ಖುಷಿ

ಅಬ್ ಕೀ ಬಾರ್ ಮೋಡಿ SOCCER

ಅಬ್ ಕೀ ಬಾರ್ ಮೋಡಿ SOCCER
Published On :

ಬ್ರೆಜಿಲ್ ಆಟಗಾರರು ಫುಟ್ಬಾಲ್ ಅನ್ನು ಕಾಲಡಿಯಲ್ಲಿ ಇಟ್ಟುಕೊಂಡೇ ಹುಟ್ಟಿದರೇನೋ ಎಂಬ ಸಂಶಯವಿದೆ. ಲ್ಯಾಟಿನ್ ಅಮೆರಿಕದಲ್ಲಿರುವ ವಿಶ್ವದ 5ನೇ ಅತಿ ದೊಡ್ಡ ರಾಷ್ಟ್ರ ಬ್ರೆಜಿಲ್ ಪಾಲಿಗೆ ಕಾಲ್ಚೆಂಡು ಬರೀ ಕ್ರೀಡೆಯಲ್ಲ; ಮನರಂಜನೆಗಷ್ಟೇ ಸೀಮಿತವೂ ಅಲ್ಲ; ಅದು ಅಲ್ಲಿನವರ ಉಸಿರು. ಒಂದು ರೀತಿಯಲ್ಲಿ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಎಂಬಂತೆ ಜನಜೀವನದಲ್ಲಿ ಬೆರೆತು ಹೋಗಿದೆ. ಅಲ್ಲಿ ಹುಟ್ಟಿದ 10 ಸಾವಿರಕ್ಕೂ ಹೆಚ್ಚು ವೃತ್ತಿಪರ ಆಟಗಾರರು ಪ್ರಪಂಚದ ಬೇರೆ ಬೇರೆ ದೇಶಗಳ ಕ್ಲಬ್‌ಗಳಲ್ಲಿ ಕಾಲೂರಿದ್ದಾರೆ ಎಂದಾದಲ್ಲಿ ಅಲ್ಲಿನ ಜನಪ್ರಿಯತೆಯನ್ನು ಊಹಿಸಿ.
'ಬ್ರೆಜಿಲ್ ಫಾರ್ ಫುಟ್ಬಾಲ್‌' ಅಂತಲೇ ಗುರುತಿಸಲ್ಪಡುವ ಈ ವಿಶಿಷ್ಟ ದೇಶ ವಿಶ್ವದಾಖಲೆಯ 5 ಬಾರಿ ವಿಶ್ವಕಪ್ ಎತ್ತಿಕೊಂಡಿದೆ ಎಂಬ ಒಂದೇ ಕಾರಣಕ್ಕೆ ಫುಟ್ಬಾಲ್ ದುನಿಯಾದಲ್ಲಿ ಗುರುತಿಸಿಕೊಂಡಿರುವುದಲ್ಲ. ಈ ಯಶಸ್ಸಿನ ಹಿಂದೆ ಶತಮಾನದ ತಪಸ್ಸಿದೆ. ಪ್ರತಿ ವಿಶ್ವಕಪ್ ಬಂದಾಗಲೂ ಪ್ರಪಂಚದ ಎಲ್ಲೇ ನಡೆಯಲಿ, ತಂಡ ಫಾರ್ಮ್‌ನಲ್ಲಿ ಇರಲಿ- ಬಿಡಲಿ, ಸ್ಟಾರ್ ಆಟಗಾರರು ಆಡಲಿ, ಹೋಗಲಿ, ಬ್ರೆಜಿಲ್ ಮಾತ್ರ ಆಲ್ ಟೈಮ್ ಫೇವರಿಟ್. ಹೀಗಾಗಿ ಬ್ರೆಜಿಲ್ ಗೆದ್ದಾಗ ಜನ ಅಚ್ಚರಿಗೊಂಡಿಲ್ಲ. ಅದರೆ ಬ್ರೆಜಿಲ್ ಸೋತಾಗ ಮಾತ್ರ ಸ್ತಬ್ಧರಾಗಿದ್ದಾರೆ.
