ಖುಷಿ

ಯಾವುದೇ ತೊಂದರೆಯಿಲ್ಲ

Published On :

ಮಲ್ಲೇಶಪ್ಪ, ಗಂಗಾವತಿ
ನಾನು ಸರ್ಕಾರದ ಅನೇಕ ಇಲಾಖೆಗಳಿಂದ ಮಾಹಿತಿಹಕ್ಕು ಕಾಯ್ದೆಯಂತೆ ಮಾಹಿತಿ ಪಡೆದುಕೊಂಡಿರುತ್ತೇನೆ. ನಾನು ಮುಂದೆ ಸರ್ಕಾರಿ ಉದ್ಯೋಗಕ್ಕೆ ಸೇರಲು ಇದರಿಂದ ತೊಂದರೆಯಾಗುತ್ತದೆಯೇ?
- ನೌಕರಿಗೂ, ಈ ಹಕ್ಕಿನಡಿಯ ಪ್ರಶ್ನೆಗಳಿಗೂ ಏನೇನೂ ಸಂಬಂಧವಿಲ್ಲ. ನೀವು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದುಕೊಂಡಿದ್ದೀರಿ. ಇದರಿಂದ ನಿಮ್ಮ ಮುಂದಿನ ಯಾವುದೇ ಸರ್ಕಾರಿ ನೌಕರಿಗೆ ಅಥವಾ ಖಾಸಗಿ ನೌಕರಿಗೆ ಯಾವ ಸಂಬಂಧವೂ ಇಲ್ಲ, ಯಾವ ತೊಂದರೆಯೂ ಆಗುವುದಿಲ್ಲ.
ವಾಯ್ದೆ ಮೀರಿದೆ
ಬಿ.ಎನ್. ವೆಂಕಟೇಶ್, ಕೋಲಾರ
ನಮ್ಮ ತಾತನ ಆಸ್ತಿಯನ್ನು (ಅವಿಭಕ್ತ ಕುಟುಂಬ) ಅವರ ಅಣ್ಣನ ಮಕ್ಕಳು ಹಾಗೂ ನನ್ನ ತಂದೆ 1954ರಲ್ಲಿ ಮಾರಾಟ ಮಾಡಿದ್ದಾರೆ. ಆಗ ಅವರ ಹೆಸರಿನಲ್ಲಿ ಖಾತೆ ಇರಲಿಲ್ಲ. ಈಗ ಅದನ್ನು ನಾವು ಮರಳಿ ಪಡೆಯಬಹುದೇ?
- ಲಿಮಿಟೇಷನ್ ಕಾಯ್ದೆಯ ಆರ್ಟಿಕಲ್ 65ರಂತೆ ನೀವು 12 ವರ್ಷದೊಳಗೆ ದಾವಾ ಹಾಕಬೇಕಾಗಿತ್ತು. ಆದ್ದರಿಂದ ಈಗ ವಾಯ್ದೆ ಮೀರಿದೆ.
ನಿಮಗೂ ಸಮಪಾಲಿದೆ
ಚಂದ್ರಶೇಖರ ಹೆಗಡೆ, ಬಲೇಕಣಿ
ತಂದೆಯವರ ಪಿತ್ರಾರ್ಜಿತ ತೋಟದ ಆದಾಯದಲ್ಲಿ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳ ಮದುವೆ ಮಾಡಿ, ಗಂಡುಮಕ್ಕಳಿಗೆ ಎರಡು ಎಕರೆ ತೋಟವನ್ನು ಸ್ವಯಾರ್ಜಿತವೆಂದು ಹೇಳಿ ಭಾಗ ಮಾಡಿಕೊಟ್ಟಿರುತ್ತಾರೆ. ನಾನು ಕೊನೆಯ ಮಗನಾಗಿದ್ದು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದು, ನನಗೆ ಕೇವಲ 32 ಗುಂಟೆ ಜಮೀನು ಕೊಟ್ಟಿರುತ್ತಾರೆ. ಈಗ ನಾನು ಕೋರ್ಟಿನಲ್ಲಿ ದಾವಾ ಹಾಕಿದರೆ ನನಗೆ ಅನುಕೂಲವಾಗಿ ತೀರ್ಪು ಬರುತ್ತದೆಯೇ?
