ವೈನಾಗಿದೆ ಆ್ಯಪ್!
ರುಚಿ ತಿಳಿಯಲು ನಾಲಗೆಯೇ ಬೇಕೆಂದಿಲ್ಲ. ನಿಮ್ಮ ಸ್ಮಾರ್ಟಿಯನ್ನೇ ಬಳಸಿಕೊಳ್ಳಬಹುದು. ...

ರುಚಿ ತಿಳಿಯಲು ನಾಲಗೆಯೇ ಬೇಕೆಂದಿಲ್ಲ. ನಿಮ್ಮ ಸ್ಮಾರ್ಟಿಯನ್ನೇ ಬಳಸಿಕೊಳ್ಳಬಹುದು. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ಕೈನಲ್ಲಿ ಸ್ಮಾರ್ಟ್‌ಫೋನ್ ಹೊಂದಿರುವವರಿಗೆ ರುಚಿ ತಿಳಿಯುವುದು ದೊಡ್ಡದಾಗುವುದಿಲ್ಲ.
ನಾಲಗೆ ಮೂಲಕ ನೋಡುವ ರುಚಿಗೆ ಮೊಬೈಲ್ ಪರ್ಯಾಯವಾಗಲು ಸಾಧ್ಯವೇ ಎಂದು ಲಾಜಿಕ್ ಆಗಿ ಪ್ರಶ್ನೆ ಕೇಳಿದರೆ, ಖಂಡಿತಾ ಇಲ್ಲ. ಆದರೆ ನೀವು ನೋಡುವ ಅಥವಾ ಬಯಸುವ ಆಹಾರವನ್ನು ಕೊಳ್ಳುವ ಮೊದಲು ಅದರ ಸ್ವಾದ, ಹಿನ್ನೆಲೆ ಹಾಗೂ ಈಗಾಗಲೇ ರುಚಿ ನೋಡಿದವರ ಅಭಿಪ್ರಾಯಗಳನ್ನು ಆನ್‌ಲೈನ್‌ನಲ್ಲಿ ಕೂಡಲೇ ಪಡೆಯಬಹುದಾಗಿದೆ. ಇಂಥದ್ದೊಂದು ಪ್ರಯೋಗಕ್ಕೆ ಫೇಸ್‌ಬುಕ್‌ನ ಮಾಜಿ ಎಂಜಿನಿಯರ್‌ಗಳ ತಂಡವೊಂದು ಕೈ ಹಾಕಿದೆ. ಆರಂಭಿಕ ಹಂತದಲ್ಲಿ ಇದನ್ನು ವೈನ್‌ಗೆ ಸೀಮಿತಗೊಳಿಸಿ ವೈನ್‌ಗ್ಲಾಸ್ ಎಂಬ ಆ್ಯಪ್ ತರಲಾಗಿದೆ.
ಜಗತ್ತಿನ ಬಹುತೇಕ ವೈನ್ ಬ್ರಾಂಡ್‌ಗಳನ್ನು ಈ ಆ್ಯಪ್‌ನಲ್ಲಿ ಸೇರಿಸಲಾಗಿದೆ. ನಿಮ್ಮ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಮೂಲಕ ವೈನ್ ಬಾಟಲ್ ಅಥವಾ ಬಾಕ್ಸ್ ಮೇಲೆ ಹಿಡಿಯಬೇಕು. ಇಲ್ಲವಾದಲ್ಲಿ ಅದರ ಬ್ರ್ಯಾಂಡ್ ಹೆಸರು ತಿಳಿದಿದ್ದರೂ ಸಾಕಾಗುತ್ತದೆ. ಈ ಆ್ಯಪ್‌ನಲ್ಲಿ ಲಭ್ಯವಿರುವ 10 ಲಕ್ಷ ವಿಮರ್ಶೆಗಳಲ್ಲಿ ಒಂದಿಷ್ಟನ್ನು ಹುಡುಕಿ ಬಳಕೆದಾರರಿಗೆ ನೀಡುತ್ತದೆ. ಈ ವಿಮರ್ಶೆಗಳಲ್ಲಿ ವೈನ್ ತಯಾರಿಕೆ, ಅದಕ್ಕೆ ಬಳಸಿದ ಹಣ್ಣುಗಳ ವಿವರ, ಯಾವ ಪ್ರದೇಶದಲ್ಲಿ ಅದನ್ನು ಬೆಳೆಯಲಾಗಿತ್ತು, ಆ ಹಣ್ಣಿನ ಹಿನ್ನೆಲೆ, ಅದರಿಂದ ಆರೋಗ್ಯದ ಮೇಲಾಗುವ ಪ್ರಭಾವ ಸೇರಿದಂತೆ ಸಂಪೂರ್ಣ ವಿವರವನ್ನು ಆ್ಯಪ್ ನೀಡುತ್ತದೆ.
