ಖುಷಿ

ಹೋಂ ಸ್ಟೇ

ಬೆಳ್ಳಂಬೆಳಿಗ್ಗೆ ಎದ್ದು ಮುಖ ತೊಳೆದು ಅಂಗಳದ ಬಾಗಿಲು ಸಾರಿಸಿ ರಂಗೋಲಿ ಇಡುವುದರೊಳಗೆ ಸೂರಿ ಎದ್ದು...

ಹೋಂ ಸ್ಟೇ
Published On :

ಬೆಳ್ಳಂಬೆಳಿಗ್ಗೆ  ಎದ್ದು ಮುಖ ತೊಳೆದು ಅಂಗಳದ ಬಾಗಿಲು ಸಾರಿಸಿ ರಂಗೋಲಿ ಇಡುವುದರೊಳಗೆ ಸೂರಿ ಎದ್ದು ಬಂದ. ಇತ್ತೀಚೆಗೆ ಇಷ್ಟೊತ್ತು ಅವನು ಮಲಗೋದು ಅಪರೂಪವೇ. ಮದುವೆಯಾದ ಹೊಸದರಲ್ಲಿ ಬೆಳಿಗ್ಗೆ ಏಳುವುದೆಂದರೆ ಮಹಾ ಸೋಮಾರಿಯಾಗಿದ್ದ ಸೂರಿ ಇತ್ತೀಚೆಗಿನ ವರ್ಷಗಳಲ್ಲಿ ತನಗಿಂತ ಮೊದಲೇ ಎದ್ದು  ತೊಟಕ್ಕೆ ನಡೆದುಬಿಡುತ್ತಿದ್ದ. ಅವನು ಬರುವುದರೊಳಗೆ ದೋಸೆ ಬಂಡಿ ಇಟ್ಟು ಚಾ ಕಾಯಿಸುವುದರಲ್ಲಿ ಅವಳು ಸುಸ್ತಾಗುತ್ತಿದ್ದಳು ತೋಟದಿಂದ ಬಂದಕೂಡಲೇ ಅವನೆದುರು ತಿಂಡಿ ಚಾ ಇಡಲೇಬೇಕಿತ್ತು. ಒಮ್ಮೊಮ್ಮೆ ಅವಳಿಗೆ ಸಿಡಿಸಿಡಿ ಎನ್ನಿಸುವುದೂ ಇತ್ತು. ಅದೇನು ಆಫೀಸಿಗೆ ಹೋಗುವವರ ಹಾಗೆ ಏಳು ಗಂಟೆಯೊಳಗೆ ಎಲ್ಲವೂ ರೆಡೀ ಆಗಲೇಬೇಕಾ? ನಾವು ಹಳ್ಳಿಗರು. ನಮಗೇನು ಅಷ್ಟೊಂದು ಕಟ್ಟುಪಾಡು?
ನಿಧಾನಕ್ಕೆ ಎದ್ದು ತಿಂಡಿ ತಿಂದು ಕೆಲಸಕ್ಕೆ ಹೋದರಾಗದೇ? ಭೂಮಿ ನಮ್ಮವ್ವ ಏನು ಬೈದುಕೊಳ್ಳುತ್ತಾಳೆಯೇ? ಅಂತೆಲ್ಲ ಯೋಚಿಸುವುದಿತ್ತು. ಆದರೀಗ ಹಾಗಿಲ್ಲ. ಅವನ ಜೊತೆ ಬಾಳುವೆಗೆ ತೊಡಗಿ  ಆಗಲೇ ಹತ್ತು ವರುಷವಾಯಿತು. ಈ ಕೆಲಸ ಕಾರ್ಯಗಳೂ ಅಭ್ಯಾಸಗೊಂಡಿವೆ. ಸಮಯದ ಬೆಲೆ ಇನ್ನೂ ಚೆನ್ನಾಗಿ ಅರ್ಥವಾಗಿದೆ. `ಏನು ಇವತ್ತು ಲೇಟು?' ಅವಳು ಆಗತಾನೇ ಕೊಟ್ಟಿಗೆಯಿಂದ ಕರೆದಿಟ್ಟ ಹಸುವಿನ ಹಾಲನ್ನು ಪಾತ್ರೆಗೆ ಹಾಕಿ ಗ್ಯಾಸ್ ಮೇಲಿಡುತ್ತ ಕೇಳಿದಳು.
