ಕಾಫಿ ದ್ವಂದ್ವ
ಇಂದಿಗೆ ಸರಿಯಾಗಿ ಐವತ್ತೊಂದು ವರುಷಗಳ ಹಿಂದೆ ನಾನು ಈ ದೇಶಕ್ಕೆ ಬಂದಾಗ ಕಾಫಿ ಕುಡಿಯೋದಕ್ಕೆ ಯಾವುದಾದರೂ...

ಇಂದಿಗೆ ಸರಿಯಾಗಿ ಐವತ್ತೊಂದು ವರುಷಗಳ ಹಿಂದೆ ನಾನು ಈ ದೇಶಕ್ಕೆ ಬಂದಾಗ ಕಾಫಿ ಕುಡಿಯೋದಕ್ಕೆ ಯಾವುದಾದರೂ ಉಪಾಹಾರ ಗೃಹಕ್ಕೆ ಅಥವಾ ರಸ್ತೆಯ ಮೂಲೆಗಳಲ್ಲಿದ್ದ ಔಷಧಿ ಮಳಿಗೆಗೆ (ಫಾರ್ಮಸಿ ಸ್ಟೋರ್‌ಗಳಲ್ಲಿ ಕಾಫಿನೂ ಮಾರುತ್ತಿದ್ದರು) ಹೋಗಬೇಕಾಗಿತ್ತು, ಇಂದಿನಂತೆ ಮೆಕ್‌ಡೊನಾಲ್ಡ್ ಅಥವಾ ಇತರೆ ಫಾಸ್ಟ್‌ಫುಡ್ ಅಂಗಡಿಗಳು ಎಲ್ಲೆ ಕಡೆ ಇರಲಿಲ್ಲ. ಈಗ ಒಮ್ಮೊಮ್ಮೆ ಗ್ಯಾಸ್‌ಸ್ಟೇಶನ್, ಸ್ಟಾರ್‌ಬಕ್ಸ್‌ಗೆ ಹೋದಾಗ ನೋಡಿದರೆ ನನಗೆ ದಿಕ್ಕೇ ತೋಚುವುದಿಲ್ಲ. ಅಲ್ಲಿರುವ ಕಾಫಿ ಯಂತ್ರಗಳನ್ನು ನೋಡಿದರೆ, ಯಾವ ಸ್ವಾದದ ಕಾಫಿಯನ್ನು ಆಯ್ದುಕೊಳ್ಳಬೇಕೊ ಗೊತ್ತಾಗದು.
ನಮ್ಮ ಹಳ್ಳಿಯಲ್ಲಿ ಊರ ಮುಂದಿರುವ ಗುಡಿಸಲ ಹೊಟೇಲ್‌ಗೆ ಹೋಗಿ ನಮ್ಮ ಸುಬ್ಬಣ್ಣಿಗೆ ಕಾಫಿ ಕೇಳಿದರೆ ಸಾಕು ಮತ್ತ್ಯಾವ ಪ್ರಶ್ನೆ ಕೇಳದೆ ಸ್ಟೀಲ್ ಬಟ್ಟಲಲ್ಲಿ ಬಿಸಿಬಿಸಿ ಕಾಫಿ ಕೊಡುತ್ತಿದ್ದ. ನನ್ನಂಥ ಹಳ್ಳಿ ಮನುಷ್ಯನಿಗೆ ಇಲ್ಲಿ ಅಮೆರಿಕದಲ್ಲಿ ಕಾಫಿ ಆರ್ಡರ್ ಮಾಡುವುದೇ ದೊಡ್ಡ ಸಮಸ್ಯೆ. ಕಾಫಿ ಕೇಳಿದ್ರೆ ಕ್ಯಾಫ್ ಅಥವಾ ಡಿಕ್ಯಾಫ್? ಸಕ್ಕರೆ ಅಥವಾ ಸ್ವೀಟ್ನರ್? ಬ್ಲ್ಯಾಕ್ ಹಾಲು ಅಥವಾ ಕ್ರೀಮರ್? ಯಾವ ಫ್ಲೇವರ್? ಮುಂತಾಗಿ ಪ್ರಶ್ನೆ ಮೇಲೆ ಪ್ರಶ್ನೆಗೆ ಉತ್ತರ ಕೊಟ್ಟಾಗಲೇ ಬರುವುದು, ಕರಿ ಬಣ್ಣದ, ಕಾಫಿ ವಾಸನೆ ಮಾತ್ರ ಇರುವ ತಿಳಿ- ಪಾರದರ್ಶಕ ಬಿಸಿಬಿಸಿ ದ್ರಾವಣ!
