ಸುಪ್ರೀಂ ಕೋಚ್!

2002ರಲ್ಲಿ ಆಂಗ್ಲರ ವಿರುದ್ಧ ಅವರದೇ ನಾಡಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ತಮ್ಮ ಸಲಹೆ ನಿರ್ಲಕ್ಷಿಸಿ ಶತಕವಂಚಿತರಾಗಿದ್ದ ವೀರೇಂದ್ರ ಸೆಹ್ವಾಗ್ಗೆ, ಆಗಿನ ಕೋಚ್ ಜಾನ್ರೈಟ್ ಕಪಾಳಕ್ಕೆ ಬಾರಿಸಿದ್ದರು. ಘಟನೆ ವಿರುದ್ಧ ಸಿಡಿದೆದ್ದಿದ್ದ ಭಾರತದ ಆಟಗಾರರು ರೈಟ್ ಕ್ಷಮೆ ಯಾಚಿಸದ ಹೊರತು ಡ್ರೆಸ್ಸಿಂಗ್ ರೂಂ ಬಿಟ್ಟು ಕದಲುವುದಿಲ್ಲ ಎಂದು ಹಠ ಹಿಡಿದಿದ್ದರು. ಆದರೆ, ತಾವು ಮಾಡಿದ್ದು ತಪ್ಪಲ್ಲ ಎನ್ನುವುದು ಗೊತ್ತಿದ್ದ ಜಾನ್ ರೈಟ್ ವಿಶ್ವಾಸದಲ್ಲಿದ್ದರು. ಕೊನೆಗೂ, ಆಟಗಾರರ ಹಠ ಸೋತಿತ್ತು. ಕೋಚ್ ಭರವಸೆ ಮೇಲುಗೈ ಸಾಧಿಸಿತ್ತು.
ಕಾರಣ ವಿದೇಶಿ ನೆಲದಲ್ಲಿ ಭಾರತ ಗೆಲ್ಲುವುದೇ ದುಸ್ತರವಾಗಿದ್ದ ಕಾಲದಲ್ಲಿ, ಆಗಲೇ ಇಂಗ್ಲೆಂಡ್ ವಿರುದ್ಧ ನಡೆದ ನಾಟ್ವೆಸ್ಟ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಜಯಿಸುವ ಮೂಲಕ ಆಟಗಾರರು ಅಂಗಿ ಬಿಚ್ಚಿ ಕುಣಿದು ಕುಪ್ಪಳಿಸಿದ್ದರು. ಆಮೇಲೆ ಟೀಂ ಇಂಡಿಯಾದಲ್ಲಿ ನಡೆದ ಪವಾಡ ಎಲ್ಲರಿಗೂ ಗೊತ್ತಿರುವ ವಿಷಯವೇ.
ಇದು ಕೋಚ್ ಒಬ್ಬರ ಪಕ್ವತೆ ಮತ್ತು ವಿವೇಕದ ಸಲಹೆಗಳು ತಂಡವನ್ನು ಯಾವ ಮಟ್ಟದಲ್ಲಿ ಬೇಕಾದರೂ ಬದಲಾಯಿಸಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿತ್ತು. ಹೀಗಾಗಿ ಜಾನ್ ರೈಟ್, ಗ್ಯಾರಿ ಕರ್ಸ್ಟನ್ ಸದಾ ಭಾರತ ಕ್ರಿಕೆಟ್ ಪ್ರೇಮಿಗಳಲ್ಲಿ ನೆನಪಿನಲ್ಲುಳಿಯುತ್ತಾರೆ.
ಪ್ರತಿ ಆಟಗಾರನಿಗೂ ತರಬೇತಿ ಎಂಬುದು ಅಷ್ಟೊಂದು ಮಹತ್ವದ್ದಾಗಿದೆ. ಹಾಗಾಗಿಯೇ ತರಬೇತುದಾರನಾಗಿ ಆಯ್ಕೆಯಾದವರು, ತಮ್ಮ ತಂಡ ಪ್ರತಿನಿಧಿಸುವ ಆಟದ ಪ್ರತಿಯೊಂದು ಮಗ್ಗಲು ಮತ್ತು ಆಳ ಹರವನ್ನು ಸಂಪೂರ್ಣವಾಗಿ ಅರಿತಿರಬೇಕಾಗುತ್ತದೆ.
ಆಯ್ಕೆ ಹೇಗೆ?
ಯಾವುದೇ ಕ್ರೀಡೆಯಲ್ಲಿ ಒಂದು ತಂಡದ ಕೋಚ್ ಆಯ್ಕೆ ಮಾಡುವ ಮುನ್ನ, ಆ ವ್ಯಕ್ತಿ ಆಟಗಾರನಾಗಿ ತನ್ನ ವೃತ್ತಿಜೀವನದಲ್ಲಿ ನೀಡಿದ ಪ್ರದರ್ಶನವನ್ನು ಪರಿಗಣಿಸಲಾಗುತ್ತದೆ. ಆತನ ಒಟ್ಟಾರೆ ಪ್ರದರ್ಶನ ತೃಪ್ತಿ ತಂದರೆ ಮಾತ್ರ, ಆಯ್ಕೆ ಮಾಡಲಾಗುತ್ತದೆ. ಮೊದಲು ಸಹಾಯಕ ಕೋಚ್ ಹುದ್ದೆಗೆ ಆಯ್ಕೆ ನಡೆಯುತ್ತದೆ. ಅಲ್ಲಿ ಯಶಸ್ಸು ಕಂಡರೆ ಮಾತ್ರ ಮುಖ್ಯ ಕೋಚ್ ಹುದ್ದೆಗೆ ಬಡ್ತಿ ಪಡೆಯಬಹುದು.
ಕಠಿಣ ವೃತ್ತಿ
'ಕೋಚ್ ಹುದ್ದೆ ತುಂಬಾ ಕಠಿಣವಾದದ್ದು. ಹುದ್ದೆಗೆ ಆಯ್ಕೆಯಾಗಿ, ಅವಧಿ ಮುಗಿಯುವವರೆಗೂ ಸದಾ ಸವಾಲುಗಳು ನಮ್ಮನ್ನು ಕಾಡುತ್ತವೆ. ಪ್ರತಿ ಪಂದ್ಯ ಗೆದ್ದರೂ, ಮುಂದಿನ ಪಂದ್ಯದ ಕಾರ್ಯತಂತ್ರ ತಲೆ ತಿನ್ನುತ್ತದೆ' ಎನ್ನುತ್ತಾರೆ ಎಂ. ಮುರಳೀಧರನ್, ಎಚ್ಎಎಲ್ ಮಾಜಿ ಕೋಚ್.
ಗಳಿಕೆ ಎಷ್ಟು?
ಜನಪ್ರಿಯ ಕ್ರೀಡೆಗಳಾದ ಫುಟ್ಬಾಲ್ ಮತ್ತು ಕ್ರಿಕೆಟ್ನಲ್ಲಿ ಆರಂಭದಲ್ಲಿ ಮಾಸಿಕವಾಗಿ ರು. 25,000ದಿಂದ ರು. 1 ಲಕ್ಷದವರೆಗೂ ಕೋಚ್ಗಳಿಗೆ ಸಂಭಾವನೆ ನೀಡಲಾಗುತ್ತದೆ. ಅಲ್ಲಿ ಯಶಸ್ಸು ಸಾಧಿಸಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಷಕ್ಕೆ ರು. 50 ಲಕ್ಷದಿಂದ ರು. 1 ಕೋಟಿಗೂ ಅಧಿಕ ಗಳಿಕೆ ಮಾಡಬಹುದು. ಇತರೆ ಕ್ರೀಡೆಗಳಲ್ಲಿ ಆಯಾ ತಂಡಗಳ ಆಡಳಿತ ಮಂಡಳಿಯ ಮೇಲೆ ಅವಲಂಬಿತವಾಗಿರುತ್ತದೆ.
- ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


