ಪ್ರಚಂಡ ಪರ್ಯಟನೆ

ಮಳೆಗಾಲದ ಒಂದು ದಿನ. ಗುಡ್ಡದ ತುದಿಯಲ್ಲಿ ಆಡುತ್ತಿದ್ದಾಗ ಒಮ್ಮೆಲೆ ಸುರಿದ ಗಾಳಿ ಮಳೆಯಿಂದ ರಕ್ಷಿಸಿಕೊಳ್ಳಲು ಆಸರೆಗಾಗಿ ಅಲ್ಲೇ ಇದ್ದ ಬೃಹತ್ ಬಂಗಲೆಯೊಳಕ್ಕೆ ಪ್ರವೇಶಿಸಿದ ಪೀಟರ್, ಎಡ್ಮಂಡ್, ಸುಶಾನಿ, ಲೂಸಿ ಎಂಬ ನಾಲ್ವರು ಮಕ್ಕಳು ಬಂಗಲೆಯ ವೈಭವಕ್ಕೆ ಬೆರಗಾಗುತ್ತಾರೆ. ನಂತರ ಅಲ್ಲೇ ಮೂಲೆಯಲ್ಲಿದ್ದ ಸುರಂಗದ ಮೂಲಕ ತೆವಳುತ್ತಾ ಸಾಗಿದಾಗ ವಿಶಾಲವಾದ, ಕಲ್ಪನೆಗೂ ನಿಲುಕದ ಮಾಯಾಪುರದ ದರ್ಶನವಾಗುತ್ತದೆ. ಎಲ್ಲೆಲ್ಲೂ ಹಿಮ ಪರ್ವತಗಳು, ಒಣಗಿದ ಮರಗಳು, ಕಾಡು, ಅಲ್ಲಿ ಉರಿಯುತ್ತಿರುವ ದೀಪದ ಕಂಬ, ಮೈ ಕೊರೆವ ಚಳಿ... ಎಲ್ಲವೂ ಬೆರಗು ಹುಟ್ಟಿಸುತ್ತವೆ.
ಆ ಮಾಯಾಪುರದ ಮಹಾರಾಣಿಯಾಗಿ ಮೆರೆಯುತ್ತಿರುವ ಕ್ರೂರ ಜಕ್ಕಿಣಿಯ ಕ್ರೌರ್ಯಕ್ಕೆ ಒಳಗಾದ ನೂರಾರು ಪ್ರಾಣಿ ಪಕ್ಷಿಗಳು ಆಕೆಯಿಂದ ಬಿಡುಗಡೆ ಹೊಂದಲು ಹಾತೊರೆಯುತ್ತಿರುತ್ತವೆ. ಮಾಯಾಪುರಕ್ಕೆ ಯಾವ ಮನುಷ್ಯರು ಬಂದರೂ ಅವರನ್ನು ಹಿಡಿದು ತಿನ್ನುವ ಜಕ್ಕಿಣಿಯ ಕೋಟೆಗೆ ಈ ನಾಲ್ವರು ಮಕ್ಕಳು ತಿಳಿಯದೆ ಪ್ರವೇಶಿಸುವರು. ಈ ನಾಲ್ವರಲ್ಲಿ ತಿಂಡಿಪೋತ ಎಡ್ಮಂಡ್ ಜಕ್ಕಿಣಿಯ ಕೈಗೆ ಸಿಲುಕಿ, ಆಕೆಯ ಆಮಿಷಕ್ಕೊಳಗಾಗಿ ಉಳಿದ ಅಣ್ಣ- ತಂಗಿಯರನ್ನು ಕರೆತರಲು ಒಪ್ಪುತ್ತಾನೆ. ಮಾಯಾಪುರ ಪ್ರವೇಶಿಸಿದ ಮಕ್ಕಳಿಗೆ ಜಕ್ಕಿಣಿಯ ಮೋಸದ ಅರಿವಾಗುತ್ತದೆ. ವೈರಿಗಳನ್ನು ಕಲ್ಲಿನ ಮೂರ್ತಿಗಳನ್ನಾಗಿಸಿ ಶಿಕ್ಷಿಸುವ ಜಕ್ಕಿಣಿಯಿಂದ ಹೇಗಾದರೂ ಪಾರಾಗಬೇಕೆಂದು ಬಯಸುವ ಕೆಲವು ನಂಬಿಕಸ್ಥ ಪ್ರಾಣಿಗಳ ಸಹಾಯದಿಂದ ಜಕ್ಕಿಣಿಗಿಂತಲೂ ಪ್ರಚಂಡ ತಂತ್ರವಿದ್ಯೆ ಅರಿತಿರುವ ಸಿಂಹದ ಸಹಾಯ ಯಾಚಿಸುತ್ತಾರೆ. ಜಕ್ಕಿಣಿ ಸಾಯದೆ ಆ ಮಾಯಾಪುರದಲ್ಲಿ ನೆಮ್ಮದಿ ಇಲ್ಲವೆಂದು ಅರಿತ ಸಿಂಹ, ಜಕ್ಕಿಣಿಯೊಂದಿಗೆ ಯುದ್ಧ ಮಾಡಿ ಆಕೆಯನ್ನು ಸಂಹರಿಸುತ್ತದೆ. ದೇವವಾಣಿಯಂತೆ ನಾಲ್ವರು ಮಕ್ಕಳನ್ನು ಮಾಯಾಪುರಕ್ಕೆ ರಾಜ, ರಾಣಿ, ಮಂತ್ರಿ, ಸೇನಾಧಿಪತಿಯನ್ನಾಗಿಸಿ ತನ್ನ ಮಾಯಾಶಕ್ತಿಯನ್ನೆಲ್ಲ ಧಾರೆ ಎರೆದು ಅದೃಶ್ಯವಾಗುತ್ತದೆ. ಆಮೇಲೆ 30 ವರ್ಷಮಾಯಾಪುರದ ಆಡಳಿತ ನಡೆಸಿದ ನಾಲ್ವರು ಒಂದು ದಿನ ವನವಿಹಾರಕ್ಕೆ ತೆರಳಿದಾಗ ಅಲ್ಲಿನ ಸುರಂಗ ಪ್ರವೇಶಿಸುತ್ತಾರೆ. ಹಾಗೆ ಸಾಗಿ ಹೊರಬಂದಾಗ ಮತ್ತದೇ ನಾಟಕದ ಆರಂಭದಲ್ಲಿ ಕಂಡ ಬಂಗಲೆ ಕಾಣುತ್ತದೆ. ಹೊರಗಡೆ ಜೋರಾಗಿ ಗಾಳಿ ಮಳೆ ಸುರಿಯುತ್ತಿರುತ್ತದೆ.
