ಕನ್ನಡಕ್ಕಿದು ಒಳ್ಳೆಯ 'ಕರ್ಮ'
ಒಬ್ಬರು ದೇವರನ್ನು ಕಟ್ಟಿಹಾಕಿ ಸಾಕುತ್ತಾರೆ, ಮತ್ತೊಬ್ಬರಿಗೆ ದೇವರು ಒಳಜಗತ್ತಿನಲ್ಲಿ ಇರುವುದು ಇಷ್ಟವಿಲ್ಲ...

ಒಬ್ಬರು ದೇವರನ್ನು ಕಟ್ಟಿಹಾಕಿ ಸಾಕುತ್ತಾರೆ, ಮತ್ತೊಬ್ಬರಿಗೆ ದೇವರು ಒಳಜಗತ್ತಿನಲ್ಲಿ ಇರುವುದು ಇಷ್ಟವಿಲ್ಲ. ಕನ್ನಡ ಕಥಾಜಗತ್ತಿನ ಎರಡು ಕಾಯಂ ಸಂಘರ್ಷಗಳು ನಾಣ್ಯ ಚಿಮ್ಮುವಿಕೆಯಲ್ಲೂ ಗೆದ್ದದ್ದಿಲ್ಲ. ಇದರ ಫಲವಾಗಿ ನಮ್ಮ ತಲೆಮಾರಿನ ಎದೆಯಲ್ಲಿ ಆಚರಣೆ- ಆರಾಧನೆಗಳ ಬಗೆಗೆ ಒಂದು ದ್ವಂದ್ವ ಮೊಳಕೆಯೆದ್ದಿದೆ. ಎರಡೂ ಬಾವಿಯ ನೀರು ಕುಡಿದವನ ನಾಲಗೆಗೆ ಯಾವುದು ರುಚಿ ಎಂದು ಒಂದನ್ನೂ ಸಮರ್ಥಿಸಿ ಹೇಳಲಾಗದ ಸ್ಥಿತಿ. ಈ ವರ್ತಮಾನ ಮನಸ್ಥಿತಿಯ ಪ್ರತಿನಿಧಿಯನ್ನೇ ನಾಯಕನನ್ನಾಗಿಸಿಕೊಂಡ ಕಾದಂಬರಿ 'ಕರ್ಮ'.
ಅದ್ಧೂರಿ ಬಿಡುಗಡೆ ಕಾಣದ ಪುಸ್ತಕ. ಲೇಖಕ ಕರಣಂ ಪವನ್ ಪ್ರಸಾದ್ ರಂಗಭೂಮಿಗೆ ಬಿಟ್ಟರೆ ಸಾರಸ್ವತ ಲೋಕಕ್ಕೆ ತೀರಾ ಹೊಸಬ. ಪ್ರತಿಷ್ಠಿತರು ಮುನ್ನುಡಿ ಬರೆದಿಲ್ಲ. ಓದಿ ಅರಗಿಸಿಕೊಂಡ ಪ್ರಮುಖ ಲೇಖಕರು 'ಚೆನ್ನಾಗಿದೆ. ಈ ಕಾದಂಬರಿಯನ್ನು ಓದ್ರಪ್ಪಾ' ಎಂದರೆ ಅವರ ತೂಕ ಕಮ್ಮಿಯಾಗುತ್ತದೆಂಬ ದಿಗಿಲು. ಈ ಸಕಲ ಸಂಕಟಗಳನ್ನು ಮೆಟ್ಟುತ್ತಾ 'ಕರ್ಮ' ಓದುಗರ ಮನವನ್ನು ತಣ್ಣನೆ ಆವರಿಸಿಕೊಳ್ಳುತ್ತಿರುವುದು ಇತ್ತೀಚಿನ ಅಪರೂಪದ ಅಚ್ಚರಿ. ಲಾಬಿ ಕಾಣದೆ ಟಾಪ್‌ಟೆನ್ ಪಟ್ಟಿಯಲ್ಲಿ ಹೋಗಿ ಕೂರುವುದು ಕೃತಿಯೊಂದರ ಸ್ವಚ್ಛ ಯಶಸ್ಸು.