ಗ್ಯಾಸ್ ಸ್ಟೇಷನ್‌ಗೆ ಹೋದಾಗ ಇನ್ನೂ ದಿಕ್ಕು ಬಡಿದಂತಾಗುತ್ತದೆ. ಪ್ರಪಂಚದ ಎಲ್ಲ ದೇಶಗಳ ಹೆಸರಿನಲ್ಲಿ ಒಂದಾದರು ಕಾಫಿ ಇದ್ದೇ ಇರುತ್ತೆ. ಕೋನಾ ಕಾಫಿ, ಜಾವಾ ಇಂಡೊನೇಷ್ಯಾ ಕಾಫಿ, ಬ್ಲೂ ಮೌಂಟೈನ್ ಕೋಸ್ಟರಿಕಾ ಕಾಫಿ, ಮೆಕ್ಸಿಕನ್ ಕಾಫಿ, ಬ್ರೆಜಿಲಿಯನ್ ಹೇಜಲ್‌ನಟ್, ಇಥಿಯೋಪಿಯನ್ ಕಾಫಿ, ಕೊಲಂಬಿಯಾ ಕ್ಯಾರಮೆಲ್... ಹೀಗೆ ಜಗದಗಲದ ಸ್ವಾದಗಳು. ಲೈಟ್‌ರೋಸ್ಟ್, ಮೀಡಿಯಂ ರೋಸ್ಟ್, ಡಾಕ್ ರೋಸ್ ಮುಂತಾಗಿ ಥರಾವರಿಗಳು. ಹಣ್ಣುಗಳ ಪರಿಮಳದ, ಗಿಡಮೂಲಿಕೆಗಳ ರುಚಿ ಕೊಡುವ, ಹಾಲಿನ ವಿಧಗಳು. ಆರೋಗ್ಯವಂತರಿಗೆ-ಮೇಧವ್ಯಾಧಿಗಳಿಗೆ- ಬಿಳಿದು ಮಾಡದಿರುವ, ಬಿಳಿದು ಮಾಡಿರುವ- ಗಿಡ ಮರಗಳಿಂದ ಇಳಿದುಬಂದ ಹಾಲು... ಹೀಗೆ. ಸಕ್ಕರೆಯ ಡಬ್ಬಿಗಳೂ ಬಣ್ಣ ಬಣ್ಣವಾಗಿ ರಾರಾಜಿಸುತ್ತಿರುತ್ತವೆ. ಒಟ್ಟಿನಲ್ಲಿ ಆ ದೃಶ್ಯ ಮಂಕುಮಾಡುತ್ತದೆ.
ಎಲ್ಲ ಕಾಫಿ ಯಂತ್ರಗಳನ್ನ ಸುತ್ತುಹಾಕೊ ಹೊತ್ತಿಗೆ ನಮ್ಮೂರ ತಿಮ್ಮಪ್ಪನ ದೇವಸ್ಥಾನವನ್ನು ಮೂರು ಬಾರಿ ಪ್ರದಕ್ಷಿಣೆ ಮಾಡಬಹುದಾಗಿತ್ತು ಮತ್ತು ಮನಸ್ಸಿಗೆ ಶಾಂತಿ ಸಿಗುತ್ತಿತ್ತು. ಆದರೆ, ಇಲ್ಲಿ ನನ್ನನ್ನೇ ಎಲ್ಲರೂ ಎಲ್ಲಿ ನೋಡ್ತಾ ಇದ್ದಾರೋ ಅಂತ ಜಿಗುಪ್ಸೆಯಿಂದ ಮನಸ್ಸಿನಲ್ಲಿ ಗೊಂದಲ ಉಂಟಾಗಿ ಅಶಾಂತಿ ಕಾಡುತ್ತೆ. ಕಾಫಿ ಕಪ್‌ನ ಅಳತೆ, ನಂತರ ಕಾಫಿ, ಸಕ್ಕರೆ, ಹಾಲು ಎಲ್ಲವನ್ನೂ ಹದ ಭರಿತವಾಗಿ ಬೆರೆಸಿ ಕ್ಯಾಶಿಯರ್ ಬಳಿ ಬಂದಾಗ ಕ್ಯಾಶ್ ರಿಜಿಸ್ಟರ್ ಎಷ್ಟು ಅಂತ ಹಣ ತೋರಿಸಿದಾಗ, ಎಲ್ಲವನ್ನೂ ವಾಪಸು ಸುರಿದು ಓಡಿ ಹೋಗಬೇಕೆನ್ನಿಸುತ್ತದೆ. ಆ ಹಣಕ್ಕೆ ಅಮ್ಮ ಹೇಳಿದಹಾಗೆ ನಮ್ಮ ಮನೆಗೆ ತಿಂಗಳಿಗಾಗುವಷ್ಟು ಕಾಫಿ ಪುಡಿಯನ್ನ ನಮ್ಮೂರಿನ ಶೆಟ್ಟಿಯಂಗಡಿಯಲ್ಲಿ ಕೊಳ್ಳಬಹುದಾಗಿತ್ತು.
