ಅಂತಃಪಟದ ಆಚೀಚೆ

ಕೋಟಿ ಕೋಟಿ ದುಡ್ಡು ಸುರಿದು ಮಾಂಗಲ್ಯ ಕಟ್ಟುವ, ಅರ್ಥವಾಗದಿದ್ದರೂ ಮಂತ್ರಗಳನ್ನು ಗುಣುಗುಣಿಸುವ ಪರಂಪರೆ ಇರುವ ನಮ್ಮ ನಾಡಿನಲ್ಲಿ ಮಂತ್ರಮಾಂಗಲ್ಯದ ಸದ್ದು ಕೇಳಿಸುತ್ತಿದೆ. ಯುವಜನತೆಯಿಂದ ಬದಲಾವಣೆಯ ಕಿರಣಗಳು ಆಗೀಗಲಾದರೂ ಹೊಮ್ಮುತ್ತಿರುತ್ತವೆ. ದುಬಾರಿ ಮದುವೆ ಬಗ್ಗೆ ಚರ್ಚೆ ನಡೆದಿರುವ ಹೊತ್ತಿನಲ್ಲಿ ಒಂದು ಸರಳ ವಿವಾಹದ ಧ್ಯಾನ.
ಬೆಂಗಳೂರಿನ ದುಬಾರಿ ಚೌಲ್ಟ್ರಿಯಲ್ಲೊಂದು ಮದುವೆ. ಮಧ್ಯಮ ವರ್ಗದವರದ್ದು. ಹುಡುಗನಿಗೆ ಲಕ್ಷಾಂತರ ಸಂಬಳ. ಹುಡುಗಿಗೂ ಕಡಿಮೆಯೇನಿಲ್ಲ, ಆದರೆ ಈಗ ತಾನೇ ದುಡಿಮೆ ಶುರುವಾಗಿದೆ. ಚೌಲ್ಟ್ರಿಗೆ 1ರಿಂದ 5 ಲಕ್ಷ. ಒಂದು ಊಟಕ್ಕೆ 350ರಂತೆ 700 ಮಂದಿ ಆಹ್ವಾನಿತರು. ಇನ್ನು ಚೌಲ್ಟ್ರಿಯ ಅಲಂಕಾರ, ಲೈಟಿಂಗ್ಸ್ ಎಂದು ಮೇಲೊಂದು 50 ಸಾವಿರ. 25000ದಿಂದ 1 ಲಕ್ಷದವರೆಗೂ ಇದ್ದಿರಬಹುದಾದ ವರನ ಸೂಟ್, ವಧು ಒಂದೇ ದಿನದಲ್ಲಿ ತೊಡುವ ನಾಲ್ಕು ಸೀರೆಗಳ ರೇಟೂ ಐದಂಕಿಯಲ್ಲೇ ಇದ್ದೀತು. ಇನ್ನು ಅವಳ ಮಾಂಗಲ್ಯ ಸರ, ಮತ್ತಿಷ್ಟು ಬಂಗಾರ, ಶಾಸ್ತ್ರಕ್ಕೆಂದು ತಂದ ಛತ್ರಿಚಾಮರಗಳು, ಹಾರತುರಾಯಿಗಳು, ಬೆಳ್ಳಿಪಾತ್ರೆಗಳು ಇತ್ಯಾದಿ ಇತ್ಯಾದಿಗಳ ವೆಚ್ಚಕ್ಕಾಗಿ ವಧುವಿನ ಅಪ್ಪನ ಜೀವಮಾನದ ದುಡಿಮೆ ಚಟಪಟಗುಟ್ಟಿರುತ್ತದೆ. ಹಾಗೆಂದು ಅದನ್ನು ವರದಕ್ಷಿಣೆ ಎನ್ನಲಾಗುವುದಿಲ್ಲ. ಶಾಸ್ತ್ರ, ಹಿಂದಿನಿಂದ ನಡೆದುಕೊಂಡು ಬಂದಿದ್ದಲ್ಲವೇ?!
