ಖುಷಿ

3ಡಿ ಸ್ಮಾರ್ಟಿ

3ಡಿ ಸ್ಮಾರ್ಟಿ
Published On :

3ಡಿಯಲ್ಲಿ ಜಗತ್ತನ್ನು ನೋಡಬಹುದೇ ಅಂದುಕೊಂಡಾಗ ಥಿಯೇಟರ್‌ನಲ್ಲಿ ಕನ್ನಡಕ ಧರಿಸಿ ಖುಷಿಪಟ್ಟೆವು. ಮಲ್ಟಿಫ್ಲೆಕ್ಸ್‌ಗಳು ಬೋರಾದಾಗ ಮನೆಯಲ್ಲೇ ಕೂತು 3ಡಿ ಟಿವಿ ನೋಡಿ ಚಕಿತರಾದೆವು. ಇದೆಲ್ಲ ಆಗುವಷ್ಟೊತ್ತಿಗೆ ಮೋದಿಯ 3ಡಿ ಮೋಡಿಯನ್ನು ಲೋಕಸಭಾ ಚುನಾವಣೆಯಲ್ಲಿ ಕಂಡೆವು. ಈಗ ಅಮೆಝಾನ್ ಸಂಸ್ಥೆಯು 3ಡಿ ತಂತ್ರಜ್ಞಾನವನ್ನು ಮೊಬೈಲ್‌ನಲ್ಲಿ ತರುತ್ತಿದೆ.
ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಅಮೆಝಾನ್ ಧುಮುಕಲಿದೆ ಎಂಬ ಮಾತುಗಳು ಕಳೆದ ಒಂದು ವರ್ಷದಿಂದ ಕೇಳಿಬಂದಿತ್ತು. ಈಗ ದೊಡ್ಡ ತಯಾರಿ ಹಾಗೂ ಅಸ್ತ್ರದೊಂದಿಗೆ ಅಮೆಝಾನ್ ಕೂಡ ಸ್ಮಾರ್ಟಿಯಾಗುತ್ತಿದೆ. ಇದೇ ಜೂ.18ರಂದು 3-ಡಿ ತಂತ್ರಜ್ಞಾನದ ಮೊಬೈಲ್‌ನೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. ಈ ಮೂಲಕ ಮೊಬೈಲ್ ತಂತ್ರಜ್ಞಾನದಲ್ಲಿ ಹೊಸದೊಂದು ಸಂಚಲನ ಮೂಡಿಸಲು ಅಮೆಝಾನ್ ನಿರ್ಧರಿಸಿದೆ.
ಅಮೆಝಾನ್ ಕಂಪನಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋ ತುಣುಕು ನೋಡಿದರೆ ಈ 3ಡಿ ಸ್ಮಾರ್ಟಿ ಬಗ್ಗೆ ಸಾಕಷ್ಟು ಕುತೂಹಲ ಮೂಡುತ್ತಿದೆ. ಇನ್ನು ಹತ್ತು ದಿನಗಳಲ್ಲಿ ಈ ಸ್ಮಾರ್ಟ್‌ಫೋನ್ ಮೊಬೈಲ್ ಜಗತ್ತಿಗೆ ಅಧಿಕೃತವಾಗಿ ಬರುತ್ತದೆ. ಆದರೆ 3ಡಿ ತಂತ್ರಜ್ಞಾನದ ಕೌತುಕಗಳು ಗ್ರಾಹಕರ ನಿರೀಕ್ಷೆ ಹೆಚ್ಚಿಸುತ್ತಿದೆ.
