡಬೇಡ. ಟಿವಿಯತ್ತ ಇಣುಕುವ ಪ್ರಯತ್ನವೂ ಬೇಡ. ಒಂದು ಸೆಕಂಡೂ ಟಿವಿಯತ್ತ ಕಣ್ಣು ಹಾಯಿಸಬಾರದು.
ಓದಲು ಶುರು ಮಾಡುವ ಮೊದಲು ನಿನ್ನ ಟೇಬಲ್ ಮುಂದೆ ಸ್ವಲ್ಪ ಸಮಯ ಮೌನವಾಗಿ ನಿಲ್ಲು. ಕಣ್ಣು ಮುಚ್ಚಿ ಎಲ್ಲ ಯೋಚನೆಗಳಿಂದ ಹೊರಗೆ ಬಾ. ಬಳಪದಲ್ಲಿ ಬರೆಯುವ ಮುನ್ನ ಹಲಗೆ ಉಜ್ಜುವಂತೆ ಮನಸ್ಸನ್ನು ಸಜ್ಜುಗೊಳಿಸಬೇಕು. ಮೊದಲಿಗೆ ಹಾಗೆ ಮಾಡಲು ಸಾಧ್ಯವಿಲ್ಲ ಎನಿಸಬಹುದು. ಅದು ನಿನ್ನ ತಾಳ್ಮೆ ಪರೀಕ್ಷಿಸುತ್ತದೆ. ಹೆಚ್ಚಿನವರು ಹೀಗೆ ಮಾಡುವುದನ್ನು ನಿಲ್ಲಿಸುತ್ತಾರೆ. ಆದರೆ 3-4 ವಾರಗಳು ಇದನ್ನು ಅನುಸರಿಸಿದರೆ ಆ ಮೌನವನ್ನು ಚೆನ್ನಾಗಿ ಆನಂದಿಸುತ್ತೀಯ.
ಆಹಾರ, ಸೋಮಾರಿತನ ಮತ್ತು ನಿದ್ರೆ
ಸೋಮಾರಿತನದಲ್ಲಿ ಎರಡು ವಿಧವಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ. ದೇಹದಲ್ಲಿ ದಣಿವಾದರೆ ಅದು ಆಯಾಸ. ಮಾನಸಿಕವಾಗಿ ಸೋಮಾರಿತನ ಆವರಿಸಿದರೆ ಅದು ಬೇಸರ. ದಣಿವು ಮತ್ತು ಬೇಸರದ ನಡುವಣ ವ್ಯತ್ಯಾಸದ ಅರಿವಿರಬೇಕು.
ನೀನು ಬದುಕಲು ತಿನ್ನುತ್ತೀಯೋ? ಅಥವಾ ತಿನ್ನಲು ಬದುಕುತ್ತಿಯೋ? ಆರು ದಿನಗಳ ಕಾಲ ಬದುಕುವುದಕ್ಕೆ ತಿನ್ನು. ಒಂದು ದಿನ ತಿನ್ನುವುದಕ್ಕೆ ಬದುಕು! ಸಾಮಾನ್ಯವಾಗಿ ನಿನಗೆ ದಿನದಲ್ಲಿ 2500 ಕ್ಯಾಲೋರಿ ಬೇಕು. ನೀನು ತಿನ್ನುವ 100 ಗ್ರಾಂ ಚಿಪ್ಸ್, ಬಟರ್ ಕುಕ್ಕೀಸ್, ಚಾಕೋಲೆಟ್ ಬಾರ್ ಕ್ರಮವಾಗಿ 450, 480, 300 ಕ್ಯಾಲೋರಿ ಕೊಡುತ್ತವೆ. ಇಡ್ಲಿ ಒಳ್ಳೆಯದೇ, 50 ಕ್ಯಾಲೋರಿ ಸಿಗುತ್ತದೆ. ಆದರೆ ಅದರ ಜೊತೆಗೆ ಒಂದು ಚಮಚ ತೆಂಗಿನ ಕಾಯಿ ಅಥವಾ ಶೇಂಗಾ ಚಟ್ನಿ ಅಷ್ಟೇ ಪ್ರಮಾಣದ ಕ್ಯಾಲೋರಿಯನ್ನು ನಿನ್ನ ದೇಹಕ್ಕೆ ಸೇರಿಸುತ್ತದೆ.
