ಒಬ್ಬ ಸ್ಮಾರ್ಟ್ ಪಿಎ
ಬ್ಯುಸಿ ದಿನಗಳಲ್ಲಿ ನಮ್ಮ ಕೆಲಸದಲ್ಲಿ ಎಡವಟ್ಟಾದಾಗ ಹೆಚ್ಚಿನವರು ಹೆಂಡತಿ, ಅಮ್ಮ, ತಂಗಿ ಮೇಲೆ ಕೂಗಾಡುತ್ತಾರೆ...

ಬ್ಯುಸಿ ದಿನಗಳಲ್ಲಿ ನಮ್ಮ ಕೆಲಸದಲ್ಲಿ ಎಡವಟ್ಟಾದಾಗ ಹೆಚ್ಚಿನವರು ಹೆಂಡತಿ, ಅಮ್ಮ, ತಂಗಿ ಮೇಲೆ ಕೂಗಾಡುತ್ತಾರೆ. ಸ್ವಲ್ಪ ಹೆಚ್ಚು ದುಡ್ಡಿರುವವರು ಆಪ್ತ ಸಹಾಯಕರನ್ನು ನೇಮಿಸಿಕೊಂಡಿರುತ್ತಾರೆ. ಸರ್ಕಾರದ ದುಡ್ಡಿನಲ್ಲಿ ಜೀವನ ನಡೆಸುವವರು ಕೈಗೊಂದು, ಕಾಲಿಗೊಂದು ಕೆಲಸಗಾರರನ್ನು ಇರಿಸಿಕೊಳ್ಳುತ್ತಾರೆ. ಆದರೆ ಇಂತಹ ಯಾವುದೇ ರಗಳೆಗಳಿಲ್ಲದೇ ನಿಮ್ಮ ದಿನಗಳನ್ನು ಅದ್ಭುತವಾಗಿ ನಿರ್ವಹಿಸಲು ಗೂಗಲ್ ಇಂಕ್ ವೇದಿಕೆ ರೂಪಿಸಿದೆ.
ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗೆ ಕಿಟ್‌ಕ್ಯಾಟ್ ಎಂಟ್ರಿ ಕೊಡುತ್ತಿದ್ದಂತೆ ಗೂಗಲ್ ನೌ ಎಂಬ ಇಂಟರ್ಯಾಕ್ಟಿವ್ ಸರ್ಚ್ ಅಪ್ಲಿಕೇಷನ್ ಬಂದಿತ್ತು. ಆದರೆ ಎರಡು ದಿನದ ಹಿಂದೆ ಗೂಗಲ್ ನೌ ಮತ್ತಷ್ಟು ಅಪ್‌ಡೇಟ್ ಆಗಿದ್ದು ಪಕ್ಕಾ ಆಪ್ತ ಸಹಾಯಕ ಅಥವಾ ಹೆಂಡತಿಯ ಕೆಲಸವನ್ನು ಇದು ಮಾಡಬಹುದು. ಹಾಗಂದ ಮಾತ್ರಕ್ಕೆ ಅವರು ಮಾಡುವ 'ಎಲ್ಲ' ಕೆಲಸವನ್ನೂ ಗೂಗಲ್ ನೌನಿಂದ ನಿರೀಕ್ಷಿಸಬೇಡಿ.
ಸಾಮಾನ್ಯವಾಗಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ರಾತ್ರಿಯಾಗುತ್ತಿದ್ದಂತೆ ಮನೆ ಯಜಮಾನರಿಂದ ಸಂದೇಶಗಳು ಬರಲಾರಂಭಿಸುತ್ತವೆ, 'ಮನೆಗೆ ಬರುವ ಆಲೋಚನೆ ಇದ್ಯಾ ಅಥವಾ ಅಲ್ಲೇ ಮಲಗ್ತೀರಾ?' ಎಂಬ ಸಂದೇಶ ದಿನಕ್ಕೊಂದು ಇದ್ದೇ ಇರುತ್ತದೆ. ಇದು ಕೇವಲ ಮನೆಗೆ ಹೋಗುವುದಕ್ಕೆ ಮಾತ್ರವಲ್ಲ, ಮಧ್ಯಾಹ್ನದ ಊಟ, ಮತ್ತ್ಯಾವುದೇ ಮಾತ್ರೆ ತೆಗೆದುಕೊಳ್ಳುವುದಿದ್ದರೆ ಹೀಗೆ ಪ್ರತಿಯೊಂದಕ್ಕೂ ನೆನಪಿಸುವ ಅಗತ್ಯ ಸೃಷ್ಟಿಸಿಕೊಂಡಿರುತ್ತೇವೆ.