ತಂದೆಯ ಸಾವಿನ ಸೂತಕದಲ್ಲಿ ಶ್ರದ್ಧಾಪೂರ್ವಕವಾಗಿ ಮುಖ ಹುದುಗಿಸಲಾಗದೆ ಒದ್ದಾಡುವ ನಾಯಕ. ಬೆಂಗಳೂರಿನಲ್ಲಿರುವ ಈ ಹಿರಿಮಗ ಅನ್ಯ ಜಾತಿಯವಳೊಂದಿಗೆ ಲಿವಿಂಗ್ ಟುಗೆದರ್ ಆಗಿ ತಂದೆಯಿಂದ ದೂರ ಆದವ. ಊರಿಗೆ ಹಿಂದಿರುಗಿ ಹದಿನಾಲ್ಕು ದಿನಗಳ ಕರ್ಮಕ್ಕೆ ತಲೆಕೊಡುತ್ತಾನೆ. ಆ ವೈದಿಕರ ಕುಟುಂಬದ ಮಡಿ ಆಧುನಿಕ ಮುಖದ ಇವನ ಹೆಂಡತಿ ನೇಹಾ ಜೀವಂತಿಗೆ ದೊಡ್ಡ ರಗಳೆ. ಇನ್ನೇನು ಹದಿನಾಲ್ಕು ದಿನ ಅರೆಮನಸ್ಸಿನಲ್ಲಿ ಆಚರಣೆಯೂ ಮುಗಿಸಿದಾಗ ತಾನು ಈ ತಂದೆಗೆ ಹುಟ್ಟಿದವನಲ್ಲ ಎಂಬ ಸತ್ಯ ನಾಯಕ ಸುರೇಂದ್ರನಿಗೆ ಗೊತ್ತಾದಾಗ ಅಲ್ಲೊಂದಿಷ್ಟು ತರ್ಕಗಳ ಭುಗಿಲು. ಸೂತಕದಲ್ಲೇ ಹುಟ್ಟಿ ಸತ್ತು ಚಿಗುರುವ ಕಥೆ.
'ಸಂಸ್ಕಾರ'ದ ಪ್ರಾಣೇಶಾಚಾರ್ಯನಂತೆ ಗುರುಋಣ, ಪಿತೃಋಣ, ದೇವಋಣವನ್ನು ಕೊಡಕಿ ಏಳಬೇಕೆನ್ನುವ ವೈಚಾರಿಕ ದೃಢತೆ ಇಲ್ಲಿನ ನಾಯಕನಲ್ಲಿ ತೀವ್ರವಾಗಿ ಇಲ್ಲ. ಕಳಕೊಂಡ ಧಾರ್ಮಿಕ ಶ್ರದ್ಧೆ ಈತನ ವಿಚಾರ ಮಂಡಲವನ್ನು ಹದವಾಗಿ ತಟ್ಟುತ್ತಲೇ ಇರುತ್ತದೆ. ಟಿ.ಜಿ. ರಾಘವ ಅವರ 'ಶ್ರಾದ್ಧ', ಗಿರಡ್ಡಿಯವರ 'ಮಣ್ಣು', ನೀರಮಾನ್ವಿ ಅವರ 'ಹಂಗಿನರಮನೆಯ ಹೊರಗೆ', ಬಿ.ವಿ. ವೈಕುಂಠರಾಜು ಅವರ 'ಅಂತ್ಯ' ಕಥೆಗಳು ಸೂತಕದ ನೆಲೆಗಟ್ಟಿನಲ್ಲೇ ಸ್ಥಾಪನೆಯಾಗಿದ್ದರೂ ಅದರ ವಿಸ್ತೃತ ಹಾಗೂ ಭಿನ್ನ ರೂಪ ಕಾಣಲು ಕನ್ನಡಲೋಕ 'ಕರ್ಮ'ದ ತನಕ ಕಾಯಬೇಕಾಯಿತು. ತಡವಾಗಿ ಬಂದರೂ ಗಹನತೆಯ ಗಟ್ಟಿತನ ಅಷ್ಟೇ ತಾಜಾ.
