ಖುಷಿ

ಎಫ್ 1 ವೈಫ್ 1

ಲ್ಯಾಟಿನ್ ಅಮೆರಿಕದ ಪೌರಾಣಿಕ ದೊರೆ ಬೆವರದೇ ಇರುವ ಋತುಗಳಿಲ್ಲ. ಉಪ್ಪು ನೀರಿನ ಬದಲು ಚಿನ್ನದ ನೀರನ್ನು ...

ಎಫ್ 1 ವೈಫ್ 1
Published On :

ಲ್ಯಾಟಿನ್ ಅಮೆರಿಕದ ಪೌರಾಣಿಕ ದೊರೆ ಬೆವರದೇ ಇರುವ ಋತುಗಳಿಲ್ಲ. ಉಪ್ಪು ನೀರಿನ ಬದಲು ಚಿನ್ನದ ನೀರನ್ನು ಸ್ಖಲಿಸುತ್ತಿದ್ದ ಈ ಬಂಗಾರದ ಮನುಷ್ಯನನ್ನು ತಣಿಸಲು ಅಪರೂಪಕ್ಕೆ ಬಿಳಿಮೋಡಗಳೂ ಮಳೆ ಉದುರಿಸುತ್ತಿದ್ದವು. ಅಮೆಜಾನ್ ತೀರದಲ್ಲಿ ಹುಲುಸಾಗಿ ಬೆಳೆದ ಕೊಕೈನ್ ಎಲೆಗಳನ್ನು ತಿಂದು ಒಣಗಿ ಹೋಗಿದ್ದ. ಕರಿ ಮೈಗೆ ಸದಾ ಚಿನ್ನದ ಭಸ್ಮ ಮೆತ್ತಿಕೊಂಡು, ಊರ ತುಂಬಾ ಮೆರವಣಿಗೆ ಹೊರಡುತ್ತಿದ್ದ. ಅಮೆಜಾನ್ ನದಿಯಲ್ಲಿ ಸಾಯಂಕಾಲ ನಾಲ್ಕು ಮುಳುಕು ಹೊಡೆದು, ಮತ್ತೆ ಬೆವರಲು ಸಜ್ಜಾಗುತ್ತಿದ್ದ. ಅವತ್ತವನಿಗೊಂದು ಕನಸು ಬೀಳುತ್ತದೆ; ತಾನು ಹೀಗೆಲ್ಲ ಬೆವರುವುದಕ್ಕೆ ಅರಮನೆಯಲ್ಲಿರುವ ಬಂಗಾರದ ಶಾಖವೇ ಕಾರಣವೆನ್ನುವುದು. ಎಚ್ಚರಾದ ಮರುಕ್ಷಣವೇ ಸೈನಿಕರಿಗೆ ಅರಮನೆಯಲ್ಲಿದ್ದ ಎಲ್ಲ ಚಿನ್ನಾಭರಣಗಳನ್ನು ಅಮೆಜಾನ್ ನದಿಗೆ ಎಸೆಯಲು ಆದೇಶಿಸಿ, ತಂಪಾದನಂತೆ. ಈಗಲೂ ಆ ನದಿ ಸುತ್ತಮುತ್ತ ಯಥೇಚ್ಛ ಚಿನ್ನ ಸಿಗುತ್ತದಂತೆ. ಬ್ರೆಜಿಲ್- ಅರ್ಜೆಂಟಿನಾದ ಬಡ ಕ್ರೈಸ್ತರಿಗೆ ಚಿನ್ನದ ಮೊಳೆಗಳು ಕಾಲಿಗೆ ಹೊಕ್ಕಿ, ಅದನ್ನು ಕಿತ್ತ ಕೊಲಂಬಿಯಾದ ವೈದ್ಯರೆಲ್ಲ ಸಿರಿವಂತರಾಗಿದ್ದಾರಂತೆ.
