ಶ್ರೀ ಸಂಸಾರಿ
ಮನುಷ್ಯ ಸಂಬಂಧಗಳೇ ಹಾಗೆ. ನಾವು ಯಾರನ್ನು ತಾತ್ವಿಕವಾಗಿ ವಿರೋಧಿಸುತ್ತಿರುತ್ತೇವೋ ಅವರು ಎಂದಾದರೊಂದು...

ಮನುಷ್ಯ ಸಂಬಂಧಗಳೇ ಹಾಗೆ. ನಾವು ಯಾರನ್ನು ತಾತ್ವಿಕವಾಗಿ ವಿರೋಧಿಸುತ್ತಿರುತ್ತೇವೋ ಅವರು ಎಂದಾದರೊಂದು ದಿನ ಹತ್ತಿರ ಬರುತ್ತಾರೆ. ಯಾರನ್ನು ತಾತ್ವಿಕವಾಗಿ ಮತ್ತು ತಾತ್ವಿಕವಲ್ಲದೆಯೂ ಹಚ್ಚಿಕೊಂಡಿರುತ್ತೇವೆಯೋ ಅವರು ದೂರ ಸರಿದುಬಿಡುತ್ತಾರೆ. ವೈರುಧ್ಯಗಳ ಕಟ್ಟಿನಂತಿರುವ ಈ ಬದುಕಿನ ಹಣೆಬರಹವೇ ಇಂಥದೋ ಎಂಥದೋ ಇದ್ದುಬಿಟ್ಟಿರುತ್ತದೆ. ನನ್ನ ಚಿಕ್ಕಂದಿನಿಂದಲೂ ನಾನು ಇಂಥ ವಿರುದ್ಧದ ವಾತಾವರಣವನ್ನು ಕಟ್ಟಿಕೊಂಡೇ ಬೆಳೆದಿರುವಂಥವನು. ಎಚ್‌ಎಸ್‌ವಿ ಬಗ್ಗೆ ಬರೆಯಬೇಕೆಂದು ಆಹ್ವಾನ ಬಂದಾಗ ನನಗನಿಸಿದ್ದು ಇದೇ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ರಾಘವೇಂದ್ರ ಪಾಟೀಲರು ಮತ್ತು ನಾನು ಅಕ್ಕಪಕ್ಕದ ಊರುಗಳಲ್ಲಿ ಕೆಲಸ ಮಾಡಿಕೊಂಡಿದ್ದವರು. ವಾರದಲ್ಲಿ ಏನಿಲ್ಲವೆಂದರೂ ಎರಡು ಬಾರಿ ಸಿಕ್ಕು ಪರಸ್ಪರ ಚರ್ಚೆ, ವಾಗ್ವಾದ, ಸಂವಾದ ಮಾಡುತ್ತಲೇ ಇರುತ್ತಿದ್ದೆವು. ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ. ಒಮ್ಮೆಗೇ ಬಿಚ್ಚಿಕೊಳ್ಳದ ಅವರ ವ್ಯಕ್ತಿತ್ವವನ್ನು ನಾನು ಅರೆಪ್ರೀತಿ, ಅರೆ ಅನುಮಾನಗಳೊಡನೆಯೇ ಪರಿಗಣಿಸಿದವನು. ಒಬ್ಬೊಬ್ಬರದ್ದು ಒಂದೊಂದು ನಡೆ, ಒಂದೊಂದು ಪರಿ ಇರುತ್ತದೆ ಎಂಬುದನ್ನು ಒಪ್ಪದೇ ಇದ್ದ, ಜಗತ್ತು ನನ್ನ ಸುಪರ್ದಿನಲ್ಲೇ ಇರಬೇಕು, ನಾನು ಯೋಜಿಸಿದಂತೆಯೇ ಆಗಬೇಕು, ಹಾಗಿರದಿದ್ದರೆ ಅದನ್ನು ತಿದ್ದಬೇಕು ಎಂಬ ವಿಪರೀತ ಬಂಡಾಯದ ಮನಸ್ಥಿತಿಯಲ್ಲಿದ್ದ ಪ್ರಖರ ಬಂಡಾಯದ ಕಾಲಘಟ್ಟ ಅದು. ಹಾಗಾಗಿ ಪಾಟೀಲರ ಜೊತೆ, ಉಳಿದ ಹಲವರು ಗೆಳೆಯರ ಜೊತೆ ನನ್ನ ತಿಕ್ಕಾಟ ಇದ್ದೇ ಇತ್ತು. ಆ ಸಂದರ್ಭದ ದಿನದ ಒಂದು ಸಂಜೆ ಪಾಟೀಲರು ಎಚ್‌ಎಸ್‌ವಿ ಬರೆದಿದ್ದ ಒಂದು ದಲಿತ ಪರವಾದ ಕವಿತೆಯ ಬಗ್ಗೆ ಮಾತಾಡುತ್ತಾ ಆ ಕವಿತೆ ಅತ್ಯುತ್ತಮ ಬಂಡಾಯ ಕವಿತೆ ಎಂದು ವಿಶ್ಲೇಷಿಸಿದ್ದ ನೆನಪು ನನಗೆ. ಆಗ ಸಂಜೆಯ ಸಮಯ. ಹೊಳಲ್ಕೆರೆ ಊರಿನಲ್ಲಿ ವಿದ್ಯುತ್ ಇರಲಿಲ್ಲ. ರಸ್ತೆಯಲ್ಲಿ ನಡೆಯುತ್ತಾ ಹೋಗುತ್ತಿದ್ದ ನಮಗೆ ರಸ್ತೆ ಅಕ್ಕ ಪಕ್ಕದ ಅಂಗಡಿಗಳ ಗ್ಯಾಸ್‌ಲೈಟಿನ ಬೆಳಕೇ ಬೆಳಕಾಗಿ ದಾರಿ ತೋರುತ್ತಿತ್ತು. ಆಗ ಪಾಟೀಲರು ಆಡಿದ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ನಾನು, ಎಚ್‌ಎಸ್‌ವಿ ಮೇಲು ಜಾತಿಯವರಾದುದರಿಂದ, ಬಲಪಂಥೀಯ ಆಲೋಚನೆಯವರೇ ಆಗಿರುತ್ತಾರೆಂಬ ಹುಂಬ ತೀರ್ಮಾನದಿಂದ ಅವರು ದಲಿತರ ಬಗ್ಗೆ ಪದ್ಯ ಬರೆಯಬಾರದು, ಬರೆಯುವ ಯಾವುದೇ ನೈತಿಕ ಹಕ್ಕು ಅವರಿಗಿಲ್ಲ. ನೊಂದ ನೋವ ನೊಂದವರೇ ಅಭಿವ್ಯಕ್ತಿಸಬೇಕು ಎಂಬ ವಾದವನ್ನು ಮುಂದಿಟ್ಟೆ. ಅವರ ತರ್ಕ ನನ್ನ ತರ್ಕ ಒಂದಕ್ಕೊಂದು ಢಿಕ್ಕಿ ಹೊಡೆಯುತ್ತಾ ಮುಗ್ಗರಿಸುತ್ತಾ ಏಳುತ್ತಾ ಬೀಳುತ್ತಾ ಏನೇನೋ ಆಗಿ ಹೋಗುತ್ತಿತ್ತು. ನನ್ನ ಮೈಯೆಲ್ಲಾ ಬೆವರುತ್ತಿತ್ತು. ಪಾಟೀಲರ ಒಳಮನಸ್ಸಿನ ಮೌನ ನಗೆ ಅಲ್ಲಲ್ಲೇ ಆಡುತ್ತಿದ್ದಂತೆ ಆ ಗ್ಯಾಸ್‌ಲೈಟಿನ ಬೆಳಕಿನ ಆಚೆಗೂ ಈಚೆಗೂ ರಸ್ತೆ ಮೇಲೆ ಚೆಲ್ಲಾಡಿದ್ದ ಕತ್ತಲಿನಲ್ಲಿ ಕಾಣಿಸದಂತೆ ತೋರುತ್ತಿತ್ತು. ನಾನು ಕುದಿಯುತ್ತಾ ಪಾಟೀಲರನ್ನು ಹೊಳಲಕೆರೆಯಿಂದ ಹನ್ನೆರಡು ಕಿಲೋಮೀಟರು ದೂರದ ಮಲ್ಲಾಡಿಹಳ್ಳಿಗೆ ಬೀಳ್ಕೊಟ್ಟು ಮನೆಗೆ ಬಂದೆ. ರಾತ್ರಿಯೆಲ್ಲಾ ಅದೇ ಸಿಟ್ಟು ನನ್ನೊಳಗೆ ಉಳಿದು ಅಧ್ಯಾಗೋ ನಿದ್ದೆಗೆ ಜಾರಿದೆ. ಹತ್ತು ಹದಿನೈದು ದಿನಗಳ ತರುವಾಯ ಪಾಟೀಲರು ತಮ್ಮದೊಂದು ಕಥೆಯೊಂದಿಗೆ ಮತ್ತೆ ನನ್ನ ಬಳಿ ಬಂದರು. ಆ ಕಥೆ ಓದಿದ ಮೇಲೆ ನನ್ನ ಗ್ರಹಿಕೆಯ ಮಾತುಗಳಿಂದ, ಅವರು ಬನ್ನಿ ಬೆಂಗಳೂರಿಗೆ ಹೋಗಿ ಎಚ್ಚೆಸ್ವಿ ಬಾಲು ಇವರೆಲ್ಲರಿಗೂ ಈ ಕಥೆ ಓದೋಣ ಎಂದರು. ನನಗೆ ಈ ಪ್ರೀತಿಯ ಆಹ್ವಾನವೇ ಅಚ್ಚರಿ ಮೂಡಿಸಿತು. ಇದೇನಾಗುತ್ತಿದೆ? ಸ್ವಲ್ಪ ದಿನಗಳ ಹಿಂದೆಯಷ್ಟೇ ಎಚ್ಚೆಸ್ವಿ ಬಗ್ಗೆ ಕಟು ವಿಮರ್ಶೆ ಮಾಡಿದ್ದ ನಾನು ಅವರನ್ನು ಭೆಟ್ಟಿಯಾಗುವುದು ಹೇಗೆ? ಈ ಮುಖಾಮುಖಿಯಲ್ಲಿ ನಾನೇನಾದಾರೂ ಒರಟಾಗಿ ಮಾತಾಡಿ ಅವರ ಮನ ನೋಯುವಂತೆ ಮಾಡುವುದಿಲ್ಲ ಎಂಬುದರ ಗ್ಯಾರಂಟಿಯೇನು? ಯಾಕೋ ಹಿಂಜರಿಕೆ ಶುರುವಾಯಿತು. ಇದನ್ನು ಗ್ರಹಿಸಿದ ಪಾಟೀಲರು ಬನ್ನಿ, ಏನೊಂದೂ ತಲೆಯಲ್ಲಿಟ್ಟುಕೊಳ್ಳದೆ ಇರಿ. ಒಮ್ಮೆ ಎಚ್ಚೆಸ್ವಿಯವರನ್ನು ಭೆಟ್ಟಿ ಮಾಡಿ ಅವರೊಡನೆ ಮಾತನಾಡಿ. ಅವರು ನಿಮಗೆ ಖಂಡಿತ ಇಷ್ಟವಾಗುತ್ತಾರೆ. ಐಡಿಯಾಲಜಿ ಏನೇ ಇದ್ದರೂ ಮನುಷ್ಯ ಮನುಷ್ಯ ಸಂಬಂಧ ಮುಖ್ಯವಲ್ಲವೇ ಎಂದರು. ನಾನೂ ಮನುಷ್ಯನೇ ಆದುದರಿಂದ ನನಗೆ ಅದು ಸರಿಯೆನಿಸಿತು. ತಕ್ಷಣ ಒಪ್ಪಿದೆ. ಒಂದು ದಿನ ನಾವಿಬ್ಬರೂ ಬೆಂಗಳೂರಿಗೆ ಹೊರಟೇ ಬಿಟ್ಟೆವು. ನಂತರದ್ದು ಇತಿಹಾಸ.