`ಹುಷಾರಿಲ್ವಾ?' ಅವಳ ಧ್ವನಿಯಲ್ಲಿ ಅಕ್ಕರೆಯಿತ್ತು.
`ಇಲ್ವೆ. ಹುಷಾರಿದ್ದೆ. ಏನಾಗಲ್ಲೆ ನನಗೆ. ಯಾಕೋ ಸ್ವಲ್ಪ ಬೇಜಾರಾಯ್ತು. ರಾತ್ರಿ ಸರಿ ನಿದ್ರೆ ಬರಲ್ಲೆ. ಸುಮ್ನೆ ಮಲಗಿದ್ದೆ. ಚಾ ಮಾಡಿಕೊಡು ನೀನು. ಮುಖ ತೊಳೆದು ಬರ್ತಿ'. ಬಚ್ಚಲು ಮನೆಯತ್ತ ನಡೆದ.
ಅವಳ ಪ್ರಶ್ನೆಯೇನೂ ಇರಲಿಲ್ಲ. ಅವನ ಕಾಡುತ್ತಿರುವ ವಿಷಯ ಅವಳಿಗೂ ಗೊತ್ತಿರುವುದೇ.  ಅವನ ಇಂತ ಸಮಸ್ಯೆ ಶುರುವಾಗಿದ್ದು ಅವರು `ಹೋಂ ಸ್ಟೇ' ಆರಂಭಿಸಿದಾಗಿನಿಂದಲೇ. ಸೂರಿಯ ಸ್ನೇಹಿತ ರಾಜು ಮತ್ತು ಅವನ ಹೆಂಡತಿ ಆಶಾ ಮಸ್ಕತ್ನಿಂದ ಊರಿಗೆ ಬಂದವರು ಸೂರಿಯ ಮನೆಗೆ ಬಂದಾಗ ಅಲ್ಲಿಯ ವಾತಾವರಣಕ್ಕೆ ಮುಗ್ಧವಾಗಿದ್ದರು. ಮರುಳಾಗಿದ್ದರು. ಪಕ್ಕದಲ್ಲೇ ಹರಿಯುತ್ತಿದ್ದ ಕಾಳಿ ನದಿ ಮತ್ತು ಸಮೃದ್ಧ ತೆಂಗು ಅಡಿಕೆ ಬಾಳೆಯ ತೋಟ. ಹಸುರಿನಿಂದ ಕಂಗೊಳಿಸುತ್ತಿದ್ದ ಭೂಮಿ, ಸುತ್ತ ಮುತ್ತಲಿನ ದಟ್ಟ ಕಾಡು ಇವನ್ನೆಲ್ಲ ನೋಡಿ `ಸೂರಿ ನೀನ್ಯಾಕೆ ಒಂದು ಹೋಂಸ್ಟೇ ಇಡಬಾರದು?' ಅಂತ ಅದರ ಐಡಿಯ ಕೊಟ್ಟವನು ರಾಜು. ಇದರಿಂದ ನಿನಗೆ ಎಕ್ಸಟ್ರಾ ಖಚರ್ೇನು ಇಲ್ಲ. ನೀವೀಗ ಇರುವಂತೆಯೇ ಆದರಾತಿಥ್ಯ ಕೊಟ್ಟರಾಯಿತು. ನೀವು ಬೇಕಾದಷ್ಟು ಹಣ ಸಂಪಾದಿಸಬಹುದು. ಒಂದು ವೆಬ್ಸೈಟ್ ಮಾಡಿ ಸ್ವಲ್ಪ ಪ್ರಚಾರ ಕೊಟ್ಟರಾಯಿತು ಅಂದೆಲ್ಲ ಹೇಳಿದವನು ಸೂರಿ ತಲೆಗೆ ಅದನ್ನೆಲ್ಲ ತುಂಬಿಬಿಟ್ಟ. ನಂತರದ ದಿನಗಳಲ್ಲಿ ಅದು ವಿದ್ಯುಕ್ತವಾಗಿ ಆರಂಭವೂ ಆಯಿತು.
