ಖುಷಿ

ಬೀದಿಗೆ ಬೀಳದ ಹೆಸರು

ಬೆಂಗಳೂರು ನಗರದ ಚರಿತ್ರೆ ತಿಳಿದವರಿಗೆ ಅದರ ನಿರ್ಮಾತೃ ಕೆಂಪೇಗೌಡರ ಪರಿಶ್ರಮ ಅರಿವಾಗಿರುತ್ತದೆ...

ಬೀದಿಗೆ ಬೀಳದ ಹೆಸರು
Published On :

ಬೆಂಗಳೂರು ನಗರದ ಚರಿತ್ರೆ ತಿಳಿದವರಿಗೆ ಅದರ ನಿರ್ಮಾತೃ ಕೆಂಪೇಗೌಡರ ಪರಿಶ್ರಮ ಅರಿವಾಗಿರುತ್ತದೆ. ಅವರು ನಗರದ ಆರ್ಥಿಕ ಬೆಳವಣಿಗೆ ವರ್ಧಿಸಲು ನಾನಾ ಕುಶಲಕರ್ಮಿ, ವ್ಯಾಪಾರಿಗಳನ್ನು ಬೇರೆ ಬೇರೆಡೆಯಿಂದ ಆಹ್ವಾನಿಸಿ, ಅವರು ಇಲ್ಲಿಯೇ ನೆಲೆಸಿ ತಮ್ಮ ವಹಿವಾಟು ಮುಂದುವರಿಸಲು ಸಹಾಯ ಮಾಡಿದರು. ಆಂತೆಯೇ ಅವರ ಕಸುಬಿಗೆ ತಕ್ಕಂತೆ ಪ್ರತ್ಯೇಕ ಸ್ಥಳಗಳನ್ನೂ ನೀಡಿದರು. ಪರಿಣಾಮವಾಗಿ ಕುಂಬಾರಪೇಟೆ, ಗಾಣಿಗರ ಪೇಟೆ, ನಗರ್ತ ಪೇಟೆ, ಅಕ್ಕಿಪೇಟೆ, ರಾಗಿ ಪೇಟೆ, ಅರಳೇ ಪೇಟೆ ಇತ್ಯಾದಿಗಳು ನಾಮಾಂಕಿತಗೊಂಡವು. ಇಲ್ಲಿ ನಡೆಯುತ್ತಿದ್ದ ವ್ಯಾಪಾರಗಳನ್ನು ಈ ಹೆಸರುಗಳೇ ಸೂಚಿಸುತ್ತವೆ.
ಆದರೆ, ಈಗ ಕುಂಬಾರ ಪೇಟೆಯುದ್ದಕ್ಕೂ ನಾವು ಕಾಣುವುದು ಪ್ಲಾಸ್ಟಿಕ್ ಅಥವಾ ಲೋಹದ ವಸ್ತುಗಳೇ ಹೊರತು ಮಣ್ಣಿನ ಮಡಿಕೆ ಕುಡಿಕೆಗಳು ದುರ್ಬೀನಿಗೂ ಸಿಗವು. ಇನ್ನು ದಂಡು ಪ್ರದೇಶದಲ್ಲಿ ಕಮರ್ಷಿಯಲ್ ರಸ್ತೆಗೆ ಸಮಾನಾಂತರವಾಗಿರುವ ಜ್ಯುವೆಲರ್ಸ್ ರಸ್ತೆ. ಇಲ್ಲಿನ ಆಭರಣ ಉದ್ದಿಮೆ ಬಹುಪಾಲು ಬೇರೆಡೆಗೆ ಸ್ಥಳಾಂತರಗೊಂಡರೂ ಹೆಸರು ಮಾತ್ರ ಜ್ಯುವೆಲರ್ಸ್‌ರಸ್ತೆಯಾಗೇ ಉಳಿದಿದೆ. ನಗರದ ಕಲಾಸಿಪಾಳ್ಯದಲ್ಲಿರುವ ಜರ್ನಲಿಸ್ಟ್‌ಕಾಲೊನಿಯಲ್ಲಿ ಯಾವ ಪತ್ರಿಕಾ ವರದಿಗಾರರಗಲೀ, ಪತ್ರಿಕಾ ಮಾಧ್ಯಮಕ್ಕೆ ಸಂಬಂಧ ಪಟ್ಟ ಯಾವ ವಸ್ತುವೂ ಸಿಗುವುದಿಲ್ಲ. ಬದಲಿಗೆ ಇಲ್ಲಿ ದೊರೆಯುವುದು ಎಲ್ಲ ರೀತಿಯ ವಾಹನಗಳ ಬಿಡಿಭಾಗಗಳು ಮಾತ್ರ!