ಅಂತೂ ಬಂದವರೆಲ್ಲ ಸಾಲಿನಲ್ಲಿ ಹೋಗಿ ಉಡುಗೊರೆ ನೀಡಿ ವಧುವರರ ಅಕ್ಕಪಕ್ಕ ನಿಂತು ಪಟ ಹೊಡಿಸಿ ಊಟ ಮಾಡಿ ಹೋಗಿದ್ದಾಯ್ತು. ಅದ್ಧೂರಿ ಮದುವೆಯಾದದ್ದು ಸುದ್ದಿಯೇ ಹೊರತು ಮದುವೆಯಾದ ಮೇಲೆ ಅದೆಷ್ಟು ಕಾಲ ಒಟ್ಟಿಗಿರುವರೋ, ಹೇಗಿರುವರೋ ಕೇಳುವವರಿಲ್ಲ. ಇದಲ್ಲವೇ ದುರಂತ?!
ಸರ್ಕಾರ ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕಲು ತೆರಿಗೆ ವಿಧಿಸುವ ಹೊಸ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದೇ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಹೌದು, ಇದು ಸರ್ಕಾರ ಹೇರುವ ಪ್ರಶ್ನೆಯಾಗಬಾರದು. ಆದರೆ ಸರಳ ವಿವಾಹ ವೈಯಕ್ತಿಕ ನಿರ್ಧಾರವಾಗಬೇಕು. ಪ್ರಜ್ಞಾವಂತ ಯುವಕರ ಮೊದಲ ಆಯ್ಕೆಯಾಗಬೇಕು. ಮದುವೆಗೆ ಮಾಡುವ ಖರ್ಚನ್ನೇ ಅವರಿಬ್ಬರೂ ಜೀವನಪರ್ಯಂತ ಸಂಸಾರ ಮಾಡಲು ಜಾಣತನದಿಂದ ಉಪಯೋಗಿಸಬಹುದಲ್ಲವೇ?
ಇಂಥ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಗೀತ ರಚನೆಕಾರ ಕವಿರಾಜ್, ಕುವೆಂಪು ಮಂತ್ರ ಮಾಂಗಲ್ಯ ಶೈಲಿಯಲ್ಲಿ, ಅದೂ ಕುಪ್ಪಳ್ಳಿಯ ಹೇಮಾಂಗಣ ಸಭಾಂಗಣದಲ್ಲಿ ಹೊಸಬಾಳಿನ ಹೊಸಿಲು ದಾಟಿ ಯುವಜನತೆಗೆ ಆದರ್ಶಪ್ರಾಯರಾಗಿದ್ದಾರೆ. ಪತ್ನಿ ರಾಜೇಶ್ವರಿ, ಶಿವಮೊಗ್ಗದವರು. ಬೆಂಗಳೂರಿನ ಬಿಟಿ ಕಂಪನಿಯೊಂದರಲ್ಲಿ ಉದ್ಯೋಗಿ. ಕೆಲವು ತಿಂಗಳ ಹಿಂದಷ್ಟೇ ಪರಿಚಯವಾಗಿ, ಪ್ರೀತಿಯಾಗಿ ಅದಕ್ಕೆ ಮನೆಯವರ ಒಪ್ಪಿಗೆಯ ಮುದ್ರೆಯೂ ಬಿತ್ತು. ಇವರ ಮದುವೆಗೆ ಪ್ರತಿಜ್ಞಾವಿಧಿ ಬೋಧಿಸಿದವರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಅವರದೂ ಮಂತ್ರಮಾಂಗಲ್ಯ ಶೈಲಿಯ ಮದುವೆಯೇ.
