ಖುಷಿ

ಗೂಡು ಬಿಟ್ಟ ಗಿಣಿಗಳು

ಸಿನಿಮಾ ಲೋಕದ ನಟ, ನಟಿಯರು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹಾರುವುದು ಸಾಮಾನ್ಯ. ಜಗತ್ತಿಗೆ ಜಾಗತೀಕರಣ ಆವರಿಸಿಕೊಳ್ಳುವ ಮುನ್ನವೇ ...

ಗೂಡು ಬಿಟ್ಟ ಗಿಣಿಗಳು
Published On :

ಸಿನಿಮಾ ಲೋಕದ ನಟ, ನಟಿಯರು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹಾರುವುದು ಸಾಮಾನ್ಯ. ಜಗತ್ತಿಗೆ ಜಾಗತೀಕರಣ ಆವರಿಸಿಕೊಳ್ಳುವ ಮುನ್ನವೇ ಚಿತ್ರರಂಗದಲ್ಲಿ ನಟ, ನಟಿಯರ ಈ ಆಮದು ಮತ್ತು ರಫ್ತು ನೀತಿ ಜಾರಿಯಲ್ಲಿದೆ ಎಂದು ಸಿನಿಮಾ ಪರಂಪರೆಯೇ ಹೇಳುತ್ತದೆ. ಹಿರಿಯ ನಟಿ ಪಂಡರಿಬಾಯಿ ಅಪ್ಪಟ ಕನ್ನಡದ ಕುವರಿ. ಆದರೂ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹೀಗೆ ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರಗಳಲ್ಲಿ ಮಿಂಚಿದವರು. ಆಂಧ್ರದಲ್ಲಿ ಹುಟ್ಟಿದ ಸಾಹುಕಾರ್ ಜಾನಕಿ, ತಮಿಳುನಾಡಿನ ಸರಿತಾ, ಅಂಬಿಕಾ, ಸುಹಾಸಿನಿ, ಮಾಧವಿ ಹೀಗೆ ಪರಭಾಷೆಯ ನಟಿಯರು ಅಪ್ಪಟ ಕನ್ನಡದವರಾಗಿ ಮಿಂಚಿದ್ದು ಗೊತ್ತೇ ಇದೆ.
ಸ್ವಂತ ಗೂಡು ಬಿಟ್ಟು ನಿತ್ಯ ಪಯಣಿಸುವ ಇಂಥ ನಟಿಯರ ನಡುವೆ ಗೂಡು ಬಿಟ್ಟು ಬಂದ ಗಿಣಿಗಳೂ ನಮ್ಮ ನಡುವೆ ಇವೆ. ಇಲ್ಲಿಗೆ ಬಂದ ಮೇಲೆ ಮತ್ತೆ ಅವಕಾಶಗಳಿಗಾಗಿ ತಮ್ಮೂರಿನತ್ತ ಇವರು ಮುಖ ಮಾಡಲಿಲ್ಲ. ಒಮ್ಮೆ ಹುಟ್ಟೂರು ತೊರೆದು ಬಂದ ಅಂಥ ನಟಿಯರು ಬರುಬರುತ್ತಾ ನಮಗೆ ಎಂದೂ ಪರಭಾಷೆಯ ನಾರಿಯರು ಅಂತ ಅನಿಸಲೇ ಇಲ್ಲ. ಹೀಗೆ ಗೂಡು ಬಿಟ್ಟು ಬಂದ ಗಿಣಿಗಳು ನಟಿಯರಾದ ಅರುಂಧತಿ ನಾಗ್, ಗಾಯಿತ್ರಿ ನಾಗ್, ಸುಮಲತಾ ಅಂಬರೀಶ್, ಮಾಲಾಶ್ರೀ, ಪ್ರಿಯಾಂಕ ಉಪೇಂದ್ರ, ಪೂಜಾಗಾಂಧಿ ಮುಂತಾದವರು.