ಈ ಕಥೆಯನ್ನು ಹುಟ್ಟುಹಾಕಿದವನ ಫೋಟೋವನ್ನು ದಕ್ಷಿಣ ಅಮೆರಿಕದಲ್ಲೆಲ್ಲೂ ನೇತು ಹಾಕಿಲ್ಲ. ಆದರೆ, ಇದನ್ನು ಕೇಳುತ್ತಲೇ ತಮ್ಮೊಳಗಿನ ಕಥಾಲೋಕವನ್ನು ಇದೇ ಮಾದರಿಯಲ್ಲಿ ಹರಡಿಕೊಂಡ ನೆರೂಡ- ಮಾರ್ಕ್ವೆಝ್ ಅಲ್ಲೇ ಆಸುಪಾಸಿನಲ್ಲಿ ಹುಟ್ಟುತ್ತಾರೆ. ಈಗೇನು ಚಿನ್ನದ ಚೆಂಡಿಗೆ ಗುದ್ದಾಡುತ್ತಿರುವ ಮೆಸ್ಸಿ- ನೇಮಾರ್- ಆಸ್ಕರ್... ಎಲ್ಲರ ಓಟದಲ್ಲೂ ಅದೇ ಚಿನ್ನದ ಹಸಿವು ತೂಗಾಡುತ್ತಿದೆ. ಸ್ಪ್ಯಾನಿಷರು ಈ ಕಲ್ಪನೆಗೆ 'ಹೈಪರ್‌ಬೋಲ್‌' (ಉತ್ಪ್ರೇಕ್ಷೆ) ಅಂತ ಹೆಸರಿಟ್ಟು, ಜರ್ಮನಿ ಮೇಲೂ ಕಥೆ ಕಟ್ಟಿ ಅದರ ತುದಿಯನ್ನು ಕ್ರೀಡೆಗೆ ಮುಟ್ಟಿಸುತ್ತಾರೆ. ಹಿಟ್ಲರ್ ತನ್ನ ಸೈನಿಕರಿಗೆ ಕತ್ತೆಗಳನ್ನು ಕೊಟ್ಟು, 'ಇಟಲಿಯ ಗಡಿಯಲ್ಲಿ ಏನಾಗುತ್ತಿದೆ ಎಂದು ಇನ್ನೊಂದು ಗಂಟೆಯಲ್ಲಿ ಕಂಡುಬಂದು ಹೇಳಿ' ಎನ್ನುತ್ತಿದ್ದನಂತೆ. ಅವನು ಸಾಕಿದ ಕತ್ತೆಯ ವೇಗ ಕೂಡ ಕುದುರೆಯ ದುಪ್ಪಟ್ಟು. ಸೋಮಾರಿಗಳಿಗೆ, ತಡವರಿಸುತ್ತಾ ಕೆಲಸ ಮಾಡುವವರಿಗೆ ಅವನು ಘೋರ ಶಿಕ್ಷೆ ವಿಧಿಸುತ್ತಿದ್ದನಂತೆ. ಆ ಭಯ ಈಗಲೂ ಜರ್ಮನಿಯನ್ನು ಹಿಂಬಾಲಿಸುತ್ತಿರಬಹುದು.

ಇದೇ ಕಾರಣಕ್ಕೀಗ ಜರ್ಮನ್ ಮಹಿಳೆ ಸಂಭೋಗ ಹೊಂದಿದ ಮರುದಿನವೇ ಮಗು ಹೆರುತ್ತಾಳೆ. ಅದರ ಮರುದಿನವೇ ಆ ಮಗು ಬೆನ್ಝ್ ಇಲ್ಲವೇ ಮರ್ಸಿಡೆಸ್‌ನ ರೇಸ್ ಕಾರಿನಲ್ಲಿ ಕೂತು ಆಕ್ಸಿಲರೇಟರ್ ಮೇಲೆ ಕಾಲಿಡುತ್ತದೆ. ಕಾರಲ್ಲೇ ಪ್ರೌಢಾವಸ್ಥೆ ತಲುಪಿ, ಸಂಸಾರ ಮಾಡಿ, ಅಲ್ಲೆಲ್ಲೋ ರಸ್ತೆ ಬದಿಯ ಬಂಡೆಗೆ ಅಪ್ಪಳಿಸಿ ಸಾಯುವಾಗ ಅದರ ಮರುದಿನದ ಆಯುಸ್ಸು ಎಪ್ಪತ್ತೋ ಎಂಭತ್ತೋ!