ಫುಟ್ಬಾಲ್ ಬಗ್ಗೆ ಅರೆಬರೆ ತಿಳಿದುಕೊಂಡವ ಕೂಡ 'ಛೇ... ಬ್ರೆಜಿಲ್ ಗೆಲ್ಬೇಕಿತ್ತು'   ಅಂತ ಉದ್ಗರಿಸುತ್ತಾನೆ. ಈ ನಿಟ್ಟಿನಲ್ಲಿ ಅದರ ಹತ್ತಿರ ನಿಲ್ಲುವಷ್ಟು ಅಭಿಮಾನಿಗಳನ್ನು ಪಡೆದುಕೊಂಡಿರುವ ದೇಶವಿದ್ದರೆ ಅದು ಈ ತಂಡದ ಬದ್ಧ ಪ್ರತಿಸ್ಪರ್ಧಿ ಅರ್ಜೆಂಟೀನಾ ಮಾತ್ರ. ನಿಜ ಹೇಳಬೇಕೆಂದರೆ ಈ ಬಾರಿಯ ವಿಶ್ವಕಪ್ ಪ್ರಾರಂಭಕ್ಕೆ ಒಂದು ವರ್ಷ ಮುನ್ನ ಫಿಫಾ ರ್ಯಾಂಕಿಂಗ್‌ನಲ್ಲಿ ಬ್ರೆಜಿಲ್ 22ನೇ ಸ್ಥಾನಕ್ಕೆ ಕುಸಿದಿತ್ತು. ಈ ಕುಸಿತ ಇತಿಹಾಸದಲ್ಲಿ ಕಂಡದ್ದು ಬಿಡಿ, ಬ್ರೆಜಿಲಿಗರು ಊಹಿಸಲೂ ಸಾಧ್ಯವಿಲ್ಲದ್ದು. ವಿಶ್ವಕಪ್ ಅನ್ನುವುದು ಆ ದೇಶದಲ್ಲಿ ಎಂಥ ಸಂಚಲನ ಉಂಟುಮಾಡುತ್ತದೆ ಎಂಬುದಕ್ಕೆ ಅಲ್ಲಿ ಈ ಒಂದು ವರ್ಷದಲ್ಲಿ ನಡೆದ ತಯಾರಿಯೇ ಸಾಕ್ಷಿ. ಫಿಫಾ ರ್ಯಾಂಕಿಂಗ್‌ನಲ್ಲಿ ಬ್ರೆಜಿಲ್ ಇದೀಗ ನಾಲ್ಕನೇ ಸ್ಥಾನದಲ್ಲಿ ವಿರಾಜಮಾನ. ಅದು ಬ್ರೆಜಿಲ್ ತಂಡಕ್ಕಿರುವ ಸಾಮರ್ಥ್ಯ ಮತ್ತು ಆ ದೇಶದಲ್ಲಿ ಹುಟ್ಟಿಕೊಂಡಿರುವ ಆತ್ಮವಿಶ್ವಾಸ. ಹೀಗಾಗಿ ಪ್ರತಿಸಲದಂತೆ ಈ ಬಾರಿಯೂ ಬ್ರೆಜಿಲ್ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.