ಏನಿದು ಮಂತ್ರಮಾಂಗಲ್ಯ? ಕವಿರಾಜ್ ವಿವಾಹ ವಿಚಾರ, ವೈಭೋಗವನ್ನು ಅವರದೇ ಮಾತಿನಲ್ಲಿ ಕೇಳೋಣ ಬನ್ನಿ:
ತೀರ್ಥಹಳ್ಳಿ ಬಳಿಯ ಯಡೂರಿನವನಾದ ನನಗೆ ಮೊದಲಿಂದಲೂ ಕುವೆಂಪುವಿನ ಆದರ್ಶಗಳಿಷ್ಟ. ಹೀಗಾಗಿ ಅವರು ಹುಟ್ಟು ಹಾಕಿದ ಮಂತ್ರ ಮಾಂಗಲ್ಯ ಶೈಲಿಯಲ್ಲಿ ಮದುವೆಯಾದೆ. ಸಾಂಪ್ರದಾಯಿಕ ಶೈಲಿಗೆ ವಿರೋಧವಾಗಿರುವುದು ಮಂತ್ರಮಾಂಗಲ್ಯ ಶೈಲಿ. ಎಲ್ಲರೂ ಸಾಂಪ್ರದಾಯಿಕವಾಗಿ ಮದುವೆಯಾಗುತ್ತಾರೆ. ಆದರೆ ಹೆಚ್ಚಿನ ಬಾರಿ ಸಂಸ್ಕೃತದಲ್ಲಿರುವ ಶ್ಲೋಕಗಳ ಅರ್ಥ, ಹೇಳುವ ಪುರೋಹಿತರಿಗೂ ಗೊತ್ತಿರಲ್ಲ. ಮಾಡುವ ಶಾಸ್ತ್ರಗಳು ಏಕೆ ಮಾಡುತ್ತಿದ್ದೇವೆ, ಏನು ಮಾಡುತ್ತಿದ್ದೇವೆ ಎಂದು ಮಾಡುವವರಿಗೂ ತಿಳಿದಿರುವುದಿಲ್ಲ. ಹಿಂದೆ ಯಾವುದೋ ಋಷಿಮುನಿಗಳು ಏನೋ ಕಾರಣ ಇಟ್ಟುಕೊಂಡು ಈ ಮದುವೆಯ ಶಾಸ್ತ್ರ ಸಂಪ್ರದಾಯಗಳನ್ನು ಹುಟ್ಟುಹಾಕಿದರು. ಅವರೂ ನಮ್ಮಂತೆಯೇ ಮನುಷ್ಯರು. ಹಾಗೆಂದು ಯುಗಯುಗಗಳೇ ಕಳೆದರೂ ಅರ್ಥವೇ ಗೊತ್ತಿಲ್ಲದೆ ಅದನ್ನು ಆಚರಿಸಬೇಕಿಲ್ಲ. ಮೂಢನಂಬಿಕೆಗಳನ್ನು ಬದಿಗಿರಿಸಿ ವೈಜ್ಞಾನಿಕವಾಗಿ ಚಿಂತಿಸಬೇಕಾದ ಅಗತ್ಯವಿದೆ. ಈ ಪದ್ಧತಿಯಲ್ಲಿ ಜಾತಿ ಅಡ್ಡ ಬರಲ್ಲ. ಮದುವೆಗೆ ಹತ್ತಿರದವರೊಂದಿಷ್ಟು ಮಂದಿ ಇದ್ದರೆ ಸಾಕು. ವರದಕ್ಷಿಣೆ, ದುಂದುವೆಚ್ಚ, ಉಡುಗೊರೆ ತೆಗೆದುಕೊಳ್ಳುವುದು ಎಲ್ಲವೂ ನಿಷಿದ್ಧ. ಮಾಂಗಲ್ಯ ಕಟ್ಟುವುದು ಕೂಡಾ ನಮ್ಮ ಆಯ್ಕೆಗೆ ಬಿಟ್ಟಿದ್ದು. ಏಕೆಂದರೆ ಮದುವೆ ಮನಸ್ಸಿಗೆ ಸಂಬಂಧಿಸಿದ ವಿಚಾರ. ಮದುವೆ ಎಷ್ಟು ವಿಜೃಂಭಣೆಯಿಂದ ಆಯ್ತು ಎಂಬುದಕ್ಕಿಂತಾ ನಂತರದ ದಿನಗಳಲ್ಲಿ ಹೇಗೆ ಬದುಕುತ್ತೀವೆಂಬುದು ತಾನೇ ಮುಖ್ಯ? ಇದರಲ್ಲಿ ವಧುವರರಿಬ್ಬರೂ ಮೂಢನಂಬಿಕೆ ಆಚರಿಸುವುದಿಲ್ಲ, ಸರಳವಾಗಿ ಜೀವನ ನಡೆಸುತ್ತೇವೆ ಇತ್ಯಾದಿ ಪ್ರತಿಜ್ಞೆ ಕೈಗೊಳ್ಳುತ್ತೇವೆ, ಅದೂ ಅಚ್ಚಗನ್ನಡದಲ್ಲಿ.
