ಒಂದು ಮುಕ್ತಿಯ ಕಥೆ

ಅಕ್ಕ ಸುಮ್ಮನೆ ಕುಳಿತಿದ್ದಳು.
ಸದಾ ಚಟಪಟ ಮಾತನಾಡುತ್ತ, ಸದಾ ಒಂದಿಲ್ಲೊಂದು ಕೆಲಸ ಮಾಡುತ್ತ, ಹಾಡು ಗುನುಗುತ್ತ ನೆಲದ ಮೇಲೆ ಪಾದವೇ ಊರದಷ್ಟು ಚುರುಕಾಗಿರುತ್ತಿದ್ದ ಅವಳು ಸೋಜಿಗವೆಂಬಂತೆ ಕುಳಿತಿದ್ದಳು. ಅವಳು ಅಳುತ್ತಿರಲೂ ಇಲ್ಲ, ನಗುತ್ತಿರಲೂ ಇಲ್ಲ. ಮಾತಾಡುತ್ತಿರಲಿಲ್ಲ, ತಲೆ ಎತ್ತಿ ನೋಡುತ್ತಲೂ ಇರಲಿಲ್ಲ. ಬಾಗಿಸಿದ ಮುಖ ನೋವಿನಿಂದ ಮುಕ್ತಗೊಂಡು ಮುಚ್ಚಿದಂತಿದ್ದ ಅರೆತೆರೆದ ಕಣ್ಣೆವೆಯಂಚಿನಲ್ಲಿ ಇಬ್ಬನಿ ಕುಳಿತಂತಿತ್ತು. ಡಿಸೆಂಬರಿನ ಮಾಗಿಯ ಚಳಿಗೆ ಬಿಡುವ ಪ್ರತಿ ಉಸಿರಿನಲ್ಲೂ ಹೊಮ್ಮುವ ಹಬೆ ಅವಳ ಉಸಿರಾಟದೊಂದಿಗೆ ಕಾಣಿಸುತ್ತಿರಲಿಲ್ಲ.
ಅಕ್ಕ ಕಕ್ಕುಲಾತಿಯಿಂದ ಬೆಳೆಸಿದ್ದ ಹಳದಿ ಕೆಂಪು ಬಿಳಿ ಸೇವಂತಿಗೆ ಹೂವುಗಳು ಕುಂಡದಲ್ಲಿ ಘಮಘಮಿಸುತ್ತಿದ್ದವು. ಅಂಗಳದಲ್ಲಿ ಅವರೆ, ಬದನೆ ಗಿಡಗಳಲ್ಲಿ ಕಾಯಿ ತೊನೆದಾಡುತ್ತಿದ್ದವು. ತುಳಸಿಯ ಚಿಗುರುಗಳು ನಳನಳಿಸುತ್ತಿದ್ದವು. ಗರಿಕೆ ಗರಿಗೆದರಿದ್ದವು. ಗುಲಾಬಿ ಮೊಗ್ಗರಳಿಸಿತ್ತು. ಹೂಬಿಡುವ ಕಾಲವಲ್ಲ. ಅಕ್ಕನಿಗಾಗಿ ಅವೆಲ್ಲ ನೆರೆದಂತಿತ್ತು.
ಅಕ್ಕ ಸದಾ ಒಡನಾಡಿಕೊಂಡಿದ್ದ ಪಕ್ಕದ ಮನೆಯ ಹೆಂಗಳೆಯರೆಲ್ಲ ಬಂದರು. ಅಕ್ಕ ಮಾಡುತ್ತಿದ್ದ ಹಪ್ಪಳ, ಸಂಡಿಗೆ, ಬತ್ತಾಸು, ಹೊಸರುಚಿ, ಹಳೆರುಚಿಗಳ ಹಂಚಿ ತಿಂದ ನೆನಪಿನ ಬುತ್ತಿ ಬಿಚ್ಚುತ್ತಿದ್ದರು. ಮಾತಾಡುತ್ತ ಬಿಕ್ಕುತ್ತ ಕಣ್ಣೊರೆಸಿಕೊಳ್ಳುತ್ತ ಸೇವಂತಿಗೆ ಹೂವುಗಳನ್ನು ಬಿಡಿಸಿ ಮಾಲೆ ಕಟ್ಟಿ ಅವಳಿಗೆ ಮುಡಿಸಿದರು. ಅರಿಶಿಣ ಕುಂಕುಮ ಹಚ್ಚಿದರು. ತಂಗಿ ಅವಳಿಗಿಷ್ಟದ ಹಸಿರು ಚಿಕ್ಕಿ ಬಳೆ ತೊಡಿಸಿದಳು. ಅವಳಾಸೆಯ ಹೊಂಬಣ್ಣದ ರೇಶಿಮೆ ಸೀರೆ ಮಡಿಲು ತುಂಬಿದರು. ಅಕ್ಕ ನಿರ್ಲಿಪ್ತಳಾಗಿ ಹಾಗೇ ಕುಳಿತಿದ್ದಳು.