ಮಾಂತ್ರಿಕರ ಕಣಜ
ಬೇರಾವ ದೇಶವನ್ನು ಬೇಕಾದರೂ ಹುಡುಕಿ ನೋಡಿ... ಅರ್ಜೆಂಟೀನಾಗೆ ಮರಡೋನಾ, ಇಂಗ್ಲೆಂಡ್‌ಗೆ ಬೆಕ್‌ಹ್ಯಾಂ, ಫ್ರಾನ್ಸ್‌ಗೆ ಜಿದಾನೆ... ಹೀಗೆ ಒಬ್ಬರೋ- ಇಬ್ಬರೋ ನೆನಪಿನಲ್ಲುಳಿವಂಥ ಆಟಗಾರರು ಸಿಗುತ್ತಾರೆ. ಆದರೆ ಬ್ರೆಜಿಲ್ ಅಂತ ಒಮ್ಮೆ ನೆನಪಿಸಿಕೊಳ್ಳಿ... ಯುವ ಪೀಳಿಗೆ ಯಾವತ್ತೂ ಮೈದಾನದಲ್ಲಿ ನೋಡಿರದ ಜೀವಂತ ದಂತಕಥೆ ಪೀಲೆಯೇ ಫುಟ್ಬಾಲ್ ಜಗತ್ತಿನ ಅಚ್ಚರಿ. ಆ ಒಂದೇ ಹೆಸರೇ ಸಾಕಷ್ಟಾಯಿತು. ಆದರೆ ಕೇವಲ ಪೀಲೆ ಗುಂಗಲ್ಲೇ ಬ್ರೆಜಿಲ್ ಮೈಮರೆತಿಲ್ಲ. ಭಾರತದಲ್ಲಿ ಹಾಕಿಯ ಧ್ಯಾನ್‌ಚಂದ್ ಬಳಿಕದ ಸ್ಥಿತಿ ಬ್ರೆಜಿಲ್‌ನಲ್ಲಿ ಇಂದಿನವರೆಗೂ ಉದ್ಭವವಾಗಿಲ್ಲ. ಪೀಲೆ ಮುಂದಿನ ಪೀಳಿಗೆಯ ಆಟಗಾರರಿಗೆ ಆದರ್ಶವಾದರು. ಪೀಲೆ ಜೊತೆಗೆ ಆಡಿದ ಗ್ಯಾರಿಂಚ, ಸಮಕಾಲೀನರಾದ ಕುಫು, ರಾಬರ್ಟ್ ಕಾರ್ಲೋಸ್, 1994ರ ವಿಶ್ವಕಪ್‌ನ ಸ್ಟಾರ್ ಆಟಗಾರ ರೊಮಾರಿಯೋ, 2002ರ ಹೀರೋಗಳಾದ ರೊನಾಲ್ಡೋ, ರಿವಾಲ್ಡೋ, ಇದೀಗ ಯುವಪೀಳಿಗೆಯ ಫೇವರಿಟ್ ರೊನಾಲ್ಡಿನೋ ಹೀಗೆ... ಪ್ರತಿ ಕಾಲಘಟ್ಟದಲ್ಲೂ ಅದ್ವಿತೀಯರೆನಿಸಿದ ಇಂಥ ಆಟಗಾರರೇ ಅಲ್ಲಿನ ನೆಲದಲ್ಲಿ ಫುಟ್ಬಾಲ್ ಪ್ರೇಮವನ್ನು ಫೆವಿಕಾಲ್ ಜೋಡಣೆಯಂತೆ ಬಂಧಿಸಿಟ್ಟಿರುವುದು.
ಕಾಲ್ಚೆಂಡಿನ ಸ್ವರ್ಗ
ಭಾರತದ ಕ್ರಿಕೆಟ್‌ನಂತೆ ಅಲ್ಲೂ ಫುಟ್ಬಾಲ್ ಜ್ವರ ಬರುತ್ತದೆ. ಪಂದ್ಯದ ವೇಳೆ ಎಲ್ಲ ಕೆಲಸ ಮರೆತು ಈ ಒಂದೂವರೆ ಗಂಟೆಯ ಕಸರತ್ತು ನೋಡಲು ಅನುಕೂಲವಾಗಲೆಂದು ಬ್ಯಾಂಕ್‌ಗಳು ಬಾಗಿಲು ಹಾಕಿ ತಮ್ಮ ಕೆಲಸಗಾರರಿಗೆ ವೀಕ್ಷಣೆಯ ತಯಾರಿಗೆಂದೇ ಪಂದ್ಯ ಪ್ರಾರಂಭವಾಗುವ ಮುಂಚೆ 3 ಗಂಟೆ ಕಾಲಾವಕಾಶ ನೀಡುತ್ತದೆ. ಪಂದ್ಯ ವೀಕ್ಷಣೆಗೇ 3 ಗಂಟೆಯ ಕಾಲಾವಕಾಶವನ್ನು ನೀಡುವ ದೇಶ ಇನ್ನು ಆಟಗಾರರ ತಯಾರಿಗೆ ಎಷ್ಟು ಸಮಯ ನೀಡಲಿಕ್ಕಿಲ್ಲ! ಅದಕ್ಕೇ ಬ್ರೆಜಿಲ್ ಫುಟ್ಬಾಲಿಗರ ಸ್ವರ್ಗವಾಗಿರುವುದು.