ಸ್ಟಾರ್‌ಬಕ್ಸ್‌ಗೆ ಹೋದರೆ ಕಾಫಿ ಕೊಳ್ಳೋಕೆ ಒಂದು 22ನೇ ಶತಮಾನದ ನಿಘಂಟು ಬೇಕು. ಲಾಟೆ ಅಂತೆ, ಮೋಖ ಅಂತೆ... ಒಂದೇ ಎರಡೇ? ಅಲ್ಲಿಯ ಯಂತ್ರಗಳು ಮಾಡುವ ಶಬ್ದ ಕೇಳಿದರಂತೂ ಯಾವುದೋ ರೇಲ್ವೆ ಎಂಜಿನ್ ಹಬೆ ಬಿಡುತ್ತಿದೆಯೆ ಅನ್ನಿಸುತ್ತದೆ.
ಒಮ್ಮೆ ನಾವು 8-10 ಜನ ನಮ್ಮ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆವು. ಯಥಾಪ್ರಕಾರ ಆತಿಥ್ಯದ ಭಾಗವಾಗಿ 'ಕಾಫಿ ಕುಡಿತೀರಾ?' ಎಂದು ಕೇಳಿದರು. ನಾವೆಲ್ಲರೂ ಹೂಂಗುಟ್ಟಿ ನಮ್ಮನಮ್ಮ ಆಯ್ಕೆ (ಸಕ್ಕರೆರಹಿತ, ಸಕ್ಕರೆಸಹಿತ, ಹಾಲುರಹಿತ, ಹಾಲುಸಹಿತ... ವಗೈರಾ) ಉಪಾಹಾರ ಮಂದಿರದಲ್ಲಿ ಆರ್ಡರ್ ತಗೊಂಡಹಾಗೆ ಅವರು ಪ್ರತಿಯೊಬ್ಬರನ್ನೂ ಕೇಳಿ ಪೋಸ್ಟ್- ಇಟ್ ನೋಟ್‌ನಲ್ಲಿ ಬರೆದುಕೊಂಡು ಅಡುಗೆಮನೆಗೆ ಹೋದ್ರು. ಅಲ್ಲಿ ಸುಮಾರು 600-800 ಡಾಲರ್ ವೆಚ್ಚದಲ್ಲಿ ಕೊಂಡಿದ್ದ ಒಂದು ಯಂತ್ರ ನೋಡಿದೆ. ನಮ್ಮ ಅಮ್ಮಂಗೆ ಈ ಬೆಲೆ ಗೊತ್ತಾದ್ರೆ ತಿಂಗಳುಗಟ್ಟಲೆ ಊಟ ಬಿಟ್ಟುಬಿಡುತ್ತಿದ್ದಳು. ಆ ಬೆಲೆಗೆ ಎಷ್ಟು ವರ್ಷಕ್ಕೆ ಆಗುವಷ್ಟು ಕಾಫಿ ಕೊಂಡುಕ್ಕೊಳ್ಳಬಹುದಾಗಿತ್ತೆಂದು. ಅದು ಒಂದು ಬಾರಿಗೆ ಒಂದೇ ಲೋಟ ಕಾಫಿ ಮಾಡೋದು. ಅದಕ್ಕೆ ಬೇರೆ ಥರ ಕಾಫಿ ಪುಡಿ ಪೊಟ್ಟಣ ಕೊಂಡುಕೊಳ್ಳಬೇಕು. ಅದರಲ್ಲಿ ಹಾಲನ್ನು ಬಿಸಿಮಾಡಿ ನೀರಿನ ಹಬೆಯನ್ನು ಬುಸ್ ಬುಸ್ ಅಂತ ಕೆನೆ ಬರೋತನಕ ಶಬ್ದ ಮಾಡ್ಸಿ ಕೊಟ್ರು. ಅದರಲ್ಲಿ ಅರ್ಧ ಲೋಟ ಕಾಫಿ- ಅರ್ಧ ಲೋಟ ನೊರೆ. ನಮ್ಮಜ್ಜನ ಥರ ಮೀಸೆ ಇದ್ರೆ, ನೊರೆಯೆಲ್ಲ ಮೀಸೆ ಮೇಲೆ ಉಳಿದು ಕಾಫಿ ಬಾಯೊಳಗೆ ಹೋಗುತ್ತಿತ್ತು. ನಮ್ಮಜ್ಜ ರಾಮಣ್ಣನ ಮೂರನೇ ಹೆಂಡ್ತಿಗೆ ಕಾಫಿ ಚಟ ಜಾಸ್ತಿ. ಆದರೆ ನಮ್ಮಜ್ಜನ ಆದಾಯದಲ್ಲಿ ಅವರ ಹೆಂಡತಿಯ ಕಾಫಿ ಚಟವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಅಜ್ಜಿ ಹೊನ್ನಮ್ಮ ಅದಕ್ಕೆ ಬೆಳಗ್ಗೆ ಮೂರ್ನಾಲ್ಕು ಚಮಚ ಹಾಕಿ ಕಾಫಿ ಮಾಡಿ ಕುಡಿದು, ಅದರ ಚರಟಕ್ಕೆ ಸುಮಾರು ನಾಲ್ಕೈದು ಬಾರಿ ಬಿಸಿನೀರು ಹಾಕಿ ಚರಟದ ಕಾಫಿ ಕುಡಿದು ತೃಪ್ತರಾಗುತ್ತಿದ್ದರು. ಅವರಿಗೆ ಇಂದಿನ ಕಾಫಿ ಕ್ರಾಂತಿಯನ್ನು ತೋರಿಸಿದ್ದರೆ ಎಷ್ಟು ಖುಷಿಯಾಗುತ್ತಿದ್ದರೊ ಅಂತ ಈಗನ್ನಿಸುತ್ತಿದೆ. ನಮ್ಮ ಹಳ್ಳಿಯ ಗೋವಿಂದ ಶೆಟ್ರಿಗೆ ಒಂದು ಪೌಂಡ್ ಕಾಫಿ ಕೊಡಿ ಅಂದ್ರೆ ಸಾಕು ಯಾವ ಪ್ರಶ್ನೆನೂ ಕೇಳದೆ ಕೊಡುತ್ತಿದ್ದರು. ನ್ಯೂಸ್‌ಪೇಪರ್‌ನಲ್ಲಿ ಪೊಟ್ಟಣ ಕಟ್ಟಿ ಹತ್ತಿಯ ದಾರ ಸುತ್ತಿದರೆ ಒಂದು ಪೌಂಡ್ ಕಾಫಿ ಪುಡಿ!
ಹಳ್ಳಿಯಲ್ಲಿ ನಮ್ಮಮ್ಮ ಮಾಡುತ್ತಿದ್ದ ಹಾಗೆ, ಹಳೇ ಕಾಫಿ ಬಟ್ಟೆಮೇಲೆ ಕಾಫಿಪುಡಿ ಹಾಕಿ, ಸೌದೆ ಒಲೆಮೇಲೆ ನೀರು ಕುದಿಸಿ, ಪುಡಿಯ ಮೇಲೆ ಸುರಿದು, ನಮ್ಮದೇ ಮನೆಯ ಎಮ್ಮೆ ಹಾಲನ್ನು ಬಿಸಿಮಾಡಿ, ಸಕ್ಕರೆ ಬೆರೆಸಿ ಸ್ಟೀಲ್ ಲೋಟದಲ್ಲಿ ಹಾಕಿ ಕುಡಿದರೆ- ಆಹಾ ಆ ಮೋಜು ನೋಡಿ ಆಗ ಕಾಫಿಯ ಮೇಲೆ ಬೀಸಿರುವ ಈ ಆಧುನಿಕ ವಿಜ್ಞಾನ- ತಾಂತ್ರಿಕತೆಯ ಕ್ರಾಂತಿ ನಮ್ಮಂಥವರನ್ನು ತೊಡೆತಟ್ಟಿ ಹಗರಣಕ್ಕೆ ಕರೆಯಬೇಕಾಗಿಲ್ಲ!
-ಹೊನ್ನವಳ್ಳಿ ನಾಡಿಗ ರಾಮಸ್ವಾಮಿ
ramaswamy.hn@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