  ಮೊದಮೊದಲು ಮನೆಯಲ್ಲೇ ಅತಿಥ್ಯ. ಸೂರಿ ಬರುವವರ ಆತಿಥ್ಯ ಖುದ್ದು ನೋಡಿಕೊಳ್ಳುತ್ತಿದ್ದ. ಅಡಿಗೆ ಮನೆ ಉಸ್ತುವಾರಿ ಮಾತ್ರ ರಾಜಿಯದಾಗಿತ್ತು. ಕ್ರಮೇಣ ಬರುವವರ ಸಂಖ್ಯೆ ಹೆಚ್ಚಾಯಿತು. ರಾಜಿಗೂ ಕೆಲಸ ಜಾಸ್ತಿಯಾಗತೊಡಗಿತು. ಮನೆಯಲ್ಲಿ ಕಷ್ಟವೆಂದು ಸಫರೇಟಾಗಿ ಕುಟೀರಗಳ ನಿರ್ಮಿಸಿದ. ಮತ್ತೆ ಬೇರೆ ಬೇರೆ ಹೋಂ ಸ್ಟೇಗಳಿಗೆ ಭೇಟಿ ಕೊಟ್ಟು ಅವುಗಳನ್ನು ಸುವ್ಯವಸ್ಥಿತವಾಗಿಯೇ ನಿರ್ಮಿಸಿದ್ದ. ಇದರಿಂದ ಸೂರಿಯ `ನಿಸರ್ಗ' ಹೋಂ ಸ್ಟೇ ಕಾಳೀ ತೀರದ ಎಲ್ಲಾ ಪ್ರತಿಷ್ಟಿತ ಹೋಂ ಸ್ಟೇಗಳ ಸಾಲಿಗೆ ಸೇರಿತು. ಮತ್ತೆ ಬಹಳ ಹೆಸರನ್ನೂ ಗಳಿಸಿತು. ಸೂರಿ ಸಹ ಊಹಿಸದ ರೀತಿಯಲ್ಲಿ ಅವನ ಹೋಂ ಸ್ಟೇ ಬೆಳೆದಿತ್ತು. ಹಣವೂ ಬೇಕಾದಷ್ಟು ಹರಿದುಬರತೊಡಗಿತ್ತು.
ಎಲ್ಲ ಸುಗಮ ಅಂದುಕೊಳ್ಳುತ್ತಿರುವಾಗಲೇ ಹೋಂ ಸ್ಟೇ ಸೂರಿಗೆ ಆಗಾಗ ತಲೆನೋವಿಗೂ ಕಾರಣವಾಗಹತ್ತಿತ್ತು. ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ದೊಡ್ಡವರಾಗುತ್ತಿದ್ದರು. ಬೇಡ ಬೇಡವೆಂದರೂ ಅಲ್ಲಿ ಬರುವ ಪ್ರವಾಸಿಗರೊಡನೆ ಅವರ ಒಡನಾಟ ಇದ್ದೇ ಇರುತ್ತಿತ್ತು. ಪಕ್ಕದ ಊರಲ್ಲಿ ಮತ್ತೊಂದು ಹೋಂಸ್ಟೇ ನಡೆಸುತ್ತಿದ್ದ ರಾಕಿಯ ಹೆಂಡತಿ ಯಾವನೋ ವಿದೇಶಿಗನೊಂದಿಗೆ ಓಡಿಹೋದ ಸುದ್ದಿ ಬಂದಾಗ ನಾಲ್ಕು ದಿನ ಸೂರಿ ವಿಪರೀತ ಟೆನ್ಷನ್ನಲ್ಲಿ ಇದ್ದುದು ರಾಜಿಗೂ ಅರ್ಥವಾಗುತ್ತಿತ್ತು, ಹಾಗಂತ ಅವನಿಗೆ ರಾಜಿಯ ಮೇಲೇನೂ ಅನುಮಾನ ಅಂತಿರಲಿಲ್ಲ. ಆದರೂ ಹಣದ ಮೋಹಕ್ಕೆ ಬಿದ್ದು ಸಂಸಾರದ ಪರಿಸರ ಹಾಳುಮಾಡಿಕೊಳ್ಳುತ್ತಿದ್ಧೇನಾ ಅನ್ನುವ ನೋವನ್ನು ಅವನು ಆಗಾಗ ತೋಡಿಕೊಳ್ಳುತ್ತಿದ್ದ.