ಫುಟ್ಬಾಲ್ ಸಂಸ್ಕೃತಿ
ಸಾವಿರಾರು ವರ್ಷಗಳ ಇತಿಹಾಸವಿರುವ ಫುಟ್ಬಾಲ್ 1984ರಲ್ಲಿ ಸ್ಕಾಟಿಷ್ ವಲಸಿಗ ಜಾನ್ ಮಿಲ್ಲರ್‌ನಿಂದ ಬ್ರೆಜಿಲ್‌ಗೆ ಪರಿಚಯಿಸಲ್ಪಟ್ಟಿತು. ಸಾವೋ ಪೌಲೋ ನಗರದ ರೇಲ್ವೆ ಕಾಮಗಾರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಆತ ತನ್ನ 10 ವರ್ಷದ ಮಗ ಚಾರ್ಲ್ಸ್ ವಿಲಿಯಮ್ಸ್‌ನನ್ನು ಇಂಗ್ಲೆಂಡ್‌ನ ಬೆನ್ನಿಸ್ಟರ್ ಸ್ಕೂಲ್‌ಗೆ ಕಳುಹಿಸಿದ. ಅದಾಗಲೇ ಅಥ್ಲೀಟ್ ಆಗಿದ್ದ ಚಾರ್ಲ್ಸ್ ಫುಟ್ಬಾಲ್ ಅನ್ನು ಬಹಳ ಬೇಗ ಕರಗತ ಮಾಡಿಕೊಂಡದ್ದಷ್ಟೇ ಅಲ್ಲದೆ ಸೌಥಂಪ್ಟನ್ ಫುಟ್ಬಾಲ್ ಕ್ಲಬ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡ. ಇತ್ತ ಅಪ್ಪ ಜಾನ್ ಮಿಲ್ಲರ್ ಬ್ರೆಜಿಲ್‌ನಲ್ಲಿ ಸಾವೋ ಪೌಲೋ ಅಥ್ಲೆಟಿಕ್ ಕ್ಲಬ್ ಹುಟ್ಟುಹಾಕಿದ್ದ. ಆತನದೇ ಮಾರ್ಗದರ್ಶನದಲ್ಲಿ ಅದು ಅದರ ಪಾಡಿಗೆ ನಡೆದುಕೊಂಡು ಹೋಗುತ್ತಿತ್ತು. ಇಂಗ್ಲೆಂಡಿನಿಂದ ವಿದ್ಯಾಭ್ಯಾಸ ಮುಗಿಸಿ ಬಂದ ಚಾರ್ಲ್ಸ್ ಕಾಲ್ಚೆಂಡಿನ ಎಲ್ಲ ಪಟ್ಟುಗಳನ್ನು ಕಲಿತು ಬಂದಿದ್ದ. ಸಾವೋ ಪೌಲೋದಲ್ಲೂ ಕಲಿಸಿದ. ಅಲ್ಲಿಂದ ಬಳಿಕ ಹಿಂದುರುಗಿ ನೋಡದ ಬ್ರೆಜಿಲಿಯನ್ನರು ಗೋಲ್ ಪೋಸ್ಟ್ ಕಡೆಗೆ ಮುನ್ನುಗ್ಗುತ್ತಲೇ ಇದ್ದಾರೆ.