ಆ ನೆಲದಲ್ಲಿ ತಡಮಾಡಿ ಹುಟ್ಟಲು ಸೂರ್ಯನಿಗೂ ಪುಕ್ಕಲು. ಬಿಎಂಡಬ್ಲ್ಯು, ಪೋಶ್ಚ್, ಮರ್ಸಿಡೆಸ್, ಬೆನ್ಝ್ ಎಂಬ ಲೋಕಪ್ರತಿಷ್ಠಿತ ವೇಗದ ಕಾರುಗಳನ್ನು ಪರಿಚಯಿಸಿದವರು ಸಮಾಧಾನಕ್ಕಾಗಿ ನಾಲ್ಕು ಸೆಕೆಂಡು ಪ್ರಾಣಾಯಾಮ ಕಲಿಯುವವರೂ ಅಲ್ಲ. ಅಲ್ಲಿನ ಸರ್ಕಾರ ಗಂಟೆಗೆ 80- 100 ಕಿ.ಮೀ. ವೇಗದ ಮಿತಿ ಕೊಟ್ಟರೂ ಕಾರು ಕಂಪನಿಗಳು ತೃಪ್ತರಾಗುವುದಿಲ್ಲ. 'ಇಷ್ಟು ಸ್ಲೋ ಹೋದರೆ ನಮ್ಮ ಕಾರನ್ನು ಕೊಳ್ಳೋರ್ಯಾರು?' ಎಂಬುದವರ ಪ್ರಶ್ನೆ. ಹೀಗಾಗಿ, ಅವರು ಸರ್ಕಾರದ ವಿರುದ್ಧವೇ ಕೋರ್ಟಿನ ಮೆಟ್ಟಿಲೇರಿ, ಅಲ್ಲಿನ ಹೈವೆಯಲ್ಲಿ ವೇಗದ ಮಿತಿಯನ್ನೇ ಕಿತ್ತೊಗೆದುಬಿಟ್ಟರು.
ಜರ್ಮನ್ನರು ಸಾಧನೆಯ ಓಟದಲ್ಲಿ ನಿಲ್ಲುವವರೇ ಅಲ್ಲ. ಈ ನಡುವೆ 'ಎಫ್-1 ದೇವರು' ಮೈಕೆಲ್ ಶುಮಾಕರ್ ಕೋಮಾವಸ್ಥೆಯಲ್ಲಿ ಆರು ತಿಂಗಳು ನಿಂತನಲ್ಲ. ಹಿಟ್ಲರ್ ಮೇಲಿಂದಲೇ ಅದೆಷ್ಟು ಬಯ್ದಿರಬಹುದು. ಆದರೆ, ಶುಮಿಯ ಪತ್ನಿ ಕೊರಿನ್ನಾ ಮಾತ್ರ 'ಶುಮಿ ನಿಶ್ಚಲನಾಗಲೇ ಇಲ್ಲ' ಅಂತ ಪ್ರತಿಪಾದಿಸುತ್ತಾಳೆ. ಅವಳು ಗೆಳತಿಗೆ ಹೇಳುವುದು ಹೀಗೆ; 'ನನ್ನ ಶುಮಿ ಸಾವನ್ನು ಓವರ್‌ಟೇಕ್ ಮಾಡಲು ಹೋಗಿದ್ದಾನೆ. ಅವನು ಮರಳಲು ವರ್ಷವಾಗಬಹುದು, ಯುಗವೇ ಆಗಬಹುದು. ಕಾಯುತ್ತೇನೆ'. ಅವಳ ತಪಸ್ಸು ಕೊನೆಗೂ ಕೈಗೂಡಿತು. ಎರಡನೇ ಮಹಾಯುದ್ಧದಲ್ಲಿ ತನ್ನ ಸೈನಿಕ ಪ್ರಿಯಕರನಿಗಾಗಿ ದಿನಕ್ಕೊಂಥರ ಕೇಕ್ ಮಾಡಿ ಕಾದು ಕುಳಿತ ಬೆಡಗಿಯಂತೆ ಕೊರಿನ್ನಾ ನಮಗೆ ಕಾಣದಿದ್ದರೆ ಖಂಡಿತಾ ನಮ್ಮ ಕಲ್ಪನೆಯಲ್ಲಿ 'ಒಗ್ಗರಣೆ' ಇಲ್ಲ ಅಂತ ಪ್ರಕಾಶ್ ರೈ ಕುಟುಕಬಹುದು.