ಶಂಕರ್ ಕಂಡ ಬೆಳಕು...
ಪೋಷಕ ನಟಿ, ರಂಗಭೂಮಿಯಲ್ಲಿ ಬಹು ದೊಡ್ಡ ಹೆಸರು ಮಾಡಿರುವ ಅರುಂಧತಿ ನಾಗ್, ರಂಗ'ಶಂಕರ'ದ ಹಿಂದಿನ ಬೆಳಕು, ಶಕ್ತಿ ಮತ್ತು ಸ್ಫೂರ್ತಿ. ಹುಟ್ಟಿದ್ದು ದೆಹಲಿಯಲ್ಲಾದರೂ ಬೆಳೆದಿದ್ದು ಮಾತ್ರ ಮುಂಬಯಿಯಲ್ಲಿ. ಚಿಕ್ಕ ವಯಸ್ಸಿಗೆ ಬಣ್ಣ ಹಚ್ಚಿದ ಅರುಂಧತಿ, ಬಾಂಬೆನಲ್ಲಿ ರಂಗ ಪ್ರದರ್ಶನ ಮಾಡುವ ಹೊತ್ತಿಗೆ ನಟ ಶಂಕರ್‌ನಾಗ್‌ರ ಪರಿಚಯವಾಯಿತು. ಆಗಲೇ ಮರಾಠಿ, ಗುಜರಾತಿ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಹತ್ತಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಶಂಕರ್‌ನಾಗ್ ಕೂಡ ಮೂಲತಃ ರಂಗಭೂಮಿಯಿಂದಲೇ ಬಂದವರಾಗಿದ್ದರಿಂದಲೋ ಏನೋ, ಇಬ್ಬರ ಸ್ನೇಹ ಗಾಢವಾಗಿ ಅರುಂಧತಿ ಮುಂದೆ ಅರುಂಧತಿ ನಾಗ್ ಆದರು. 'ಪರಮೇಶಿ ಪ್ರೇಮ ಪ್ರಸಂಗ', 'ನೋಡಿ ಸ್ವಾಮಿ ನಾವಿರೋದೆ ಹೀಗೆ', 'ಆ್ಯಕ್ಸಿಡೆಂಟ್‌', 'ಜೋಗಿ' ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅರುಂಧತಿಯ ಕರ್ಮಭೂಮಿ ಬೆಂಗಳೂರು. ಇವರನ್ನು ನೋಡಿದರೆ ಎಂದಿಗೂ ಬಾಂಬೆ ಹೆಣ್ಣು ಮಗಳು ಅನಿಸುವುದೇ ಇಲ್ಲ.

ಗಾಯಿತ್ರಿ ಮಂತ್ರ...
80ರ ದಶಕದ ಕನ್ನಡ ಚಿತ್ರರಂಗ ಕಂಡ ಪ್ರಬುದ್ಧ ನಟಿ ಗಾಯಿತ್ರಿ. ನಟ ಶಂಕರ್‌ನಾಗ್‌ರ 'ಆಟೋರಾಜ' ಚಿತ್ರಕ್ಕಾಗಿ ಬಾಂಬೆಯಿಂದ ಬೆಂಗಳೂರಿಗೆ ಬಂದ ಈ 'ಶ್ವೇತಗುಲಾಬಿ' ಮತ್ತೆ ಹುಟ್ಟೂರಿನತ್ತ ತಿರುಗಿ ನೋಡಲಿಲ್ಲ. ತನ್ನ ತಾಯಿಯ ಮೂಲಕ ಚಿತ್ರರಂಗಕ್ಕೆ ಬಂದ ಗಾಯಿತ್ರಿ, ಹಿಂದಿ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದವರು. ಇವರ ಮೊದಲ ಚಿತ್ರ 'ಜೀನೆ ಕಿ ರಾಹ'. ಆ ನಂತರ ಶಂಕರ್‌ನಾಗ್‌ರ ಹುಡುಕಾಟದ ಫಲವಾಗಿ ಗಾಯಿತ್ರಿ ಕನ್ನಡಕ್ಕೆ ಬಂದರು.
'ವಸಂತಗೀತ', 'ಅದೇ ಕಣ್ಣು', 'ಜ್ವಾಲಾಮುಖಿ', 'ಶ್ವೇತಗುಲಾಬಿ', 'ಸುಖಸಂಸಾರಕ್ಕೆ 12 ಸೂತ್ರಗಳು' ಸೇರಿದಂತೆ ಆಗಿನ ಕಾಲಕ್ಕೆ 8 ವರ್ಷಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1987ರಲ್ಲಿ ನಟ ಅನಂತ್‌ನಾಗ್‌ರನ್ನು ವಿವಾಹವಾಗಿ ಬಣ್ಣದ ಬದುಕಿಗೆ ವಿದಾಯ ಹೇಳಿ ಬೆಂಗಳೂರಿನಲ್ಲೇ ನೆಲೆ ನಿಂತರು.