ಯಾವ ಪಾತ್ರಗಳೂ ಒಮ್ಮೆಲೇ ಇತಿಹಾಸ ಹೇಳುವುದಿಲ್ಲ. ಮುಂದೆ ಮುಂದೆ ಹೋಗುತ್ತಾ ಹಿನ್ನೆಲೆ ಪರಿಚಯಿಸುವ ಧಾಟಿಯಲ್ಲಿ ಪಕ್ವತೆ, ಹಿಡಿತವಿದೆ. ಪ್ಯಾರಾದಿಂದ ಪ್ಯಾರ ಒಂದೊಂದು ಎಪಿಸೋಡಾಗುವುದು ಹೊಸ ಧಾಟಿ. 'ನಂಬಿಕೆ ಸುಳ್ಳಾಗಬಹುದು, ಶ್ರದ್ಧೆ ಸುಳ್ಳಾಗದು' ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಾ ನಾಯಕನಿಗೆ ಬೋಧಿಸುವ ವೆಂಕಟೇಶ ಭಟ್ಟರ ಪಾತ್ರದಲ್ಲಿ ಲೇಖಕನ ಆತ್ಮ ಕಾಣಿಸುತ್ತದೆ. ಸುರೇಂದ್ರ- ಪುರುಷೋತ್ತಮರು ಸಮಕಾಲೀನ ವಿಚಾರವಾದಿಗಳಂತೆ ಧಾರ್ಮಿಕ ಶ್ರದ್ಧೆಯನ್ನು ಪ್ರಶ್ನಿಸುತ್ತಿದ್ದರೂ ಭಟ್ಟರ ಉತ್ತರಗಳಲ್ಲಿನ ನಿಖರತೆ ಓದುಗನಿಗೆ ಆಪ್ತ. 'ಬೇಗ ಮುಗಿಸಲು ಶ್ರಾದ್ಧವೇನು ಹಾದರವಲ್ಲ' ಎನ್ನುವ ಅವರ ಮಾತಿನ ತಾಪಕ್ಕೆ ಆಧುನಿಕ ಮುಖವಾಡವೂ ಬೆವರಬೇಕು.
ನಾಯಕಿ ನೇಹಾಳ ಕಾಮಚಿತ್ತ ಚಾಂಚಲ್ಯ ಓದಿಗೊಂದು ಹುರುಪು. ಗರುಡ ಪುರಾಣದ ವೈತರಣಿ ನದಿಯ ಭೀಕರ ಕಲ್ಪನೆ ಕಂಡಾಗ ನಮ್ಮ ಪಾಪಗಳಿಗೂ ಇಲ್ಲೇ ಪ್ರಾಯಶ್ಚಿತ್ತ ಹೋಮ ಮುಗಿಸಿಕೊಳ್ಳುವ ಮನಸ್ಸಾದೀತು. ಸಂಸ್ಕೃತ ಶ್ಲೋಕಗಳಿಗೆ ಕಾಂದಬರಿಯ ಹೊದಿಕೆ ಹೊದಿಸಿರುವ ಪ್ರಯತ್ನ ಇನ್ನಾದರೂ ಕನ್ನಡಕ್ಕೆ ಮಾದರಿ ಆದೀತೇನೋ. ಸರಸ ಶ್ಲೋಕಗಳನ್ನೇ ಬಿಡಿಸಿ ರಂಜಿಸುವ ಸಂಸ್ಕೃತಬಲ್ಲ ಕೆಲ 'ಆಮದು' ಲೇಖಕರು ಇಂಥ ಕ್ರಿಯಾಶೀಲತೆಯಿಂದ ಏನನ್ನಾದರೂ ಕಲಿಯುವ ಮನಸ್ಸು ಮಾಡಬೇಕು.