ಮೂವತ್ತು ವರ್ಷಗಳ ಕಾಲ ಅವಳ ಕೈ ಹಿಡಿದು ನಡೆದಿದ್ದ, ಅಕ್ಷರಶಃ ಅವಳು ಕೈ ಹಿಡಿದು ನಡೆಸಿದ್ದ ಭಾವ ಅವಳೆದುರು ಕಂಬಕ್ಕೊರಗಿ ನಿಂತಿದ್ದ.
ಹೊಳೆಯಾಚೆಯ ಪಟ್ಟಣವನ್ನೇ ಸರಿಯಾಗಿ ನೋಡಿರದಿದ್ದ ಅಕ್ಕ ಮುಗಿಲಾಚೆಯ ಊರಿಗೆ ಹೊರಟುನಿಂತಿದ್ದಳು.
...
ಅಕ್ಕ ಮನೆಗೆ ದೊಡ್ಡ ಮಗಳು. ಐವರಲ್ಲಿ ಎರಡನೆಯವಳು. ನಂತರ ಜನಿಸಿದ ಮೂವರಿಗೂ ಅಕ್ಕ ಅಮ್ಮನೇ ಆಗಿದ್ದಳು. ತಂಗಿಯರ ತಲೆ ಬಾಚಿ ಜಡೆ ಹಾಕಿ ಹೂ ಮುಡಿಸುತ್ತಿದ್ದಳು. ಅನ್ನ ಮಾಡಿ ಊಟಕ್ಕಿಡುತ್ತಿದ್ದಳು. ಕಿರಿಯ ತಮ್ಮನನ್ನು ಸೊಂಟದ ಮೇಲೆ ಹೊತ್ತು ಊರೆಲ್ಲ ಓಡಾಡುತ್ತಿದ್ದಳು. ಅವಳ ಸುಶ್ರಾವ್ಯ ಜೋಗುಳಕ್ಕೆ ಸಾಕಿದ ಬೆಕ್ಕೂ ಕಾಲ ಬುಡದಲ್ಲಿ ಕುಳಿತು ಗೊರಗೊರ ಎಂಬ ಲಯಬದ್ಧ ಸದ್ದಿನೊಂದಿಗೆ ನಿದ್ದೆ ಹೋದಂತೆ ನಟಿಸುತ್ತಿತ್ತು. ತಮ್ಮನೂ.
ನೋಡಲು ಬೆಳ್ಳಗೆ, ಗುಂಡಗಿದ್ದ ಅಕ್ಕನಿಗೆ ಕೊಂಚ ತಡವಾದರೂ ಒಳ್ಳೆಯ ಗಂಡನೇ ಸಿಕ್ಕಿದ್ದ. ಬಿಸಿಲೂರು. ಹೊಳೆದಂಡೆಯ ಫಲವತ್ತು ಭೂಮಿ ಅವರದು. ಕೃಷಿ ಕೆಲಸದಲ್ಲಿ ದೈತ್ಯ. ಮನಸ್ಸು ಮುಗ್ದ. ಬಲರಾಮನ ಗೋವು. ಅವಿಭಕ್ತ ಕುಟುಂಬದ ಗಿರಣಿಯಲ್ಲಿ ಬೆಳಗು ಸಂಜೆಗಳು ಸರಿದು ಅಕ್ಕ ಅಮ್ಮನಾದಳು. ಮತ್ತದೇ ಸಂಜೆ ಬೆಳಗುಗಳು ನಾಳೆಗಳನ್ನು ನಿನ್ನೆಗಳನ್ನಾಗಿಸಿದವು. ನೋಡನೋಡುತ್ತ ಋತುಗಳರಳಿ ಋತುಗಳುರುಳಿದವು. ಅಕ್ಕನ ಜೀವನ ಮುಕ್ಕೇನೂ ಆಗಲಿಲ್ಲ. ಆದರೂ ಅಕ್ಕನಂಥ ಅಕ್ಕನ ಚೈತನ್ಯಕ್ಕೆ ಹರಡಿಕೊಳ್ಳುವ ವ್ಯಾಪ್ತಿ ಕಿರಿದಾಗಿ, ಲಾವಾರಸವನ್ನು ಮಡಕೆಯಲ್ಲಿ ಹಿಡಿದಿಟ್ಟಂತಾಗಿತ್ತು.
ಅಕ್ಕನಿಗೊಬ್ಬಳು ಓರಗಿತ್ತಿ, ಕಾಲಿಗೆ ಚಕ್ರಕಟ್ಟಿಕೊಂಡೇ ಇರುತ್ತಿದ್ದಳು. ನೆಂಟರ ಮನೆಯಲ್ಲಿ ಮದುವೆ, ಮುಂಜಿ ಏನೋ ಒಂದು. ಏನೂ ಇಲ್ಲ ಅಂದರೆ ಸಿನಿಮಾ. ವರ್ಷಕ್ಕೊಮ್ಮೆ ದೂರ ಪ್ರವಾಸ. ಆಕೆಯೇ ಯಜಮಾನಿ. ಅವಳಿಗೆ ಅವಳದೇ ಆದ ಗತ್ತು ಗೈರತ್ತು ಆದ್ಯತೆಗಳು. ಅವಳ ಧರ್ಮರಾಯನಂಥ ಗಂಡ ಮನೆಯ ಯಜಮಾನ. ಇವರ ಜತೆ ಮದುವೆಯಾಗದ ಇನ್ನೊಬ್ಬ ಮೈದುನ. ಇವರ ನಡುವೆ ಅಕ್ಕನಿಗೆ ಅವಳದೇ ಆದ ಆದ್ಯತೆಗೆ ಅವಕಾಶವೇ ಇರಲಿಲ್ಲ. ವರ್ಷಕ್ಕೊಂದೆರಡಾವರ್ತಿ ತವರಿಗೆ ಹೋಗುವುದು ಬಿಟ್ಟರೆ ದೊಡ್ಡ ಮಾಳಿಗೆ ಮನೆಯೇ ಅವಳ ಪ್ರಪಂಚ. ಬೆಳಗಿನ ತಿಂಡಿ ತಯಾರಿಯೊಂದಿಗೆ ಗಾಣಕ್ಕೆ ಹೆಗಲು ಕೊಟ್ಟರೆ ರಾತ್ರಿ ಊಟ ಮುಗಿಸಿ ಮುಸುರೆ ಸಾರಿಸಿ ಕೈಕಾಲು ತೊಳೆವಷ್ಟೊತ್ತಿಗೆ ತಡರಾತ್ರಿ. ಮತ್ತೆ ನಸುಕು ಕೋಳಿ ಕೂಗುವುದಕ್ಕೂ ಮುನ್ನವೇ ಕರ್ತವ್ಯಕ್ಕೆ ಹಾಜರಿ. ಭಾವ ಗಾಣದ ಇನ್ನೊಂದು ಎತ್ತು. ಹೊರಗಿನ ಕೃಷಿ ಕೆಲಸಗಳಲ್ಲಿ ಆಳುಗಳೊಂದಿಗೆ ಆಳಾಗಿ ದುಡಿಯುತ್ತಿದ್ದ. ಅಕ್ಕನನ್ನು ಅಪಾರ ಪ್ರೀತಿಸುತ್ತಿದ್ದ. ಹೊಳೆಯಾಚೆಗಿನ ಪಟ್ಟಣಕ್ಕೆ ಎರಡುವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಹೆಂಡತಿಯನ್ನು ಕರೆದುಕೊಂಡು ಹೋಗಿ ದೇವಿ ದರುಶನ ಮಾಡಿಸಿದರೆ ಮುಗಿಯಿತು. ಮತ್ತೆ ಕರೆದುಕೊಂಡು ಹೋಗುವುದು ಮುಂದಿನ ಜಾತ್ರೆಗೇ. ಓರಗಿತ್ತಿ ತಾನು ನೋಡಿದ ದೂರದೂರನ್ನು ಬಣ್ಣಿಸುವಾಗ ತನ್ನ ಗಂಡನೂ ಯಾವುದಾದರೂ ಪುಣ್ಯಕ್ಷೇತ್ರಕ್ಕೆ ತನ್ನನ್ನು ಕರೆದುಕೊಂಡು ಹೋಗಬಹುದಿತ್ತು ಅನ್ನಿಸಿದ್ದರೆ ತಪ್ಪಲ್ಲ. ಗಂಡನಿಗೋ ಒಮ್ಮೆ ಭತ್ತದ ನಾಟಿ, ಇನ್ನೊಮ್ಮೆ ಅಡಕೆ ಕೊಯ್ಲಿನ ಶ್ರಾಯ. ಮಗುದೊಮ್ಮೆ ಮನೆಯಲ್ಲಿ ಕಾರ್ಯ. ಹನ್ನೆರಡು ವರ್ಷಗಳು ಹಾಗೆಯೇ ಕಳೆದುಹೋದವು.
ಅಕ್ಕ ಹತ್ತಿಕ್ಕುತ್ತಿದ್ದ ಆಸೆಗಳು ಹವ್ಯಾಸ ರೂಪದಲ್ಲಿ ಪ್ರಕಟಗೊಳ್ಳುತ್ತಿದ್ದವು. ವಿಚಿತ್ರ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಊರಿನ ಹೆಂಗಳೆಯರಿಗೆಲ್ಲ ಹಂಚುತ್ತಿದ್ದಳು. ಅವರೆಲ್ಲ ಅಕ್ಕನ ಕೈರುಚಿ ಹೊಗಳುವವರೇ. ಹೂಗಿಡಗಳನ್ನು ನೆಡುತ್ತಿದ್ದಳು, ತರಕಾರಿ ಬೆಳೆಯುತ್ತಿದ್ದಳು. ಎಲ್ಲ ಹೆಣ್ಣುಮಕ್ಕಳೂ ತವರಿನಿಂದ ಹೊತ್ತುಕೊಂಡು ಹೋದರೆ ಅಕ್ಕ ತವರಿಗೆ ಬರುವಾಗ ಚೀಲದ ತುಂಬ ಹಣ್ಣು, ಹೂವು, ತಿಂಡಿ ಕಜ್ಜಾಯಗಳನ್ನು ಹೊತ್ತು ತರುತ್ತಿದ್ದಳು.
ಅಕ್ಕನ ಎದೆಯ ಜ್ವಾಲಾಮುಖಿ ಒಳಗೊಳಗೇ ಕುದಿಯುತ್ತಿತ್ತು. ಹಿರಿಯ ಓರಗಿತ್ತಿಯ ದರ್ಬಾರು, ಪುತ್ರವ್ಯಾಮೋಹ ಅರ್ಥವಾಗದಷ್ಟು ಪೆದ್ದಿಯೇನಾಗಿರಲಿಲ್ಲ ಅಕ್ಕ. ಯಜಮಾನ ಹಿರಿಯಣ್ಣ ಧರ್ಮರಾಯ ಬರಬರುತ್ತ ಧೃತರಾಷ್ಟ್ರನಾದ. ಮನೆಯ ಆದಾಯ ಪೇಟೆಗೆ ಸಾಗತೊಡಗಿತು. ಅಲ್ಲೊಂದು ಮನೆಯಾಯಿತು. ಹಿರಿಯ ಓರಗಿತ್ತಿಯ ಒಂದು ಕಾಲು ಪೇಟೆಯಲ್ಲಿ ಇನ್ನೊಂದು ಇಲ್ಲಿ.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಿತ್ತು. ಎರಡನೆಯ ಭಾವ ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಬಿಜಿಯಾದ. ಭತ್ತದ ಪಣತವನ್ನು ಹೆಗ್ಗಣ ಕೊರೆದಿತ್ತು. ಕೊನೆಯ ಮೈದುನನ ಹೆಂಡತಿಗೆ ಮಾತ್ರ ಅಕ್ಕ ಎಂದರೆ ಅಕ್ಕರೆ. ಅಕ್ಕನಿಗೂ. ಆತ್ಮೀಯಳಲ್ಲದಿದ್ದರೂ ತಾವಿಬ್ಬರೂ ಒಂದೇ ದೋಣಿಯ ಪಯಣಿಗರು ಎನ್ನಿಸುತ್ತಿತ್ತು.
ಇವುಗಳ ನಡುವೆ ಅಕ್ಕನಿಗೆ ಪರಿಚಯವಾಗಿದ್ದು ಪಟ್ಟಣದ ಒಂದು ಆಶ್ರಮ. ಅಕ್ಕನ ಅದಮ್ಯ ಚೈತನ್ಯವನ್ನು ಭಕ್ತಿಯೆಡೆ ತಿರುಗಿಸಿದ್ದೇ ಈ ಆಶ್ರಮ. ಈ ಪ್ರಪಂಚದಲ್ಲಿ ಎಷ್ಟೇ ಪುಣ್ಯಕ್ಷೇತ್ರ ಸಂದರ್ಶಿಸಿದರೂ ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದು ತನ್ನನ್ನು ತಾನು ನಂಬಿಸಿಕೊಂಡಳು ಅಕ್ಕ. ಒಳಮನಸ್ಸಿನ ಒತ್ತಡಗಳು ಅವಳನ್ನು ಆಶ್ರಮದ ಸೇವೆಗೆ ದಬ್ಬಿದವು. ಆಶ್ರಮದ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾದ ಅಕ್ಕ ಗುರುವನ್ನು ನಂಬಿ ಕೆಟ್ಟವರಿಲ್ಲ ಎಂದು ಸಾಬೀತುಪಡಿಸುವಂತೆ ನಂಬಿಕೊಂಡಳು. ಜೀವನ ಧನ್ಯವಾಯಿತು ಎಂದು ತನ್ನನ್ನೇ ನಂಬಿಸಿಕೊಂಡಳು. ಆಶ್ರಮದ ರೀತಿ ರಿವಾಜುಗಳನ್ನು ಮನೆಗೂ ತಂದಳು. ಬೆಳಗ್ಗೆ ನಾಲ್ಕಕ್ಕೇ ಎದ್ದು ಸ್ನಾನ, ಗುರುಚರಿತ್ರೆ ಓದು. ಮತ್ತೆ ಮನೆಗೆಲಸ. ಸಣ್ಣ ಪುಟ್ಟ ಮೈಲಿಗೆಗೂ ಸ್ನಾನ, ಮಡಿ. ಗಂಡನಿಗೂ ಇದನ್ನು ಹೇಳಿಕೊಟ್ಟಳು. ದೇವರು ದಿಂಡಿರಿಂದ ದೂರವೇ ಇದ್ದ ಭಾವ, ದಿನ ಬೆಳಗಾಗೆದ್ದು ಗುರುಚರಿತ್ರೆ ಪಠಿಸತೊಡಗಿದ್ದ. ಇದರಿಂದ ಶಾಂತಿ ದೊರೆಯುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದ.
ಅಕ್ಕ ಹಾಡು ಬರೆಯುತ್ತಿದ್ದಳು. ಮದುವೆ, ಮುಂಜಿ, ಹಬ್ಬ ಹರಿದಿನಗಳ ಹಾಡುಗಳ ಪುಸ್ತಕವನ್ನೂ ಹೊರತಂದಳು. ಭಕ್ತಿ, ಶ್ರದ್ಧೆ, ನಿಷ್ಠೆಗೆ ಮಾದರಿಯಾದಳು. ಇವಿಷ್ಟೇ ಆಗಿದ್ದರೆ ಅಕ್ಕ ಇನ್ನೂ ಬದುಕಿದ್ದು ಗುರುವಿನ ಬಗ್ಗೆ ಪ್ರವಚನವನ್ನೇ ಮಾಡುತ್ತಿದ್ದಳೇನೋ. ಆದರೆ ಇಷ್ಟರಲ್ಲೇ ಅವಳೊಳಗೆ ಒಂದು ಅಂಧಶ್ರದ್ಧೆ ಬೆಳೆದುಬಿಟ್ಟಿತ್ತು. ಅದು ಅವಳ ಬದುಕನ್ನೇ ನುಂಗಿಬಿಡುತ್ತದೆ ಎಂದು ಗುರುವಿಗೇ ಗೊತ್ತಿರಲಿಲ್ಲವೇನೋ.