ಆಂಧ್ರದಿಂದ ಆಮದು
ಮಂಡ್ಯದ ಗಂಡು, ತೆರೆ ಮೇಲಿನ ಗೌಡರ ನಿಜ ಜೀವನದ ಗೌಡ್ತಿಯಾಗಿರುವ ಸುಮಲತಾ ಅಂಬರೀಷ್‌ರ ಮೂಲ ಆಂಧ್ರಕ್ಕೆ ಸೇರಿದ ತಮಿಳುನಾಡು ಕುಟುಂಬ. ಚೆನ್ನೈನಲ್ಲಿ ಹುಟ್ಟಿದ ಸುಮಲತಾ ಬೆಳೆದಿದ್ದು ಮಾತ್ರ ಬಾಂಬೆ ಹಾಗೂ ಹೈದರಾಬಾದಿನಲ್ಲಿ. ಆಂಧ್ರದ ಗುಂಟೂರಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮೊದಲು ತಮಿಳು ಚಿತ್ರದಲ್ಲಿ ಅಭಿನಯಿಸಿದರೂ ಹೆಚ್ಚು ಸದ್ದು ಮಾಡಿದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ. ಆ ನಂತರ ಡಾ.ರಾಜ್‌ಕುಮಾರ್ ಅಭಿನಯದ 'ರವಿಚಂದ್ರ' ಚಿತ್ರದ ಮೂಲಕ ಕನ್ನಡಕ್ಕೆ ಬಂದ ಸುಮಲತಾ, 'ತಾಯಿಯ ಕನಸು', 'ಅಹುತಿ', 'ತಾಯಿಯ ಹೊಣೆ', 'ಹುಲಿ ಹೆಬ್ಬುಲಿ', 'ಕರ್ಣ', 'ಕಥಾನಾಯಕ', 'ನ್ಯೂಡೆಲ್ಲಿ', 'ನ್ಯಾಯಕ್ಕಾಗಿ ನಾನು' ಹೀಗೆ ಹತ್ತಾರು ಚಿತ್ರಗಳಲ್ಲಿ ನಟಿಸಿದರು. 1991ರಲ್ಲಿ ಅಂಬರೀಶ್‌ರನ್ನು ವಿವಾಹವಾದರು. ಆ ಮೂಲಕ ಪೂರ್ಣ ಪ್ರಮಾಣದಲ್ಲಿ ಕನ್ನಡತಿಯೇ ಆಗಿಬಿಟ್ಟರು. ಸುಮಲತಾ ಅಂಬರೀಶ್ ಗಂಧದ ಗುಡಿಗೆ ಬಂದ ಮೇಲೆ ಮತ್ತೆ ಆಂಧ್ರದತ್ತ ಮುಖ ಮಾಡಲಿಲ್ಲ.

