ಖುಷಿ

ನಿಗೂಢ ಮನುಷ್ಯರು

ಅಂಡಮಾನ್- ನಿಕೋಬಾರ್ ದ್ವೀಪಗಳಲ್ಲಿ ಕಾಡುಮನುಷ್ಯರಿದ್ದಾರೆಂದು ನಿಮಗೆ ಗೊತ್ತು. ಅವರ ಹೆಸರು ಜಾರವಾಗಳು..

ನಿಗೂಢ ಮನುಷ್ಯರು
Published On :

ಅಂಡಮಾನ್- ನಿಕೋಬಾರ್ ದ್ವೀಪಗಳಲ್ಲಿ ಕಾಡುಮನುಷ್ಯರಿದ್ದಾರೆಂದು ನಿಮಗೆ ಗೊತ್ತು. ಅವರ ಹೆಸರು ಜಾರವಾಗಳು. ಅಸಲಿಗೆ ಇವರೀಗ ಕಾಡುಮನುಷ್ಯರೂ ಅಲ್ಲ. ಈಗಾಗಲೇ ಮನುಷ್ಯರ ಸಂಪರ್ಕ- ಸಂಸರ್ಗಗಳಿಗೆ ಒಳಗಾಗಿರುವ ಅವರು ಹೊರಲೋಕಕ್ಕೆ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿದ್ದಾರೆ.
ಆದರೆ ಈ ಕಾಲದಲ್ಲೂ ಹೊರಜಗತ್ತಿನ ಮನುಷ್ಯ ಸಂಪರ್ಕವೇ ಇಲ್ಲದ ಬುಡಕಟ್ಟು ನಿವಾಸಿಗಳಿದ್ದಾರೆ. ದಕ್ಷಿಣ ಅಮೆರಿಕದ ಅಮೆಝಾನ್ ನದಿ ತೀರದ ದಟ್ಟ ಕಾಡುಗಳಲ್ಲಿ ಅಂಥ ಕಾಡುಮಾನವರಿದ್ದಾರೆ. ಅವರಿಗೆ ಹೊರಲೋಕದ ಮನುಷ್ಯರ ಬಗ್ಗೆ ಭೀತಿಯಿದೆ. ಕೆಲವರಲ್ಲಿ ಅಸಹ್ಯವೂ ಇರಬಹುದು. ಯಾಕೆಂದರೆ, ಅಮೆರಿಕಕ್ಕೆ ಕಾಲಿಟ್ಟ ಆಧುನಿಕ ಮನುಷ್ಯ, ತನ್ನ ಅತ್ಯಾಧುನಿಕ ಆಯುಧಗಳ ಮೂಲಕ ಅಲ್ಲಿನ ಆದಿವಾಸಿಗಳನ್ನೆಲ್ಲ ಕೊಂದು ಕಳೆದು ಅಲ್ಲಿನ ನೈಸರ್ಗಿಕ ಸಂಪನ್ಮೂಲವನ್ನೆಲ್ಲ ಮುಕ್ಕಿ ಮೂಗಿಸಿದ್ದು ನಿಮಗೆ ಗೊತ್ತೇ ಇದೆ. ಇದರ ನೆನಪು ಅವರ ಸುಪ್ತ ಪ್ರಜ್ಞೆಯಲ್ಲಾದರೂ ಇದೆ.
