ಖುಷಿ

ಭೂಗತ ಮ್ಯೂಸಿಯಂ

ದುಬೈನ ಹೃದಯ ಭಾಗದಲ್ಲಿ 'ಬರ್ ದುಬೈ' ಇದೆ. ಅಲ್ಲೇ ಇರುವುದು ದುಬೈನ ವಸ್ತು ಸಂಗ್ರಹಾಲಯ...

ಭೂಗತ ಮ್ಯೂಸಿಯಂ
Published On :

ದುಬೈನ ಹೃದಯ ಭಾಗದಲ್ಲಿ 'ಬರ್ ದುಬೈ' ಇದೆ. ಅಲ್ಲೇ ಇರುವುದು ದುಬೈನ ವಸ್ತು ಸಂಗ್ರಹಾಲಯ. ಕಲ್ಲಿನ ಗುಂಡುಗಳು, ಮರದ ದೋಣಿಗಳು, ಹಳೆಯ ಈಚಲು ತಟ್ಟೆಯ ಮನೆ. ತೆರೆದ ಬಾವಿ, ಒಂದೆರಡು ಕೋಣೆಗಳಲ್ಲಿ ಹಳೇ ಆಯುಧಗಳ ಸಂಗ್ರಹದ ಜಾತ್ರೆ ಅಲ್ಲಿ. 'ಇದಿಷ್ಟೇನಾ ದುಬೈ ವಸ್ತು ಸಂಗ್ರಹಾಲಯ?' ಎನ್ನುವಷ್ಟರಲ್ಲಿ ಒಂದು ಕೋಣೆಯಲ್ಲಿ ಇಳಿಜಾರು ಕಾಣಿಸುತ್ತದೆ. ಅಲ್ಲಿಳಿದು ಹೋದರೆ ತೆರೆದುಕೊಳ್ಳುತ್ತದೆ ಅದ್ಭುತ ಲೋಕ. ರಸ್ತೆ, ಜನನಿಬಿಡ ಮಾರ್ಕೆಟ್, ಪಾರ್ಕಿಂಗ್ ಎಲ್ಲ ಇದೆ. ಅದರ ಒಳಗಡೆ ಸುರಂಗ ಕೊರೆದು, ಎಕರೆ ಜಾಗದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ.
ದುಬೈನ ಅಂದಿನ ಜನಜೀವನದ ದೃಶ್ಯಾವಳಿಗಳು, ಫೋಟೋಗಳು, ವಿಡಿಯೋ ತುಣುಕುಗಳು ಅಲ್ಲಿವೆ. ಮಂದಬೆಳಕಿನಲ್ಲಿ ಅವನ್ನೆಲ್ಲ ನೋಡುತ್ತಾ ಹೋಗುವುದೇ ಒಂದು ಸುಂದರ ಅನುಭವ. ಇಳಿಯುತ್ತಲೇ ಮೊದಲ ಹಾಲ್‌ನಲ್ಲಿ 1900ರಿಂದ ಈವರೆಗೆ ದುಬೈ ಹೇಗೆ ವಿಕಸಿತವಾಗುತ್ತಾ ಹೋಯಿತು ಮತ್ತು ಅದರ ಮುಂದಿನ ಯೋಜನೆಗಳೇನು  ಎಂಬುದರ ವಿಡಿಯೋ ಪ್ರದರ್ಶನವಿರುತ್ತದೆ. ಆ ಕಾಲದಲ್ಲಿ ಅಲ್ಲಿಯ ಮೂಲ ಕಸಬುಗಳೆಲ್ಲವೂ ಸಮುದ್ರ ಆಧಾರಿತ. ಸಮುದ್ರ ತಳದಲ್ಲಿ ಮುತ್ತು ಆಯುವುದರಿಂದ ಹಿಡಿದು, ಆಕಾಶಕ್ಕೇ ಸವಾಲೊಡ್ಡಿ 800 ಮೀಟರ್ ಎತ್ತರ ಏರಿ ಬುರ್ಜ್ ಖಲೀಫಾ ಕಟ್ಟಡದ ವರೆಗೆ ಬಂದು ನಿಂತಿರುವ ದುಬ್ಯೆನ ಬೆಳವಣಿಗೆಯ ಹಿಂದೆ ಆ ದೇಶದ ರಾಜ ಶೇಕ್ ಮೊಹ್ಮದ್ ಬಿನ್ ರಶೀದ್ ಅಲ್ ಮುಕ್ಕತುಂ ಹಾಗೂ ಅವರ ತಂದೆಯ ಕೊಡುಗೆ ಅಪಾರ. ಬೆಂಗಾಡಾದ ಪ್ರದೇಶವನ್ನು ಜಗತ್ತಿನ ಅತ್ಯುತ್ತಮ ಪ್ರವಾಸಿ ತಾಣವಾಗಿಸಿದ ಅವರ ಪರಿಶ್ರಮವನ್ನು ಮೆಚ್ಚಲೇಬೇಕು. ಸಂಪ್ರದಾಯ ಮುಸ್ಲಿಂ ನಾಡಾದರೂ ವಿಶ್ವದ ಎಲ್ಲ ಜನರನ್ನು ಬರಮಾಡಿಕೊಂಡು ತಮ್ಮ ದೇಶವನ್ನು ಕಟ್ಟಿದ ಅವರ ಅವಿರತ ದುಡಿಮೆಗೆ ನಾವು ಸಲಾಂ ಹೇಳಲೇಬೇಕು.
ವಸ್ತು ಸಂಗ್ರಹಾಲಯ ನೋಡುತ್ತಾ ಹೋದಂತೆ ಒಂಟೆಯ ಸವಾರ, ಮೀನುಗಾರರು, ಹರಟೆ ಹೊಡೆಯುತ್ತಾ ಕುಳಿತ ಜನರ ಗುಂಪು, ಕಮ್ಮಾರ, ಬಡಗಿ, ದಿನಸಿ ಅಂಗಡಿಯವರು, ದರ್ಜಿ, ಮುತ್ತು ವ್ಯಾಪಾರಿ, ಪಾಠ ಮಾಡುತ್ತಿರುವ ಗುರುಗಳು, ಖುರಾನ್ ಓದುತ್ತಾ ಕುಳಿತಿರುವ ಮಹಿಳೆ ಇತ್ಯಾದಿಗಳು ಕಾಣಸಿಗುತ್ತವೆ. ಆ ಎಲ್ಲ ಪ್ರತಿಕೃತಿಗಳು ಎಷ್ಟು ನೈಜವಾಗಿವೆ ಎಂದರೆ ನಾವು ದಿನಸಿ ಅಂಗಡಿ ಮುಂದೆ ನಿಂತು ದುಡ್ಡು ಚಾಚಿ ದಿನಸಿ ಖರೀದಿಸುವ ಫೋಟೋ ತೆಗೆಸಿದರೆ ಅದು ಅಷ್ಟೇ ನೈಜವಾಗಿರುತ್ತದೆ. ಮೊದಲೆಲ್ಲ ಆಧುನಿಕ ಸಲಕರಣೆಗಳಿಲ್ಲದ ಕಾಲದಲ್ಲಿ ಸಮುದ್ರದ ತಳದಲ್ಲಿ ಮುತ್ತು ಆಯಲು ಮೂಗಿಗೆ ಕ್ಲಿಪ್ ಹಾಕಿಕೊಂಡು, 5 ಕೆಜಿ. ಕಲ್ಲೊಂದನ್ನು ಕಟ್ಟಿಕೊಂಡು ಸಮುದ್ರಕ್ಕೆ ಹಾರಿ ಮೂರು ನಿಮಿಷ ಊಸಿರು ಬಿಗಿ ಹಿಡಿದು ಮುತ್ತನ್ನು ಆಯುತ್ತಿದ್ದರಂತೆ. ಅವನ್ನೆಲ್ಲ ವಿಡಿಯೋ ಪ್ರದರ್ಶನದ ಮೂಲಕ ತೋರಿಸಿದ್ದಾರೆ. ನಂತರದ ಒಂದು ಹಾಲ್‌ನಲ್ಲಿ ಕ್ರಿ.ಶ. 12ನೇ ಶತಮಾನದಿಂದ ಈಚೆಗೆ ಸಿಕ್ಕ ಪಳೆಯುಳಿಕೆಗಳು, ಉತ್ಖನನದಲ್ಲಿ ದೊರೆತ ಸಾಮಗ್ರಿಗಳನ್ನು ಪ್ರದರ್ಶಿಸಿದ್ದಾರೆ. ಕೊನೆಯಲ್ಲಿ ದುಬೈನ ಇತಿಹಾಸ, ರಾಜರ ಪರಿಚಯ, ಪರಂಪರೆ, ಅವರ ಕನಸು ಹಾಗೂ ಸಾಧನೆಗಳ ಪರಿಚಯವುಳ್ಳ ಪುಸ್ತಕ ಹಾಗೂ ಇತರೆ ಸಾಮಾನುಗಳ ಮಳಿಗೆ ಇದೆ.


- ವೀರೇಶ ಬಂಗಾರಶೆಟ್ಟರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.