ಸೇತೂ ಗತಿ
ಇಂದು ಎಲ್ಲವೂ ಜಟಿಲ. ಯಾವುದೇ ಸಮಸ್ಯೆಯನ್ನು ಬಿಡಿಸಲು ಹೊರಟರೆ ಅದರಿಂದ ಇನ್ನೊಂದು ಸಮಸ್ಯೆಯ...

ಇಂದು ಎಲ್ಲವೂ ಜಟಿಲ. ಯಾವುದೇ ಸಮಸ್ಯೆಯನ್ನು ಬಿಡಿಸಲು ಹೊರಟರೆ ಅದರಿಂದ ಇನ್ನೊಂದು ಸಮಸ್ಯೆಯ ಉದ್ಭವ. ಅಲ್ಲಿಗೆ ಮೂಲ ವಿಷಯ ಕಗ್ಗಂಟು. ಎಲ್ಲೆಲ್ಲೂ ಕೊಳೆತು ನಾರುತ್ತಿರುವ ನಾಗರಿಕ ಸಮಾಜ. ಇಂಥ ವ್ಯವಸ್ಥೆಯ ಚಿತ್ರಣವನ್ನು ತಮ್ಮದೇ ಧಾಟಿಯಲ್ಲಿ ನಿಮಿತ್ತ ಮಾತ್ರವೆಂದು ನಾಡಿನ ಪ್ರಬುದ್ಧ ಹಿರಿಯ ನಟ, ನಿರ್ದೇಶಕ ಸೇತೂರಾಮ್ ಎಸ್.ಎನ್. ತಮ್ಮ ನಾಟಕ 'ಗತಿ' ಯಲ್ಲಿ ಹೊರಹಾಕಿದ್ದಾರೆ.
ಸರ್ವಸ್ವ ಅರ್ಪಿಸಿದ ಅನನ್ಯ ತಂಡಕ್ಕಾಗಿ ಸೇತೂರಾಮ್ ತಮ್ಮದೇ ವಿಶಿಷ್ಟ ಧಾಟಿಯಲ್ಲಿ ರಚಿಸಿ, ನಿರ್ದೇಶಿಸಿರುವ 'ಗತಿ' ಇತ್ತೀಚಿನ ನಾಟಕ ಪ್ರಯೋಗಗಳಲ್ಲಿ ಭಿನ್ನ ಎನ್ನಿಸಿಕೊಂಡಿದೆ. ರಂಗದ ತಂತ್ರಗಾರಿಕೆಗಳನ್ನು ಹಾಗೂ ಆಯಾಮಗಳನ್ನೂ ಸಮಯೋಚಿತವಾಗಿ ಬಳಸಿಕೊಂಡದ್ದಲ್ಲದೇ ಎರಡೇ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಮಾಂತ್ರಿಕತೆಯಿದೆ. ಹಿಡಿಯಲ್ಲಿ ಇಡಿಯನ್ನು ತೋರಿಸುವಲ್ಲಿ ಸೇತೂರಾಮ್ ಹಾಗೂ ದೀಪಾ ಇಬ್ಬರೂ ಏಕಾಂಕದಲ್ಲೇ ನಾಟಕವನ್ನು ಆಳಿದ್ದಾರೆ.
ನಾಟಕ ಕರ್ತೃವೂ ಹಾಗೂ ಮುಖ್ಯ ಪಾತ್ರವೂ ಸೇತುರಾಮ್ ಅವರೇ ಆಗಿರುವುದರಿಂದ ಚಾವಡಿಯಲ್ಲಿ ಕುಳಿತು ಹರಟುವ ಹಿರಿಯ ವ್ಯಕ್ತಿಯಂತೆ ಗೋಚರಿಸುತ್ತಾರೆ. ಸೇತುರಾಮ್ ಪಾತ್ರವಾಗಿ ಅಲ್ಲ, ನೈಜ ವ್ಯಕ್ತಿಯಾಗಿಯೇ ಎದುರಿಗಿದ್ದಾರೆ ಅಂತನ್ನಿಸುತ್ತದೆ. ಬಣ್ಣದ ಮೊರೆ ಹೋಗಿಲ್ಲ. ಹಾಡು ಕುಣಿತಗಳಿಲ್ಲ. ಕ್ಷಣಕ್ಕೊಂದರಂತೆ ದಿರಿಸು ಬದಲಾಯಿಸಿಲ್ಲ, ವೈಭವೋಪೇತ ರಂಗಸಜ್ಜಿಕೆ ಇಲ್ಲ. ಎಲ್ಲ ಇಲ್ಲಗಳ ಮಧ್ಯೆಯೂ ನಾಟಕವನ್ನು ಇದೆಯಾಗಿಸಿದ್ದಾರೆಂದರೆ ನೋಡಿಯೇ ತಿಳಿಯಬೇಕು. ಅನುಭವದ ಮೂಸೆಯಲ್ಲಿ ಮೂಡಿರುವ ಕಥಾ ಹಂದರವು ನೋಡುಗನ ಅನುಭವವಾಗಿಯೇ ಆರ್ವಿಭವಿಸಿದೆ. ಸ್ವಲ್ಪ ಗತಿ ಬದಲಾಗಿದ್ದರೂ ಓತಪ್ರೋತವಾಗಿ ಸಾಗುವ ಭಾಷಣವಾಗಿ ನಾಟಕದ ಹರಿವು ದಿಕ್ಕಾಪಾಲಾಗುವ ಸಾಧ್ಯತೆ ಇತ್ತು.