ಮತ್ತೊಂದು ವಿಶೇಷವೆಂದರೆ, ಆ ವೈನ್ ಜತೆಗೆ ಯಾವ ಆಹಾರವನ್ನು ಸೇವಿಸಿದರೆ ಉತ್ತಮ ಹಾಗೂ ಟೇಸ್ಟಿಯಾಗಿರುತ್ತದೆ ಎನ್ನುವ ಕಾಂಬಿನೇಷನ್‌ಗಳನ್ನು ಇದು ಒದಗಿಸುತ್ತದೆ. ಅದರ ಜತೆಗೆ ಆ ವೈನ್‌ನ ಬೆಲೆ ಹಾಗೂ ಅದೇ ಥರದ ವೈನ್ ಇನ್ಯಾವ ಬೆಲೆಯಲ್ಲಿ ಲಭ್ಯವಿದೆ ಎಂಬ ಮಾಹಿತಿಯನ್ನು ಇದು ನೀಡುತ್ತದೆ.
ಈ ಆ್ಯಪ್ ಅಭಿವೃದ್ಧಿಪಡಿಸಲು ಒಂದು ಪುಟ್ಟ ಕತೆಯಿದೆ. ಫೇಸ್‌ಬುಕ್‌ನಲ್ಲಿ ಎಂಜಿನಿಯರ್ ಆಗಿದ್ದ ರಾಡಿ ಲಿಂಡ್ಸೆ ಎಂಬಾತ ಮಾಸ್ಕೋದ ರೆಸ್ಟೋರೆಂಟ್‌ಗೆ ಹೋಗಿದ್ದ. ಆತನಿಗೆ ವೈನ್ ಹೀರಬೇಕೆಂಬ ಆಸೆಯಾದಾಗ ಅಲ್ಲಿ ಲಭ್ಯವಿದ್ದ ಮೆನ್ಯುವಿನತ್ತ ಗಮನ ಹರಿಸಿದ. ಆದರೆ ಮೆನುವಿನ ಪಟ್ಟಿ ನೋಡಿ ಆತನಿಗೆ ಸ್ವಲ್ಪ ನಾಚಿಕೆಯಾಯಿತಂತೆ. ಇದೆಂಥ ವೈನ್, ಇದಕ್ಕೆ ಬಳಸಿದ ಹಣ್ಣು ಹಾಗೂ ಬೆಲೆಯ ಕುರಿತಂತೆ ಸಾಕಷ್ಟು ಗೊಂದಲ ಉಂಟಾಯಿತು. ದೊಡ್ಡ ರೆಸ್ಟೋರೆಂಟ್‌ಗೆ ಹೋಗಿ ಇದನ್ನು ಹೇಗೆ ವಿಚಾರಿಸುವುದು ಎಂದು ತಲೆನೋವು ಆರಂಭವಾಯಿತು. ಆಗ ಆತನಿಗೆ ಹೊಳೆದಿದ್ದು ನೂತನ ಆ್ಯಪ್ ಬಗ್ಗೆ. ಕೂಡಲೇ ಸ್ನೇಹಿತರೊಂದಿಗೆ ಸೇರಿ ಆ್ಯಪ್ ಅಭಿವೃದ್ಧಿಪಡಿಸಿದ. ಪ್ರಸ್ತುತ ಇದು ಆ್ಯಪಲ್ ಸ್ಟೋರ್‌ನಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಗೂಗಲ್ ಪ್ಲೇ ಹಾಗೂ ಅಮೇಜಾನ್ ಸ್ಟೋರ್‌ಗಳಿಗೂ ಬಿಡಲಿದ್ದಾರೆ.
