ಖುಷಿ

ತಹಸೀಲ್ದಾರರಿಗೆ ಅರ್ಜಿ ಕೊಡಿ

Published On :

ಹೆಸರು, ಊರು ಬೇಡ
ನಮ್ಮ ಶಾಲಾ ವರ್ಗಾವಣೆ ಪತ್ರದಲ್ಲಿ ನಮ್ಮ ಜಾತಿ ಹಿಂದೂ ಲಿಂಗವಂತವೆಂದಿದ್ದು ನಮ್ಮ ಚಿಕ್ಕಪ್ಪ ಹಾಗೂ ಅವನ ಮಕ್ಕಳ ಟಿ.ಸಿ.ಯಲ್ಲಿ ಹಿಂದೂ ಕುಂಬಾರ ಎಂದಿದೆ. ನಾವು ಕುಂಬಾರ ಜನಾಂಗಕ್ಕೆ ಸೇರಿದವರು. ಇದನ್ನು ಸರಿಪಡಿಸಲು ಏನು ಮಾಡಬೇಕು?
- ನಿಮ್ಮ ತಾಲೂಕು ತಹಸೀಲ್ದಾರರಿಗೆ ದಾಖಲೆ ಸಮೇತ ಅರ್ಜಿ ಸಲ್ಲಿಸಿ, ಈ ತಪ್ಪನ್ನು ಸರಿಪಡಿಸುವಂತೆ ಕೋರಿಕೊಳ್ಳಿ. ಅಲ್ಲಿ ಸಹಾಯವಾಗದಿದ್ದರೆ ಸಿವಿಲ್ ನ್ಯಾಯಾಲಯದಲ್ಲಿ ದಾವಾ ಹಾಕಬೇಕು.
ಮಾರಾಟ ರದ್ದುಪಡಿಸಲು ದಾವೆ ಹಾಕಿ
ಸಿ. ರಾಜೇಶ್, ಚಿಕ್ಕಮಗಳೂರು
ಅಣ್ಣನ ಹೆಸರಿನಲ್ಲಿ ಒಂದು ಸೈಟಿದೆ. ಆತನು ತನ್ನ ಮೊದಲ ಹೆಂಡತಿಯ ವಿಚ್ಛೇದನಕ್ಕೆ ದಾವಾ ಹಾಕಿದ್ದು, ಅದು ಹೈಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇರುತ್ತದೆ. ಆತ ಈ ಸೈಟನ್ನು ಬೇರೊಬ್ಬರಿಗೆ ಮಾರಿದ್ದಾನೆ. ಈ ಸೈಟು ಅವಿಭಕ್ತ ಕುಟುಂಬಕ್ಕೆ ಸೇರಿದೆ. ಈ ಕ್ರಮ ಸರಿಯಲ್ಲ, ಆತನಿಗೆ ಮಾರಲು ಹಕ್ಕಿಲ್ಲ ಎಂದು ದಾವೆ ಹೂಡಲಾಗಿದೆ. ಕಾನೂನು ಏನು ಹೇಳುತ್ತದೆ?
- ವಿಚ್ಛೇದನಕ್ಕೂ ಸೈಟ್ ಮಾರಾಟಕ್ಕೂ ಸಂಬಂಧವಿಲ್ಲ. ಅದು ಒಟ್ಟು ಕುಟುಂಬದ ಆಸ್ತಿಯಾಗಿದ್ದರೆ ಆ ಕ್ರಯವನ್ನು ರದ್ದು ಮಾಡಲು ಕ್ರಮ ಕೈಗೊಳ್ಳಬಹುದು.
ಅದು ಸ್ವಯಾರ್ಜಿತ ಆಸ್ತಿ
ನನ್ನ ತಾಯಿಗೆ ಆಕೆಯ ತಾಯಿಯಿಂದ ಆಸ್ತಿ ಬಂದಿರುತ್ತದೆ. ಅದರಲ್ಲಿ ಒಂದು ಭಾಗವನ್ನು ನನ್ನ ತಾಯಿ ನನ್ನ ತಂದೆಗೆ ವಿಲ್ ಮೂಲಕ ಕೊಟ್ಟಿರುತ್ತಾರೆ. ಈ ಆಸ್ತಿ ತಂದೆಗೆ ಪಿತ್ರಾರ್ಜಿತವೇ ಅಥವಾ ಸ್ವಯಾರ್ಜಿತವೇ? ಇದರಲ್ಲಿ ನನ್ನ ಮಗನಿಗೆ ಹಕ್ಕಿದೆಯೇ?