22 ಅಮಿನೋ ಆ್ಯಸಿಡ್ಗಳಿವೆ. ಅದರಲ್ಲಿ ಒಂಬತ್ತನ್ನು ದೇಹ ಉತ್ಪಾದಿಸುವುದಿಲ್ಲ. ಹಾಗಾಗಿ ಅನಿವಾರ್ಯವಾಗಿ ಹೊರಗಿನಿಂದ ಅವಶ್ಯಕತೆ ಕೇಳುತ್ತದೆ. ಸೋಯಾಬೀನ್ ನಿನ್ನಂಥ ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದ ಆಹಾರ. ಜೊತೆಗೆ ಚಪಾತಿ ಸೇರಿಸಿಕೋ. ಸೋಯಾ ಹುಡಿಯನ್ನು ನೀರಲ್ಲಿ ಅಥವಾ ಜ್ಯೂಸ್ನಲ್ಲಿ ಅಥವಾ ಹಾಲಿನಲ್ಲಿ ಮಿಶ್ರಮಾಡಿ ದಿನದಲ್ಲಿ ಎರಡು ಬಾರಿ ಸೇವಿಸು.
ಹೊಟ್ಟೆ ತುಂಬಾ ತಿಂದರೆ ಸ್ವಲ್ಪ ಸಮಯದಲ್ಲೇ ತೂಕಡಿಸಲು ಶುರುಮಾಡುತ್ತೀಯ. ಮೆದುಳಲ್ಲಿರುವ ರಕ್ತ ಮತ್ತು ಆಮ್ಲಜನಕವನ್ನು ಕರುಳು ಒಣಗಿಸಿಬಿಡುತ್ತದೆ. ಮದ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ನೀನು ಸ್ವೀಕರಿಸುವ ಆಹಾರದಲ್ಲಿ ಶೇಕಡಾ 25ರಷ್ಟು ಇಳಿಕೆ ಮಾಡು. ಬೆಳಗಿನ ಉಪಹಾರ ಜಾಸ್ತಿ ಸೇವಿಸು. ಸಂಜೆ ಸ್ವಲ್ಪ ಪ್ರಮಾಣದ ಸ್ನಾಕ್ಸ್ ಇರಲಿ.
ರಾತ್ರಿ ಊಟದ ನಂತರ 10 ನಿಮಿಷ ನಡೆದಾಡು. ನಂತರ ಓದುವ ಕೋಣೆಗೆ ಹೋಗು. ಶನಿವಾರ ತಡರಾತ್ರಿಯವರೆಗೆ ಸಿನಿಮಾ ನೋಡುತ್ತ ಕೂರಬೇಡ. ಭಾನುವಾರ ಮದ್ಯಾಹ್ನ ಕಳೆದ ರಾತ್ರಿಯ ನಿದ್ರೆಯನ್ನು ಸರಿದೂಗಿಸುತ್ತೇನೆ ಎಂಬೆಲ್ಲ ತುಡುಗುತನ ಬೇಡ.