ಮಹಾತ್ಮಗಾಂಧಿ ರಸ್ತೆ ಎಂ.ಜಿ. ರಸ್ತೆಯಾಗಿ ಹಿರಿಕಿರಿಯರೆಲ್ಲರ ಬಾಯಲ್ಲೂ ಮೆರೆದಾಡುತ್ತದೆ. ಆದರೆ ಈ ರಸ್ತೆಯಲ್ಲಿ ವಿದೇಶಿಗರು, ವಿದೇಶಿಗರ ಅನುಕರಿಸುವವರ ಮಧ್ಯ ದೇಸೀ ತಾತಾ ಬಡವಾಗಿ ಹೋಗಿದ್ದಾರೆ. ಬಹುಶಃ ಇದಕ್ಕಾಗಿಯೇ ಗಾಂಧೀಜಿ ಪ್ರತಿಮೆಯನ್ನು ರಸ್ತೆಯಿಂದ ಸ್ವಲ್ಪ ದೂರವೇ ಇಟ್ಟಿದ್ದಾರೆ. ಅದರೂ ನಮ್ಮ ಜನ ಇವರನ್ನು ಸುಮ್ಮನೆ ಬಿಟ್ಟಿಲ್ಲ. ಅವರು ನಡೆಸುವ ಪ್ರತಿಭಟನೆಗಳಿಗೆಲ್ಲ ಪ್ರತಿಮೆ ಮೂಕ ಸಾಕ್ಷಿಯಾಗಿದೆ.
ಬಾರು ಪಬ್‌ಗಳ ಉಗಮ ಸ್ಥಾನ ಚರ್ಚ್ ರಸ್ತೆ! ಇದು ಎಂಜಿ ರಸ್ತೆಯ ಪಕ್ಕದಲ್ಲೇ ಇದೆ. ರಸ್ತೆಯ ಉದ್ದಗಲಕ್ಕೂ ಚರ್ಚ್ ಇರಲಿ, ಯಾವುದೇ ಧಾರ್ಮಿಕ ಸ್ಥಳ ಇದ್ದ ಕುರುಹೂ ಇಲ್ಲ. ಈಗ ಮ್ಯೂಸಿಯಂ ರಸ್ತೆಯೆಂದರೆ ಎಲ್ಲರೂ ಗುರುತಿಸುವುದು ವಿಶ್ವೇಶ್ವರಯ್ಯ ಮ್ಯೂಸಿಯಂ ಇರುವ ಕಸ್ತೂರ ಬಾ ರಸ್ತೆ. ಆದರೆ ನಿಜವಾದ ಮ್ಯೂಸಿಯಂ ರಸ್ತೆ, ಚರ್ಚ್ ರಸ್ತೆಯಿಂದ ಆರಂಭವಾಗಿ ಹಾವಿನೋಪಾದಿಯಾಗಿ ಬೆಳೆಯುತ್ತಾ ರೆಸಿಡೆನ್ಸಿ ರಸ್ತೆಯನ್ನು ಮುಟ್ಟುತ್ತದೆ. ಹಳೆಯ ಮ್ಯೂಸಿಯಂ ಈ ರಸ್ತೆಯಲ್ಲಿ ಇದ್ದಿದ್ದು ಈಗಲೂ ಅದೇ ಹೆಸರು ಶಾಶ್ವತವಾಗಿದೆ.
ಬಸವನಗುಡಿ ಮುಖ್ಯರಸ್ತೆ ಕನ್ನಡದ ಹೆಸರಾಂತ ಕವಿ ಡಾ.ಡಿ.ವಿ. ಗುಂಡಪ್ಪ ರಸ್ತೆಯೆಂದು ನಾಮಕರಣವಾಗಿದೆ. ಕಾಲಾಂತರದಲ್ಲಿ ಇದು ಕಡಿತಗೊಂಡು ಡಿವಿಜಿ ರಸ್ತೆಯಾಗಿದೆ. ಇದೇ ರೀತಿ ಜೆಪಿ ನಗರ, ಎಸ್‌ಪಿ ರೋಡ್ ಹೀಗೆ ಹ್ರಸ್ವಗೊಂಡ ಹೆಸರುಗಳನ್ನು ತಿಳಿಯಲು