ಎಚ್ಚೆಸ್ವಿ ತುಂಬು ಪ್ರೀತಿಯ ಸರಳ ಜೀವಿ. ಅವರದೊಂದು ಕವಿತೆ ಶ್ರೀಸಂಸಾರಿ ಅಂತ ಇದೆ. ಅದರಲ್ಲಿ ರಾಮ ಎಂದಿಗೂ ಒಬ್ಬನೇ ಪೂಜೆಗೊಳ್ಳುವುದಿಲ್ಲ. ಅವನು ತನ್ನ ಜೊತೆ ಇರುವವರನ್ನೆಲ್ಲಾ ತೆಕ್ಕೆಯಲ್ಲಿಟ್ಟುಕೊಂಡೇ ಪೂಜಿಸಿಕೊಳ್ಳುತ್ತಾನೆ. ಪ್ರಾಯಶಃ ರಾಮನ ವ್ಯಕ್ತಿತ್ವ ಏನಿದೆಯೋ ಅದೇ ಎಚ್ಚೆಸ್ವಿಯವರ ವ್ಯಕ್ತಿತ್ವವೂ ಕೂಡ. ಇಲ್ಲದಿದ್ದರೆ ಅವರು ಈ ರೀತಿಯ ಕವಿತೆ ಬರೆಯುತ್ತಿರಲಿಲ್ಲವೋ ಏನೋ. ನಾನೆಂದೂ ಅವರು ಒಬ್ಬರೇ ಇರುವುದನ್ನು ನೋಡಿಲ್ಲ. ಬಳಗಪ್ರಜ್ಞೆಯಲ್ಲೇ ಬದುಕುತ್ತಾ ಎಲ್ಲರನ್ನೂ ಒಳಗೊಳ್ಳಬೇಕೆನ್ನುವ ಮಹದಾಸೆಯುಳ್ಳವರು ಅವರು. ಅದರಂತೆ ನಡೆಯುತ್ತಲೂ ಇರುವವರು.
ಅವರ ಸ್ವಂತ ಊರು ಹೋದಿಗ್ಗೆರೆ. ಅದು ಹೊಳಲ್ಕೆರೆ ಚನ್ನಗಿರಿ ಹಾದಿಯ ನಡುವೆ ಬರುತ್ತದೆ. ಅಲ್ಲಿಗೆ ವರ್ಷಕ್ಕೆ ಒಂದೆರಡು ಬಾರಿಯಂತೂ ಅವರು ಬರುವುದೂ ಹೋಗುವುದು ಇದ್ದೇ ಇತ್ತು. ಆ ಸಂದರ್ಭದಲ್ಲಿ ಮಲ್ಲಾಡಿಹಳ್ಳಿಯಲ್ಲಿ ಅವರದೊಂದು ಭಾಷಣ ಇದ್ದೇ ಇರುತ್ತಿತ್ತು. ಮಕ್ಕಳಿಗೆ ಮುಟ್ಟುವಂತೆ ಮನನವಾಗುವಂತೆ ಅವರ ಮಾತುಗಳಿರುತ್ತಿದ್ದವು. ಶ್ರುತಿ ಮಾಡಿಟ್ಟ ವೀಣೆಯಂತೆ ಅವರು ಕನ್ನಡ ಪರಂಪರೆಯ ಯಾವ ಕವಿಯನ್ನೇ ಆಗಲಿ, ಯಾವ ಘಟ್ಟದ ಸಾಹಿತ್ಯವನ್ನೇ ಕುರಿತು ಮಾತಾಡಲಿ ಅದರಲ್ಲೊಂದು ಅಥೆಂಟಿಸಿಟಿ ಇದ್ದೇ ಇರುತ್ತಿತ್ತು. ಅಷ್ಟು ಆಳದ ಅಧ್ಯಯನ ಮನನ ಅವರದ್ದು. ಅವರ ವ್ಯಕ್ತಿತ್ವ ಎಷ್ಟು ಸರಳವಾದದ್ದೋ ಹಿರಿದಾದದ್ದೋ ತಿಳಿಯಾದದ್ದೋ ಅಷ್ಟೇ ತಿಳಿಯಾದ ಸುಲಲಿತವಾದ ಕನ್ನಡ ಅವರದ್ದು. ಅವರು ಏಕಕಾಲಕ್ಕೆ ದೊಡ್ಡವರಿಗೂ ಚಿಕ್ಕವರಿಗೂ ತಲುಪಬಲ್ಲರು. ಅವರ ಮಕ್ಕಳ ಪದ್ಯಗಳನ್ನು ಪಂಪಭಾರತದ ಅವರ ತಿಳಿಗನ್ನಡ ಅನುವಾದವನ್ನೂ ಗಮನಿಸಿದವರಿಗೆ ನನ್ನ ಮಾತುಗಳು ಅರ್ಥವಾಗುತ್ತವೆ. ಇಂಥ ಎಚ್ಚೆಸ್ವಿ ಬಗ್ಗೆ ನಾನು ಆಡಿದ್ದ ಅಪಸ್ವರವನ್ನು ಸ್ವಲ್ಪ ಹಿಂದೆ ಮಾಡಿಕೊಂಡು ಅವರ ಪ್ರೀತಿಯನ್ನು ಮುಂದಿಟ್ಟುಕೊಂಡು ಅವರನ್ನು ಗಮನಿಸುತ್ತಾ ಹೋದೆ.