ಸಮಯ ಪ್ರಜ್ಞೆ
ಸೋಲಲು ಮುಖ್ಯ ಕಾರಣ ವೇಳಾಪಟ್ಟಿ ಹೊಂದಿಸದಿರುವುದು. ವೇಳೆಗೆ ಮಹತ್ವ ನೀಡದಿರುವುದು. ಸೂಕ್ತ ಸಮಯದಲ್ಲಿ ಅನಗತ್ಯ ವಿಚಾರಗಳಿಗೆ ತಲೆ ಬಾಗುವುದು. ನಿದ್ರಾ ಸಮಯದಲ್ಲಿ ಏರುಪೇರು. ಅಗತ್ಯವಿಲ್ಲದ ಗಾಸಿಪ್ಗಳಿಗೆ ತಲೆಕೆಡಿಸಿಕೊಳ್ಳುವುದು. ಜೂನ್ ತಿಂಗಳಲ್ಲಿ ಓದಲು ಸಾಕಷ್ಟು ಸಮಯ ಇದೆ ಎಂದು ಹಲವು ವಿದ್ಯಾರ್ಥಿಗಳು ಮನಸ್ಸನ್ನು ಹಗುರ ಬಿಡುತ್ತಾರೆ. ಆ ಸಂದರ್ಭದಲ್ಲಿ ಪರೀಕ್ಷೆಯ ಪ್ರಾಮುಖ್ಯತೆ ಬಗೆಗೆ ಯಾವ ಚಿಂತನೆಗಳು ಇರುವುದಿಲ್ಲ. ಈಗಿನಿಂದಲೇ ಓದಬೇಕಾದ ಆತುರವಾದರೂ ಏನಿದೆ? ಎನ್ನುತ್ತಾ ಸೋಮಾರಿತನ ಪ್ರದರ್ಶಿಸುತ್ತಾರೆ. ಹೆಚ್ಚಿನ ಆತ್ಮವಿಶ್ವಾಸದಿಂದ ಓದುವುದನ್ನು ಕಡೆಗಣಿಸುತ್ತಾರೆ. ಕಡೆಗಣನೆಯೇ ಸೋಮಾರಿತನವಾಗಿ ಮಾರ್ಪಡುತ್ತದೆ. ಹೀಗೆ 6 ತಿಂಗಳು ಕಳೆದಾಗ ಪರೀಕ್ಷೆಗೆ ಓದಲೇ ಬೇಕಾದ ಅಗತ್ಯತೆ ಮೂಡುತ್ತದೆ. ಆತುರ ಮನೆಮಾಡುತ್ತದೆ. ಪರೀಕ್ಷೆಯ ದಿನ ಗೊತ್ತಾಗುತ್ತಿದ್ದಂತೆ ಓದಲು ಪ್ರಾರಂಭಿಸುತ್ತಾರೆ. ಪಠ್ಯ ಕಷ್ಟವೆನಿಸುತ್ತದೆ. ಓದುವ ಹುರುಪು ಮಾಸುತ್ತದೆ. ಗೊಂದಲ ಉಂಟಾಗುತ್ತದೆ. ಅಂತಿಮ ಪರೀಕ್ಷೆಯಲ್ಲಿ ನೋಡಿಕೊಳ್ಳೋಣ ಎಂದು ಮಾರ್ಚ್ಗೆ ಓದುವುದನ್ನು ಮುಂದೂಡುತ್ತಾರೆ. ಮಾರ್ಚ್ ತಿಂಗಳಲ್ಲಿ ಎಲ್ಲವೂ ಬಹುಮುಖ್ಯ ವಿಷಯಗಳೇ. ಚಿಕ್ಕ ಕಣಿವೆಯಲ್ಲಿ ಒಮ್ಮೆಗೆ ವಿಪರೀತ ನೀರು ನುಗ್ಗಿದಾಗ ಉಂಟಾಗುವ ಪ್ರವಾಹದಂತೆ ಮನಸ್ಸಲ್ಲಿ ಪ್ರವಾಹದ ಅಲೆಯೇಳುತ್ತದೆ. ಎಲ್ಲವೂ ಮುಖ್ಯ ವಿಷಯಗಳು. ಅದು ಪರೀಕ್ಷೆಗೆ ಬರುತ್ತದೆ, ಇದು ಪರೀಕ್ಷೆಗೆ ಬರುತ್ತದೆ ಎಂದಾಗುವಾಗ ಯಾವುದಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದಿಲ್ಲ. ಇದರಿಂದ ಮಾನಸಿಕ ಒತ್ತಡ ಪ್ರಾರಂಭವಾಗುತ್ತದೆ. ಓದಿದೆ ಹಿನ್ನಡೆ ಉಂಟಾಗುತ್ತದೆ.
2-3 ಗಂಟೆಗಳ ಕಾಲ ಏನೂ ತಿನ್ನದೆ ನಿರಂತರವಾಗಿ ಓದಲು ಸಾಧ್ಯವಿಲ್ಲ ಎಂದಾದರೆ 'ತಿನ್ನುವುದಕ್ಕೆ ವಿರಾಮ' ಎಂದು ಕೆಲವು ನಿಮಿಷಗಳ ಸಮಯಾವಕಾಶ ನಿರ್ಧರಿಸಿಕೋ. ಆ ಸಮಯದಲ್ಲಿ ಅಡುಗೆ ಮನೆಗೆ ಹೋಗಬೇಡ. ಹಣ್ಣು ಸೇರಿದಂತೆ ಇತರ ತಿನಿಸುಗಳನ್ನು ಓದುವ ಟೇಬಲ್ನ ಸಮೀಪದಲ್ಲೇ ಇರಿಸಿಕೋ. ಆದರೆ ತಿನ್ನಬೇಡ. ಯಾವ ಸಮಯದಲ್ಲಿ ತಿನ್ನಬೇಕು ಎಂದು ಮೊದಲು ನಿರ್ಧರಿಸಿದ್ದೀಯೋ ಆಗಲೇ ತಿನ್ನಬೇಕು. ಓದುವ ಕೋಣೆ ಪವಿತ್ರವಾದುದು, ಅಲ್ಲಿ ನಿರ್ಧರಿಸಿಕೊಂಡಿರುವ ಕಟ್ಟುಪಾಡುಗಳಿಗೆ ಧಕ್ಕೆ ತರಬಾರದು ಎಂಬುದನ್ನು ನೆನಪಿಟ್ಟುಕೋ.
ಹಂತ ಹಂತವಾಗಿ ಓದುವ ವಿಸ್ತಾರತೆಯನ್ನು ಜಾಸ್ತಿ ಮಾಡುವುದು ಮತ್ತು ವೇಗವನ್ನು ಹೆಚ್ಚಿಸಿಕೊಳ್ಳುವುದು ಒಂದು ಕಲೆ. ಇಲ್ಲಿ ನೀನು ಪೂರಕವಾದ ಅಂಶವನ್ನಷ್ಟೇ ಓದುತ್ತಿದ್ದೀಯಾ ಅಥವಾ ಅನಗತ್ಯ ವಿಷಯಗಳನ್ನು ಓದುತ್ತಿರುವೆಯಾ ಎಂಬುದರ ಮೇಲೆ ವೇಗದ ಪ್ರಮಾಣ ನಿರ್ಧಾರವಾಗುತ್ತದೆ. ಮೊದಲು ಓದುವಾಗ ನಿಧಾನವಾಗಿ ಓದುತ್ತ ಮುಖ್ಯ ವಿಷಯಗಳ ಕೆಳಗೆ ಗೆರೆ ಎಳೆಯುತ್ತ ಸಾಗಬೇಕು. ಪುನಃ ಓದುವಾಗ ಗೆರೆ ಎಳೆದು ಮುಖ್ಯ ವಿಷಯ ಎಂದು ಗುರುತಿಸಿರುವ ಸಾಲುಗಳನ್ನಷ್ಟೇ ಓದಿಕೊಂಡರೆ ಸಾಕು. ಎಷ್ಟು ಬೇಗ ಪಠ್ಯವನ್ನು ಓದಿ ಮುಗಿಸಿದೆ ಎನ್ನುವುದು ಮುಖ್ಯವಲ್ಲ. ಓದಿದ ಎಷ್ಟು ಅಂಶವನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೀಯ ಎಂಬುದು ಪ್ರಮುಖವಾಗುತ್ತದೆ.