ಫುಟ್ಬಾಲ್ ನಿಸ್ಸಂಶಯವಾಗಿಯೂ ಬ್ರೆಜಿಲ್‌ನಲ್ಲಿ ಧರ್ಮ. ವಿಶ್ವಕಪ್ ಬ್ರೆಜಿಲಿಯನ್ನರ ಮನಸ್ಸನ್ನು ಒಗ್ಗೂಡಿಸುತ್ತದೆ. ಸಾಮಾನ್ಯವಾಗಿ ವಿಶ್ವಕಪ್ ನಡೆಯುವ ವರ್ಷದಲ್ಲೇ ಈ ದೇಶದ ಮಹಾಚುನಾವಣೆ ನಡೆಯುತ್ತದೆ. ಫುಟ್ಬಾಲ್ ಹುಟ್ಟುಹಾಕಿದ ರಾಷ್ಟ್ರೀಯ ವಿಚಾರಗಳ ಬಗ್ಗೆಯೇ ರಾಜಕಾರಣಿಗಳೂ ಬೇಳೆ ಬೇಯಿಸಿಕೊಳ್ಳುತ್ತಾರೆ. ಅನೇಕ ಫುಟ್ಬಾಲ್ ಆಟಗಾರರು ಅಲ್ಲಿನ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
ದೇಶಿ ಟೂರ್ನಿಯ ಖದರ್
ಇಲ್ಲಿ ಕಾಲ್ಚೆಂಡು ಬಲವಾಗಿ ಬೇರೂರಲು ಮತ್ತೊಂದು ಕಾರಣ ದೇಶೀಯ ಚಾಂಪಿಯನ್‌ಶಿಪ್. ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್ ಕ್ರೇಜ್‌ನ ಹೊರತಾಗಿಯೂ ಸ್ಥಳೀಯ ಟೂರ್ನಿಗಳು ಹೊಸ ಪರಪಂಚವನ್ನು ಸೃಷ್ಟಿಸುತ್ತವೆ. ಪ್ರತಿ ಸ್ಥಳೀಯ ಆಟಗಾರ ರಾಷ್ಟ್ರೀಯ ತಂಡದ ಕದ ತಟ್ಟುವಷ್ಟು ಸಮರ್ಥನಾಗಿರುವುದರಿಂದ ಅವರಿಗೆ ರಾಷ್ಟ್ರೀಯ ತಂಡ ನೀಡಿದ ಸಂತಸವನ್ನೇ ಸ್ಥಳೀಯ ತಂಡ ನೀಡುತ್ತದೆ. ಈ ಬಾರಿ ವಿಶ್ವಕಪ್ ಮುಗಿದ ಬಳಿಕ ಒಂದ್ಸಲ ನಮ್ ಜೊತೆ ಆಡಿ ನೋಡಿ ಎಂದು ಅಮೆಝಾನ್‌ನ ಬುಡಕಟ್ಟು ಜನರು ಇಂಗ್ಲೆಂಡ್ ತಂಡಕ್ಕೆ ಆಹ್ವಾನ ನೀಡಿದ್ದು ಸುಮ್ಮನೇ ಅಲ್ಲ. ಒಂದು ವೇಳೆ ಅಮೆಝಾನ್‌ನ ಈ ಬುಡಕಟ್ಟು ಜನಾಂಗ ಗೆದ್ದರೂ ಅಚ್ಚರಿಪಡಬೇಕಿಲ್ಲ.