ನಾವು ಕೂಡ ಕೆಲವೊಮ್ಮೆ ಸ್ಟಾರ್ ಹೋಟೆಲ್‌ಗಳಿಗೆ ಹೋದಾಗ ಇದೇ ರೀತಿಯ ಸಮಸ್ಯೆ ಎದುರಿಸಿರುತ್ತೇವೆ. ಅಲ್ಲಿರುವ ಮೆನು ಅರ್ಥವಾಗದೇ ಮತ್ತದೆ ಪ್ರತಿದಿನ ತಿನ್ನುವ ಇಡ್ಲಿ ವಡಾ, ದೋಸೆ, ಮೊಸರನ್ನ ತಿಂದು ಅದಕ್ಕೆ ಹತ್ತರಷ್ಟು ದುಡ್ಡು ಕೊಟ್ಟು ಬಂದಿರುತ್ತೇವೆ. ಆತ ಹೇಳುವ ಪ್ರಕಾರ, ಈ ರೀತಿಯ ಅಪ್ಲಿಕೇಷನ್‌ಗಳು ಮಾಹಿತಿ ನೀಡುವ ಜತೆಗೆ ತಿನ್ನುವ ಮೊದಲೇ ಅದರ ಹಣಕಾಸು ವಿವರ ಪಡೆಯಲು ಸಹಾಯವಾಗುತ್ತದೆ.
ಈ ಅಪ್ಲಿಕೇಷನ್‌ಗಳನ್ನು ಇನ್ನಿತರ ಆಹಾರ ಪದಾರ್ಥಗಳಿಗೆ ಸಂಬಂಧಿಸಿಯೂ ಅಭಿವೃದ್ಧಿ ಪಡಿಸಲಾಗುತ್ತಿದೆಯಂತೆ. ಇದಕ್ಕಾಗಿ ಜಗತ್ತಿನ ಎಲ್ಲ ದೇಶಗಳ ಪ್ರಮುಖ ಆಹಾರ ವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದನ್ನು ಕ್ರೋಡೀಕರಿಸಿ ಬಹುತೇಕ ಬ್ರಾಂಡೆಡ್ ಪ್ಯಾಕ್ಡ್ ಆಹಾರ ಹಾಗೂ ಪ್ರಮುಖ ಆಹಾರಗಳ ಕುರಿತ ಮಾಹಿತಿ ನೀಡಲು ಈ ತಂತ್ರಜ್ಞರು ಮುಂದಾಗಿದ್ದಾರೆ. ಇದರಿಂದಾಗಿ ದೇಶ ಅಥವಾ ವಿಶ್ವದ ಯಾವುದೇ ಮೂಲೆಗೆ ಹೋದರು ಇಂಥ ಆ್ಯಪ್‌ಗಳಿಂದ ಮಾಹಿತಿ ಪಡೆದು ಹೊಟ್ಟೆ ತುಂಬಿಸಿಕೊಳ್ಳಬಹುದು. ಬಹುತೇಕ ಸಂದರ್ಭದಲ್ಲಿ ಮಾಹಿತಿಯ ಕೊರತೆ ಕಾರಣದಿಂದ ಕೆಲ ಆಹಾರಗಳನ್ನು ತಿನ್ನಲು ಹಿಂಜರಿಯುತ್ತೇವೆ.
ಒಟ್ಟಿನಲ್ಲಿ ಆಹಾರ ಪದಾರ್ಥಗಳು ಇನ್ನೆಷ್ಟು ಸ್ಮಾರ್ಟ್ ಆಗುತ್ತವೆ ಎಂದು ಕಾದು ನೋಡೋಣ.
- ರಾಜೀವ ಹೆಗಡೆ
meet.hegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