ವಾರದ ಕೆಳಗೊಂದು ಸುದ್ದಿಯಾಯಿತು. ಮಂಗಳೂರಿನ ಆ ವೃದ್ಧ ಇಬ್ರಾಹಿಂ ಶೇಖ್‌ಗೆ ದೇಶ- ವಿದೇಶದಲ್ಲಿ 2000 ಕೋಟಿ ರು. ಆಸ್ತಿ ಇದೆ. ತಾರುಣ್ಯದಲ್ಲಿ ಹೋದ ಹೋದ ದೇಶದಲ್ಲೆಲ್ಲ ನಿಖಾ ಮಾಡಿಕೊಂಡ ಆ ರಸಿಕ ಮಹಾಶಯನಿಗೆ ನಾಲ್ಕು ಪತ್ನಿಯರು. ಈಗ ಶೇಖ್‌ನಲ್ಲಿ ತಾರುಣ್ಯವಿಲ್ಲ. ದೂರವಾದ ಪತ್ನಿಯರೂ ಬೇರೆ ದೇಶಗಳಲ್ಲಿ ಮಕ್ಕಳೊಂದಿಗೆ ಆರಾಮಾಗಿದ್ದಾರೆ. ಶೇಖ್ ಇಲ್ಲಿ ಹಾಸಿಗೆ ಹಿಡಿದಿದ್ದಾನೆ. ಅವನು ಸಾಯುವುದರೊಳಗೆ ಆಸ್ತಿ ಬರೆಸಿಕೊಳ್ಳವ ಲೋಭ ಪತ್ನಿಯರದ್ದು. ದಾಖಲೆಗಳನ್ನೆಲ್ಲ ಹಿಡಿದು ಜೀವ ತೆಗೆಯಲು ಬಂದಿದ್ದಾರೆ. ಗಂಡ ಸಾಯಲಿ ಎಂದು ಮೆಕ್ಕಾ ದೇವರೆದುರು ಹರಕೆ ಹೊತ್ತ ಈ ಬೇಗಂ- 'ಭೋಗಂ'ಗಳಿಗಿಂತ ಶುಮಿ ಪತ್ನಿ ಕೊರಿನ್ನಾ ಎಷ್ಟು ಮೆಟ್ಟಿಲು ಮೇಲಿರಬಹುದು ಎಂಬುದು ಲೆಕ್ಕ ತಪ್ಪುವ ಲೆಕ್ಕ.