ನಾಡಿ ಮಿಡಿಯುತ್ತಿದೆ, ಹೃದಯ ಬಡಿಯುತ್ತಿದೆ, ಶ್ವಾಸಕೋಶಗಳು ಏರಿ ಇಳಿಯುತ್ತಿವೆ... ನಾವು ಸತ್ತಿಲ್ಲ... ಬದುಕಿದ್ದೇವೆ... ಎಂಬ ಅರ್ಥ ಕೊಡುವ ಎಷ್ಟೋ ಬಿರು ನುಡಿಗಳು ಹಾವಂತೆ ಬುಸುಗುಡುತ್ತಾ ಹರಿದಾಡುತ್ತಲೇ ಇರುತ್ತವೆ. ಹಾಗಂತ ಹಾಸ್ಯಕ್ಕೇನು ಕೊರತೆ ಇಲ್ಲ. ನೋಡುಗನ ಏಕಾಗ್ರತೆಯನ್ನು ಪರೀಕ್ಷಿಸುವಲ್ಲಿ ಸಂಭಾಷಣೆಯೇ ಗೆದ್ದಿದೆ. ಜೀವನ್ಮರಣದಲ್ಲಿ ಹೋರಾಟ ನಡೆಸುವ ವ್ಯಕ್ತಿಯನ್ನು ಸುತ್ತುವರೆದು ಸಾವನ್ನು ಕಾಣಬಯಸುವವರ ಬಗ್ಗೆ ಚಾವಟಿಯ ಮಾತುಗಳಿವೆ. ನಿವೃತ್ತನಾದ ವ್ಯಕ್ತಿ ತನ್ನವರಿಂದ ದೂರವಾಗಿ ತನ್ನದೇ ಒಂದು ಮನೆಯಲ್ಲಿ ಸ್ವೇಚ್ಛೆಯಾಗಿ ಯಾರ ಹಂಗೂ ಇಲ್ಲದೆ ಬದುಕುವಲ್ಲಿಗೆ ಮೊಮ್ಮಗಳ ಆಗಮನವಾಗುತ್ತದೆ. ಈ ಇಬ್ಬರೊಳಗಿನ ಒಳತೋಟಿ ಪ್ರೇಕ್ಷಕರ ಮುಂದೆ ಅನಾವರಣವಾಗುತ್ತದೆ. ಮುದುಕನ ಭೌತಿಕ ಗಡಿಯಾರ ಸ್ತಬ್ಧವಾಗುವಲ್ಲಿಗೆ ನಾಟಕಕ್ಕೆ ತೆರೆ ಬೀಳುತ್ತದೆ.
ಹಲವು ಮಜಲುಗಳಲ್ಲಿ ತನ್ನಲ್ಲಿನ ಕಲಾವಿದೆಯನ್ನು ದೀಪಾ ಹೊರಹಾಕಿದ್ದಾರೆ. ಒಬ್ಬ ಹಿರಿಯ ನಟನ ಮುಂದೆ ಅಷ್ಟೇ ಪ್ರಬುದ್ಧವಾಗಿ ನಡೆದು ರಂಗವನ್ನು ಆಕ್ರಮಿಸಿದ್ದಾರೆ. ನಾಟಕ ನೋಡುವಾಗ ಕಾಡದ ಮೌನ, ನೋಡಿ ಹೊರಬಂದ ಮೇಲೆ ಕಾಡಿ ಮತ್ತೆ ಮತ್ತೆ ದೃಶ್ಯಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ.
-ಸಂಕೇತ್ ಗುರುದತ್
gurudattans@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