ನಮ್ಮ ಮುಂದಿನ ಪೀಳಿಗೆಗೆ ಪ್ರತ್ಯೇಕ ನಿಘಂಟೇ ಬೇಕಾಗಬಹುದು. ಈ ವಿಷಯದಲ್ಲಿ ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆ ಅದೃಷ್ಟಶಾಲಿ. ಅದನ್ನು ಇದುವರೆಗೂ ಯಾರೂ ಹ್ರಸ್ವಗೊಳಿಸಲು ಹೋಗಿಲ್ಲ.
ಹಳೇ ಹೆಸರೇ ಅಚ್ಚುಮೆಚ್ಚು
ದಂಡು ಪ್ರದೇಶದ ಬಡಾವಣೆಗಳಾದ ಟಾಸ್ಕರ್ ಟೌನ್, ಫ್ರೇಸರ್ ಟೌನ್, ಕಾಕ್ಸ್‌ಟೌನ್ ಮುಂತಾದವು ಮರು ನಾಮಕರಣಗೊಂಡು ಪುಲಿಕೇಶಿನಗರ, ಬಾಹುಬಲಿ ನಗರ, ಸಿ.ವಿ. ರಾಮನ್ ನಗರ ಆಗಿದ್ದರೂ ನಾಗರಿಕರಿಗೆ ಹಳೇ ಹೆಸರುಗಳೇ ಅಚ್ಚುಮೆಚ್ಚು. ಅದೇ ರೀತಿ ಕುವೆಂಪುನಗರವೆಂದು ನಾಮಕರಣಗೊಂಡಿರುವ ಬಿಟಿಎಂ ಬಡಾವಣೆ ಕೂಡ. ಜಯನಗರ ನಾಲ್ಕನೇ 'ಟಿ' ವಿಭಾಗದಲ್ಲಿ ಸಂಜಯ ಗಾಂಧಿ ಆಸ್ಪತ್ರೆ ಬಸ್ ನಿಲ್ದಾಣವಿದೆ. ಇಲ್ಲಿನ ಆಸ್ಪತ್ರೆ ಬಹಳ ವರ್ಷದ ಹಿಂದೆಯೇ ಸ್ಥಳಾಂತರಗೊಂಡಿದ್ದರೂ ರಸ್ತೆಯ ಹೆಸರನ್ನು ಯಾರೂ ಬದಲಾಯಿಸುವ ಗೋಜಿಗೆ ಹೋಗಿಲ್ಲ. ನಗರದಲ್ಲಿ ಎಲ್ಲರಿಗೂ ಇದೊಂದು ಪ್ರಮುಖ ಮತ್ತು ಸುಲಭ ಹೆಗ್ಗುರುತಾಗಿದೆ. ಅದೇ ರೀತಿ ರೆಸಿಡೆನ್ಸಿ ರಸ್ತೆ ಮತ್ತು ರಿಚ್ಮಂಡ್ ರಸ್ತೆ ಕಾರಿಯಪ್ಪ ರಸ್ತೆ ಮತ್ತು ತಿಮ್ಮಯ್ಯ ರಸ್ತೆಯೆಂದು ನಾಮಕರಣಗೊಂಡಿದ್ದರೂ ಹಳೇ ಹೆಸರು ಸುಲಭವಾಗಿ ಜನರ ಮನಸ್ಸಿನಿಂದ ದೂರವಾಗಿಲ್ಲ.
ಹೀಗೆ ಹೆಸರಿಗೆ ಅನ್ವರ್ಥವಾಗುವ ರಸ್ತೆಗಳನ್ನು ಯೋಚಿಸುತ್ತಾ ಹೋದಲ್ಲಿ ಅದಕ್ಕೂ ಮತ್ತು ಅಲ್ಲಿ ನಡೆಯುವ ಚಟುವಟಿಕೆಗಳಿಗೂ ಯಾವುದೇ ಸಾಮ್ಯವಿರುವುದಿಲ್ಲ.

-ಕೆ.ಎಸ್. ಸೋಮೇಶ್ವರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.