ಇದಕ್ಕೆ ಗೂಗಲ್ ನೌ ಪರಿಹಾರ ಒದಗಿಸಬಲ್ಲದು. ಈ ರೀತಿಯ ಸೆಟ್ಟಿಂಗ್ ಮಾಡುವುದು ನಿಮಗೆ ಕಷ್ಟವೆಂದಾದರೆ ನಿಮಗೆ ಪ್ರತಿದಿನ ನೆನಪಿಸುವವರಿಗೆ ಇಂಥದ್ದೊಂದು ಸೆಟ್ಟಿಂಗ್ ಮಾಡಲು ಮೊಬೈಲ್ ಕೊಟ್ಟುಬಿಡಿ.
ಈ ಅಪ್ಲಿಕೇಷನ್ ಬಹುತೇಕ ಎಲ್ಲ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಇನ್‌ಬಿಲ್ಟ್ ಆಗಿರುತ್ತದೆ. ಆದರೆ ಅದಕ್ಕೆ ಸೈನ್ ಇನ್ ಆಗಬೇಕಾಗುತ್ತದೆ. ನಿಮ್ಮ ಗೂಗಲ್ ಅಕೌಂಟ್‌ನಿಂದ ಸೈನ್ ಇನ್ ಆಗಿ ಇಂಟರ್ಯಾಕ್ಟೀವ್ ಸರ್ಚ್ ಎಂಜಿನ್ ಜಗತ್ತಿಗೆ ಪ್ರವೇಶಿಸಬಹುದು. ಇದರಲ್ಲಿ ಸರ್ಚ್, ರಿಮೈಂಡರ್, ಕಾಲ್, ಮೆಸೇಜಿಂಗ್, ಮ್ಯಾಪ್ ಸೇರಿದಂತೆ ಹತ್ತಾರು ಅಂಶಗಳನ್ನು ಸೇರಿಸಲಾಗಿದೆ.
ಸರ್ಚ್ ಎಂಜಿನ್‌ನಲ್ಲಿ ನಿಮಗೆ ಬೇಕಾಗಿರುವುದನ್ನು ಹುಡುಕಲು ಟೈಪ್ ಮಾಡಬೇಕೆಂದಿಲ್ಲ, ನಿಮ್ಮ ಇಂಗ್ಲಿಷ್ ಉತ್ತಮವಾಗಿದ್ದರೆ ಧ್ವನಿ ಗ್ರಹಣದ ಮೂಲಕವೇ ಸರ್ಚ್ ಮಾಡಬಹುದು. ಇನ್ನು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಯಾವುದೇ ವ್ಯಕ್ತಿಗೆ ದೂರವಾಣಿ ಕರೆ ಅಥವಾ ಸಂದೇಶ ಕಳುಹಿಸುವಾಗ 'ಕಾಲ್ ರಾಧೆ', 'ಟೆಕ್ಸ್ಟ್ ರಾಧೆ' ಎಂದು ಹೇಳಿದರೆ ನೇರವಾಗಿ ಆ ಕಾರ್ಯಪಾಲನೆಯಾಗುತ್ತದೆ. ನಿಮ್ಮ ಮೊಬೈಲ್ ಮಾತು ಕೇಳಿಸಬಹುದು.