ಕರಣಂ ಅವರ ಈ ಮೊದಲ ಕಾದಂಬರಿಯಲ್ಲಿ ಎಸ್.ಎಲ್. ಭೈರಪ್ಪ ಏಕೆ ಕಾಣಿಸುತ್ತಾರೆನ್ನುವುದಕ್ಕೆ ಕಾರಣಗಳ ಪಟ್ಟಿ ಕೆಲವು. ಪಾತ್ರಗಳಲ್ಲಿ ಪ್ರಧಾನವಾಗಿ ತೂರಿಕೊಳ್ಳುವ ತಾತ್ವಿಕ ಸಂವಾದ, ಸ್ತ್ರೀ ಸ್ವಾತಂತ್ರ್ಯ- ವೈಫ್ ಸ್ವಾಪಿಂಗ್- ಪೌರೋಹಿತ್ಯ ಮಾಡುವವರಿಗೆ ಹೆಣ್ಣು ಸಿಗದ ಸಮಸ್ಯೆ- ಗೋಹತ್ಯೆ- ಹಿಂದೂ ದೇವರ ಅವಹೇಳನ ಇದೇ ಮುಂತಾದ ಪ್ರಸ್ತುತ ವಿಚಾರಗಳ ಮೈ ಸವರುವಿಕೆ ಇಲ್ಲೂ ನಡೆಯುತ್ತದೆ. ವಿತಂಡವಾದಗಳಿಗೆ ನೀಡುವ ಸಮರ್ಥನೆ ಕಾದಂಬರಿಯ ಜೀವಂತಿಕೆ. ಈ ಕೃತಿ ನಿಜಕ್ಕೂ ನಮ್ಮ ಅಭದ್ರ ಭಾವಸ್ಥಿತಿಯ ಪ್ರತಿಬಿಂಬ. ಭೈರಪ್ಪನವರು 'ಕರ್ಮ'ವನ್ನು ಮೆಚ್ಚಿಕೊಳ್ಳಲು ಇದೇ ಕಾರಣವೂ ಇರಬಹುದು. ಒಟ್ಟಿನಲ್ಲಿ ಓದಿ ಮುಗಿಸುವಾಗ, ನಾವೇ ಶ್ರಾದ್ಧ ಮಾಡಿದ ದಟ್ಟ ಅನುಭವ ಆಗುವುದಂತೂ ನಿಶ್ಚಿತ.
ಸಣ್ಣಪುಟ್ಟ ವ್ಯಾಕರಣ ದೋಷ, ಅತಿಯಾದ ಪಾತ್ರಗಳು, ಧಾರಾವಾಹಿಯಂತೆ ಅನಗತ್ಯ ಸನ್ನಿವೇಶ ಸೃಷ್ಟಿ- ಮುಂತಾದ ದೋಷಗಳಿಗೆ ಮೊದಲ ಕಾದಂಬರಿಯೆಂಬ ಸಮಜಾಯಿಷಿ ಮಾಫಿಯ ಹಾದಿ ತೋರಿಸುತ್ತದೆ. ಎಸ್.ಎಲ್. ಭೈರಪ್ಪನವರು ಮೌನಿಯಾದ ಈ ಹೊತ್ತಿನಲ್ಲಿ ಅವರಿಂದ ದೀಕ್ಷೆ ಪಡೆದ ಕೃತಿ 'ಕರ್ಮ' ಎನ್ನದಿದ್ದರೆ ವಿಮರ್ಶೆಯ ಮುಕ್ತತೆಗೆ ಅವಮಾನ. ಕರಣಂ ಇಷ್ಟಕ್ಕೇ ತೃಪ್ತನಾಗದೇ ಇರಲಿ.
-ಕೀರ್ತಿ ಕೋಲ್ಗಾರ್
kolgarkeerthi@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