- ನಿಮ್ಮ ತಾಯಿಯಿಂದ ತಂದೆಗೆ ಬಂದ ಹಿಸ್ಸೆ ಸ್ವಯಾರ್ಜಿತವಾಗುತ್ತದೆ. ಆದ್ದರಿಂದ ಅವರಿಗೆ ಆ ಆಸ್ತಿಯ ಮೇಲೆ ಸಂಪೂರ್ಣ ಅಧಿಕಾರವಿದ್ದು ಅವರು ಅದನ್ನು ಯಾರಿಗೆ ಬೇಕಾದರೂ ಕೊಡಬಹುದು. ಆದ್ದರಿಂದ ನಿಮ್ಮ ಮಗನಿಗೆ ಅದರ ಮೇಲೆ ಯಾವ ಹಕ್ಕೂ ಬರುವುದಿಲ್ಲ.
ಹಳೆ ವಿಲ್ ರದ್ದುಪಡಿಸಿ ಹೊಸದನ್ನು ಬರೆಯಬಹುದು
ಕೆ.ಎಸ್. ರಾಮಚಂದ್ರ, ಜೆ.ಪಿ. ನಗರ
ನನಗೆ ಮೂರು ಜನ ಗಂಡುಮಕ್ಕಳಿದ್ದು, ಮೊದಲನೆಯವ ಅಮೆರಿಕದಲ್ಲಿದ್ದಾನೆ. ಮೂರನೇ ಮಗ ದೊಡ್ಡ ಹುದ್ದೆಯಲ್ಲಿದ್ದು ದೊಡ್ಡ ಮನೆ ಕಟ್ಟಿಕೊಂಡು ಹಾಯಾಗಿದ್ದಾನೆ. ನಾನು 87 ವರ್ಷದವನಿದ್ದು, ಎರಡನೆಯ ಮಗನ ಜತೆ ನನ್ನ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದೇನೆ. ನಾನು 7 ವರ್ಷಗಳ ಹಿಂದೆ ವಿಲ್ ಮಾಡಿದ್ದು ಅದನ್ನು ತಿದ್ದಿ ಬರೆಯಬಾರದೆಂದು ಹಿರಿಯರು ಹೇಳಿದ್ದರಿಂದ 2 ವರ್ಷಗಳ ಹಿಂದೆ ಹೊಸ ವಿಲ್ ಮಾಡಿ, ಅದಕ್ಕೆ ಹಿಂದಿನ ವಿಲ್ ಸಾಕ್ಷಿಗಳಿಂದ ಸಹಿ ಪಡೆದಿದ್ದೇನೆ. ಈಗ ನಾನು ಹೊಸ ವಿಲ್ ಮಾಡಿ ಮನೆಯನ್ನು ಎರಡನೆಯ ಮಗನಿಗೆ ಕೊಡಬಹುದೇ? ಹಾಗೆ ಮಾಡಿದರೆ ಅದನ್ನು ಮಾರಾಟ ಮಾಡಬೇಕಾದರೆ (ನನ್ನ ಕಾಲಾನಂತರ) ಉಳಿದಿಬ್ಬರೂ ಸಹೋದರರ ಒಪ್ಪಿಗೆ ಬೇಕೇ? ಅಲ್ಲದೇ ಅವರಿಬ್ಬರಿಗೂ ಮಾರಾಟದ ಹಣದಲ್ಲಿ ಶೇ. 30ರಷ್ಟನ್ನು ಕೊಟ್ಟು ಉಳಿದ ಹಣ ಶೇ. 40ರಷ್ಟನ್ನು ಎರಡನೇ ಮಗನಿಗೆ ಎಂದು ಬರೆಯಬಹುದೇ? ಮನೆ ಕಂದಾಯ, ವಿದ್ಯುತ್ ಬಿಲ್‌ಗಳನ್ನು ಎರಡನೇ ಮಗನೇ ಕೊಡಬೇಕು. ಈ ನಿಬಂಧನೆಗೊಳಪಟ್ಟು ಮನೆಯನ್ನು ಎರಡನೆಯವನ ಹೆಸರಿಗೆ ಬರೆಯಬಹುದೇ?
- ವಿಲ್‌ಗಳನ್ನು ಎಷ್ಟು ಬಾರಿ ಬೇಕಾದರೂ ಬದಲಾಯಿಸಬಹುದು. ಆದರೆ ಹಳೆ ವಿಲ್ ರದ್ದು ಮಾಡಿದೆಯೆಂದು ನಮೂದಿಸಬೇಕು. ಉಳಿದಂತೆ ನೀವು ಹೇಳಿದ ಹಾಗೆ ವಿಲ್ ಮಾಡಲು ಯಾವ ಅಡ್ಡಿಯೂ ಇಲ್ಲ.

=  ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.