ಹೊಸ ಅಪ್‌ಡೇಟ್ ಪ್ರಕಾರ ಆಸಕ್ತಿದಾಯಕವಾಗಿರುವುದು ರಿಮೈಂಡರ್ ಹಾಗೂ ನಿಮ್ಮನ್ನು ಫಾಲೋ ಮಾಡುವ ಸ್ಮಾರ್ಟಿ. ಇಂಟರ್ನೆಟ್ ಸಂಪರ್ಕವಿರುವ ಸ್ಮಾರ್ಟ್‌ಫೋನ್‌ಲ್ಲಿ ಮಾತ್ರ ಇದು ಸಾಧ್ಯ. ನೀವು ಕೆಲಸ ಮಾಡುವ ಪ್ರದೇಶ ಹಾಗೂ ಮನೆಯಿರುವ ಪ್ರದೇಶವನ್ನು ಅಲ್ಲಿ ಸೆಟ್ ಮಾಡಿದರೆ ಅನಾಯಾಸವಾಗಿ ಪ್ರತಿ ಗಂಟೆಗೂ ನಿಮ್ಮೊಡನೆ ಫೋನ್ ಮಾತನಾಡುತ್ತಿರುತ್ತದೆ. ಮನೆಯಿಂದ ಹೊರಡುವ ಸಮಯ ಬಂತೆಂದರೆ ಕ್ಷಣ ಕ್ಷಣಕ್ಕೂ ಸಂದೇಶ ಕಳುಹಿಸುತ್ತಿರುತ್ತದೆ. 'ಕೆಲಸಕ್ಕೆ ಹೋಗಲು 28 ನಿಮಿಷ ಬಾಕಿಯಿದೆ' ಎಂದು ತೋರಿಸುತ್ತದೆ. ಹಾಗೆಯೇ ಮನೆಗೆ ಹೋಗುವ ಸಮಯಕ್ಕೆ ಅರ್ಧ ಗಂಟೆ ಮುಂಚೆ ನಿಮ್ಮನ್ನು ಎಚ್ಚರಿಸುತ್ತದೆ. ಆ ಕ್ಷಣದ ಟ್ರಾಫಿಕ್ ಮಾಹಿತಿ, ಎಷ್ಟು ಸಮಯದಲ್ಲಿ ಮನೆ ಅಥವಾ ಕಚೇರಿ ತಲುಪಬಹುದು ಎಂಬ ಮಾಹಿತಿಯನ್ನು ಗೂಗಲ್ ನೌ ನೀಡುತ್ತದೆ. ಜತೆಗೆ ಹವಾಮಾನ ಮುನ್ಸೂಚನೆ ಕೂಡ ಸಿಗುತ್ತದೆ. ಈ ಮಧ್ಯದಲ್ಲಿ ಎಲ್ಲೋ ಶಾಪಿಂಗ್ ಮಾಲ್ ಹೋಗಬೇಕು ಅಥವಾ ಮತ್ಯಾವುದೋ ಕಚೇರಿಗೆ ಹೋಗಬೇಕು ಎಂದು ಅನಿಸಿದರೆ ಪಾರ್ಕಿಂಗ್‌ಗಾಗಿ ಸುತ್ತಾಡುವ ಅಗತ್ಯವಿಲ್ಲ. ನೀವಿರುವ ಸ್ಥಳದಿಂದ ಹತ್ತಿರದಲ್ಲಿರುವ ಜಾಗದಲ್ಲಿ ಪಾರ್ಕಿಂಗ್‌ಗೆ ಎಲ್ಲಿ ಅವಕಾಶವಿದೆ ಎಂಬ ಮಾಹಿತಿ ಕೂಡ ಸಿಗುತ್ತದೆ.
ಇದನ್ನು ಹೊರತುಪಡಿಸಿ ಅಗಣಿತ ಸಂಖ್ಯೆಯ ರಿಮೈಂಡರ್‌ಗಳನ್ನು ಅದರಲ್ಲಿ ಸೇರಿಸಬಹುದು. ಮತ್ತೊಂದು ವಿಶೇಷವೆಂದರೆ ಮನೆ ಅಥವಾ ಕಚೇರಿ ವಿವರವನ್ನು ನೀವು ಸೇರಿಸದಿದ್ದರೂ ನಿಮ್ಮ ದೈನಂದಿನ ಸಂಚಾರ ಗಮನಿಸಿ ಅದೇ ನಿರ್ಧರಿಸಿಬಿಡುತ್ತದೆ. ಇದರಿಂದ ಮನೆ ಅಥವಾ ಕಚೇರಿಗೆ ಹೋಗದೆ 'ಬೇರೆಡೆ' ಹೋಗುವವರಿಗೆ ಸ್ವಲ್ಪ ಕಸಿವಿಸಿ ಮಾಡಬಹುದು.
ಒಟ್ಟಿನಲ್ಲಿ ಸರ್ಚ್ ಎಂಜಿನ್ ಅನ್ನು ಇಂಟರ್ಯಾಕ್ಟೀವ್ ಅಪ್ಲಿಕೇಷನ್ ಆಗಿ ಬಳಸಬಹುದಾಗಿದೆ. ಹಾಗೆಯೇ ಒಂದೇ ವೇದಿಕೆಯಲ್ಲಿ ಸಾಕಷ್ಟು ಲಾಭವನ್ನು ಪಡೆಯಬಹುದಾಗಿದೆ.
-ರಾಜೀವ ಹೆಗಡೆ
meet.hegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