`ಚಾ ಆತನೆ? ಎಂಥಾ ದೋಸೆ ಮಾಡಿದ್ದೆ?' ಅವನು ದೇವರೆದುರು ಕೈ ಮುಗಿದು ಬಂದು ಕೂರುವಷ್ಟರಲ್ಲಿ ಅವಳು ಚಾ ತಿಂಡಿ ತಂದು ಎದುರಿಗಿಟ್ಟಳು.
`ಮೊಗೆಕಾಯಿನ ದೋಸೆ. ಈ ವರ್ಷ ಮೊಗೆಕಾಯಿ ಏನೇನ. ಈಗಲೇ ಅಷ್ಟೂ ಹೂ ಮಿಡಿ ಉದುರ್ತಾ ಇದ್ದು. ಏನು ರೋಗಾನೇನ? ನೀವು ಸ್ವಲ್ಪ ಮೊಗೆವೋಳೀ ಕಡೆ ಹೋಗ್ಬನ್ನಿ. ನೋಡ್ಕಬನ್ನಿ.'
ಮಾತು ಎತ್ತ ತಿರುಗಿಸಿದರೂ ಅವನು ಉದಾಸೀನವಾಗೇ ಇದ್ದ. ಕೊನೆಗೆ ಅವಳೇ ತಡೆಯಲಾರದೇ ಕೇಳಿದಳು.
`ಏನಾಯ್ತು? ಮತ್ತೆ ನಿಸರ್ಗದಲ್ಲಿ ಹೊಸ ಜನ ಯಾರು ಬಂದಿದ್ದ? ಎಷ್ಟ ದಿನ ಇರವು? ಎಂಥಕ್ಕೆ ಯೋಚನೆ?'
ಅವನಿಗೂ ಅದೇ ಮಾತು ಬೇಕಿತ್ತು ಎಂಬಂತೆ ಮಾತನಾಡಿದ.
`ಯಾರೋ ಇಬ್ರು ಹುಡುಗ ಇಬ್ರು ಹುಡುಗಿಯರು. ಇನ್ನೂ ಹದಿನೆಂಟೂ ಆಗಿರೋದು ಅನುಮಾನ ಆ ಹುಡುಗಿಯರಿಗೆ. ಕುತ್ತಿಗೇಲಿ ಒಂದೆಳೆ ಕರಿಮಣಿ ಇದ್ದು. ಮದ್ವೆ ಆಗಿದೆ ಅಂತ ಹೇಳ್ತ. ನೋಡೀರೇನೂ ಹಾಗನ್ನಿಸ್ತಿಲ್ಲೆ. ಇಬ್ರೂ ಹುಡುಗರು ಶ್ರೀಮಂತರು ಅನ್ನಿಸ್ತು. 8 ದಿನಕ್ಕೆ ಬುಕ್ಕ ಮಾಡಿದ್ದ ಡಬಲ್ ಕಾಟೇಜ್. ಕಾಳೀ ತೀರ ಎಲ್ಲ ಕಡೆ  ಸುತ್ತಾಡೋ ಪ್ಲಾನ್ ಅನ್ನಿಸ್ತು. ಯಾಕೋ ನನಗೆ ಸರಿಹೋಗ್ತಾ ಇಲ್ಲೆ. ಒಬ್ಬಿಗೊಬ್ಬರು ಅಂಟ್ಕೊಂಡೇ ಇರ್ತ. ಆ ಹುಡುಗೀರು ನಿಜಕ್ಕು ಅವರ ಹೆಂಡತಿಯರಾ? ಅಥವಾ ಗಲರ್್ಪ್ರೆಂಡ್ಸ್ ಇದ್ದಿಕ್ಕೂ. ಬಂದ್ಕೂಡ್ಲೆ ಅವರಿಗೆ ಹಾಟ್ ಡ್ರಿಂಕ್ಸ್ ಸಪ್ಲಾಯ್ ಮಾಡಬೇಕಾಯ್ತು. ಇವೆಲ್ಲ ಯಾಕೋ ಮನಸಿಗೆ ಕಸಿವಿಸಿ ರಾಜೀ. ನಾಳೆ ನಮ್ಮಕ್ಕಳೂ ಈ ಪರಿಸರದಲ್ಲಿ ಬೆಳೆದು ಏನಾಗ್ತಾರೇನೋ ಅನ್ನಿಸ್ತಿದೆ. ನಮಗೆಲ್ಲ ತಂದೆ ತಾಯಿ ಎಷ್ಟು ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದ್ರು. ನಾವು ಸಾರಯಿ ವಿಸ್ಕಿಗಳನ್ನು ಕೈಯಲ್ಲಿ ಮುಟ್ಟಲೂ ಒಂಥರಾ ಮುಜುಗರ ಪಡುತ್ತಿದ್ದೆವು. ಈಗ ಇದು ಕಾಮನ್ ಆಗ್ಬಿಟ್ಟಿದೆ. ಇವನ್ನೆಲ್ಲ ಇಡದೇ ನಮ್ಮ ಹೋಂ ಸ್ಟೇ ಬೆಳೆಸಲಾಗದು. ಆದರೆ ನಿಜಕ್ಕೂ ಹೋಂ ಸ್ಟೇ ಅರ್ಥ ಕಳೆದುಹೋಯಿತು. ನಾವು ಹಣದ ಹಿಂದೆ ಬಿದ್ದು ನಮ್ಮ ಸಂಸ್ಕಾರ ಸಂಸ್ಕೃತಿ ಕಳೆದುಕೊಂಡುಬಿಟ್ಟೆವಾ ಅಂತ ಗೊಂದಲ ಶುರು ಆಗ್ಬಿಟ್ಟಿದೆ. ಇಲ್ಲಿಂದ ದೂರ ಇಡ್ಬೇಕು ಅಂತ ಮಕ್ಕಳ ಬೋಡರ್ಿಂಗ್ ಬಿಡಬೇಕಾಗಿದೆ. ಅವರ ಜೊತೆ ನಮ್ಮ ಅಟ್ಯಾಚ್ಮೆಂಟ್ ಕಡಿದುಕೊಳ್ಳುತ್ತಿದೆ. ನಾಳೆ ಅವರೂ ಈ ಹೆಣ್ಣುಮಕ್ಕಳಂತೆ ಯಾರದ್ದೋ ಮೋಸಕ್ಕೆ ಒಳಗಾಗಬಹುದು.'
ಈ ಎಲ್ಲ ಕಳವಳ ರಾಜೀಗೂ ಇತ್ತು. ಆದರೆ ಮೊದಮೊದಲು ಸೂರಿ ಅವಳ ಮಾತಿನ ಕಡೆ ಲಕ್ಷ್ಯ ಕೊಡುತ್ತಿರಲಿಲ್ಲ. ಲಕ್ಷಾಂತರ ರೂಪಾಯಿ ಸುರಿದು ಕಾಟೇಜ್ ಕಟ್ಟಿಸಿದ್ದ, ಅದಕ್ಕಾಗೇ ಬೇರೆ ವರ್ಕರ್ಸ್ ತೆಗೆದುಕೊಂಡಿದ್ದ. ಈಗ ಅಷ್ಟು ಸುಲಭಕ್ಕೆ ಮುಚ್ಚಿ ಬಿಡುವಂತೆ ಇರಲಿಲ್ಲ. ಅದಕ್ಕೆ ತಕ್ಕ ಹಾಗೆ ಹಣವನ್ನೂ ಸಂಪಾದಿಸುತ್ತಿತ್ತು. ಇನ್ನೂ ಹೆಚ್ಚೆಂದರೆ ನಾವೇ ಮನೆ ಬದಲಾಯಿಸಿ ಹೋಗಬೇಕಾಗಬಹುದು. ಆದರೆ ರಾಜೀ ಕೂಡ ಅಲ್ಲಿ ಅವನಿಗೆ ಅಗತ್ಯವಿತ್ತು, ಮನೆ ತೋಟ ಹೋಂಸ್ಟೇ ಎಲ್ಲವನ್ನೂ ಅವನೊಬ್ಬನೇ ನಿರ್ವಹಿಸುವುದು ಸಾಧ್ಯವಿರಲಿಲ್ಲ. ಇಲ್ಲ ಹೆಂಡತಿಯನ್ನು ನೂರಾರು ಕಿ.ಮೀ. ದೂರದ ಪೇಟೆಯಲ್ಲಿ ಮನೆ ಮಾಡಿ ಇಡಬೇಕೆಂದರೆ ಅದೂ ಸಮಸ್ಯೆ. ಸಮೃದ್ಧ ಬದುಕನ್ನು ಬಿಟ್ಟು ನಗರದ ಕಾಂಕ್ರೀಟ್ ಕಾಡನ್ನು ಅಪ್ಪಿಕೊಳ್ಳಬೇಕು.