ನೀನು ಸ್ನೇಹಿತರೊಡನೆ ಫೋನ್ನಲ್ಲಿ ಮಾತನಾಡುವಾಗ ನಿನಗೆ ಗೊತ್ತಿಲ್ಲದಂತೆ ಮನೆಯವರಲ್ಲಿ ರೆಕಾರ್ಡ್ ಮಾಡಲು ಹೇಳು. ನಾಳೆ ಶಾಲೆಯಲ್ಲಿ ಭೇಟಿಯಾಗುವ ಸ್ನೇಹಿತನೊಡನೆ ಏನೇನು ಮಾತನಾಡಿದೆ ಎಂಬುದನ್ನು ರೆಕಾರ್ಡ್ ಪ್ಲೇ ಮಾಡುವ ಮೂಲಕ ಯೋಚನೆ ಮಾಡು. 'ಆ ಒಂದು ಗಂಟೆಯಲ್ಲಿ ಮಾತನಾಡಿದ ವಿಷಯ ಮುಖ್ಯವಾ?' ಎಂದು ಪ್ರಶ್ನಿಸಿಕೋ. 'ಆ ವಿಚಾರವಾಗಿ ನಾಳೆ ಶಾಲೆಯಲ್ಲಿ ಬಿಡುವಿನ ವೇಳೆಯಲ್ಲಿ ಮಾತನಾಡಬಹುದಿತ್ತಲ್ಲಾ?' ಎಂದೂ ಪ್ರಶ್ನೆ ಮಾಡು. ಸಮಯ ವ್ಯರ್ಥ ಮಾಡಿದ್ದೀಯ ಎಂಬುದು ಅರ್ಥವಾಗುತ್ತದೆ.
ರಾತ್ರಿಯೇ ಓದಲು ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಸಿದ್ಧಪಡಿಸಿಟ್ಟು ಮಲಗು. ಉದಾಹರಣೆಗೆ ಪಠ್ಯ ಪುಸ್ತಕ, ರಫ್ ಪುಸ್ತಕ, ನೀರು ಇತ್ಯಾದಿ. ಅವುಗಳ ಹುಡುಕುವಿಕೆಗಾಗಿ ಅತ್ಯಮೂಲ್ಯ ಬೆಳಗಿನ ಸಮಯವನ್ನು ಹಾಳು ಮಾಡಬೇಡ.
ವೇಳಾಪಟ್ಟಿಯಂತೆ ಓದುವ ಅಭ್ಯಾಸ ರೂಢಿಸಿಕೋ. ಪ್ರತಿದಿನ ಅನುಸರಿಸು. ಯಾವ ಕಾರಣಕ್ಕೂ ವೇಳಾಪಟ್ಟಿಯ ಹೊರತಾಗಿ ಏನೂ ಮಾಡಬೇಡ. 'ಸಮಯ ನಿಯಂತ್ರಿತ ವರ್ತನೆ' ತಾನಾಗೇ ಪ್ರಾರಂಭವಾಗುತ್ತದೆ. ಊಟ, ನಿದ್ರೆ ನಿಗದಿತ ಸಮಯಕ್ಕೆ ಆಗುತ್ತದೆ. ವೈಪರೀತ್ಯ ಉಂಟಾಗುವುದಿಲ್ಲ.
ಕೀಲಿ ಕೈಗಳನ್ನು ತೆಗೆದಿರಿಸಿಕೋ
ಓದುವಾಗ ಮುಖ್ಯವಾದ ವಿಚಾರಗಳನ್ನು ಪ್ರತ್ಯೇಕ ಪುಸ್ತಕದಲ್ಲಿ ನಿನಗೆ ಸುಲಭವಾಗುವ ಭಾಷೆಯಲ್ಲಿ ಬರೆದಿಟ್ಟುಕೋ. ಉದಾಹರಣೆಗೆ ನೀನು ರಾಮಾಯಣವನ್ನು ಓದುತ್ತಿದ್ದೀಯ ಎಂದರೆ 'ರಾಮ- ಹೆಂಡತಿ- ಅಪಹರಣ- ಯುದ್ಧ' ಎಂದು ಬರೆದುಕೊಳ್ಳುವುದು. ಈ ನಾಲ್ಕು ಶಬ್ದಗಳು ರಾಮಾಯಣದ ಅಸ್ಥಿಪಂಜರ. ಇದನ್ನೇ ಕೀ ನೋಟ್ ಎನ್ನುವುದು ಅಥವಾ ಕೀಲಿ ಕೈಗಳನ್ನು ಗೊತ್ತು ಮಾಡಿಕೊಳ್ಳುವುದು.