ಈಗಿರುವ ಮಾಹಿತಿಗಳ ಪ್ರಕಾರ, 3ಡಿ ಸ್ಮಾರ್ಟಿಯು ಪಕ್ಕಾ 3ಡಿ ಟಿವಿ ಥರ ಕೆಲಸ ಮಾಡುವುದಿಲ್ಲ. ಆದರೆ ಇದರಲ್ಲಿನ ಇಂಟರ್‌ಫೇಸ್‌ಗಳು 3ಡಿ ತಂತ್ರಜ್ಞಾನವನ್ನು ಆಧರಿಸಿ ಇರುತ್ತವೆ. ಮೊಬೈಲ್‌ನಲ್ಲಿನ ಐಕಾನ್‌ಗಳು 3ಡಿ ಇಮೇಜ್ ಹೊಂದಿರುತ್ತವೆ. ಇದರ ಜತೆಗೆ 3ಡಿ ವಾಲ್‌ಪೇಪರ್ ಹಾಗೂ ವಿಡಿಯೋಗಳನ್ನೂ ಇದರಲ್ಲಿ ನೋಡಬಹುದಾಗಿದೆ. ಆದರೆ 3ಡಿ ಕ್ಯಾಮೆರಾ ಲಭ್ಯವಿಲ್ಲದ ಕಾರಣ ಫೋಟೋ ಅಥವಾ ವಿಡಿಯೋ ತೆಗೆಯುವುದು ಅಸಾಧ್ಯ. ಆದರೆ ಕಾನ್ಸೆಪ್ಟ್ ಹೊರಬಿದ್ದಾಗ ಕ್ಯಾಮೆರಾವನ್ನು ಅದೇ ರೀತಿ ಅಭಿವೃದ್ಧಿಪಡಿಸುವುದಾಗಿ ಅಮೆಝಾನ್ ಹೇಳಿಕೊಂಡಿತ್ತು.
ಈಗಾಗಲೇ ಎಲ್‌ಜಿ ಹಾಗೂ ಎಚ್‌ಟಿಸಿಯಲ್ಲಿ 3ಡಿ ಫೋನ್‌ಗಳು ನೆಪಕ್ಕೆ ಬಂದಿದ್ದರೂ ತಾಂತ್ರಿಕವಾಗಿ ಅಷ್ಟು ಲಾಯಕ್ಕಾಗಿಲ್ಲ. ಇದೇ ಕಾರಣದಿಂದ ಅಮೆಝಾನ್ ಸ್ಮಾರ್ಟಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿದ್ದು. 3ಡಿ ಹಾಗೂ ಗೆಸ್ಚರ್ ಇಂಟರ್‌ಫೇಸ್ ತಂತ್ರಜ್ಞಾನಕ್ಕಾಗಿ ಎರಡು ಫ್ರಂಟ್ ಕ್ಯಾಮೆರಾ ಅಳವಡಿಸಲಾಗಿದೆ. ಮೊಬೈಲ್‌ನ ಮೇಲ್ಭಾಗದ ಎರಡು ತುದಿಯಲ್ಲಿ ಈ ಕ್ಯಾಮೆರಾ ಅಳವಡಿಸಲಾಗಿದ್ದು, ಇದು ಬಳಕೆದಾರರ ರೆಟಿನಾ ಚಲನೆ ಆಧರಿಸಿ ಕಾರ್ಯನಿರ್ವಹಿಸುತ್ತದೆ.
ಇದರಿಂದಾಗಿ ಟಚ್‌ಸ್ಕ್ರೀನ್ ಮೊಬೈಲ್ ಐ ಸ್ಕ್ರೀನ್ ಮೊಬೈಲ್ ಆಗಬಹುದು. ಸ್ಕ್ರೀನ್ ಮುಟ್ಟದೇ ಸ್ಲೈಡ್ ಬದಲಾಯಿಸಬಹುದು. ಕಣ್ಣಿನ ಚಲನೆ ಆಧರಿಸಿಯೇ ಸ್ಲೈಡ್ ಬದಲಾಗುತ್ತದೆ. ಇದಲ್ಲದೇ ಮೊಬೈಲ್ ಅನ್ನು ಟಿಲ್ಟ್ ಹಾಗೂ ಪ್ಯಾನ್ ಮಾಡುವ ಮೂಲಕವು ಸ್ಲೈಡ್ ಬದಲಿಸಲು ಅವಕಾಶವಿದೆ. ಈ ಕ್ಯಾಮೆರಾದಲ್ಲಿನ ಸೆನ್ಸಾರ್ ಕೂಡ 3ಡಿ ತಂತ್ರಜ್ಞಾನಕ್ಕೆ ನೆರವಾಗುತ್ತದೆ. ರೆಟಿನಾದ ಚಲನೆ ಆಧರಿಸಿಯೇ ಇಮೇಜ್‌ಗಳ 3-ಡೈಮೆನ್ಷನ್ ನೋಡಬಹುದಾಗಿದೆ. ಇದರೊಂದಿಗೆ ಗೇಮಿಂಗ್‌ಗೂ ಇದು ಇನ್ನಷ್ಟು ಆಸಕ್ತಿ ಮೂಡಿಸಲಿದೆ ಎನ್ನುವುದು ತಂತ್ರಜ್ಞರ ವಾದವಾಗಿದೆ.