ಬ್ರೆಜಿಲ್ ಅತ್ಯಂತ ಚುರುಕಿನ, ವೇಗದ, ಕೌಶಲಯುಕ್ತ ಮುಕ್ತ ಆಟಕ್ಕೆ ಪ್ರಸಿದ್ಧಿ. ಶಕ್ತಿಗಿಂತ ಚಾಕಚಕ್ಯತೆಗೇ ಹೆಚ್ಚು ಮಹತ್ವ ನೀಡುವ ಇವರಿಗೆ ತಾಂತ್ರಿಕತೆ ಬಹಳ ಮುಖ್ಯ. ಡ್ರಿಬ್ಲಿಂಗ್ (ಉರುಳಿಸುವಿಕೆ) ಇಲ್ಲಿನವರ ಆಟದ ಜೀವಾಳ, ಪೀಲೆ, ರೊನಾಲ್ಡಿನೊ, ಗ್ಯಾರಿಂಚಾ ಡ್ರಿಬ್ಲಿಂಗ್‌ನಲ್ಲಿ ಸಿದ್ಧಹಸ್ತರು. ಬ್ರೆಜಿಲ್ ಈ ಪರಿ ಯಾಕೆ ಯಶಸ್ಸು ಸಾಧಿಸಿದೆ ಎನ್ನುವುದರ ಬಗ್ಗೆ ಅಲ್ಲಿನ ಉದಯೋನ್ಮುಖ ಆಟಗಾರ ಆಸ್ಕರ್ ಮತ್ತು ಲೇಖಕ ಟಾಮ್ ವ್ಯಾಟ್ ಸೇರಿ ಒಂದು ಹೊತ್ತಗೆಯನ್ನೇ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಲ್ಲಿನ ಆಟಗಾರರ ಬೆಳವಣಿಗೆಯ ಒಳನೋಟಗಳಿವೆ. ಬ್ರೆಜಿಲ್‌ನ ಮಗುವಿಗೆ ಯಾರೂ ಆಟದ ತಾಂತ್ರಿಕತೆ ಬಗ್ಗೆ ತರಬೇತಿ ನೀಡುವುದಿಲ್ಲ. ಚೆಂಡು ಕಾಲಿಗೆ ಸಿಕ್ಕಲ್ಲಿಂದ ಉರುಳಿಸುತ್ತಲೇ ಹೇಗೆ ಗೋಲ್ ಮಾಡಬೇಕೆನ್ನುವುದನ್ನು ಅದು ಕಲಿಯುತ್ತದೆ ಎಂದು. ಹೀಗೆ ಮೊದಲು ಡ್ರಿಬ್ಲಿಂಗ್ ಅನ್ನು ಕರಗತ ಮಾಡಿಕೊಂಡೇ ಬೆಳೆದ ಆಟಗಾರ ತಾಂತ್ರಿಕತೆಯನ್ನು ಕಲಿಯುವುದು ಕ್ಲಬ್ ಪ್ರವೇಶಿಸಿದಾಗಲೇ.
ಬ್ರೆಜಿಲ್ ಫುಟ್ಬಾಲ್‌ನ ಅಗಾಧ ಯಶಸ್ಸಿಗೆ ಫುಟ್ಸಾಲ್ ಕೂಡ ಕಾರಣ ಎನ್ನುತ್ತಾರೆ ಆಸ್ಕರ್. 'ಹಾಫ್ ಫುಟ್ಬಾಲ್‌' ಅಂತಲೇ ಕರೆಯಲ್ಪಡುವ ಸಾಕರ್‌ನ ಈ ಕಿರಿ ನಮೂನೆ ಉರುಗ್ವೆ ಮತ್ತು ಬ್ರೆಜಿಲ್‌ಗಳಲ್ಲಿ 30ರ ದಶಕದಲ್ಲಿ ಪ್ರವರ್ಧಮಾನಕ್ಕೆ ಬಂತು. ಪುಟ್ಸಾಲ್‌ಗೆ ಬಳಸುವುದು ಪುಟ್ಟದಾದ ಒಳಾಂಗಣ ಕ್ರೀಡಾಂಗಣ. ಇಲ್ಲಿ ಪಿಚ್ ಬಹಳ ಚಿಕ್ಕದಾಗಿರುತ್ತದೆ. ಪ್ರತಿ ತಂಡದಲ್ಲಿ ಐವರು ಆಟಗಾರರು. ಅವರಲ್ಲಿ ಒಬ್ಬ ಗೋಲ್ ಕೀಪರ್. ಮಾಮೂಲಿ ಸಾಕರ್ ಚೆಂಡಿಗಿಂತ ಕಡಿಮೆ ಪುಟಿತ ಹೊಂದಿರುವ ಚಿಕ್ಕ ಚೆಂಡನ್ನು ಇಲ್ಲಿ ಬಳಸಲಾಗುತ್ತದೆ. ಅದೇ ರೀತಿ ಗೋಲ್ ಕೂಡ ಹತ್ತಿರದಲ್ಲೇ ಇರುತ್ತದೆ.  ಹೀಗಾಗಿ ನೀವು ಥಟ್ ಅಂತ ನಿರ್ಧಾರ ಕೈಗೊಂಡು ವೇಗವಾಗಿ ಆಡಲೇಬೇಕಾದ ಅನಿವಾರ್ಯತೆಯನ್ನು ಈ ಪರಿಸರ ಸೃಷ್ಟಿಸುತ್ತದೆ. ಸಣ್ಣ ಜಾಗದಲ್ಲಿ ಆಡಲ್ಪಡುವ ಈ ಕ್ರೀಡೆ ಆಟಗಾರನಿಂದ ಹೆಚ್ಚು ಕ್ರಿಯಾಶೀಲತೆ ಮತ್ತು ತಾಂತ್ರಿಕತೆಯನ್ನು ನಿರೀಕ್ಷಿಸುತ್ತದೆ. ಬ್ರೆಜಿಲ್‌ನಲ್ಲಿ ಫುಟ್ಬಾಲಿಗರಿಗಿಂತ ಹೆಚ್ಚು ಫುಟ್ಸಾಲ್ ಆಟಗಾರರೇ ಇದ್ದಾರೆ. ಫಿಫಾ ಮಾನ್ಯತೆಯಿರುವ ಸಾಕರ್‌ನ ಈ ನಮೂನೆಗೆ ಫುಟ್ಬಾಲ್‌ಗಿರುವಷ್ಟು ಪ್ರೇಕ್ಷಕರು ಮಾತ್ರ ಇಲ್ಲ. ಆದರೆ ಇಲ್ಲಿ ಯಶಸ್ವಿಯಾದ ಸಾಕಷ್ಟು ಮಂದಿ ಫುಟ್ಬಾಲ್‌ನಲ್ಲಿ ವೃತ್ತಿಪರರಾಗಿ ಮಿಂಚಿದ್ದಾರೆ. 1989ರಿಂದ ಈಚೆಗೆ ಫಿಫಾ ಫುಟ್ಸಾಲ್ ವಿಶ್ವಕಪ್ ನಡೆಸುತ್ತಿದ್ದು ಈವರೆಗೆ ನಡೆದ 7 ಪಂದ್ಯಾವಳಿಗಳಲ್ಲಿ ಬ್ರೆಝಿಲ್ 5 ಬಾರಿ ಚಾಂಪಿಯನ್ ಪಟ್ಟದಲ್ಲಿ ಕೂತಿದ್ದು ಒಂದು ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಫಿಫಾ ಫುಟ್ಸಾಲ್ ರ್ಯಾಂಕಿಂಗ್‌ನಲ್ಲಿ ಬ್ರೆಜಿಲ್‌ನ ಪುರುಷ, ಮಹಿಳೆಯರ ತಂಡಗಳೆರಡೂ ನಂ.1. ಒಂದು ದೇಶ ಫುಟ್ಬಾಲ್‌ನಲ್ಲಿ ಬೆಳೆಯಲು ಇದಕ್ಕಿಂತ ಹೆಚ್ಚು ಇನ್ನೇನು ಬೇಕು?


ಗಣೇಶ್ ಪ್ರಸಾದ್ ಕುಂಬ್ಳೆ
gprasad8@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.