ಅಂಥ ಬುಡಕಟ್ಟು ಮನುಷ್ಯನೊಬ್ಬ ಇತ್ತೀಚೆಗೆ ಬ್ರೆಜಿಲ್‌ನ ಕಾಡಿನಿಂದ ಆಚೆಗೆ, ಹಳ್ಳಿಗಳ ಕಡೆಗೆ ಬಂದಿದ್ದಾನೆ. ಅಲ್ಲಿನವರನ್ನು ಮಾತಾಡಿಸಲೂ ಪ್ರಯತ್ನಿಸಿದ್ದಾನೆ. ಆದರೆ ಆತನ ಭಾಷೆ ಯಾರಿಗೂ ಅರ್ಥವಾಗಿಲ್ಲ. ಆತನ ಆತಂಕವೂ ಯಾರಿಗೂ ಅರ್ಥವಾಗಿಲ್ಲ. ಬುಡಕಟ್ಟು ಮಾನವರ ನೆಮ್ಮದಿಗಾಗಿ ಅಹರ್ನಿಶಿ ಹೋರಾಡುತ್ತಿರುವ ಸಂಘಟನೆಯೊಂದು ಆತನನ್ನು ಮಾತನಾಡಿಸಲು ಯತ್ನಿಸಿದೆ. ಆತನಿರುವ ಕಾಡಿನ ಪ್ರದೇಶವನ್ನು ಭೂಗಳ್ಳರು, ಮರಗಳ್ಳರು, ಕಳ್ಳಬೇಟೆಗಾರರು ನುಗ್ಗಿರಬೇಕು. ಅವರಿಂದ ತನ್ನ ಬುಡಕಟ್ಟನ್ನು ಪಾರು ಮಾಡಲು ಆತ ನೆರವು ಬಯಸುತ್ತಿರಬೇಕು ಎಂಬುದು ಹೊರನೋಟಕ್ಕೆ ಅರ್ಥವಾದ ಸಂಗತಿ.
ಇದು ನಡೆದದ್ದು ಬ್ರೆಜಿಲ್‌ನ ಎನ್ವಿರಾ ನದಿ ಹಾಗೂ ಪೆರುವಿನ ಗಡಿಯಲ್ಲಿ. ಈತನನ್ನು ಅಶನಿಂಕಾ ಬುಡಕಟ್ಟಿನವ ಎಂದು ಸಂಶಯಿಸಲಾಗಿದೆ. ಆತ ಹೊರಗೆ ಬಂದದ್ದೇ, ಜನ ಬೆಚ್ಚಿದ್ದಾರೆ. ಆತನ ಸುರಕ್ಷತೆ ಹೇಗೆ ಎಂಬುದಲ್ಲ ಚಿಂತೆ. ಆತನಲ್ಲಿ ನಾವೀವರೆಗೆ ಪ್ರತಿರೋಧ ಶಕ್ತಿ ಬೆಳೆಸಿಕೊಂಡಿರದ ಯಾವುದಾದರೂ ರೋಗದ ವೈರಸ್‌ಗಳಿದ್ದರೆ ಎಂಬ ಆತಂಕ! ಅಲ್ಲೂ ನಮಗೆ ಸ್ವಾರ್ಥವೇ. ಬ್ರೆಜಿಲ್‌ನಲ್ಲಿ ಇಂಥ ಬುಡಕಟ್ಟು ಮನುಷ್ಯರ ಪುನರ್ವಸತಿಗಾಗಿಯೇ ಒಂದು ಸರಕಾರಿ ಇಲಾಖೆಯಿದೆ. ಸ್ವಯಂ ಸೇವಾ ಸಂಘಟನೆಯಲ್ಲಿ ಆಶ್ರಯ ಪಡೆದಿರುವ ಅದೇ ಪ್ರದೇಶದ ನಿಕ್ಸಿವಾಕ ಯವನವ ಎಂಬ ಇನ್ನೊಬ್ಬ ಆದಿವಾಸಿ ಹೇಳಿದ್ದು: 'ನಾನಿದ್ದ ಪ್ರದೇಶದಿಂದಲೇ ಅವರೂ ಬಂದಿದ್ದಾರೆ. ಬಹಳ ಬೇಜಾರಾಗುತ್ತಿದೆ. ನನ್ನ ಬಂಧುಗಳೆಲ್ಲ ನಾಶದ ಹಾದಿಯಲ್ಲಿದ್ದಾರೆ'.

-ವನಮಾಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.