ನೀನು ಆ ನಾಲ್ಕು ಶಬ್ದಗಳ ಸಹಾಯದಿಂದ ಪೂರ್ತಿ ರಾಮಾಯಣ ಹೇಳುವಷ್ಟು ವಿಶ್ವಾಸ ಹೊಂದಿರಬೇಕು. ಅಂದರೆ ಕ್ರಿಯಾ ನರಕೋಶದಲ್ಲಿ ಆ ನಾಲ್ಕು ಶಬ್ದಗಳು ಇರಬೇಕು. ಘಟನೆಗಳು, ಪಾತ್ರಧಾರಿಗಳ ಹೆಸರುಗಳು ಉದಾಹರಣೆಗೆ ಲಕ್ಷ್ಮಣ, ವಿಭೀಷಣ, ರಾವಣ ಇತ್ಯಾದಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಚಾತುರ್ಯ ಇರಬೇಕು. ಇವುಗಳು ನಿಷ್ಕ್ರಿಯ ನರಕೋಶಗಳಲ್ಲಿ ಹುದುಗಿರುತ್ತವೆ. ಕ್ರಿಯಾ ನರಕೋಶಗಳು ತಾನಾಗೇ ನಿಷ್ಕ್ರಿಯ ನರಕೋಶಗಳನ್ನು ಬಡಿದೆಬ್ಬಿಸುತ್ತವೆ. ಆಗ ನಡೆದ ಘಟನೆಗಳು, ಹೆಸರುಗಳು ನೆನಪಾಗುತ್ತವೆ. ಪೂರ್ತಿ ರಾಮಾಯಣವನ್ನು ಪರೀಕ್ಷೆಯಲ್ಲಿ ಬರೆದು ಬರುವಷ್ಟು ವಿಶ್ವಾಸ ಮೂಡುತ್ತದೆ. ರಾಮಾಯಣದ ಯಾವ ಭಾಗವನ್ನೇ ಕೇಳಿದರೂ ಬರೆದು ಬರುತ್ತೀಯ.
ಪೂರ್ತಿ ಪಠ್ಯವನ್ನು ಸರಳೀಕರಣ ಮಾಡಿ ಕೀ ನೋಟ್ಗಳಲ್ಲಿ ಹಿಡಿದಿಡು. ಚಿತ್ರಗಳನ್ನು ಬಳಸು, ಅಗತ್ಯವಿದ್ದಲ್ಲೆಲ್ಲಾ ಬಣ್ಣದ ಪೆನ್ಸಿಲ್ಗಳನ್ನು ಬಳಕೆ ಮಾಡು. ಕೀವರ್ಡ್ಸ್ಗಳ ಸಹಾಯದಿಂದ ಪಠ್ಯ ವಿಸ್ತರಿಸುವ ಜಾಣ್ಮೆ ನಿನ್ನದಾಗುತ್ತದೆ.
ಪಠ್ಯವನ್ನು ಕೀವರ್ಡ್ಸ್ಗಳಾಗಿ ಮಾರ್ಪಡಿಸಿದ್ದೀಯ. ಅವುಗಳನ್ನು ಬಳಸಿ ಪೂರ್ತಿ ಪಠ್ಯದ ಸಾರವನ್ನು ತರಲು ಸಾಧ್ಯವಾಗುತ್ತದಾ ಎಂದು ಪ್ರಯತ್ನಿಸು. ಪಠ್ಯದ ಜೊತೆಗೆ ನೀನು ಕೀ ನೋಟ್ ಬಳಸಿ ಸಿದ್ಧಪಡಿಸಿದ ಉತ್ತರದೊಂದಿಗೆ ಹೋಲಿಸಿ ನೋಡು. ಎರಡರಲ್ಲೂ ಇರುವ ಸಾರ ಒಂದೇ ಎಂದಾದರೆ ನೀನು ಗೆದ್ದಿದ್ದೀಯ ಎಂದರ್ಥ. ಸರಿ ಬರಲಿಲ್ಲವೋ ಮತ್ತೊಮ್ಮೆ ಬರೆದು ನೋಡು.