ಚೆನ್ನೈ ರಾಣಿ

ಮಾಲಾಶ್ರೀ ಹುಟ್ಟಿದ್ದು ಚೆನ್ನೈನಲ್ಲಿ. ಬಾಲ ನಟಿಯಾಗಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷ ಅಂದರೆ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲಕನ ಪಾತ್ರದಲ್ಲಿ ಕಾಣಿಸಿಕೊಂಡ ಈ ಬಾಲಕಿ, ಮುಂದೆ ಕನ್ನಡದಲ್ಲಿ 'ರಾಣಿ ಮಹಾರಾಣಿ' ಎನಿಸಿಕೊಂಡವಳು. 'ನಂಜುಂಡಿ ಕಲ್ಯಾಣ', 'ಗಜಪತಿ ಗರ್ವಭಂಗ' ಚಿತ್ರಗಳ ಮೂಲಕ ಕನ್ನಡಕ್ಕೆ ಬಂದ ಮಾಲಾಶ್ರೀ ನಂತರ ಕೆಲ ತೆಲುಗು ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ಕನ್ನಡಿಗರ ಪಾಲಿಗೆ ಪರಭಾಷೆಯ ನಾರಿ ಎನಿಸಿಕೊಳ್ಳಲಿಲ್ಲ. 'ತವರು ಮನೆ ಉಡುಗೊರೆ', 'ರಾಮಾಚಾರಿ', 'ಬೆಳ್ಳಿಕಾಲುಂಗರ' ಮುಂತಾದ ಚಿತ್ರಗಳಲ್ಲಿ ನಟಿಸಿದ ಮಾಲಾಶ್ರೀ, ಕೋಟಿ ನಿರ್ಮಾಪಕ ರಾಮು ಅವರ ಕೈ ಹಿಡಿಯುವ ಮೂಲಕ ಬೆಂಗಳೂರಿನಲ್ಲೇ ತಳವೂರಿದರು. ಈಗಲೂ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ ಲೇಡಿ ಅಮಿತಾಭ್.



ಹೊಸ ಸೇರ್ಪಡೆ...
ಪರ ಊರಿನಿಂದ ಬಂದು ಇಲ್ಲೇ ನೆಲೆ ಕಂಡುಕೊಂಡ ಹೊಸ ಮುಖಗಳಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಹಾಗೂ ಪೂಜಾ ಗಾಂಧಿ ಹೊಸ ಸೇರ್ಪಡೆ. ಒಬ್ಬರು 'ಎಚ್‌ಟುಓ' ಆದರೆ, ಮತ್ತೊಬ್ಬರು 'ಮುಂಗಾರು ಮಳೆ'ಯಲ್ಲಿ ನೆನೆದವರು. ಒಬ್ಬರು ಬೆಂಗಾಳಿ ಬೆಡಗಿಯಾದರೆ, ಮತ್ತೊಬ್ಬರು ಪಂಜಾಬಿ ಪಾವ್‌ಬಾಜಿ. ಎರಡು ಬೆಂಗಾಲಿ, ಎರಡು ಹಿಂದಿ ಹಾಗೂ ಒಂದು ತೆಲುಗು ಚಿತ್ರದಲ್ಲಿ ನಟಿಸಿದ ನಂತರ ಕನ್ನಡಕ್ಕೆ 'ಕೋಟಿಗೊಬ್ಬ'ನಿಗೆ ಒಡತಿಯಾದ ಪ್ರಿಯಾಂಕ, 'ಎಚ್‌ಟುಓ'ನಲ್ಲಿ ತುಂಬಾ ಸದ್ದು ಮಾಡಿದವಳು. ಮುಂದೆ ನಟ ಉಪೇಂದ್ರ ಅವರ ಕಣ್ಣಿಗೆ ಬಿದ್ದಿದ್ದೇ ತಡ ಉಪ್ಪಿಯ ಮನದರಸಿಯಾದರು. ಬೆಂಗಾಳಿ ಹಾಗೂ ತಮಿಳಿನಲ್ಲಿ ಒಂದೊಂದು ಚಿತ್ರದಲ್ಲಿ ಅಭಿನಯಿಸಿದ ನಂತರ ಯೋಗರಾಜ್ ಭಟ್ಟರ 'ಮುಂಗಾರು ಮಳೆ' ಚಿತ್ರಕ್ಕಾಗಿ ಬೆಂಗಳೂರಿಗೆ ಬಂದವರು ಪೂಜಾ ಗಾಂಧಿ. ಅಂದಿನಿಂದ ಸಿಲಿಕಾನ್ ಸಿಟಿಯೇ ಈಕೆಯ ತವರು ಮನೆಯಾಯಿತು. ಈಗಲೂ ನಟನೆಯಲ್ಲಿ ತೊಡಗಿಸಿಕೊಂಡಿರುವ ಈ ಪಂಜಾಬಿ ಕುವರಿ, ತನ್ನ ಕುಟುಂಬ ಸಮೇತ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಮುಂದೆ ಕನ್ನಡದ ಹುಡುಗನನ್ನೇ ಮದುವೆಯಾಗುತ್ತಾರಂತೆ.