ಅವನಿನ್ನೂ ತಿಂಡಿ ಮುಗಿಸಿರಲಿಲ್ಲ `ನಿಸರ್ಗ'ದಿಂದ ಮ್ಯಾನೇಜರ್ ಫೋನ್ ಬಂತು. `ನಿನ್ನೆ ಬಂದಿರೋ ಕಸ್ಟಮರ್ ನಾನ್ವೆಜ್ ಕೇಳ್ತಿದ್ದಾರೆ ಸರ್ . ಇದು ಪ್ಯೂರ್ ವೆಜ್ ಅಂತಾ ಹೇಳಿದ್ರು ಕೇಳ್ತಾ ಇಲ್ಲ. ಗಲಾಟೆ ಮಾಡ್ತಿದ್ದಾರೆ. ಎಲ್ಲಿ ಸಿಗತ್ತೆ ಅಲ್ಲಿಂದ ತರ್ಸಿ ಕೊಡಿ ಅಂತಿದ್ದಾರೆ.'
`ನಾನೇ ಬರ್ತೀನಿ, 5 ನಿಮಿಷ' ಸೂರಿ ಅಷ್ಟಕ್ಕೇ ಬಿಟ್ಟು ಹೊರನಡೆದ.
ಈ ರಜೆಯಲ್ಲೂ ಮಕ್ಕಳನ್ನು ಮನೆಗೆ ಕರೆಸಿಕೊಳ್ಳುವ ಯೋಚನೆ ಗಂಡನಿಗೆ ಇಲ್ಲ ಎಂಬುದು ಅವಳಿಗೆ ಸ್ಪಷ್ಟವಾಯಿತು. ಆತಂಕಗಳೇನೇ ಇದ್ದರು ತಾಯಿಯಾಗಿ ಅವಳಿಗೆ ಮಕ್ಕಳ ಸಾಂಗತ್ಯಕ್ಕೆ ಮನಸು ಹಾತೊರೆಯುತ್ತಿತ್ತು. ದಿನಾ ಫೋನ್ ಮಾಡುವ  ಮಕ್ಕಳಿಬ್ಬರೂ `ಅಮ್ಮಾ ನಾವು ಮನೆಗೆ ಬರ್ತೀವಿ ' ಅಂತ ಹೇಳುತ್ತಿದ್ದರೆ ಕರುಳು ಚುರುಕ್ ಅನ್ನಿಸುತ್ತಿತ್ತು. ಈ ವಿದೇಶೀ ಪ್ರವಾಸಿಗರ ನಡುವೆ ನೋಡಬಾರದ್ದು ನೋಡುತ್ತ, ಕೇಳಬಾರದ್ದು ಕೇಳುತ್ತ ಬೆಳೆಯುವುದಕ್ಕಿಂತ ಅವರಲ್ಲಿಯೇ ಇರಲಿ ಎಂದು ಮನಸು ಗಟ್ಟಿ ಮಾಡಿಕೊಳ್ಳುತ್ತಿದ್ದಳು. ಅವಳಿಗೇ ಒಮ್ಮೊಮ್ಮೆ ಎಲ್ಲಿ ಅಡಗಿಕೊಳ್ಳಲಿ ಎಂಬಂತೆ  ಗುರಾಯಿಸುವ ಕಸ್ಟಮರ್ಗಳಿಂದ ಹಿಂಸೆಯಾಗುತ್ತಿತ್ತು. ನಿರಾಡಂಬರವಾದ ಬದುಕನ್ನು ನೆಮ್ಮದಿಯ ಜೀವನವನ್ನು ಬಿಟ್ಟು ಯಾಕೆ ಈ ಹೋಂಸ್ಟೇ ಆರಂಭಿಸಿದೆವೋ ಅಂತ ಹಲವು ಬಾರಿ ಅಂದುಕೊಳ್ಳುತ್ತಿದ್ದಳು. ನಾವಿರುವ ಹಾಗಿಯೇ ಇದ್ದುಕೊಂಡು ನಡೆಸಬಹುದೆನ್ನುವ ಆ ಮೊದಲ ದಿನಕ್ಕೂ ಇಂದಿಗೂ ಇರುವ ಬದಲಾವಣೆಯೇ ಅವಳನ್ನು ಕಸಿವಿಸಿಗೊಳಿಸುತ್ತಿತ್ತು. ಹೋಂ ಸ್ಟೇ ಅಂದರೆ ಸ್ವಚ್ಛಂದವಾಗಿ ವಿಹರಿಸಲು ಕಾಡಿಗೆ ಬರುವ ಪ್ರಾಣಿಗಳಂತೆ ಕಾಣುತ್ತಿದ್ದರು ಅವರೆಲ್ಲ. ಅಲ್ಲಿರುವವರೂ ಮನುಷ್ಯರು, ಒಂದಷ್ಟು ರೀತಿನೀತಿ ಇರಬೇಕೆನ್ನುವ ಮೂಲಗುಣಗಳೂ ಒಮ್ಮೊಮ್ಮೆ ಇರುತ್ತಿರಲಿಲ್ಲ ಅವರಲ್ಲಿ. ಮೊದಲು ಈಗಿನಷ್ಟು ಹಣ, ಐಶ್ವರ್ಯಗಳಿರಲಿ ಲ್ಲವಾದರೂ ನೆಮ್ಮದಿಯಿತ್ತು. ಈಗ ಎಲ್ಲ ಇದ್ದು ಕಾಡುವ ಒಂಟಿತನ, ಮಕ್ಕಳ ಚಿಂತೆ. ರಾಜಿ ತಾನೂ ಹೇಳಿದರೆ ಗಂಡ ಇನ್ನೂ ನೊಂದುಕೊಂಡಾನೆಂದು ಸುಮ್ಮನಾದಳು. ಪರಿಹಾರ ಎಲ್ಲೋ ಸಿಗಬಹುದೆನ್ನುವ ಆಶಾವಾದದಲ್ಲಿ.
`ರಾಜೀ ರಾಜೀ...' ಸೂರಿಯ ಕೂಗಿಗೆ ಗಡಬಡಿಸಿ ಓಡಿದಳು ಪಕ್ಕದ ನಿಸರ್ಗ ಕಾಟೇಜ್ ಹತ್ತಿರ.  ಸೂರಿಯ ಇಡೀ ಮೈಯಿಂದ ನೀರು ಸೋರುತ್ತಿತ್ತು. ಅಲ್ಲಿಯೇ ಕಾಟ್ ಮೇಲೆ ಮಲಗಿಸಿದ್ದ ಆ ಬಿಳೀ ಹುಡುಗಿ ಸ್ಮೃತಿಗೆ ಎಚ್ಚರವಿರಲಿಲ್ಲ. ಕ್ಷಣದಲ್ಲಿ ಅವಳಿಗೆ ಪರಿಸ್ಥಿತಿ ಅರ್ಥವಾಯಿತು. ಉಳಿದವರೆಲ್ಲ ಬೆಪ್ಪಾಗಿ ನಿಂತಿದ್ದರು. ರಾಜಿ ಅವಳ ಪ್ರಥಮ ಚಿಕಿತ್ಸೆ ಮಾಡಿದಳು. ಅವಳನ್ನು ಕವುಚಿ ಮಲಗಿಸಿ ಹೊಟ್ಟೆಯ ದಬ್ಬಿ ನೀರು ಹೊರಹಾಕಿದಳು. ನಂತರ ಕೃತಕ ಉಸಿರಾಟದಿಂದ ಅವಳ ಉಸಿರಾಟ ನೇರವಾಗುವಂತೆ ಮಾಡಿ ನಾಡಿ ನೋಡಿದಳು. ಎಂದೋ ಕಲಿತಿದ್ದ ವಿದ್ಯೆ ಅವಳ ನೆರವಿಗೆ ಬಂದಿತ್ತು. ಸುಮಾರು ಅರ್ಧಗಂಟೆಯ ಅವಳ ಪ್ರಯತ್ನದ ನಂತರ ಸ್ಮೃತಿ ಕಣ್ಣುತೆರೆದಾಗಲೇ ಎಲ್ಲರ ಮುಖದಲ್ಲಿಯೂ ಜೀವ ಬಂದಿದ್ದು. ಕಾಳೀ ತೀರಕ್ಕೆ ಸುತ್ತಾಟಕ್ಕೆ ಹೋಗಿದ್ದ ಅವರಲ್ಲಿ  ಎಚ್ಚರಿಕೆಯ ಎಲ್ಲ ಗಂಟೆಗಳ ಮೀರಿ ಸ್ಮೃತಿ ಅದು ಹೇಗೆ ನೀರಿಗೆ ಬಿದ್ದಳು ಎಂಬುದಕ್ಕೆ ಯಾರಿಗೂ ಉತ್ತರವಿರಲಿಲ್ಲ. ಅದೇ ಸಮಯ ಸುತ್ತಳತೆಯಲ್ಲೇ ಇದ್ದ ಸೂರಿ ಕೂಗು ಕೇಳಿ ಬಂದು ಅವಳನ್ನು ನೀರಿನಿಂದ ಎತ್ತಿ  ತಂದಿದ್ದ. ಜೊತೆಗೆ ಬಂದವರು ತಲೆ ತಗ್ಗಿಸಿ ನಿಂತಿದ್ದರು. ಸೂರಿ ಕೂಡ ಮಾತನಾಡಲಿಲ್ಲ.