ಜೀವನದ ಪ್ರತಿಯೊಂದು ಆಗು ಹೋಗುಗಳೂ ಗುರುವಿನ ಇಚ್ಛೆಯಂತೆ ನಡೆಯುತ್ತದೆ ಎಂದು ನಂಬತೊಡಗಿದ್ದ ಅಕ್ಕ ಗುರುವಿನ ಕೃಪೆಯಿಂದ ಎಂಥೆಂಥ ಮಾರಣಾಂತಿಕ ಖಾಯಿಲೆಗಳೂ ಗುಣವಾದ, ಸತ್ತವರು ಬದುಕಿದ ಕಥೆಗಳನ್ನು ಓದಿ ಓದಿ ಅವುಗಳನ್ನು ಕಲ್ಪಿಸಿಕೊಳ್ಳತೊಡಗಿದಳು. ಸುಪ್ತ ಮನಸ್ಸಿನಲ್ಲಿ ಅಂಥ ಘಟನೆಗಳು ತನಗೇ ಆದಂತೆ ಅನುಭವಿಸತೊಡಗಿದಳು. ಅಡಕೆಗೆ ಕೊಳೆ ರೋಗ ಬಂದರೂ ತೀರ್ಥ, ತಲೆ ನೋವಿಗೂ ತೀರ್ಥ, ಅಜೀರ್ಣಕ್ಕೂ ತೀರ್ಥ, ಕೌಟುಂಬಿಕ ಸಮಸ್ಯೆಗೂ ತೀರ್ಥ, ದನ ಹಾಲು ಕೊಡದಿದ್ದರೂ ತೀರ್ಥ! ತೀರ್ಥವನ್ನೇ ಅಮೃತವೆಂದು ತಾನು ಭಾವಿಸಿದ್ದಲ್ಲದೇ ಸುತ್ತಲಿನವರನ್ನೂ ನಂಬಿಸಲು ಯಶಸ್ವಿಯಾದಳು ಅಕ್ಕ.
ಈ ಸಂದರ್ಭದಲ್ಲಿ ಅವಳಿಗೆ ಹೊಟ್ಟೆನೋವು ಕಾಣಿಸಿತು. ಮೊದಲಿಗೆ ತೀರ್ಥ ತೆಗೆದುಕೊಂಡಳು. ಹೆಚ್ಚಾದಾಗ ವಿಶೇಷ ಮಂತ್ರಿತ ತೀರ್ಥ ತೆಗೆದುಕೊಳ್ಳತೊಡಗಿದಳು. ಮಗ ತಂದ ಔಷಧವನ್ನು ಎಡಗೈಲಿ ದೂರ ಸರಿಸುತ್ತಿದ್ದಳು. ಗುರು ಬಂದು ಕಾಪಾಡುತ್ತಾನೆಂದು ಹೇಳತೊಡಗಿದಳು. ನಾಲ್ಕೈದು ತಿಂಗಳಾದರೂ ಹೊಟ್ಟೆನೋವು ವಾಸಿಯಾಗದಿದ್ದಾಗ ಡಾಕ್ಟರ್ ಬಳಿ ತೋರಿಸೋಣ ಎಂದು ಒತ್ತಾಯ ಮಾಡಿ ಕರೆದೊಯ್ದ ಮಗ. ಅವನ ಬೈಕು ಏರಿದ ಅಕ್ಕನಿಗೆ ಅರ್ಧ ದಾರಿಗೆ ಹೋದಮೇಲೆ ಏನನ್ನಿಸಿತೋ ಏನೋ, ಸುತರಾಂ ಡಾಕ್ಟರ್ ಬಳಿ ಬೇಡ, ತೀರ್ಥದಿಂದ ಎಲ್ಲ ಸರಿಹೋಗುತ್ತೆ, ಯೋಚನೆ ಮಾಡುವಂಥದ್ದಿಲ್ಲ ಎಂದು ಹೇಳತೊಡಗಿದಳು. ಒಮ್ಮೆ ಸ್ಕ್ಯಾನ್ ಮಾಡಿಸಿಬಿಡೋಣ ಎಂದು ಮಗ ಗೋಗರೆದರೆ, ಒತ್ತಾಯ ಮಾಡಿದರೆ ಬೈಕಿನಿಂದ ಹಾರಿಬಿಡುವುದಾಗಿ ಬೆದರಿಸಿದಳು.