ಎಲ್ಲಿಂದಲೋ ಬಂದ ಸೋದರಿಯರು

ಹೀಗೆ ಆಮದುಗೊಂಡು ಇಲ್ಲೇ ತಳವೂರಿದ ಮುಖ್ಯವಾಹಿನಿಯ ನಟಿಯರ ನಡುವೆ, ಯಾರ ಗಮನಕ್ಕೂ ಬಾರದೆ ಎಲ್ಲಿಂದಲೋ ಬಂದು ಇಲ್ಲೇ ನೆಲೆ ನಿಂತವರಿದ್ದಾರೆ. ಅಂಥ ಅಪರೂಪದ ಜೋಡಿ ಮೋಹನ್ ಕುಮಾರಿ ಹಾಗೂ ಸೋಹನ್ ಕುಮಾರಿ. ಈ ಸೋದರಿಯರ ಮೂಲ ನಿರ್ದಿಷ್ಟವಾಗಿ ತಿಳಿಯದು. ತೀರಾ ಚಿಕ್ಕ ವಯಸ್ಸಿನಲ್ಲೇ ಪಿ. ಕಾಳಿಂಗರಾವ್ ಅವರ ಹಾಡುಗಳಿಗೆ ಕೋರಸ್ ಕೊಡಲು ಬಂದ ಸೋದರಿಯರಿವರು. ಮೂರು ವರ್ಷಗಳ ಹಿಂದೆಯಷ್ಟೆ ಈ ಇಬ್ಬರ ಪೈಕಿ ಮೋಹನ್ ಕುಮಾರಿ ಅನಾಥವಾಗಿ ತೀರಿಕೊಂಡರು. ಯಾರ ನೆರವೂ ಇಲ್ಲದೆ ಅತ್ಯಂತ ಚಿಕ್ಕ ಗೂಡಿನಂಥ ಮನೆಯಲ್ಲಿದ್ದ ಜಾನಪದ ಹಿನ್ನೆಲೆ ಗಾಯಕಿಯರು ಚಿತ್ರರಂಗದ ಕಣ್ಣಿಗೆ ಅನಾಮಿಕರಾಗಿದ್ದರು. ಇವರ ಕಂಠದಲ್ಲಿ ಮೂಡಿ ಬಂದಿದ್ದ 'ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೀವೆ' ಹಾಡಿನ ಸಾಲು ನೆನಪಾದಾಗಲೆಲ್ಲ ಈ ಸೋದರಿಯರು ಜೀವಂತವಾಗಿರುತ್ತಾರೆ.

- ಆರ್. ಕೇಶವಮೂರ್ತಿ
keshavarkm1@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.