ಸಾಮಾನ್ಯವಾಗಿ ಸಾಹಿತ್ಯಕ್ಷೇತ್ರದಲ್ಲಿ ನಮಗೆ ದಕ್ಕುವುದು ನಮಗೆ ಮಾತ್ರವೇ ದಕ್ಕಬೇಕು. ಬೇರೆಯವರಿಗೆ ಅವಕಾಶ ಸಿಕ್ಕರೆಷ್ಟು ಬಿಟ್ಟರೆಷ್ಟು? ಸಾಧ್ಯವಾದರೆ ಅವರವರೇ ಅವಕಾಶಗಳನ್ನು ಪಡೆದುಕೊಳ್ಳಲಿ ಎಂಬ ಧೋರಣೆಯೇ ಜಾಸ್ತಿ. ಇದು ಸಂಪೂರ್ಣ ತಪ್ಪೇನೂ ಅಲ್ಲ. ಆದರೆ ತಮಗೆ ಸಾಕಷ್ಟು ಅವಕಾಶಗಳು ಸಿಕ್ಕು ಒಂದು ಹಂತದ ಜನಪ್ರಿಯತೆ ಮನ್ನಣೆ ದೊರೆತ ನಂತರ ತನ್ನ ಓರಿಗೆಯ ಬರೆಹಗಾರರನ್ನು ಕಿರಿಯ ಬರೆಹಗಾರರನ್ನು ಪ್ರೋತ್ಸಾಹಿಸಲು ವಿಶಾಲವಾದ ಮನಸ್ಸು ಇರಬೇಕಾಗುತ್ತದೆ. ಇಂಥ ಮನಸ್ಥಿತಿ ಇರುವುದರಿಂದಲೇ ಎಚ್ಚೆಸ್ವಿ ಅವರಿಗೆ ತಮ್ಮಂತೆಯೇ ತಮ್ಮ ಸಮಕಾಲೀನರೂ ಬರೆಯಬೇಕು ಎಂಬ ಹಂಬಲ ಇನ್ನಿಲ್ಲದಂತೆ ಇದೆ. ಎಲ್ಲರನ್ನೂ ತೆಕ್ಕೆಯಲ್ಲಿಟ್ಟುಕೊಂಡು ಸಾಗುವುದೆಂದರೆ ಇದೇ ತಾನೆ?
ಎಚ್ಚೆಸ್ವಿಯವರಿಗೆ ರುಚಿ ರುಚಿಯಾದ ತಿಂಡಿ ಊಟ ಎಂದರೆ ಇಷ್ಟ. ಸಾಮಾನ್ಯವಾಗಿ ಅವರು ಮಲ್ಲಾಡಿಹಳ್ಳಿಗೆ, ಹೊಳಲಕೆರೆಗೆ ಬಂದಾಗ ಮಲ್ಲಾಡಿಹಳ್ಳಿಯ ಪಾಟೀಲರ ಮನೆಯಲ್ಲಿ ಅವರ ಊಟ ತಿಂಡಿ ಎಲ್ಲ ಸಾಗುತ್ತಿತ್ತು. ಪಾಟೀಲರ ಪತ್ನಿ ಮಾಡಿದ ಉತ್ತರ ಕರ್ನಾಟಕದ ವಿಶಿಷ್ಟ ಜೋಳದ ರೊಟ್ಟಿ, ಮುಳುಗಾಯಿ ಎಣ್ಣೆಗಾಯಿ ಎಂದರೆ ಅವರಿಗೆ ಅಪಾರ ಪ್ರೀತಿ. ಅವರು ಚಪ್ಪರಿಸುತ್ತಾ ಊಟ ಮುಗಿಯುವ ತನಕ ಅಷ್ಟೇ ರುಚಿಕರವಾದ ಮಾತನಾಡುತ್ತಿದ್ದರು. ಅದನ್ನು ಕೇಳಿಸಿಕೊಳ್ಳುತ್ತಾ ನಮ್ಮ ರುಚಿಯನ್ನು ಹೆಚ್ಚು ಮಾಡಿಕೊಳ್ಳುತ್ತಾ ಊಟ ಪೂರೈಸುತ್ತಿದ್ದೆವು. ಇನ್ನು ನನ್ನ ಮನೆಗೆ ಬಂದರೆ ನನ್ನ ಹೆಂಡತಿ ಮಾಡುವ ಮಂಡಕ್ಕಿ ಉಸುಳಿ ಮಿರ್ಚಿ ಅವರಿಗೆ ಇನ್ನಿಲ್ಲದಷ್ಟು ಇಷ್ಟ. ಮಿರ್ಚಿ ತಿಂದರೆ ನಿಮ್ಮ ಮನೆಯಲ್ಲಿ ತಿನ್ನಬೇಕು ಅಂತ ಹಾಡಿ ಹೊಗಳುವುದು ಸರ್ವೇ ಸಾಮಾನ್ಯ. ನಮ್ಮಲ್ಲಿನ ರುಚಿಯನ್ನು ನಮ್ಮೆದುರಿಗಷ್ಟೇ ಹೇಳದೆ ಅದು ಬೆಂಗಳೂರಲ್ಲೂ ಸುದ್ದಿಯಾಗಿ ಅಲ್ಲಿ ನಮ್ಮನ್ನು ಭೆಟ್ಟಿಯಾಗುವ ನಮ್ಮ ಪರಿಚಿತರೆಲ್ಲಾ ಮಲ್ಲಾಡಿಹಳ್ಳಿ ಹೊಳಲಕೆರೆಗೆ ಬಂದೇ ಬರ್ತೇವೆ ಎಂದು ಈ ಹಿನ್ನೆಲೆಯಲ್ಲಿ ಒತ್ತಿ ಹೇಳುತ್ತಿದ್ದರು. ಅಷ್ಟರ ಮಟ್ಟಿಗೆ ಭಿನ್ನ ಪ್ರದೇಶಗಳ ಭಿನ್ನ ರುಚಿಗಳನ್ನು ಸವಿಯುವ ಅಭಿರುಚಿ ಎಚ್ಚೆಸ್ವಿ ಅವರಲ್ಲಿದೆ.
ಒಂದು ಮಾತು ಹೇಳದಿದ್ದರೆ ಎಚ್ಚೆಸ್ವಿಯವರ ಜೊತೆಗಿನ ನನ್ನ ಒಡನಾಟ ಅಪೂರ್ಣವೆನ್ನಿಸಬಹುದು. ಅದು ಅವರ ಗತಿಸಿದ ಪತ್ನಿ ರಾಜಲಕ್ಷ್ಮಿಯವರನ್ನು ಕುರಿತದ್ದು. ಅವರು ಹೆಸರಿಗೆ ತಕಂತೆ ರಾಜಕಳೆ, ಲಕ್ಷ್ಮಿಕಳೆ ಹೊತ್ತಿದ್ದವರು. ಎಚ್ಚೆಸ್ವಿ ಅವರ ಎಲ್ಲ ಕಷ್ಟಗಳಲ್ಲೂ ಸಮಭಾಗಿಯಾದವರು. ನನ್ನ ಹೆಂಡತಿ ಮಗಳನ್ನು ಅಪಾರವಾಗಿ ಹಚ್ಚಿಕೊಂಡಿದ್ದವರು. ಯಾವ ಜನ್ಮದ ಅನುಬಂಧವೋ... ನನ್ನನ್ನು ಅವರ ಸೋದರನಂತೆಯೇ ಕಾಣುತ್ತಿದ್ದರು. ಎಚ್ಚೆಸ್ವಿ ಅವರೊಂದಿಗೆ ನನ್ನ ಮನೆಗೆ ಬಂದು ನನ್ನ ಹೆಂಡತಿಯ ಕೈರುಚಿಯನ್ನು ಸವಿದು ಅಷ್ಟೇ ಪ್ರೀತಿ ಮಮಕಾರ ತೋರುತ್ತಿದ್ದರು. ಅವರ ಮನೆಗೆ ಎಚ್ಚೆಸ್ವಿ ಅವರನ್ನು ಕಾಣಲೆಂದು ನಾನು, ಪಾಟೀಲ ಹೋದಾಗ ನಗುಮುಖದಿಂದ ನಮ್ಮನ್ನು ಉಪಚರಿಸುತ್ತಿದ್ದರು. ಅವರು ಬೇಸರಪಟ್ಟುಕೊಂಡಿದ್ದನ್ನು ನಾನು ನೋಡೇ ಇಲ್ಲ. ಆದರೆ ಅವರ ಮೊಗದ ಮೇಲಿನ ನಗು ಬಹಳ ಕಾಲ ಉಳಿಯದೆ ಹೋಗಿಬಿಟ್ಟಿತು. ಅವರ ಕೊನೆಯ ಕ್ಷಣಗಳಲ್ಲಿ ಅವರೊಟ್ಟಿಗೆ ಮಾತಾಡಿದ್ದೆ ಎಂಬ ಸಮಾಧಾನವಷ್ಟೇ ಈಗ ಉಳಿದಿರುವುದು. ಎಚ್ಚೆಸ್ವಿ ಅವರ ಎಲ್ಲ ಕಷ್ಟಗಳಿಗೂ ಸ್ಪಂದಿಸಿದ ಅವರು ಸುಖದ ಕೀರ್ತಿಯ ಉತ್ತುಂಗದ ಈ ದಿನಗಳಲ್ಲಿ ಇರಬೇಕಾಗಿತ್ತು ಎಂದು ನನಗೆ ಎಚ್ಚೆಸ್ವಿಯವರನ್ನು ನೋಡಿದಾಗಲೆಲ್ಲಾ ಅನಿಸುತ್ತದೆ. ಅಂಥ ಹೃದಯವಂತಿಕೆಯ ಸಂಗಾತಿಯಿಲ್ಲದ ಎಚ್ಚೆಸ್ವಿಯು ಆ ಮಟ್ಟಿಗೆ ಒಂಟಿಯೇ. ಆದರೆ ಅವರ ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳು ಅವರನ್ನು ಅಷ್ಟೇ ಮುತುವರ್ಜಿಯಿಂದ ಅಷ್ಟೇ ಅಕ್ಕರೆಯಿಂದ ಸಲಹುತ್ತಿದ್ದಾರೆ. ಅವರಿಗೆ ಒಂಟಿತನ ಬಾಧಿಸದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಹಾಗೆಯೇ ಎಚ್ಚೆಸ್ವಿ ಕೂಡ ಅವರ ವಿಸ್ತೃತವಾದ ಓದು, ಬೇರೆ ಬೇರೆ ಪ್ರಕಾರದ ಬರಹಗಳ ನೆರವಿನಲ್ಲಿ ಎಂದೂ ಒಂಟಿತನದಿಂದ ಕಂಗೆಟ್ಟಿಲ್ಲ. ಅದು ನಾವೆಲ್ಲಾ ಅವರೊಂದಿಗಿದ್ದಾಗ ನಿಚ್ಚಳವಾಗಿ ಗೋಚರಿಸುವ ಅಂಶ.
ಎಚ್ಚೆಸ್ವಿ ಕಡು ಕಷ್ಟದಿಂದ ಮೇಲೆದ್ದು ಬಂದವರು. ತಂದೆಯ ಮುಖವನ್ನೇ ನೋಡದ ನಿರ್ಭಾಗ್ಯ ಅವರದ್ದು. ಅವರ ತಾಯಿ ಸರ್ವಸ್ವವನ್ನೂ ತಮ್ಮ ಮಗನ ಏಳಿಗೆಗಾಗಿ ಮುಡುಪಿಟ್ಟವರು. ಈ ತಾಯಿ ಈಗ ಮಗನ ಏಳಿಗೆಯನ್ನು ಕಣ್ಣಾರೆ ನೋಡುತ್ತಿದ್ದಾರೆ. ಅದು ಅವರ ಕಷ್ಟಕ್ಕೆ ಸಿಕ್ಕ ಅಮೃತಫಲ. ಎಚ್ಚೆಸ್ವಿ ಸುಮ್ಮನೆ ಸರಾಗವಾಗಿ ಮೇಲೇರಿದವರಲ್ಲ. ಈ ಅನುಭವ ವಿವರಿಸುವ ಅವರ ಶ್ರೀಕೃಷ್ಣನ ಮೇಲಿನದೊಂದು ಕವಿತೆಯಿದೆ (ಆಪ್ತಗೀತೆ). ಅದರಲ್ಲಿ ಗೋಪೀನಂದನ ಶ್ರೀಕೃಷ್ಣನಾಗುವ ಪರಿಯ ವರ್ಣನೆಯಿದೆ. ಈ ಪ್ರಕ್ರಿಯೆಯಲ್ಲಿ ಅವನು ಯಾವ ಹಂತದಿಂದ ಯಾವ ಹಂತಕ್ಕೇರಿದ- ಸಗಣಿ ಬಾಚುವುದು, ಗೋವುಗಳ ಕಾಯುವುದು, ಶ್ರಮದ ದುಡಿಮೆಯಲ್ಲಿ ತೊಡಗುವುದು- ಇವೆಲ್ಲದರ ವರ್ಣನೆ ಸೊಗಸಾಗಿ ಮೂಡಿದೆ. ವಾಸ್ತವದಲ್ಲಿ ಶ್ರೀಕೃಷ್ಣ ಎಚ್ಚೆಸ್ವಿಯವರ ಅನುಭವಗಳ ಮೂಸೆಯಲ್ಲಿ ಕರಗಿ ದೇವತಾ ವಿಗ್ರಹವಾಗಿ ಮೂಡಿಬಂದಿರುವವನೇ. ಈ ಪದ್ಯ ನನಗೆ ಕಷ್ಟ ಸಾರ್ಥಕ್ಯದ ಬಗ್ಗೆ, ಶ್ರೀಸಂಸಾರಿ ಪದ್ಯ ಪರಿವಾರ ಪ್ರೀತಿಯ ಬಗ್ಗೆ ಇರುವ ಸಾರ್ಥಕ ರೂಪಕಗಳಂತೆ ಗೋಚರಿಸುತ್ತವೆ.
ನಾನು ಪ್ರಾರಂಭದಲ್ಲಿ ಹೇಳಿದ್ದಕ್ಕೂ ಈ ಕೊನೆಯಲ್ಲಿ ಹೇಳುತ್ತಿರುವುದಕ್ಕೂ ಏನಾದರೂ ಸಂಬಂಧವಿದೆಯೇ? ಖಂಡಿತಾ ಇಲ್ಲ. ಮೊದಲಲ್ಲಿ ಉಪೇಕ್ಷೆಯ ರೂಪದಲ್ಲಿದ್ದ ಭಾವ, ತಾತ್ವಿಕ ವಿರೋಧದಲ್ಲಿ ಮಸೆದ ರೀತಿಯದಾಗಿದ್ದರೆ ಕೊನೆ ಕೊನೆಯಲ್ಲಿ ಪ್ರೀತಿಯ ಕಡಲಲ್ಲಿ ಅದ್ದಿದಂತಿದೆ ಅಲ್ಲವೇ? ಇದೇ ಬದುಕಿನ ವೈರುಧ್ಯ. ಇದೇ ಪ್ರಕ್ರಿಯಾ ಮೀಮಾಂಸೆಯಲ್ಲಿನ ಒಂದು ಘಟ್ಟ. ಬುದ್ಧನ ಕಾರುಣ್ಯದಲ್ಲಿ, ಬಸವಣ್ಣನ ಜಂಗಮ ತತ್ವದಲ್ಲಿ ಯಾವುದೇ ಒಂದು ಶಾಶ್ವತವಾಗಿ ಉಳಿಯುವುದಿಲ್ಲ ಅಲ್ಲವೇ?
ಈಗ ಎಚ್ಚೆಸ್ವಿಗೆ 70. ಮಣ್ಣು ತಿಂದು ಸಿಹಿ ಹಣ್ಣು ಕೊಡುವ ಮರದ ತೆರದಲ್ಲಿ ಸಮಾಜಕ್ಕೆ ಒಳ್ಳೆಯದನ್ನೇ ನೀಡಬೇಕೆಂದು ಬಯಸಿದ, ದೀಪದ ಬೆಳಕು ಬೆಂಕಿಯಾಗದಿರಲೆಂದು ಹಾರೈಸಿದ ಈ ಕವಿ, ಶತಮಾನ ಕಾಣಲಿ ಎಂದು ನಾನೂ ತುಂಬು ಹೃದಯದಿಂದ ಹಾರೈಸುತ್ತೇನೆ.
-ಚಂದ್ರಶೇಖರ ತಾಳ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