ಮೇಲ್ನೋಟಕ್ಕೆ ಈ ಕಥೆ ಇಷ್ಟೇನಾ ಅಂತನ್ನಿಸಿದರೂ, ಅದನ್ನು ನಾಟಕ ರೂಪವಾಗಿಸಿ (ಕೆ.ಜಿ. ಕೃಷ್ಣಮೂರ್ತಿ), ನಿರ್ದೇಶಿಸಿದ (ಜೀವನ್‌ರಾಂ) ಶೈಲಿ ಅದ್ಭುತ. ನಾಟಕದುದ್ದಕ್ಕೂ ಕಾಣಬರುವ ಹಾಸ್ಯ, ರೋಚಕತೆ, ಮನರಂಜನೆ ಜೊತೆಗೆ ಅಲ್ಲಲ್ಲಿ ಸಿಗುವ ಅನೇಕ ಸಮಾಜಮುಖಿ ಸಂದೇಶಗಳು ನಾಟಕದ ಪ್ಲಸ್‌ಪಾಯಿಂಟ್.
ಪಾದರಸದಂತೆ ಚಲಿಸುತ್ತಾ ಎಲ್ಲ ರಂಗಸಜ್ಜಿಕೆಗಳನ್ನು ತಾವೇ ನಿರ್ವಹಿಸುವ ಮಕ್ಕಳ ಚುರುಕುತನ, ಭಾವಪೂರ್ಣ ಸಹಜಾಭಿನಯ, ಪ್ರೇಕ್ಷಕರನ್ನು ಲಯಬದ್ಧರನ್ನಾಗಿಸುವ ಹಾಡು, ಕುಣಿತಗಳಿಂದ ಕೂಡಿದ ಸುಶ್ರಾವ್ಯ ಸಂಗೀತ, ಹರಳು ಹುರಿದಂತೆ ಪಟಪಟನೆ ನೀಡುವ ಮಕ್ಕಳ ಸ್ಪಷ್ಟ ಏರಿಳಿತದ ಮಾತುಗಾರಿಕೆ, ಬೆಳಕು ಮತ್ತು ವಸ್ತ್ರ ವಿನ್ಯಾಸ, ಪ್ರತೀಕ್ಷಣವೂ ವಿಸ್ಮಯಗೊಳಿಸುವ ರೋಮಾಂಚಕ ರಂಗತಂತ್ರಗಳು, ಪ್ರಾಣಿ ಪಕ್ಷಿಗಳ ಮುಖವಾಡಗಳು, ಧಗ್ಗನೆ ಪ್ರತ್ಯಕ್ಷವಾಗುವ ಜಕ್ಕಿಣಿಯ ಚಲಿಸುವ ರಥ, ಭ್ರಮಾಲೋಕವನ್ನು ಸೃಷ್ಟಿಸುವ ದೃಶ್ಯ ವೈಭವ ಮಕ್ಕಳ ರಂಗಭೂಮಿಯಲ್ಲೇ ತೀರಾ ಅಪರೂಪ. ಪೀಟರ್ ಆಗಿ ಪ್ರಣವ ಬೆಳ್ಳಾರೆ, ಲೂಸಿಯಾಗಿ ಕ್ಷಮಾ ಅಂಬೆಕಲ್ಲು, ಸುಶಾನಿಯಾಗಿ ಪೂರ್ಣ ಪ್ರಸಾದ್ ಮುಗ್ಧ ಸಹಜ ಅಭಿನಯದಿಂದ ಗಮನ ಸೆಳೆಯುತ್ತಾರೆ. ತಿಂಡಿಪೋತ ಎಡ್ಮಂಡ್ ಆಗಿ ವಿಕ್ರಂ ಚಂದ್ರ ತನ್ನ ಆಸೆಬುರುಕತನ ಮತ್ತು ಹಾಸ್ಯದಿಂದ ಪ್ರಶಂಸೆ ಗಿಟ್ಟಿಸುತ್ತಾರೆ. ಜಕ್ಕಿಣಿಯಾಗಿ ಎನ್.ಆರ್. ರಚನಾ ಮತ್ತು ಸಿಂಹವಾಗಿ ವಿನ್ಯಾಸಚಂದ್ರ ಕುಣಿತ, ಗರ್ಜನೆ ಮೂಲಕ ಗಮನ ಸೆಳೆಯುತ್ತಾರೆ.
= ಬಿ. ವಿಠಲ ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