- ನಿಮ್ಮ ತಂದೆ ಖರೀದಿಸಿದ ಜಮೀನು ಪಿತ್ರಾರ್ಜಿತ ಆಸ್ತಿಯ ಆದಾಯದಿಂದ ಎಂದು ಪರಿಗಣಿಸಿದರೂ ಒಟ್ಟು ಆಸ್ತಿಯಲ್ಲಿ ನಿಮ್ಮ ತಂದೆ ತಾಯಿ (ಇದ್ದರೆ), ಅಕ್ಕ ಹಾಗೂ ಸಹೋದರರಿಗೂ ನಿಮ್ಮಷ್ಟೇ ಸಮಪಾಲಿದೆ. ಅಂದರೆ ನಿಮಗೆ ಒಟ್ಟು ಆಸ್ತಿಯ 1/6 ಭಾಗ ಬರುತ್ತದೆ. ನಿಮಗಿರುವ ಒಟ್ಟು ಆಸ್ತಿಯಲ್ಲಿ ನಿಮಗೆಷ್ಟು ಪಾಲು ಬರಬೇಕೆಂಬುದನ್ನು ನೀವೇ ಲೆಕ್ಕ ಹಾಕಿಕೊಳ್ಳಿ.
ಸಹೋದರಿಗೂ ಪಾಲು ಕೊಡಲೇಬೇಕು
ಹೆಸರು ಬೇಡ, ಊರು ಬೇಡ
ನನ್ನ ತಂದೆಗೆ ಅವರ ತಂದೆಯವರು, ಅಂದರೆ ನನ್ನ ತಾತನವರು 1956ರಲ್ಲಿ ವಿಲ್ ಮೂಲಕ ಒಂದು ಮನೆ ಬರೆದು ಕೊಟ್ಟಿದ್ದಾರೆ. ನನ್ನ ತಂದೆಯವರು ನನಗೆ ಆ ಮನೆಯನ್ನು ವಿಲ್ ಮೂಲಕ ಕೊಟ್ಟಿದ್ದು, ಆ ಮನೆಯ ಬಾಡಿಗೆ ಹಣವು ನನ್ನ ತಾಯಿಯವರಿಗೆ ಸೇರಬೇಕೆಂದು ಬರೆದಿದ್ದಾರೆ. ನನಗೆ ಒಬ್ಬಳು ಸಹೋದರಿ ಇದ್ದು, ಆಕೆಗೆ ಮನೆಯಲ್ಲಿ ಯಾವ ಪಾಲನ್ನೂ ಕೊಟ್ಟಿಲ್ಲ. ಆದರೆ ಈ ವಿಲ್ ನೋಂದಣಿಯಾಗಿಲ್ಲ. 20 ವರ್ಷಗಳ ನಂತರ ಈಗ ನನ್ನ ಸಹೋದರಿ ಪಾಲು ಕೇಳುತ್ತಿದ್ದಾರೆ. ಸರಿಯೇ?
- ತಂದೆಗೆ ಬಂದ ಆಸ್ತಿ ಪಿತ್ರಾರ್ಜಿತ. ಆದ್ದರಿಂದ ನಿಮ್ಮ ಸಹೋದರಿಗೂ ಈ ಆಸ್ತಿಯಲ್ಲಿ ಹಕ್ಕಿದೆ. ವಿಲ್ ನೋಂದಣಿಯಾಗಿಲ್ಲದೇ ಇರುವುದರಿಂದ ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಕಲಂ 6(5)ರ ವಿವರಣೆಯ ಪ್ರಕಾರ ಅದು ಸಿಂಧುವಾಗುವುದಿಲ್ಲ. ಆದ್ದರಿಂದ ನಿಮ್ಮ ಸಹೋದರಿಗೆ ಪಾಲು ಕೊಡಲೇಬೇಕಾಗುತ್ತದೆ.



 -ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.