ಕೀ ನೋಟ್ ಮಾಡಿಕೊಳ್ಳುವುದರಿಂದ ಪಠ್ಯದಲ್ಲಿ ಇರುವ ಅನಗತ್ಯ ವಿಷಯವನ್ನು ಸೋಸಿ ಅಗತ್ಯ ಇರುವಷ್ಟನ್ನೇ ಒಟ್ಟುಮಾಡಿಕೊಡುತ್ತದೆ. ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ಸಾಧ್ಯವಾಗುತ್ತದೆ. ಪುನಃ ಓದುವಾಗ ಯಾವುದು ಮುಖ್ಯ ಮತ್ತು ಯಾವುದು ಮುಖ್ಯವಲ್ಲ ಎಂಬುದನ್ನು ಮತ್ತೆ ಗುರುತಿಸುವ ಅಗತ್ಯ ಬೀಳುವುದಿಲ್ಲ.
ನಿನ್ನ ಮನಸ್ಸು ನೀನು ಬರೆದಿದ್ದನ್ನು ಪ್ರೀತಿಸುತ್ತದೆ. ಪುನಃ ಓದುವಾಗ ಮುದ್ರಿತ ಪಠ್ಯ ಪುಸ್ತಕವನ್ನು ಬಳಸದಿರುವುದರಿಂದ ಕಣ್ಣುಗಳಿಗೆ ಆಯಾಸವಾಗುವುದಿಲ್ಲ. ಪೂರ್ತಿ ಒಂದು ವಿಷಯದ ಪಠ್ಯ ಪುಸ್ತಕವನ್ನು 100 ಪುಟಗಳಲ್ಲಿ ಕೀ ನೋಟ್ನ ಮೂಲಕ ಚಿಕ್ಕದಾಗಿ ಮಾಡಿಕೊಳ್ಳುತ್ತೀಯ. ಸುಂದರವಾದ ಅಕ್ಷರಗಳಲ್ಲೇ ಬರೆದಿಡು. ಪರೀಕ್ಷೆಯ ಹಿಂದಿನ ದಿನ ನಿರಾಳತೆ ಅನುಭವಿಸುತ್ತೀಯ. ವಿಷಯ ದೊಡ್ಡದಿದೆ ಎನಿಸುವುದಿಲ್ಲ. ಖಾಲಿ 100 ಪುಟಗಳಷ್ಟೇ ಇದೆ ಮತ್ತು ಅತ್ಯಂತ ಸುಲಭವಾಗಿದೆ ಎಂದಾಗ ನಿರಮ್ಮಳನಾಗುತ್ತೀಯ. ಯಾವ ಒತ್ತಡವೂ ಇಲ್ಲದೆ ಪರೀಕ್ಷೆ ಎದುರಿಸುತ್ತೀಯ.
ಯಾರೇ ನಿನ್ನ ಓದುವ ಸಮಯದಲ್ಲಿ ಮಾತನಾಡಿಸಲು ಅಥವಾ ಇನ್ನಾವುದೋ ಅನಗತ್ಯ ಕಾರಣಗಳಿಗೆ ಕರೆದಾಗ ಸ್ಪಷ್ಟವಾಗಿ 'ಬರುವುದಿಲ್ಲ' ಎಂದು ಹೇಳಲು ಮಾನಸಿಕವಾಗಿ ಸಿದ್ಧವಾಗಿರಬೇಕು. ಯಾರು ನಿನ್ನ ಸಮಯ ಹಾಳು ಮಾಡುತ್ತಾರೆ ಎಂಬುದು ನಿನಗೇ ಅರ್ಥವಾಗಿರುತ್ತದೆ. ಅಂತಹವರಿಂದ ಆದಷ್ಟು ದೂರವಿರಬೇಕು. ಸ್ನೇಹಿತರೊಂದಿಗೆ ಹರಟುವ ಸಂದರ್ಭ ಬಂದರೆ ನಯವಾಗಿ ಮುಂದೂಡುವ ಜಾಣ್ಮೆ ನಿನ್ನದಾಗಬೇಕು.
- ಮಂಜುನಾಥ್ ಎಲ್.ಕೆ
mhk963@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