ಈ ಮೊಬೈಲ್‌ನಿಂದ ಆನ್‌ಲೈನ್ ಶಾಪಿಂಗ್‌ಗೆ ಹೊಸ ವ್ಯಾಖ್ಯಾನ ದೊರೆಯುವ ಸಾಧ್ಯತೆಯೂ ಇದೆ. ಅಮೇಝಾನ್ ಇ-ಶಾಪಿಂಗ್‌ನಲ್ಲಿರುವ ಉತ್ಪನ್ನಗಳನ್ನು 3ಡಿ ತಂತ್ರಜ್ಞಾನದ ಮೂಲಕ ವೀಕ್ಷಿಸಿ ಖರೀದಿಸಬಹುದಾದ ಅವಕಾಶ ದೊರೆಯುತ್ತದೆ. ಇನ್ನೊಂದೆಡೆ ಗೂಗಲ್ ಪ್ಲೇಯಂತೆಯೇ ಅಮೆಝಾನ್ ಅಪ್ಲಿಕೇಷನ್ ಮಾರುಕಟ್ಟೆಯೂ ಇದರಿಂದ ಇನ್ನಷ್ಟು ಖ್ಯಾತಿಗೆ ಬರಬಹುದು. ಅಂದಹಾಗೆ 3ಡಿ ಮೊಬೈಲ್ ಜತೆಗೆ ಇನ್ನೆರಡು ಸ್ಮಾರ್ಟಿಯನ್ನು ಮಾರುಕಟ್ಟೆಗೆ ಈಗಲೇ ತರುವ ಸಾಧ್ಯತೆಯಿದೆ.
ಆ್ಯಂಡ್ರಾಯ್ಡ್ ಆಧಾರಿತ ಫೈರ್ ಅಮೆಝಾನ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಸ್ಮಾರ್ಟಿಯು 4.7 ಇಂಚು ದೊಡ್ಡದಿದೆ. ನೋಡಲು ಅಷ್ಟೊಂದು ಸುಂದರವಾಗಿರದಿದ್ದರೂ ಒಂದು ಕ್ಷಣಕ್ಕೆ ಆ್ಯಪಲ್‌ನ ಕಾಪಿಯಿದ್ದಂತೆ ಅನಿಸುತ್ತದೆ. ಸ್ಕ್ರೀನ್ ಮೇಲೆ ಹಾಗೂ ಕೆಳಗೆ ಅನವಶ್ಯವಾಗಿ ಹೆಚ್ಚಿನ ಸ್ಪೇಸ್ ನೀಡುವ ಮೂಲಕ ಹೇಸಿಗೆ ಮಾಡಿದ್ದಾರೆ. ಕ್ವಾಡ್‌ಕೋರ್ ಕ್ವಾಲಾಕಾಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್, 2 ಜಿಬಿ ರ್ಯಾಮ್, 720 ಪಿ ಎಚ್‌ಡಿ ರೆಸಲೂಷನ್ ಹೊಂದಿದೆ.

- ರಾಜೀವ ಹೆಗಡೆ
meet.hegde@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.