ಕನ್ನಡದಲ್ಲಿ ಪ್ರೇಮಚಂದರ
ಆಧುನಿಕ ಭಾರತೀಯ ಕಥಾಸಾಹಿತ್ಯಕ್ಕೆ ಮುನ್ಷಿ ಪ್ರೇಮಚಂದರ ಕೊಡುಗೆ ಬಹು ದೊಡ್ಡದು. ಹತ್ತೊಂಬತ್ತನೆ ...

ಆಧುನಿಕ ಭಾರತೀಯ ಕಥಾಸಾಹಿತ್ಯಕ್ಕೆ ಮುನ್ಷಿ ಪ್ರೇಮಚಂದರ ಕೊಡುಗೆ ಬಹು ದೊಡ್ಡದು. ಹತ್ತೊಂಬತ್ತನೆ ಶತಮಾನದ ಎಂಬತ್ತರ ದಶಕದಲ್ಲಿ ಹುಟ್ಟಿದ ಅವರು ಭಾರತೀಯತೆಯ ಪುನರುತ್ಥಾನ ಕಾಲ ಮತ್ತು ದೇಶೀ ಪ್ರಜ್ಞೆ ಬೆಳೆಯುತ್ತಿರುವ ಹೊತ್ತಿನಲ್ಲಿ ಬೆಳೆದವರು. ವಸಾಹತುಶಾಹಿಯನ್ನು ವಿರೋಧಿಸುತ್ತ, ದೇಶಬಾಂಧವರ ಕರುಣಾಜನಕ ಬದುಕನ್ನು ಚಿತ್ರಿಸುತ್ತ, ಜೀವನದ ವೈರುಧ್ಯಗಳಿಗೆ ಕನ್ನಡಿ ಹಿಡಿಯುತ್ತ ಸಾಮಾನ್ಯ ಜನರ ಮೆಚ್ಚಿನ ಲೇಖಕರಾಗಿ ಅವರು ಬೆಳೆದ ಪರಿ ವಿಸ್ಮಯಕಾರಿಯಾದದ್ದು. ಪ್ರೇಮಚಂದರ ಸಾಹಿತ್ಯ ಆಧುನಿಕ ಭಾರತದ ಹಲವು ಭಾಷೆಗಳ ಸಾಹಿತ್ಯಕ್ಕೆ ಮಾದರಿಯಾದವು. ಅಂಥ ಪ್ರೇಮಚಂದರ 21 ಕತೆಗಳನ್ನು ಸುಕನ್ಯಾ ವಿಜಯಕುಮಾರ್ ಕನ್ನಡಕ್ಕೆ ತಂದಿದ್ದಾರೆ. ಪ್ರೇಮಚಂದರ ಅವರು ಕನ್ನಡ ಲೇಖಕರಿಗೆ ಈ ಮೊದಲೇ ಅನುವಾದಗಳ ಮೂಲಕ ಪರಿಚಿತರಾದವರು. ಅದಕ್ಕೆ ಇದು ಹೊಸ ಸೇರ್ಪಡೆಯಾಗಿದೆ. ಸುಕನ್ಯಾ ಅವರು ಅನುವಾದಕ್ಕೆ ಒಳ್ಳೆಯ ಕತೆಗಳನ್ನೇ ಆಯ್ದುಕೊಂಡಿದ್ದಾರೆ.
ಪ್ರ: ಸುಕನ್ಯಾ ವಿಜಯಕುಮಾರ್, ಬೆಂಗಳೂರು, ಪುಟಗಳು 216, ಬೆಲೆ ರು. 130
ಸುರೇಂದ್ರನಾಥರ ತಾಪತ್ರಯಗಳು
ತಮ್ಮ ಕತೆಗಳು, ನಾಟಕಗಳಿಂದ ಈಗಾಗಲೆ ಪರಿಚಿತರಾಗಿರುವ ಎಸ್. ಸುರೇಂದ್ರನಾಥ ಅವರ ಕತೆಗಳ ಸಂಕಲನ 'ತಾಪತ್ರಯಗಳು' ಈಗ ಬಂದಿದೆ. ಇದರಲ್ಲಿ 'ಭಿತ್ತಿಯಿಲ್ಲದೇ ಬರೆಯಬಹುದೇ ಚಿತ್ತಾರವ', 'ಕೋಟಲೆಯೆಂಬರು ಕೋಟು ನೀಡಿದ್ದನ್ನು' ಮತ್ತು 'ಮೂರು ತಲೆ ಮೂರು ದಿಕ್ಕು' ಎಂಬ ಮೂರು ಕತೆಗಳು ಇವೆ. ನಿಕೊಲಾಯಿ ಗೊಗೋಲನ 'ಓವರ್ಕೋಟ್' ಆಧರಿಸಿ ಬರೆದದ್ದು 'ಕೋಟಲೆಯೆಂಬರು ಕೋಟು ನೀಡಿದ್ದನ್ನು'. ಹಾಗೆಯೇ ಕಾಂತಾನಾಥರ ಹಿಂದಿ ಕತೆಯನ್ನು ಆಧರಿಸಿ ಬರೆದದ್ದು 'ಮೂರು ತಲೆ ಮೂರು ದಿಕ್ಕು'. ಪಾತ್ರ, ಸನ್ನಿವೇಶಗಳೆಲ್ಲ ಕನ್ನಡದ ನೆಲಕ್ಕೆ ಒಗ್ಗಿಕೊಳ್ಳುವ ಹಾಗೆ ಬದಲಾಗಿವೆ. ಕನ್ನಡದ್ದೇ ಕತೆ ಎನ್ನುವ ಹಾಗೆ ಸುರೇಂದ್ರನಾಥರು ಇವನ್ನು ಬರೆದಿದ್ದಾರೆ. ಅವರೇ ಹೇಳಿಕೊಂಡಿರುವಂತೆ ವ್ಯಂಗ್ಯವೇ ಇವರ ಕತೆಗಳಲ್ಲಿ ಪ್ರಾಧಾನ್ಯ. ನಮ್ಮ ಸುತ್ತಲಿನಿಂದಲೇ ಎದ್ದು ಬಂದ ಜನರೇ ಅವರ ಕತೆಗಳ ಪಾತ್ರ. ಹೀಗಾಗಿ ಈ ಕತೆಗಳು ಇಷ್ಟವಾಗುತ್ತವೆ.
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 152, ಬೆಲೆ ರು. 120
ಮಹಿಳಾ ನಾಟಕಗಳು
ಕರ್ನಾಟಕ ಲೇಖಕಿಯರ ಸಂಘವು ಆಹ್ವಾನಿಸಿ ಸಂಪಾದಿಸಿದ ಒಂಬತ್ತು ನಾಟಕಗಳ ಸಂಕಲನ 'ನವ ವಿಧ ನಾಟಕಗಳು'. ಇದರ ಪ್ರಧಾನ ಸಂಪಾದಕರು ಡಾ. ವಸುಂಧರಾ ಭೂಪತಿ ಹಾಗೂ ಸಂಪಾದಕರು ಕೆ.ಎಂ. ವಿಜಯಲಕ್ಷ್ಮಿ. ಕವಿತಾ ರೈ ಬರೆದ 'ಲೋಕಾಮುದ್ರಾ', ಕೆ.ಎಂ. ವಿಜಯಲಕ್ಷ್ಮಿಯವರ 'ಸಮಾನತೆ', ಸರಸ್ವತಿ ನಟರಾಜ್ ಅವರ 'ತಾಯ ಮೊರೆಯನು ಕೇಳಿರೊ', ಸರಿತಾ ಅನಂತ ಕುಲಕರ್ಣಿಯವರ 'ಹೆತ್ತವ್ವ ಹರಕೆ ಬೇಡ್ಯಾಳೇ', ಡಾ.ಕೆ.ಆರ್. ಸಂಧ್ಯಾರೆಡ್ಡಿಯವರ 'ಭೂಮಿಕಾ ವಿಜಯ', ಭಾಷ್ಯಂ ತನುಜೆ ಅವರ 'ಅವರಿಲ್ಲದೆ ನಾವಿಲ್ಲ ಜಗದೊಳಗೆ', ಡಾ. ಮಾಲತಿ ಪಟ್ಟಣಶೆಟ್ಟಿಯವರ 'ಹೊಳೆಯಿತೊಂದು ಬೆಳಕಿನ ಕಿರಣ', ಸರ್ವಮಂಗಳ ಅವರ 'ಬ್ರೂಸ್ಪತಿ ರಾಜನ ಬಂಗಾರದ ಕೋಳ್ಮರ', ಶೈಲಜಾ ಸುರೇಶರ 'ಮಾಧವಿ' ನಾಟಕಗಳು ಇದರಲ್ಲಿವೆ. ಒಂದೊಂದು ನಾಟಕ ಬೇರೆಬೇರೆ ಆಶಯಗಳನ್ನು ಪ್ರತಿಪಾದಿಸುವುದರಿಂದ ಇದಕ್ಕೆ 'ನವವಿಧ ನಾಟಗಳು' ಎಂಬ ಹೆಸರು ನೀಡಿದ್ದಾರೆ. ಇವೆಲ್ಲ ಅಭಿನಯಿಸಲು ಯೋಗ್ಯವಾದ ನಾಟಕಗಳು.
ಪ್ರ: ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು, ಪುಟಗಳು 216, ಬೆಲೆ ರು. 200
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