ನಮ್ಮಲ್ಲೂ ಸ್ಟಾರ್‌ಗಳಿದ್ದಾರೆ. ಮತ್ತವರು ಸ್ಟಾರ್‌ಗಳನ್ನೇ ಹಿಂಬಾಲಿಸಿ ಮದುವೆ ಆಗುತ್ತಾರೆ. ಹತ್ತು ಪಂದ್ಯಗಳಲ್ಲಿ ಅವನ ಫಾರ್ಮ್ ಕಳಪೆಯಾದರೆ, ಅವಳು ಅವನನ್ನು ಬದುಕಿನ ತಂಡದಿಂದಲೇ ಹೊರದಬ್ಬುತ್ತಾಳೆ. ಸ್ಪಿನ್ ಗಾರುಡಿಗನಾಗಿದ್ದಾಗ ಹರ್ಭಜನ್‌ನ ಹಿಂದ್‌ಹಿಂದೆ ಬಿದ್ದಿದ್ದ ಗೀತಾ ಬಸ್ರಾಳಿಗೆ ಈಗವನ ಮುಖ ನೋಡುವುದಕ್ಕೂ ಹೇಸಿಗೆಯಂತೆ. ಇನ್ನು ಸಿನಿಮಾ ಮಂದಿಯದ್ದೂ ಅಷ್ಟೇ. 'ಇದೇ ಕೊನೇ ಸಿನಿಮಾ ಅಂತೆ. ಅವನ ಕೈಯಲ್ಲಿ ದುಡ್ಡಿಲ್ಲ. ಸಿನಿಮಾ ತೋಪೆದ್ದು ಹೋದರೆ, ಅವನ ಹೆಂಡತಿ ಡೈವೋರ್ಸ್ ಕೊಡ್ತಾಳಂತೆ' ಅಂತ ಕನ್ನಡ ಖ್ಯಾತ ನಿರ್ದೇಶಕ- ನಟಿಯ ಬಗ್ಗೆ ಗುಲ್ಲೆದ್ದಾಗ ನಮಗೂ ಛೀ, ಇದೆಂಥ ಜೋಡಿ ಎನ್ನಿಸಿತ್ತು.
ಆದರೆ, ಕೊರಿನ್ನಾ ಹೀಗೆ ಕಾಣಿಸುವುದಿಲ್ಲ. ದಾಂಪತ್ಯದ ಮೌಲ್ಯವನ್ನೇ ಕಳೆದುಕೊಳ್ಳುತ್ತಿರುವ ಪಶ್ಚಿಮ ಜಗತ್ತೂ ಅನೇಕ ಸಲ ನಮಗೆ ಪಾಠ ಹೇಳುತ್ತದೆ. ವಿಶ್ವ ಕಂಡ ಮೊದಲ ಬಿಲಿಯನೇರ್ ಕ್ರೀಡಾಪಟು ಅವಳ ಗಂಡ. ಕೋಮಾದಲ್ಲಿದ್ದಾನೆ. ಶೇಖ್‌ನ ಬೇಗಂಗಳೇ ಆಗಿದ್ದಿದ್ದರೆ ಆರೈಕೆಯಲ್ಲಿ ಸಣ್ಣ ಯಡವಟ್ಟು ಮಾಡಿ, ಅಷ್ಟೂ ಆಸ್ತಿಗೂ ಒಡೆಯರಾಗಿರುತ್ತಿದ್ದರು. ಆದರೆ, ಕೊರಿನ್ನಾ ಗಂಡನಿಗಾಗಿ ಮನೆಯಲ್ಲೇ 60 ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿಸಿದಳು. ದಿನಾ ಬೆಳಗ್ಗೆದ್ದು ಜರ್ಮನ್ ಭಾಷೆಯಲ್ಲಿ ಗುಟೆನ್ ಮಾರ್ಗೆನ್ (ಗುಡ್ ಮಾರ್ನಿಂಗ್) ಎಂದಳು, ರಾತ್ರಿ ಡ್ರಿಪ್ ಸರಿಯಾಗಿ ಬೀಳುತ್ತಿದೆಯಾ ಅಂತ ನೋಡಿ ಗುಟೆನ್ ನಾಕ್ಟ್ (ಗುಡ್‌ನೈಟ್) ಎನ್ನುತ್ತಾ ಅವನ ಹಣೆಗೆ ಮುತ್ತಿಕ್ಕಿದಳು. ಏಕಾಂತ ತೀವ್ರವಾಗಿ ಕಾಡಿದಾಗಲೆಲ್ಲ ಗಂಡನ ಎಫ್-1 ಪಂದ್ಯಗಳನ್ನು ಮತ್ತೆ ಮತ್ತೆ ನೋಡಿದಳು. ಎಷ್ಟಂದರೂ ಶುಮಿ ಬರಿಗೈಯಲ್ಲಿದ್ದಾಗ ಬಂದವಳು ಆಕೆ. ಇಟ್ಟಿಗೆ ಮಾರುವವನ ಮಗ ಅಂತೇನೂ ನೋಡಲಿಲ್ಲ. 1995ರಲ್ಲಿ ಆಗಿನ್ನೂ ಫೆರಾರಿ ಸೀಟಿನಲ್ಲಿ ಕೂತಿದ್ದ ಶುಮಿಯನ್ನು ಈಕೆಯೇ ಪ್ರೀತಿಸಿ ಮದುವೆಯಾದಳು.