ಕವಿರಾಜ್ ತಮ್ಮ ಅಭಿಮಾನಿಗಳಿಗೆ ವೈಜ್ಞಾನಿಕವಾಗಿ ಚಿಂತನೆ ಮಾಡಿ, ಅರ್ಥಹೀನ ಆಚರಣೆಗಳನ್ನು ಕುರುಡಾಗಿ ಬೆಂಬತ್ತುವ ಬದಲು ಮೂಢನಂಬಿಕೆ, ಆಚಾರಗಳನ್ನು ಬದಿಗೊತ್ತಿ ಪ್ರಗತಿಪರರಾಗಲು ಕರೆ ನೀಡಿದ್ದಾರೆ. ಆಚಾರ ಹೇಳಿ ಬದನೆಕಾಯಿ ತಿನ್ನುವ ವರ್ಗದವರ ನಡುವೆ ಕವಿರಾಜ್ ಭಿನ್ನರಾಗಿ ನಿಂತಿರುವುದು ನಿಜಕ್ಕೂ ಅಭಿನಂದನಾರ್ಹ ಅಲ್ಲವೇ?
ಮಂತ್ರ ಮಾಂಗಲ್ಯದ ಆರಂಭ
ನೀವು ಲೋಕವನ್ನಾಗಲಿ, ಪುರೋಹಿತಶಾಹಿಯನ್ನಾಗಲಿ ಪ್ರತಿಭಟಿಸುವ ಬದಲಾಯಿಸುವ ಅಗತ್ಯ ಖಂಡಿತ ಇಲ್ಲ. ನೀವು ಪ್ರಾಮಾಣಿಕರಾಗಿದ್ದರೆ ನಾನು ಹೇಳುವ ಒಂದು ಸಣ್ಣ ಸುಧಾರಣೆ ನಿಮ್ಮ ಜೀವನದಲ್ಲಿ ಮಾಡಿಕೊಳ್ಳಿ. ವರದಕ್ಷಿಣೆ ತೆಗೆದುಕೊಳ್ಳದೆ, ಶಾಸ್ತ್ರಾಚಾರಗಳಾವುದನ್ನೂ ಮಾಡದೆ, ನಿಮ್ಮ ಅಂತಸ್ತಿನ ಪ್ರದರ್ಶನ ಮಾಡಲು ದುಂದು ಮಾಡದೆ ಸರಳವಾಗಿ ಮದುವೆ ಮಾಡಿಕೊಳ್ಳಿ. ಇದ್ಯಾವ ಮಹಾಕ್ರಾಂತಿ ಎಂದು ನಿಮಗನ್ನಿಸಬಹುದು. ನೀವು ನಂಬಿದ ಮೌಲ್ಯಗಳ ಆದರ್ಶಗಳ ಪರವಾಗಿ ನಿಂತು ಗೊಡ್ಡು ಸಂಪ್ರದಾಯಗಳನ್ನು ಎದುರಿಸಿ. ಅವುಗಳಿಗಾಗಿ ನಿಲ್ಲುವ ಆ ಅದ್ಭುತ ಅನುಭವ ಆನಂದ ಎಂಥದೆಂದು ನಿಮಗೆ ಗೊತ್ತಾಗುತ್ತದೆ. ಭಾರತ ನಿಮ್ಮ ಕಣ್ಣೆದುರಿಗೇ ಬದಲಾಗುವುದನ್ನು ನೀವು ಕಾಣುತ್ತೀರಿ. ಇದು ನಮ್ಮ ರಾಷ್ಟ್ರಕವಿ ಕುವೆಂಪು ಅವರು ನಾಡಿಗೆ ಸಾರಿದ ತಮ್ಮ ತತ್ವ. ಕೇವಲ ಸಾರಲಿಲ್ಲ, ತಾವೇ ಸ್ವತಃ ಆಚರಣೆಗೆ ತಂದರು. ಮಂತ್ರಮಾಂಗಲ್ಯ ಎಂಬ ಶೈಲಿ ಹುಟ್ಟು ಹಾಕಿದ ಪುಟ್ಟಪ್ಪಜ್ಜನ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸರಳ ವಿವಾಹದಲ್ಲೇ ದಾಂಪತ್ಯ ಬದುಕಿಗಡಿ ಇಟ್ಟವರು. ಮೊದಲ ಮಂತ್ರಮಾಂಗಲ್ಯ ಧಾರಣೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರದೇ. ಇವರ ಮದುವೆಯಲ್ಲಿದ್ದದ್ದು ಕೇವಲ 36 ಮಂದಿ! ಬಂಧುಬಳಗಕ್ಕೆಲ್ಲ ಮದುವೆಗೆ ಆಹ್ವಾನ ಇರದಿದ್ದರೂ ಎಲ್ಲರಿಗೂ ವಿರಾಮವಾದಾಗ ಮನೆಗೆ ಬಂದು ಆದರಾತಿಥ್ಯ ಸ್ವೀಕರಿಸಿ ವಧೂವರರನ್ನು ಆಶೀರ್ವದಿಸಲು ಕುವೆಂಪು ಕೋರಿದ್ದರು. ಅಲ್ಲದೆ ಕುವೆಂಪು ಮತ್ತು ತೇಜಸ್ವಿ ತಮ್ಮ ಎಂದಿನ ದಿನಗಳಲ್ಲಿ ಧರಿಸುವ ಉಡುಗೆಯನ್ನೇ ಅಂದೂ ತೊಟ್ಟಿದ್ದರು. ಅಷ್ಟೇ ಏಕೆ, ಮಾಂಸಾಹಾರಿಗಳ ಮದುವೆಯಲ್ಲೂ ನಿಷಿದ್ಧವಾಗಿದ್ದ ಬಾಡೂಟ ಮಾಡಿಸಿ ಸಾಂಪ್ರದಾಯಿಕ ಮದುವೆ ಆಚರಣೆಗೆ ಸೆಡ್ಡು ಹೊಡೆದಿದ್ದರು. ಕುವೆಂಪು ಅವರೇ ಮದುವೆಯ ಪೌರೋಹಿತ್ಯ ವಹಿಸಿದ್ದರು. ಇಡಿ ಮದುವೆಗೆ ಒಟ್ಟು ಖರ್ಚಾದದ್ದು ಕೇವಲ 800. ಆದರೆ ತೇಜಸ್ವಿ- ರಾಜೇಶ್ವರಿ ದಾಂಪತ್ಯ ಬದುಕು ಬಂಗಾರ ಎಂಬುದು ಎಲ್ಲರಿಗೂ ಗೊತ್ತು. ಅದಲ್ಲವೇ ಮದುವೆಯ ನಿಜ ಯಶಸ್ಸು?
= ರೇಶ್ಮಾರಾವ್ ಸೊನೆ
Çreshmaraksha.rao7@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