ಇದಾಗಿ ಆರು ತಿಂಗಳ ಹೊತ್ತಿಗೆ ಅಕ್ಕ ಹೈರಾಣಾಗಿದ್ದಳು. ಹೊಟ್ಟೆ ನೋವು ಕಿತ್ತು ತಿನ್ನುತ್ತಿತ್ತು. ತನಗೇನೋ ದೊಡ್ಡ ಕಾಯಿಲೆ ಇದೆ ಅನ್ನಿಸತೊಡಗಿತ್ತು. ವಿಶೇಷವೆಂದರೆ ಇಷ್ಟು ಪೂಜೆ ಮಾಡಿಯೂ, ಭಕ್ತಿ ತೋರಿಯೂ ತನಗೇಕೆ ಈ ಸಂಕಟ ಎಂದು ದೇವರನ್ನು ಬಯ್ಯಲಿಲ್ಲ. ಆಶ್ರಮವನ್ನು ಹಳಿಯಲಿಲ್ಲ. ಅಕ್ಕನಂಥ ಭಕ್ತೆಗೆ ಮಾರಣಾಂತಿಕ ಹೊಟ್ಟೆನೋವು ಎಂದರೆ ಆಶ್ರಮದ ಇತರ ಭಕ್ತರ ನಂಬಿಕೆಯನ್ನೇ ಅಲ್ಲಾಡಿಸುವಷ್ಟು ಪ್ರಬಲವಾಗಿತ್ತು ಆ ಸುದ್ದಿ. ಕರ್ಮಸಿದ್ಧಾಂತ ಉದಾಹರಿಸಿ ಆಶ್ರಮದವರು ಬಚಾವಾದರು ಅನ್ನುವುದು ಬೇರೆ ವಿಷಯ.
ಎಂಟು ತಿಂಗಳ ಹೊತ್ತಿಗೆ ಅರೆಜೀವವಾಗಿದ್ದ ಅಕ್ಕ ಚಿಕಿತ್ಸೆಗೆ ಒಪ್ಪಿದಳು. ಆದರೆ ವೈದ್ಯರು ಕೈ ಚೆಲ್ಲಿದರು. ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪಿದೆ. ಮೊದಲೇ ಕರೆತಂದಿದ್ದರೆ ಜೀವ ಉಳಿಸಬಹುದಿತ್ತು. ಯಾಕೆ ಹೀಗೆ ಮಾಡಿದಿರಿ ಎಂದರು ಡಾಕ್ಟರು. ಯಾರೂ ಉತ್ತರಿಸಲಿಲ್ಲ.
ಆದರೆ ಅಕ್ಕ ತೀರಿಕೊಂಡಿದ್ದು ಗುರುಪೂರ್ಣಿಮೆಯ ದಿನವೇ ಎಂಬುದು ಸೋಜಿಗ. ಶರಶಯ್ಯೆಯಲ್ಲಿ ಭೀಷ್ಮ ಉತ್ತರಾಯಣದ ಆಗಮನಕ್ಕೆ ಕಾದಂತೆ ಅಕ್ಕ ಅಷ್ಟು ದಿನ ಕಾದು ಗುರುಪಾದವನ್ನೇ ಸೇರಿದಳು, ಮುಕ್ತಿ ಹೊಂದಿದಳು ಎಂದು ನಂಬಿದ್ದಾರೆ ಆಶ್ರಮದ ಭಕ್ತರು. ನಂಬಿಕೆ ಮತ್ತು ಮೂಢನಂಬಿಕೆಯ ನಡುವೆ ತೆಳುವಾದ ಗೆರೆಯನ್ನು ಎಳೆದುಹೋಗಿದ್ದಾಳೆ ಅಕ್ಕ.
ಏನೇ ಆದರೂ ನಂಬಿಕೆ ಅತಿಯಾದರೆ ಬುದ್ಧಿವಂತರೂ ಮೂಢರಾಗುತ್ತಾರೆ ಎಂಬುದಕ್ಕೆ ಅಕ್ಕ ಸಾಕ್ಷಿಯಾದಳೆ? ಎಂಬ ಶಂಕೆ ಇಂದಿಗೂ ಕಾಡುತ್ತಿದೆ. ಅಕ್ಕನ ಸಾವು ಮೌಢ್ಯದ ಬೆನ್ನೇರಿ ಮಾಡಿಕೊಂಡ ಆತ್ಮಾಹುತಿಯೇ ಎಂಬ ಯೋಚನೆ ಕೊರೆಯುತ್ತಿದೆ.
- ವಿನಾಯಕ ಭಟ್, ತದ್ದಲಸೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