ಸಾವನ್ನು ಗೆದ್ದವ ಯಾವತ್ತೂ ಹೀರೋನೇ. ಆದರೆ, ನಿಜವಾದ ಹೀರೋ ಆತನ ಪಕ್ಕದಲ್ಲಿದ್ದವರು. ಅದು ಯುವರಾಜ್ ಸಿಂಗ್‌ನ ಜೊತೆಯಲ್ಲಿದ್ದ ತಾಯಿ ಆಗಿರಬಹುದು; ಅಂಬರೀಶ್ ಮರಳಿ ಅರಳಿ ಬರಲಿಕ್ಕಾಗಿ ಸುಮಲತಾ ಬಸಿದ ನೋವಿರಬಹುದು; ಲಿಸಾ ರೇ ತಾಯಿಯ ನಿದ್ದೆಯಿಲ್ಲದೆ ಬತ್ತಿದ ಕಣ್ಣುಗಳಿರಬಹುದು... ಇವುಗಳೆಲ್ಲ ಬದುಕಿನ ಗೆಲುವಿದೆ. ದೇಹದ ನೋವನ್ನು ಕರಗಿಸಲು ನಮ್ಮಲ್ಲಿ ಲಕ್ಷಲಕ್ಷ ಮದ್ದುಗಳಿರುವುದು ನಿಜ. ಆದರೆ, ಎದೆಯ ನೋವನ್ನು ಕರಗಿಸಲು ಇಂಥ ಒಬ್ಬರು ನಿಮ್ಮ ಬಳಿ ಇದ್ದಾರಾ? ಇದ್ದರೆ ಸಾಕು. ರೋಗವನ್ನೇನು ಸಾವನ್ನೇ ಗೆದ್ದು ಬರಬಹುದು.
ಹ್ಞಾಂ, ಈ ಆರು ತಿಂಗಳಲ್ಲಿ ಬಂಧುವೊಬ್ಬರು ಬಂದು ಕೊರಿನ್ನಾಳಿಗೆ ವ್ಯಂಗ್ಯವಾಡಿದರು; 'ಹೋಗಿ ಹೋಗಿ ಡ್ರೈವರ್‌ನ ಮದ್ವೆ ಆದ್ರೆ ಇಂಥ ಅವಘಡವೇ ಆಗೋದು'. ಅದಕ್ಕೆ ಕೊರಿನ್ನಾ ಅಂದಳು, 'ನನ್ನ ಗಂಡ ಕಾರ್ ಡ್ರೈವರ್ ಅಲ್ಲ. ರಸ್ತೆ ಮೇಲಿನ ಪೈಲಟ್‌'!
ಅಂಥ ಕೊರಿನ್ನಾರಂಥ ಒಬ್ಬರು ನಮ್ಮ ಪಕ್ಕದಲ್ಲೂ ಇರಲಿ...


- ಕೀರ್ತಿ ಕೋಲ್ಗಾರ್
    kolgarkeerthi@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.