ಸಮಯವರಿತ  ರಾಜಿ ಅವಳ ಸಂಗಡಿಗರನ್ನು ಕರೆದು ಮೆಲ್ಲಗೆ ಛೀಮಾರಿ ಹಾಕಿದಳು. ಹಾಗೇ ಪಾಲಕರಿಗೆ ಫೋನಾಯಿಸುವಂತೆ ಅವಳೇ ಹೇಳಿದಾಗ ನಿಜ ಹೊರಗೆ ಬಿತ್ತು. ನಿಜ  ಹೇಳದಿದ್ದರೆ ಪೊಲೀಸ್ಗೆ ಫೋನ್ ಮಾಡುವುದಾಗಿ ಬೆದರಿಸಿದಾಗ ಅವರೆಲ್ಲರೂ ಇನ್ನೂ ಇಂಜನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾಥರ್ಿಗಳೆಂದು ಒಪ್ಪಿಕೊಂಡರು. ಅವತ್ತು ಸಂಜೆಯಾಗಿದ್ದರಿಂದ ಬೆಳಗಿನವರೆಗೆ ಅವಳನ್ನು ನೋಡಿಕೊಂಡು ಬೆಳಗ್ಗೆ ಎಲ್ಲರನ್ನೂ ಕಳಿಸಿಕೊಟ್ಟುಬಿಟ್ಟರು. ಅವರೆಲ್ಲರೂ ಹೊರಡುವಾಗ  ಸೂರಿ ಮತ್ತು ರಾಜಿಯ ಕಾಲಿಗೆ ಬಿದ್ದು ನಮಸ್ಕರಿಸಿದರು. ಸ್ಮೃತಿ `ಅಮ್ಮಾ ನೀವು ನನಗೆ ಜೀವದಾನ ಮಾಡಿದ್ದೀರಿ. ಬದುಕಿನ ಅರ್ಥ ಹೇಳಿಕೊಟ್ಟಿದ್ದೀರಿ. ಇನ್ನು ಇಂಥ ಕೆಲಸ ಖಂಡಿತವಾಗಿಯೂ ಮಾಡುವುದಿಲ್ಲ. ಎಲ್ಲ ದುಶ್ಚಟಗಳ ಬಿಟ್ಟು ಒಳ್ಳೆಯವಳಾಗಿ ಬದುಕ್ತೀನಿ.' ಎಂದು ಹೇಳುವಾಗ ಅವಳ ಕಂಗಳಲ್ಲಿ ನೀರಿತ್ತು.  ಮಾತನಾಡದೇ ಹರಸಿ ಕಳಿಸಿಕೊಟ್ಟರು.  
`ಯಾಕೋ ನಮ್ಮ ಹೋಂಸ್ಟೇನ `ಹಳ್ಳೀಮನೆ' ಆಗಿರಿಸೋಣ  ಅನ್ನಿಸುತ್ತಿದೆ ರಾಜೀ..' ಹಿಂತಿರುಗಿ ಬಂದ ಧ್ವನಿಯೆಡೆಗೆ ನೋಡಿದಳು. ಸೂರಿ ಗೇಟಿನ ಬಾಗಿಲು ಹಾಕುತ್ತಿದ್ದ.

- ಪ್ರಿಯದರ್ಶಿನಿ ಎಂ. ಭಟ್
sirisobagu@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.